×
Ad

IBM ಇತಿಹಾಸದ ಮಹಾಕುಸಿತ; 58 ವರ್ಷಗಳಲ್ಲೇ ಅತಿದೊಡ್ಡ ಷೇರು ಕುಸಿತ!

Update: 2026-07-15 17:12 IST

ಅರವಿಂದ್ ಕೃಷ್ಣ | Photo Credit: @IBMNews

ಕೃತಕಬುದ್ಧಿಮತ್ತೆ (AI) ಅಲೆಯ ನಡುವೆ ಒಂದೇ  ದಿನದಲ್ಲಿ ಸಾಫ್ಟ್ವೇರ್ ದೈತ್ಯ IBM ಷೇರು 67 ಶತಕೋಟಿ ಡಾಲರ್ನಿಂದ 70 ಶತಕೋಟಿ ಡಾಲರ್ಗಳ ನಡುವೆ ಧೂಳಿಪಟವಾಗಿದೆ.

ಅಮೆರಿಕದ ತಂತ್ರಜ್ಞಾನ ದೈತ್ಯ ಕಂಪನಿ IBM (ಇಂಟರ್ನ್ಯಾಷನಲ್ ಬ್ಯುಸಿನೆಸ್ ಮೆಷಿನ್ಸ್) ನಿರಾಶಾದಾಯಕ ಎರಡನೇ ತ್ರೈಮಾಸಿಕ ಗಳಿಕೆಯನ್ನು ಬಿಡುಗಡೆ ಮಾಡಿದ ನಂತರ ಮಂಗಳವಾರ ಕಂಪನಿಯ ಷೇರುಗಳು ಶೇ. 25ರಷ್ಟು ಕುಸಿದಿವೆ.

ಬ್ಲೂಮ್ಬರ್ಗ್ ವರದಿಯ ಪ್ರಕಾರ 1911ರಲ್ಲಿ ಸ್ಥಾಪನೆಯಾದ ಕಂಪನಿಗೆ ಕಳೆದ 58 ವರ್ಷಗಳಲ್ಲಿ ಅತಿ ದೊಡ್ಡ ಷೇರು ಕುಸಿತ ಇದಾಗಿದೆ. ಈ ಕುಸಿತದ ಸಂದರ್ಭದಲ್ಲಿ ಒಂದೇ ದಿನದಲ್ಲಿ IBM ಮಾರುಕಟ್ಟೆ ಬಂಡವಾಳವನ್ನು 67 ಶತಕೋಟಿ ಡಾಲರ್ನಿಂದ 70 ಶತಕೋಟಿ ಡಾಲರ್ಗಳ ನಡುವೆ ನಷ್ಟ ಮಾಡಿಕೊಂಡಿದೆ. ಜೂನ್ನಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಕಂಪನಿ ಶೇ 1ರಷ್ಟು ಅಂದರೆ 17.2 ಶತಕೋಟಿ ಡಾಲರ್ಗಳಿಗೆ ಆದಾಯ ಏರಿಕೆಯನ್ನು ಮಾತ್ರ ದಾಖಲಿಸಿತ್ತು.

“ನಾವು ಎಡವಿದೆವು. ಸಾಕಷ್ಟು ವೇಗವಾಗಿ ಮುಂದೆ ಸಾಗಲಿಲ್ಲ” ಎಂದು ಐಬಿಎಂ ಸಿಇಒ ಅರವಿಂದ್ ಕೃಷ್ಣ ಅವರು ಹೂಡಿಕೆದಾರರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಐಬಿಎಂನ ಮೂಲಸೌಕರ್ಯ ಉದ್ಯಮದಲ್ಲಿ ಶೇ 7ರಷ್ಟು ಆದಾಯ ಕುಸಿತವಾಗಿದೆ. ಅಂದರೆ, ಮುಖ್ಯವಾಗಿ ಕಂಪ್ಯೂಟರ್ಗಳ ನಿರ್ಮಾಣದ ಮುಖ್ಯವಾಹಿನಿಯ ಉದ್ಯಮದಲ್ಲಿ ಆದಾಯ ಕುಸಿತವಾಗಿದೆ. ಆದರೆ ಸಾಫ್ಟ್ವೇರ್ ಆದಾಯವು ಇದೇ ಅವಧಿಯಲ್ಲಿ ಶೇ 5ರಷ್ಟು ಬೆಳೆದಿದೆ. ಹಾಗಿದ್ದರೂ ನಿರೀಕ್ಷೆಗಿಂತ ಕಡಿಮೆ ಆದಾಯ ಗಳಿಸಿದೆ.

ಕಂಪನಿ ಒಂದು ಕಾಲದಲ್ಲಿ ಪ್ರಮುಖ ಮೇನ್ಫ್ರೇಮ್ ಕಂಪ್ಯೂಟರ್ಗಳ ಸರಣಿಯನ್ನು ಉತ್ಪಾದಿಸುತ್ತಿತ್ತು. ಅದರ ಪ್ರಮುಖ ಉತ್ಪನ್ನ IBM Z ಸರಣಿಯಾಗಿದೆ. ಇವುಗಳು ನಿರ್ಣಾಯಕದ ಕೆಲಸದ ಹೊರೆಗಳಿಗೆ ವಿನ್ಯಾಸಗೊಳಿಸಲಾದ ಸಾಟಿಯಿಲ್ಲದ ವಿಶ್ವಾಸಾರ್ಹತೆ, ವಿಸ್ತೃತ ಕ್ಷಮತೆಯ ಮತ್ತು ಭದ್ರತೆಯನ್ನು ನೀಡುವಂತಹ ಹೆಚ್ಚಿನ ಕಾರ್ಯಕ್ಷಮತೆಯ ಎಂಟರ್ಪ್ರೈಸ್ ಸರ್ವರ್ಗಳಾಗಿದ್ದವು.

ಐಬಿಎಂ ಷೇರು ಕುಸಿತಕ್ಕೆ ಕಾರಣವೇನು?

ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯವನ್ನು ನಿರ್ಮಿಸಲು ತಂತ್ರಜ್ಞಾನ ಕಂಪನಿಗಳ ಜಾಗತಿಕ ಆತುರತೆಯ ಕಾರಣದಿಂದ ಸರ್ವರ್ಗಳು, ಮೆಮೊರಿ ಚಿಪ್ಗಳು ಮತ್ತು ಸಂಗ್ರಹಣೆ ಬೇಡಿಕೆಯನ್ನು ಹೆಚ್ಚಿಸಿದೆ. ಬೆಲೆಗಳನ್ನು ಏರಿಸಿದೆ. ಉದ್ಯಮದಾದ್ಯಂತ ಪೂರೈಕೆ ಕೊರತೆ ಸೃಷ್ಟಿಸಿದೆ.

ಜೂನ್ ಅಂತ್ಯದ ವೇಳೆಗೆ IBMನ ಅನೇಕ ದೊಡ್ಡ ಕಾರ್ಪೋರೇಟ್ ಗ್ರಾಹಕರು ನಿರೀಕ್ಷಿತ ಬೆಲೆ ಏರಿಕೆಯ ಮೊದಲು ಹಾರ್ಡ್ವೇರ್ ಖರೀದಿಸಲು ಧಾವಿಸಿದರು. ಈ ಖರೀದಿ ಒತ್ತಡದ ನಡುವೆ IBMನ ಅಧಿಕ-ಮಾರ್ಜಿನ್ನ ಮೇನ್ಫ್ರೇಮ್ ಕಂಪ್ಯೂಟರ್ಗಳಿಂದ ಹೊರಾಗಿ ಬೇರೆಡೆ ವೆಚ್ಚ ಮಾಡಿದ್ದಾರೆ. ಲಕ್ಷಾಂತರ ವ್ಯವಹಾರಗಳಿಗೆ ಬ್ಯಾಂಕ್ಗಳು ಮತ್ತು ದೊಡ್ಡ ಕಾರ್ಪೋರೇಟ್ಗಳು ಬಳಸುವ ಶಕ್ತಿಯುತ ಯಂತ್ರಗಳಿಗೆ ಮತ್ತು ಸಂಬಂಧಿತ ಸಾಫ್ಟ್ವೇರ್ಗೆ ಹೊರಗೆ ವೆಚ್ಚ ಮಾಡಿದರು.

“ಜೂನ್ ಕೊನೆಯ ಕೆಲವು ವಾರಗಳಲ್ಲಿ ಗ್ರಾಹಕರು ತಮ್ಮ ತ್ರೈಮಾಸಿಕ ಕ್ಯಾಪೆಕ್ಸ್ capex ವೆಚ್ಚವನ್ನು (ಬಂಡವಾಳ ವೆಚ್ಚ) ಸರ್ವರ್ಗಳು, ಸಂಗ್ರಹಣೆ ಮತ್ತು ಮೆಮೊರಿ ಖರೀದಿಗಳ ಕಡೆಗೆ ಬದಲಿಸಿರುವುದನ್ನು ಕಂಡಿದ್ದೇವೆ. ಈ ಬೆಳವಣಿಗೆ ನಿರೀಕ್ಷಿತ ಬೆಲೆ ಏರಿಕೆಗೆ ಮುನ್ನ ಪೂರೈಕೆ-ನಿರ್ಬಂಧಿತ ಮೂಲ ಸೌಕರ್ಯ ಭದ್ರಪಡಿಸಿಕೊಳ್ಳಲು ಸಹಾಯವಾಗುತ್ತದೆ. ಕೆಲವು ಪೂರೈಕೆ-ಸರಪಳಿ ಸಂಬಂಧಿತ ಪರಿಣಾಮವನ್ನು ನಾವು ನಿರೀಕ್ಷಿಸಿದ್ದರೂ capex ಮರುಪ್ರಯತ್ನದ ಪ್ರಮಾಣವನ್ನು ಅಂದಾಜಿಸಲಿಲ್ಲ” ಎಂದು ಅರವಿಂದ್ ಕೃಷ್ಣ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.

ಸೈಬರ್ ಭದ್ರತಾ ಕಳವಳ ಮುಖ್ಯ ಕಾರಣ:

“ಜೂನ್ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ತಂತ್ರಜ್ಞಾನ ಉದ್ಯಮದಾದ್ಯಂತ ಸೈಬರ್ ಭದ್ರತೆಯ ಆತಂಕ ಹೆಚ್ಚಾಗಿತ್ತು. AI ಸೈಬರ್ ದಾಳಿಗಳನ್ನು ಹೆಚ್ಚು ಅತ್ಯಾಧುನಿಕಗೊಳಿಸಿದ್ದರಿಂದ ವ್ಯವಹಾರಗಳು ಸೈಬರ್ ಭದ್ರತಾ ವೆಚ್ಚಕ್ಕೆ ಆದ್ಯತೆ ನೀಡುತ್ತಿವೆ. ಹ್ಯಾಕರ್ಗಳು ಲಾಭ ಪಡೆಯಬಹುದಾದ ಕಂಪ್ಯೂಟರ್ ನೆಟ್ವರ್ಕ್ಗಳ ದೌರ್ಬಲ್ಯಗಳನ್ನು ಕಂಡುಹಿಡಿಯುವ ಸಾಮರ್ಥ್ಯಗಳತ್ತ ಎಚ್ಚರಿಕೆ ಮೂಡಿಸಿದ ಆಂಥ್ರೋಪಿಕ್ನ ಮೈಥೋಸ್ AI ಮಾಡೆಲ್ ಬಿಡುಗಡೆಯಿಂದ ಇಂತಹ ಆತಂಕ ಸೃಷ್ಟಿಯಾಗಿದೆ” ಎಂದು ಅರವಿಂದ್ ಕೃಷ್ಣ ಹೇಳಿದ್ದಾರೆ.

ಹೀಗಾಗಿ ಕಂಪನಿಗಳು ಹಿಂದೆ ಯೋಜಿಸಲಾದ ಯೋಜನೆಗಳಿಗೆ ವೆಚ್ಚ ಮಾಡುವ ಬದಲು ತಮ್ಮ ಸೈಬರ್ ರಕ್ಷಣೆ ನಿರ್ಮಿಸಲು ಕೆಲಸ ಮಾಡಿರುವುದು ಸೈಬರ್ ಭದ್ರತಾ ಸಂಸ್ಥೆಗಳ ಷೇರು ಬೆಲೆಯನ್ನು ಏರಿಸಿವೆ. ಕ್ರೌಡ್ಸ್ಟ್ರೈಕ್ ಶೇ 12ರಷ್ಟು ಏರಿದೆ. ಆದರೆ ಒಕ್ಟಾ ಮತ್ತು ನೆಟ್ಸ್ಕೋಪ್ ತಲಾ ಶೇ 11ರಷ್ಟು ಏರಿದೆ.

ಸಾಫ್ಟ್ವೇರ್ ಸರ್ವಿಸ್ ಕಂಪನಿಗಳ ಭವಿಷ್ಯ

ಐಬಿಎಂ ಷೇರು ಬೆಲೆಯ ಕುಸಿತವು ಸಾಂಪ್ರದಾಯಿಕ ಸಾಫ್ಟ್ವೇರ್ ಕಂಪನಿಗಳ ಮೇಲೆ AI ಕ್ರಾಂತಿಯ ಪರಿಣಾಮಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಹೀಗಾಗಿ ‘ಸಾಫ್ಟ್ವೇರ್ ಆಸ್ ಎ ಸರ್ವಿಸ್’ ಅಥವಾ SaaS ಕಂಪನಿಗಳ ಭವಿಷ್ಯದ ಬಗ್ಗೆ ಪ್ರಶ್ನೆ ಎದ್ದಿದೆ. ಇದರಲ್ಲಿ ಸೇಲ್ಸ್ಫೋರ್ಸ್, ಅಡೋಬ್ ಮತ್ತು ಇಂಟ್ಯೂಟ್ನಂತಹ ಕಂಪನಿಗಳ ಜೊತೆಗೆ IBM ಪ್ರಮುಖ ಸದಸ್ಯನಾಗಿದೆ.

IBM ಷೇರು ಕುಸಿತದ ನಂತರ ಅಂತಹ ಇತರ ಕಂಪನಿಗಳ ಷೇರುಗಳೂ ಕುಸಿಯುತ್ತಿವೆ. ಈ ವರ್ಷದ ಆರಂಭದಲ್ಲಿ ವಿಶ್ಲೇಷಕರು AI ಮಾಡೆಲ್ಗಳ ಸಾಮರ್ಥ್ಯದಿಂದಾಗಿ ಈ ಕ್ಷೇತ್ರವು ಬೀಳಲಿದೆ ಎಂದು ಭವಿಷ್ಯ ನುಡಿದ ನಂತರ SaaS-pocalypse (ದೊಡ್ಡ ಅವನತಿ) ಎನ್ನುವ ಪದ ಚಾಲ್ತಿಯಲ್ಲಿದೆ.

ಆದರೆ IBM ಮಟ್ಟಿಗೆ ಸಕಾರಾತ್ಮಕ ಸುದ್ದಿಯೂ ಇದೆ. ಸಂಸ್ಥೆಯ ಓಪನ್ ಸೋರ್ಸ್ ಸಾಫ್ಟ್ವೇರ್ ಮಾರಾಟ ಮಾಡುವ IBMನ Red Hat ಯುನಿಟ್ ಶೇ 11ರಷ್ಟು ಆದಾಯ ಬೆಳವಣಿಗೆ ದಾಖಲಿಸಿದೆ. ಗ್ರಾಹಕರು ಆ ಉಪಕರಣಗಳನ್ನು ಖರೀದಿಸಿದ ಕಾರಣ ಮೇನ್ಫ್ರೇಮ್ಗಳ ಹೊರಗಿನ ಕಂಪನಿಯ ಸರ್ವರ್ ಮತ್ತು ಶೇಖರಣಾ ವ್ಯವಹಾರವು ಶೇ 37ರಷ್ಟು ಏರಿಕೆಯಾಗಿದೆ.

ಬ್ಯಾಂಕ್ ಆಫ್ ಅಮೆರಿಕ, ಜೆಪಿ ಮೋರ್ಗನ್ಚೇಸ್ ಮತ್ತು ಗೋಲ್ಡ್ಮನ್ ಸ್ಯಾಚ್ಸ್ ಜೊತೆಗೂಡಿ ಪ್ರಮುಖ ಬ್ಯಾಂಕ್ಗಳ ಬೆಂಬಲದ ಜೊತೆಗೆ ಓಪನ್-ಸೋರ್ಸ್ ಸಾಫ್ಟ್ವೇರ್ನ ದೌರ್ಬಲ್ಯ ಸರಿಪಡಿಸಲು IBM 5 ಶತಕೋಟಿ ಡಾಲರ್ ಯೋಜನೆಯಾದ Lightwell ಅನ್ನು ಕೂಡ ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News