ಸಾಂದರ್ಭಿಕ ಚಿತ್ರ | Photo Credit : AP 

ಅತ್ಯಂತ ನಿರ್ಣಾಯಕವಾದ ಹೊರ್ಮುಜ್ ಜಲಸಂಧಿಯ ಮೇಲೆ ಯಾರ ನಿಯಂತ್ರಣ ಹೆಚ್ಚಾಗಿದೆ ಎಂಬುದರ ಕುರಿತು ಅಮೆರಿಕ ಮತ್ತು ಇರಾನ್ ನಡುವೆ ಪರಸ್ಪರ ವಿರುದ್ಧ ವಾದಗಳು ಮುಂದುವರಿದಿವೆ.

ಜಲಸಂಧಿಯು ತೆರೆದಿದ್ದು, ಪ್ರತಿದಿನ ಲಕ್ಷಾಂತರ ಬ್ಯಾರೆಲ್ ತೈಲ ಹೊತ್ತೊಯ್ಯುವ ಹತ್ತಾರು ಹಡಗುಗಳು ಸಂಚರಿಸುತ್ತಿವೆ ಎಂದು ವಾಷಿಂಗ್ಟನ್ ಹೇಳಿದೆ. ಶಾಂತಿಯುತ ಸಂದರ್ಭದಲ್ಲಿ ಜಗತ್ತಿನ ಐದನೇ ಒಂದು ಭಾಗದಷ್ಟು ತೈಲ ಮತ್ತು ಅನಿಲ ರವಾನೆಯಾಗುವ ಈ ಜಲಮಾರ್ಗವು ಆರು ತಿಂಗಳ ಹಿಂದೆ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಆರಂಭವಾದಾಗಿನಿಂದ ಬಂದ್ ಆಗಿದೆ. ಆದರೆ ಕಳೆದ ತಿಂಗಳು ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಜಲಮಾರ್ಗವು ತಮ್ಮ "ಪೂರ್ಣ ನಿಯಂತ್ರಣದಲ್ಲಿದೆ" ಎಂದು ವಾದಿಸಿದ್ದರು.

ಮತ್ತೊಂದೆಡೆ, ಜಲಸಂಧಿಯು ತಮ್ಮ ನಿಯಂತ್ರಣದಲ್ಲೇ ಇದೆ ಮತ್ತು ತಮ್ಮಿಂದ ಮುಂಚಿತವಾಗಿ ಅನುಮತಿ ಪಡೆದ, ತಮಗೆ ಒಪ್ಪಿಗೆಯಾದ ಮಾರ್ಗ ಬಳಸುವ ಹಡಗುಗಳಿಗೆ ಮಾತ್ರ ಅವಕಾಶವಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ. ನಿಯಮ ಮೀರಿ ಸಂಚರಿಸಲು ಯತ್ನಿಸುವ ಇತರ ಹಡಗುಗಳನ್ನು ಗುರಿಯಾಗಿಸುವುದಾಗಿಯೂ ಇರಾನ್ ಎಚ್ಚರಿಸಿದೆ.

ಹಾರ್ಮುಝ್ ಜಲಸಂಧಿ ಕುರಿತು ಅಮೆರಿಕದ ಇತ್ತೀಚಿನ ವಾದವೇನು?

ಇತ್ತೀಚಿನ ವಾರಗಳಲ್ಲಿ ಹಾರ್ಮುಝ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರ ಗಣನೀಯವಾಗಿ ಹೆಚ್ಚಾಗಿದೆ ಎಂದು ಅಮೆರಿಕ ಹೇಳಿದೆ.

ಮಂಗಳವಾರ ಅಮೆರಿಕ ಯೋಧರ ಭದ್ರತೆಯಲ್ಲಿ ಸುಮಾರು 1.8 ಕೋಟಿ ಬ್ಯಾರೆಲ್ ತೈಲ ಹೊತ್ತ 40 ವಾಣಿಜ್ಯ ಹಡಗುಗಳು ಜಲಸಂಧಿ ದಾಟಿವೆ. ಇದು ಯುದ್ಧದ ಸಮಯದ ಹೊಸ ದಾಖಲೆಯಾಗಿದೆ ಎಂದು ಇಬ್ಬರು ಅಮೆರಿಕ ಅಧಿಕಾರಿಗಳು ಸಿಎನ್‌ಎನ್‌ಗೆ ತಿಳಿಸಿದ್ದಾರೆ.

ಸೋಮವಾರ ಇದೇ ರೀತಿಯ ಮಾಹಿತಿ ನೀಡಿದ್ದ ಟ್ರಂಪ್, ಅಮೆರಿಕ ನೌಕಾಪಡೆಯು ಪ್ರತಿರಾತ್ರಿ ಸುಮಾರು 30 ಹಡಗುಗಳ ಸಂಚಾರಕ್ಕೆ ನೆರವಾಗುತ್ತಿದೆ ಎಂದಿದ್ದರು. ಈ ಜಲಮಾರ್ಗವು "ಅಮೆರಿಕದ ನಿಯಂತ್ರಣದಲ್ಲಿದೆ" ಎಂದೂ ಅವರು ಆ ನಂತರ ಹೇಳಿದ್ದರು.

ತೈಲ ರವಾನೆ ಕುರಿತು ಮಾತನಾಡಿದ್ದ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಜಲಸಂಧಿಯ ಮೂಲಕ ಪ್ರತಿದಿನ "ಕನಿಷ್ಠ 1 ಕೋಟಿ ಬ್ಯಾರೆಲ್" ತೈಲ ಪೂರೈಕೆಯಾಗುತ್ತಿದ್ದು, ಸೋಮವಾರ 1.5 ಕೋಟಿಯಿಂದ 1.7 ಕೋಟಿ ಬ್ಯಾರೆಲ್ ತೈಲ ಸಂಚರಿಸಿದೆ ಎಂದು ತಿಳಿಸಿದ್ದರು.

ಅಮೆರಿಕದ ಮಿಲಿಟರಿಯು ಹಾರ್ಮುಝ್ ಜಲಸಂಧಿಯ ಸಂಚಾರ ಮಾರ್ಗದಲ್ಲಿದ್ದ ಸ್ಫೋಟಕಗಳನ್ನು ತೆರವುಗೊಳಿಸಿದೆ ಎಂದು ಅಮೆರಿಕದ ಸೆಂಟ್‌ಕಾಮ್ ಕಮಾಂಡರ್ ಬ್ರಾಡ್ ಕೂಪರ್ ಕಳೆದ ವಾರ ಹೇಳಿದ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ.

ಯುದ್ಧ ಆರಂಭವಾಗುವ ಮೊದಲು ಈ ಜಲಮಾರ್ಗದಲ್ಲಿ ಪ್ರತಿದಿನ ಸರಾಸರಿ 100 ಹಡಗುಗಳು ಮತ್ತು 2 ಕೋಟಿ ಬ್ಯಾರೆಲ್ ತೈಲ ಸಂಚರಿಸುತ್ತಿತ್ತು ಎಂದು ಅಂದಾಜಿಸಲಾಗಿದೆ.

ಪೋರ್ಟ್‌ವಾಚ್ ಅಂಕಿಅಂಶಗಳ ಪ್ರಕಾರ, ಮಾರ್ಚ್‌ನಿಂದೀಚೆಗೆ ಹಡಗುಗಳ ಸಂಚಾರದ ಒಟ್ಟು ಸರಾಸರಿ ದಿನಕ್ಕೆ ಏಳಕ್ಕೆ ಕುಸಿದಿದೆ.

ಜಲಸಂಧಿ ಕುರಿತು ಇರಾನ್ ಪ್ರತಿಪಾದನೆಯೇನು?

ಕೆಲವು ಹಡಗುಗಳು ಜಲಸಂಧಿಯ ಮೂಲಕ ಸಂಚರಿಸುತ್ತಿರುವುದನ್ನು ಒಪ್ಪಿಕೊಂಡಿರುವ ಇರಾನ್, ಜಲಮಾರ್ಗವು ಇಂದಿಗೂ ತನ್ನ ನಿಯಂತ್ರಣದಲ್ಲೇ ಇದೆ ಎಂದು ಪ್ರತಿಪಾದಿಸಿದೆ.

"ಶತ್ರು ಪಡೆಗಳು ಹಾರ್ಮುಝ್ ಮೂಲಕ ಕೆಲವು ಹಡಗುಗಳನ್ನು ಕರೆದೊಯ್ಯುವಲ್ಲಿ ಯಶಸ್ವಿಯಾಗಿವೆ. ಆದರೆ ಇರಾನ್ ಪಡೆಗಳು ಜಲಸಂಧಿಯ ಮೇಲೆ 'ಸಂಪೂರ್ಣ ನಿಯಂತ್ರಣ' ಹೊಂದಿದ್ದು, ಮಾರ್ಗ ಮುಕ್ತವಾಗಲು ಬಿಡುವುದಿಲ್ಲ" ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಮಂಗಳವಾರ ಹೇಳಿದ್ದಾರೆ.

ಹಾರ್ಮುಝ್ ನ ದಕ್ಷಿಣ ಮಾರ್ಗದಲ್ಲಿ ಸಂಚರಿಸಬಹುದು ಎಂದು ಅಮೆರಿಕವು ಹಡಗುಗಳಿಗೆ "ಸುಳ್ಳು ಭರವಸೆ" ನೀಡುತ್ತಿದೆ ಎಂದು ಆರೋಪಿಸಿರುವ ಗಾಲಿಬಾಫ್, ಈ ಮಾರ್ಗದಲ್ಲಿ ಸಾಗಲು ಯತ್ನಿಸುವ ಹಡಗುಗಳನ್ನು ಗುರಿಯಾಗಿಸುವುದಾಗಿ ಎಚ್ಚರಿಸಿದ್ದಾರೆ.

ಮರುದಿನ ಹೇಳಿಕೆ ನೀಡಿದ್ದ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಜಲಸಂಧಿಯ "ಅಕ್ರಮ ಮಾರ್ಗ"ದಲ್ಲಿ ಸಾಗಲು ಯತ್ನಿಸಿದ ಎರಡು ತೈಲ ಟ್ಯಾಂಕರ್‌ಗಳು ಸ್ಫೋಟಕಗಳಿಗೆ ಡಿಕ್ಕಿ ಹೊಡೆದು ನಿಷ್ಕ್ರಿಯಗೊಂಡಿವೆ ಎಂದು ಹೇಳಿದೆ. ಈ ನಡುವೆ, ಇರಾನ್ ನಡೆಸಿದ ದಾಳಿಯು ಸೌದಿ ತೈಲ ಟ್ಯಾಂಕರ್‌ಗೆ ಅಪ್ಪಳಿಸಿದ್ದು, ಫಿಲಿಪೈನ್ಸ್‌ನ ಇಬ್ಬರು ನಾವಿಕರು ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾ ಆರೋಪಿಸಿದೆ.

ಹಡಗು ಸಂಚಾರದ ಅಂಕಿಅಂಶಗಳು ಏನನ್ನು ತೋರಿಸುತ್ತವೆ?

ಇತ್ತೀಚಿನ ಹಡಗು ಟ್ರ್ಯಾಕಿಂಗ್ ಅಂಕಿಅಂಶಗಳು ಅಮೆರಿಕದ ವಾದಕ್ಕೆ ತದ್ವಿರುದ್ಧ ಚಿತ್ರಣವನ್ನು ನೀಡುತ್ತಿದ್ದು, ಜಲಸಂಧಿಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಹಡಗುಗಳು ಸಂಚರಿಸುತ್ತಿರುವುದು ದಾಖಲಾಗಿದೆ.

ಮೆರೈನ್ ಅನಾಲಿಟಿಕ್ಸ್ ಸಂಸ್ಥೆ 'ಕೆಪ್ಲರ್' ನೀಡಿದ ಮಾಹಿತಿಯಂತೆ, ಬುಧವಾರ ಕೇವಲ ಆರು, ಮಂಗಳವಾರ 11 ಮತ್ತು ಸೋಮವಾರ ಐದು ಹಡಗುಗಳು ಜಲಸಂಧಿಯನ್ನು ದಾಟಿವೆ. 10 ದಿನಗಳ ಸರಾಸರಿ ಲೆಕ್ಕಾಚಾರದಂತೆ ದಿನಕ್ಕೆ 13 ಹಡಗುಗಳು ಸಂಚರಿಸುತ್ತಿವೆ.

ಇತರ ಹಡಗು ಸಂಚಾರ ಟ್ರ್ಯಾಕಿಂಗ್ ಸಂಸ್ಥೆಗಳ ವರದಿಯೂ ಇದೇ ರೀತಿ ಇದೆ. ಮ್ಯಾರಿಟೈಮ್ ಡೇಟಾ ಸಂಸ್ಥೆ 'ಲಾಯ್ಡ್ಸ್ ಲಿಸ್ಟ್ ಇಂಟೆಲಿಜೆನ್ಸ್' ಪ್ರಕಾರ ಆಗಸ್ಟ್ 26 ರಿಂದ ಸೆಪ್ಟೆಂಬರ್ 1 ರವರೆಗೆ ದಿನಕ್ಕೆ ಸರಾಸರಿ 12 ಹಡಗುಗಳು ಸಂಚರಿಸಿವೆ. ಆದರೆ, "ಸಿಗ್ನಲ್ ಆಫ್ ಮಾಡಿ ಸಂಚರಿಸುವ ಹಡಗುಗಳನ್ನು ಗುರುತಿಸುವಲ್ಲಿ ವಿಳಂಬವಾಗುವುದರಿಂದ" ಇತ್ತೀಚಿನ ಅಂಕಿಅಂಶಗಳು ಅಪೂರ್ಣವಾಗಿರಬಹುದು ಎಂದು ಸಂಸ್ಥೆಯ ಸಂಶೋಧನಾ ನಿರ್ದೇಶಕಿ ಬ್ರಿಡ್ಜೆಟ್ ಡಿಯಾಕುನ್ ಹೇಳಿದ್ದಾರೆ. ಅಂದರೆ ಕೆಲವು ಹಡಗುಗಳು ತಮ್ಮ ಟ್ರ್ಯಾಕಿಂಗ್ ಉಪಕರಣಗಳನ್ನು ಸ್ಥಗಿತಗೊಳಿಸಿ ಸಂಚರಿಸುತ್ತಿವೆ.

ಆಗಸ್ಟ್ 17 ರಿಂದ 23 ರ ಅವಧಿಯಲ್ಲಿ ದಿನಕ್ಕೆ ಇರಾನ್ ಸಂಪರ್ಕವಿಲ್ಲದ ಸುಮಾರು 14 ಹಡಗುಗಳು ಸಂಚರಿಸಿವೆ ಎಂದು ಡಿಯಾಕುನ್ ʼಅಲ್ ಜಝೀರಾʼ ಸಂಸ್ಥೆಗೆ ತಿಳಿಸಿದ್ದಾರೆ.

ಈ ಎಲ್ಲಾ ಅಂಕಿಅಂಶಗಳು ಮಂಗಳವಾರ ಒಂದೇ ದಿನ 40 ಹಡಗುಗಳು ಜಲಸಂಧಿ ದಾಟಿವೆ ಎಂಬ ಅಮೆರಿಕದ ವಾದಕ್ಕಿಂತ ಬಹಳ ಕಡಿಮೆಯಾಗಿವೆ.

ಪ್ರದೇಶದಲ್ಲಿ ಹಡಗುಗಳ ಭದ್ರತೆಯನ್ನು ಮೇಲ್ವಿಚಾರಣೆ ಮಾಡುವ 'ಜಾಯಿಂಟ್ ಮ್ಯಾರಿಟೈಮ್ ಇನ್ಫಾರ್ಮೇಷನ್ ಸೆಂಟರ್' (JMIC), ಸೆಪ್ಟೆಂಬರ್ 1 ರ ತನ್ನ ವರದಿಯಲ್ಲಿ, ಇತ್ತೀಚಿನ ದಿನಗಳಿಗೆ ಹೋಲಿಸಿದರೆ ಸಂಚಾರದಲ್ಲಿ "ಸ್ವಲ್ಪ ಚೇತರಿಕೆ" ಕಂಡುಬಂದಿದ್ದರೂ, ಸಾಮಾನ್ಯ ಪ್ರಮಾಣಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯಿದೆ ಎಂದು ತಿಳಿಸಿದೆ.

ಜಲಸಂಧಿಯಲ್ಲಿದ್ದ ಸ್ಫೋಟಕಗಳನ್ನು ತೆರವುಗೊಳಿಸಲಾಗಿದೆ ಎಂಬ ಅಮೆರಿಕದ ವಾದದ ನಡುವೆಯೂ, ತೇಲುವ ಅಥವಾ ಪತ್ತೆಯಾಗದ ಸ್ಫೋಟಕಗಳ ಅಪಾಯವಿರುವುದರಿಂದ ಜಲಸಂಧಿಯಲ್ಲಿ ತೀವ್ರ ಅಪಾಯದ ಮಟ್ಟವಿದೆ ಎಂದು ವರದಿ ಎಚ್ಚರಿಸಿದೆ.

ಅಂಕಿಅಂಶಗಳಲ್ಲಿನ ಈ ವ್ಯತ್ಯಾಸಕ್ಕೆ ಕಾರಣವೇನು?

ಅಮೆರಿಕ ತನ್ನ ಅಂಕಿಅಂಶಗಳನ್ನು ಹೇಗೆ ಲೆಕ್ಕಹಾಕುತ್ತದೆ ಎಂಬ ಮಾಹಿತಿ ಇಲ್ಲದೆ, ಅವರ ವರದಿ ಮತ್ತು ಟ್ರ್ಯಾಕರ್ ಸಂಸ್ಥೆಗಳ ಲೆಕ್ಕಾಚಾರದ ನಡುವಿನ ವ್ಯತ್ಯಾಸವನ್ನು ವಿವರಿಸುವುದು ಕಷ್ಟ ಎಂದು ಡಿಯಾಕುನ್ ಹೇಳಿದ್ದಾರೆ.

ಲಾಯ್ಡ್ಸ್ ಸಂಸ್ಥೆಯು "10,000 ಡಿಡಬ್ಲ್ಯೂಟಿಗಿಂತ ಹೆಚ್ಚಿನ ಸರಕು ಸಾಗಣೆ ಹಡಗುಗಳನ್ನು" ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ಆದರೆ ಅಮೆರಿಕವು ಸಣ್ಣ ಅಥವಾ ಸರಕು ಸಾಗಿಸದ ಹಡಗುಗಳನ್ನೂ ತನ್ನ ಪಟ್ಟಿಗೆ ಸೇರಿಸಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಹಡಗುಗಳ ಲೆಕ್ಕಾಚಾರದ ವಿಧಾನದಲ್ಲಿ ವ್ಯತ್ಯಾಸವಿರಬಹುದು ಎಂದು 'ಡ್ರೂರಿ' ಸಂಸ್ಥೆಯ ಹಿರಿಯ ಸಹೋದ್ಯೋಗಿ ಎರಿಕ್ ಹೂಪರ್ ಹೇಳಿದ್ದಾರೆ.

"ಅಮೆರಿಕದ ಮಿಲಿಟರಿ ಲೆಕ್ಕಾಚಾರದಲ್ಲಿ ನೌಕಾಪಡೆಯ ರಕ್ಷಣೆಯಲ್ಲಿ ಸಂಚರಿಸುವ ನೌಕಾ ಸಹಾಯಕರ ಹಡಗುಗಳು, ಸಣ್ಣ ದೋಣಿಗಳು ಮತ್ತು ಟಗ್‌ಬೋಟ್‌ಗಳು ಸೇರಿದಂತೆ ಎಲ್ಲವೂ ಸೇರಿರಬಹುದು. ಆದರೆ ಕೆಪ್ಲರ್ ನಂಥಾ ಟ್ರ್ಯಾಕಿಂಗ್ ಸಂಸ್ಥೆಗಳು ಹಡಗಿನ ಗಾತ್ರ ಅಥವಾ ಸರಕಿನ ಆಧಾರದ ಮೇಲೆ ಇವುಗಳನ್ನು ಹೊರಗಿಡುತ್ತವೆ" ಎಂದು ಹೂಪರ್ ವಿವರಿಸಿದ್ದಾರೆ.

ಸಾಮಾನ್ಯ ಎಐಎಸ್ (AIS) ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ತಕ್ಷಣಕ್ಕೆ ಪತ್ತೆಯಾಗದ ಹಡಗುಗಳನ್ನು ಗುರುತಿಸಲು ಅಮೆರಿಕದ ಬಳಿ ಉಪಗ್ರಹಗಳು, ವಿಮಾನಗಳ ಕಣ್ಗಾವಲು ಮತ್ತು ಸ್ವಂತ ಹಡಗುಗಳ ಭದ್ರತಾ ವ್ಯವಸ್ಥೆ ಇದೆ ಎಂದು ಹೂಪರ್ ತಿಳಿಸಿದ್ದಾರೆ.

"ಆಗಸ್ಟ್ ಅಂತ್ಯದ ವೇಳೆಗೆ ಹಾರ್ಮುಝ್ ದಾಟಿದ ಹೆಚ್ಚಿನ ಹಡಗುಗಳನ್ನು ಸಿಗ್ನಲ್ ಇಲ್ಲದ 'ಡಾರ್ಕ್' ಹಡಗುಗಳೆಂದು ವರ್ಗೀಕರಿಸಲಾಗಿತ್ತು. ಟ್ರಾನ್ಸ್‌ಪಾಂಡರ್ ಆಫ್ ಮಾಡುವ ಹಡಗುಗಳ ಸಂಚಾರವನ್ನು ನಂತರ ದೃಢಪಡಿಸಿ ಲೆಕ್ಕಕ್ಕೆ ಸೇರಿಸಬೇಕಾಗುತ್ತದೆ" ಎಂದು ಹೂಪರ್ ಹೇಳಿದ್ದಾರೆ.

ಸಾಮಾನ್ಯವಾಗಿ ಹೇಳುವುದಾದರೆ, ಆರು ತಿಂಗಳ ಯುದ್ಧದಲ್ಲಿ ಜಲಸಂಧಿಯ ಸ್ಥಿತಿಗತಿಯು ಪ್ರಮುಖ ವಿಷಯವಾಗಿರುವುದರಿಂದ ಅಮೆರಿಕ ಮತ್ತು ಇರಾನ್ ಎರಡೂ ದೇಶಗಳು ಜಲಸಂಧಿಯಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿ ಹೇಳಿಕೊಳ್ಳಲು ಆಸಕ್ತಿ ಹೊಂದಿವೆ.

ಅಮೆರಿಕದ ಸೆಂಟ್‌ಕಾಮ್ ಸಂಸ್ಥೆಯು ಜಲಸಂಧಿಯ ಸ್ಫೋಟಕಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಿಕೆ ನೀಡಿದ್ದು ಅಮೆರಿಕ-ಇರಾನ್ ನಡುವಿನ ಇತ್ತೀಚಿನ ಸಂಘರ್ಷಕ್ಕೆ ಕಾರಣವಾಗಿರಬಹುದು, "ಎರಡೂ ದೇಶಗಳು ಈ ಬಗ್ಗೆ ಅತಿಯಾಗಿ ಮಾತನಾಡುವುದನ್ನು ನಿಲ್ಲಿಸುವುದು ಒಳ್ಳೆಯದು" ಎಂದು ಮಾಜಿ ಅಮೆರಿಕ ರಾಯಭಾರಿ ಹೆನ್ರಿ ಎನ್ಷರ್ ಹೇಳಿದ್ದಾರೆ.

ಕೃಪೆ: aljazeera.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor