ಇರಾನ್ ಯುದ್ಧ: ಭಾರತೀಯ ನಾವಿಕರಿಗೆ ಮೃತ್ಯುಕೂಪವಾಗಿ ಬದಲಾದ ಹಾರ್ಮುಝ್ ಜಲಸಂಧಿ
Photo Credit : AP
ಸ್ವಲ್ಪ ದಿನಗಳ ಶಾಂತಿಯ ನಂತರ ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಯುದ್ಧ ಆರಂಭವಾಗಿದೆ. ಇರಾನ್ ಮೇಲೆ ಅಮೆರಿಕ ಮತ್ತೆ ಕಡಲ ದಿಗ್ಬಂಧನ ಹೇರಲಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಹಿಂದಿನ ನೀತಿಯನ್ನು ಬದಲಾಯಿಸಿ ಹಾರ್ಮುಝ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಾಗುವ ಹಡಗುಗಳಿಂದ ಶುಲ್ಕ ವಸೂಲಿ ಮಾಡುವುದಾಗಿಯೂ ಅವರು ಹೇಳಿದ್ದಾರೆ.
ಇದರ ಬೆನ್ನಲ್ಲೇ, ಸೋಮವಾರ ತಡರಾತ್ರಿ (ಜುಲೈ 13) ಒಮಾನ್ ಕಡಲ ಗಡಿಯ ವ್ಯಾಪ್ತಿಯಲ್ಲಿ ಬರುವ ಹಾರ್ಮುಝ್ ಜಲಸಂಧಿಯ ದಕ್ಷಿಣದ ಹಾದಿಯಲ್ಲಿ ಸಾಗುತ್ತಿದ್ದ ತನ್ನ ಎರಡು ಟ್ಯಾಂಕರ್ ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎಂದು UAE ತಿಳಿಸಿದೆ. ಈ ದಾಳಿಯಲ್ಲಿ ಭಾರತೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಎಂಟು ಜನರು ಗಾಯಗೊಂಡಿದ್ದಾರೆ. ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಈ ನಾವಿಕನ ಸಾವು ಹಾರ್ಮುಝ್ ಜಲಸಂಧಿಯಲ್ಲಿ ಭಾರತೀಯ ಹಡಗು ಸಿಬ್ಬಂದಿ ಹೇಗೆ ಪದೇ ಪದೇ ಯುದ್ಧದ ಮುಂಚೂಣಿಗೆ ಸಿಲುಕಿ ಅಪಾಯ ಎದುರಿಸುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ.
►UAE ಟ್ಯಾಂಕರ್ ಮೇಲಿನ ದಾಳಿಗೆ ಭಾರತೀಯ ಮೃತ್ಯು
ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಸೋಮವಾರ UAEಯ ಎರಡು ತೈಲ ಟ್ಯಾಂಕರ್ ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಒಮಾನ್ ಕಡಲ ಗಡಿಯ ಒಳಗಿರುವ ಜಲಸಂಧಿಯ ದಕ್ಷಿಣದ ನೌಕಾ ಹಾದಿಯಲ್ಲಿ ಸಾಗುತ್ತಿದ್ದ 'ಮೊಂಬಾಸಾ' ಮತ್ತು 'ಅಲ್ ಬಹಿಯಾ' ಎಂಬ ಟ್ಯಾಂಕರ್ ಗಳ ಮೇಲೆ ಈ ದಾಳಿ ನಡೆದಿದೆ ಎಂದು UAE ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ದಾಳಿಯಲ್ಲಿ 'ಮೊಂಬಾಸಾ' ನೌಕೆಯಲ್ಲಿದ್ದ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಎಂಟು ಸಿಬ್ಬಂದಿ ಗಾಯಗೊಂಡಿದ್ದು, ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರಲ್ಲಿ ಆರು ಮಂದಿ ಭಾರತೀಯರು ಮತ್ತು ಇಬ್ಬರು ಉಕ್ರೇನ್ ಪ್ರಜೆಗಳು ಎಂದು UAE ಸ್ಪಷ್ಟಪಡಿಸಿದೆ.
ದಾಳಿಯ ನಂತರ ಪ್ರತಿಕ್ರಿಯಿಸಿರುವ ಟೆಹ್ರಾನ್, ಈ ಹಡಗುಗಳು ತಮ್ಮ ಸೈನ್ಯವು ನೀಡಿದ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದವು ಎಂದಿದೆ. ಅಲ್ಲದೆ, ಅವು ತಮ್ಮ ನ್ಯಾವಿಗೇಷನ್ ಸಿಸ್ಟಮ್ ಅನ್ನು ಆಫ್ ಮಾಡಿ, ನಿಷೇಧಿತ ಸ್ಫೋಟಕಗಳು ಇರುವ ಮಾರ್ಗದಲ್ಲಿ ಸಾಗಲು ಯತ್ನಿಸಿದ್ದವು ಎಂದು ಆರೋಪಿಸಿದೆ.
ಹಡಗುಗಳ ಹೆಸರನ್ನು ಬಹಿರಂಗಪಡಿಸದ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ನೌಕಾ ಎಚ್ಚರಿಕೆಗಳನ್ನು ಪಾಲಿಸದ ಎರಡು "ನಿಯಮ ಉಲ್ಲಂಘಿಸಿದ" ಸೂಪರ್ ಟ್ಯಾಂಕರ್ ಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿ ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಹೇಳಿದೆ.
►'ಜಿಎಫ್‌ಎಸ್ ಗ್ಯಾಲಕ್ಸಿ' ಹಡಗಿನಿಂದ ನಾಪತ್ತೆಯಾದ ಭಾರತೀಯ ನಾವಿಕ
ಸೈಪ್ರಸ್ ಧ್ವಜ ಹೊಂದಿರುವ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದ ಮರುದಿನವೇ UAE ನೌಕೆಯ ಮೇಲಿನ ದಾಳಿಯಲ್ಲಿ ಭಾರತೀಯ ನಾವಿಕ ಸಾವಿಗೀಡಾಗಿದ್ದಾರೆ. ಆ ಸೈಪ್ರಸ್ ಹಡಗಿನ ಮೇಲಿನ ದಾಳಿಯ ನಂತರ ಒಬ್ಬ ಭಾರತೀಯ ನಾವಿಕ ನಾಪತ್ತೆಯಾಗಿದ್ದು, ಇನ್ನುಳಿದ 10 ಜನರನ್ನು ರಕ್ಷಿಸಲಾಗಿದೆ.
ಒಮಾನ್ ಕರಾವಳಿಯ ಬಳಿ 11 ಭಾರತೀಯ ಸಿಬ್ಬಂದಿ ಇದ್ದ 'ಜಿಎಫ್‌ಎಸ್ ಗ್ಯಾಲಕ್ಸಿ' ಸರಕು ಸಾಗಣೆ ಹಡಗಿನ ಮೇಲಿನ ದಾಳಿಯನ್ನು ಭಾರತದ ವಿದೇಶಾಂಗ ಸಚಿವಾಲಯವು ರವಿವಾರ (ಜುಲೈ 12) ತೀವ್ರವಾಗಿ ಖಂಡಿಸಿದೆ. ಈ ಪ್ರದೇಶದಲ್ಲಿ ನಾಗರಿಕ ಹಡಗುಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಗಳು ನಿಲ್ಲಬೇಕು ಎಂದು ಸಚಿವಾಲಯ ಹೇಳಿದೆ.
"ಒಮಾನ್ ಕರಾವಳಿಯ ಬಳಿ ವಾಣಿಜ್ಯ ಹಡಗು 'ಜಿಎಫ್‌ಎಸ್ ಗ್ಯಾಲಕ್ಸಿ' ಮೇಲೆ ಇಂದು ನಡೆದಿರುವ ದಾಳಿಯನ್ನು ನಾವು ಖಂಡಿಸುತ್ತೇವೆ. ಹಡಗಿನಲ್ಲಿದ್ದ 11 ಭಾರತೀಯರಲ್ಲಿ ಇದುವರೆಗೆ 10 ಜನರನ್ನು ರಕ್ಷಿಸಲಾಗಿದ್ದು, ಒಬ್ಬ ಭಾರತೀಯ ನಾವಿಕ ನಾಪತ್ತೆಯಾಗಿದ್ದಾರೆ" ಎಂದು ವಿದೇಶಾಂಗ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಈ ಹೇಳಿಕೆಯಲ್ಲಿ ಇರಾನ್ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ.
ಇದಕ್ಕೂ ಮುನ್ನ ರವಿವಾರ, ಸೈಪ್ರಸ್ ಧ್ವಜ ಹೊಂದಿದ್ದ ಕಂಟೈನರ್ ಹಡಗಿನ ಮೇಲೆ ಇರಾನ್ ದಾಳಿ ನಡೆಸಿದ್ದು, ಹಡಗಿನ ಎಂಜಿನ್ ಕೋಣೆಗೆ ತೀವ್ರ ಹಾನಿಯಾಗಿದೆ ಮತ್ತು ಒಬ್ಬ ನಾಗರಿಕ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿತ್ತು.
"ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆಗಳು ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಸೈಪ್ರಸ್ ಧ್ವಜದ ಕಂಟೈನರ್ ಹಡಗು 'ಜಿಎಫ್‌ಎಸ್ ಗ್ಯಾಲಕ್ಸಿ' ಮೇಲೆ ಬಹಿರಂಗವಾಗಿ ದಾಳಿ ನಡೆಸಿವೆ. ಇದರ ಬೆನ್ನಲ್ಲೇ ಅಮೆರಿಕದ ಸೆಂಟ್ರಲ್ ಕಮಾಂಡ್ ಪಡೆಗಳು ಇರಾನ್ ವಿರುದ್ಧ ಈ ವಾರದಲ್ಲಿ ಮೂರನೇ ಸುತ್ತಿನ ದಾಳಿಯನ್ನು ಆರಂಭಿಸಿವೆ. ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎಂಜಿನ್ ಕೋಣೆಗೆ ಭಾರೀ ಹಾನಿಯಾಗಿರುವುದರಿಂದ ಹಡಗಿಗೆ ಪ್ರಯಾಣ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಒಬ್ಬ ನಾಗರಿಕ ಸಿಬ್ಬಂದಿ ನಾಪತ್ತೆಯಾಗಿದ್ದಾರೆ" ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.
►ಹಾರ್ಮುಝ್ ಜಲಸಂಧಿಯಲ್ಲಿ ಭಾರತೀಯರ ಮೇಲೆ ನಡೆದ ದಾಳಿಗಳು...
ಫೆಬ್ರವರಿ 28ರಿಂದ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಆರಂಭವಾದಾಗಿನಿಂದ, ಹಾರ್ಮುಝ್ ಜಲಸಂಧಿಯು ಸಂಘರ್ಷದ ಪ್ರಮುಖ ತಾಣವಾಗಿ ಮಾರ್ಪಟ್ಟಿದೆ. ಇದರಿಂದಾಗಿ ಭಾರತ ಸೇರಿದಂತೆ ವಿವಿಧ ದೇಶಗಳ ಹಡಗು ಸಿಬ್ಬಂದಿ ನಿರಂತರವಾಗಿ ದಾಳಿಗೆ ತುತ್ತಾಗುತ್ತಿದ್ದಾರೆ.
ಜೂನ್ ಆರಂಭದಲ್ಲಿ ವಾಣಿಜ್ಯ ತೈಲ ನೌಕೆಯೊಂದರ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವಿಗೀಡಾಗಿದ್ದರು. ಈ ಘಟನೆಯು ಭಾರತದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಪಲಾವ್ ಧ್ವಜ ಹೊಂದಿದ್ದ 'ಎಂಟಿ ಸೆಟ್ಟೆಬೆಲ್ಲೊ' ಹಡಗು ಇರಾನ್ ನ ತೈಲವನ್ನು ಹೊತ್ತು ಒಮಾನ್ ಸಮುದ್ರದ ಮೂಲಕ ಸಾಗುತ್ತಿದ್ದಾಗ ಅಮೆರಿಕದ ಯುದ್ಧವಿಮಾನವೊಂದು ಅದರ ಎಂಜಿನ್ ಕೋಣೆಯನ್ನು ಗುರಿಯಾಗಿಸಿಕೊಂಡು ನಿಖರ ದಾಳಿ ನಡೆಸಿತ್ತು. ಇದರಿಂದಾಗಿ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿತ್ತು. ಹಡಗಿನಲ್ಲಿದ್ದ 21 ನಾವಿಕರನ್ನು ರಕ್ಷಿಸಲಾಯಿತಾದರೂ, ಮೂವರು ಸಾವನ್ನಪ್ಪಿದ್ದರು. ಮೃತರನ್ನು ಕ್ಯಾಡೆಟ್ ಆದಿತ್ಯ ಶರ್ಮಾ, ಫಿಟ್ಟರ್ ಶಿವಾನಂದ್ ಚೌರಶಿಯಾ ಮತ್ತು ಚೀಫ್ ಇಂಜಿನಿಯರ್ ಪಟ್ನಾಲ ಸುರೇಶ್ ಎಂದು ಗುರುತಿಸಲಾಗಿತ್ತು.
ಒಂದು ದಿನ ಮುಂಚೆ ಒಮಾನ್ ಕೊಲ್ಲಿಯಲ್ಲಿ ಅಮೆರಿಕ ಪಡೆಗಳು ದಾಳಿ ನಡೆಸಿದ್ದ 'M/T Marivex' ಎಂಬ ಮತ್ತೊಂದು ವಾಣಿಜ್ಯ ತೈಲ ನೌಕೆಯಲ್ಲಿದ್ದ 24 ಭಾರತೀಯ ನಾವಿಕರನ್ನು ರಕ್ಷಿಸಲಾಗಿತ್ತು.
ಮಾರ್ಚ್ 1ರಂದು ಹಾರ್ಮುಝ್ ಜಲಸಂಧಿಯಲ್ಲಿ ಭಾರತೀಯರು ಜೀವ ಕಳೆದುಕೊಳ್ಳುತ್ತಿರುವುದು ಮೊದಲೇನಲ್ಲ. ಮೊದಲ ಸಾವು ಮಾರ್ಚ್ 1ರಂದು ಮಾರ್ಷಲ್ ಐಲ್ಯಾಂಡ್ಸ್ ಧ್ವಜ ಹೊಂದಿದ್ದ 'ಎಂಕೆಡಿ ವ್ಯೋಮ್' ಟ್ಯಾಂಕರ್ ನಲ್ಲಿ ಸಂಭವಿಸಿತ್ತು. ಒಮಾನ್ ಕರಾವಳಿಯ ಬಳಿ ಈ ನೌಕೆಯ ಮೇಲೆ ಮಾನವರಹಿತ ಕ್ಷಿಪಣಿ ದಾಳಿ ನಡೆದಿತ್ತು. ಈ ದಾಳಿಯ ಹೊಣೆಯನ್ನು ಯಾರೂ ವಹಿಸಿಕೊಳ್ಳದಿದ್ದರೂ, ಅಮೆರಿಕದ ಸೆಂಟ್ರಲ್ ಕಮಾಂಡ್ ಇದಕ್ಕೆ ಇರಾನ್ ಪಡೆಗಳೇ ಕಾರಣ ಎಂದು ದೂಷಿಸಿತ್ತು.
ಅದೇ ದಿನ ಒಮಾನ್ ನ ಮುಸಂದಮ್ ಪರ್ಯಾಯ ದ್ವೀಪದ ಬಳಿ ಪಲಾವ್ ಧ್ವಜ ಹೊಂದಿದ್ದ 'ಸ್ಕೈಲೈಟ್' ಟ್ಯಾಂಕರ್ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದರು ಮತ್ತು ಮೂರನೇ ವ್ಯಕ್ತಿ ನಾಪತ್ತೆಯಾಗಿದ್ದರು.
ಮೇ 8ರಂದು ಹಾರ್ಮುಝ್ ಜಲಸಂಧಿಯ ಬಳಿ ಭಾರತೀಯ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಮರದ ನೌಕೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮತ್ತೊಬ್ಬ ಭಾರತೀಯ ನಾವಿಕ ಮೃತಪಟ್ಟಿದ್ದರು.
'ಇಂಡಿಯನ್ ಎಕ್ಸ್‌ಪ್ರೆಸ್' ವರದಿಯ ಪ್ರಕಾರ, ಫೆಬ್ರವರಿ 28ರಂದು ಯುದ್ಧ ಆರಂಭವಾದಾಗಿನಿಂದ ಇದುವರೆಗೆ ಅಮೆರಿಕ-ಇರಾನ್ ಸಂಘರ್ಷಕ್ಕೆ ಬಲಿಯಾದ ಭಾರತೀಯರ ಸಂಖ್ಯೆ 11ಕ್ಕೆ ಏರಿದೆ.
►ಸಂಕಷ್ಟದಲ್ಲಿ ಸಿಲುಕಿದ ಭಾರತೀಯ ನಾವಿಕರು
ಅಮೆರಿಕ ಮತ್ತು ಇರಾನ್ ನಡುವಿನ ಪರಸ್ಪರ ವೈಮಾನಿಕ ದಾಳಿಗಳು ಜಾಗತಿಕವಾಗಿ ಅತ್ಯಂತ ಪ್ರಮುಖವಾದ ಈ ಜಲಮಾರ್ಗದಲ್ಲಿ ಹಡಗುಗಳ ಸಂಚಾರವನ್ನು ಮತ್ತೊಮ್ಮೆ ಕಷ್ಟಕರವಾಗಿಸಿವೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಜಲಸಂಧಿಯ ಮೂಲಕ ಸಾಗುವ ಹಡಗುಗಳ ಸಂಚಾರವು ಗಣನೀಯವಾಗಿ ಕುಸಿದಿದೆ. ಕಳೆದ ತಿಂಗಳು ಅಮೆರಿಕ ಮತ್ತು ಇರಾನ್ ನಡುವೆ ಸಹಿ ಮಾಡಲಾಗಿದ್ದ ತಿಳುವಳಿಕಾ ಒಪ್ಪಂದ (MoU) ಜಾರಿಗೆ ಬಂದ ನಂತರದ ಅತ್ಯಂತ ಕನಿಷ್ಠ ಮಟ್ಟಕ್ಕೆ ಹಡಗು ಸಂಚಾರ ತಲುಪಿದೆ. ಇದರಿಂದಾಗಿ 198 ಭಾರತೀಯ ಸಿಬ್ಬಂದಿ ಇರುವ, ಭಾರತದೊಂದಿಗೆ ಸಂಪರ್ಕ ಹೊಂದಿದ ಒಂಬತ್ತು ಟ್ಯಾಂಕರ್ ಗಳು ಮುಂದೆ ಸಾಗಲು ಸಾಧ್ಯವಾಗದೆ ಅಲ್ಲಿಯೇ ಸಿಲುಕಿಕೊಂಡಿವೆ.
ಈ ಪ್ರದೇಶದ ಬೆಳವಣಿಗೆಗಳನ್ನು ಭಾರತದ ವಿದೇಶಾಂಗ ಸಚಿವಾಲಯವು ಹತ್ತಿರದಿಂದ ಗಮನಿಸುತ್ತಿದೆ. ಅಲ್ಲದೆ, ಅಲ್ಲಿ ಸಿಲುಕಿರುವ ಭಾರತೀಯ ಸಿಬ್ಬಂದಿಯ ಸುರಕ್ಷತೆಯ ವಿಷಯವನ್ನು ಇರಾನ್ ಅಧಿಕಾರಿಗಳೊಂದಿಗೆ ಸಚಿವಾಲಯವು ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಯುದ್ಧದ ನಡುವೆಯೇ ಹಾರ್ಮುಝ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಬಂದ ಭಾರತೀಯ ನಾವಿಕರಿಗೆ ಇದು ಅತ್ಯಂತ ಭಯಾನಕ ಅನುಭವವಾಗಿದೆ. ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡ ನಾವಿಕರೊಬ್ಬರು, ಆಹಾರ ಮತ್ತು ಅಗತ್ಯ ವಸ್ತುಗಳ ಪೂರೈಕೆ ಮಿತವಾಗಿದ್ದರಿಂದ ನಾವೆಲ್ಲರೂ ಅಳೆದು ತೂಗಿ ಊಟ ಮಾಡುತ್ತಿದ್ದೆವು. ರಾತ್ರಿಯ ಸಮಯದಲ್ಲಿ ನಮ್ಮ ಪಕ್ಕದಲ್ಲೇ ಲಂಗರು ಹಾಕಿದ್ದ ಹಡಗುಗಳ ಮೇಲೆ ಸ್ಫೋಟಗಳು ಸಂಭವಿಸುತ್ತಿರುವುದನ್ನು ನಾವು ಕಣ್ಣಾರೆ ನೋಡುತ್ತಿದ್ದೆವು. ದಾಳಿಗೆ ಒಳಗಾದ ಹಡಗುಗಳಲ್ಲಿದ್ದ ಜನರು ರೇಡಿಯೋ ಮೂಲಕ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸುತ್ತಿದ್ದರು. ಆದರೆ, ನಾವು ಅವರಿಗೆ ನೆರವಾಗಲು ಅಲ್ಲಿಂದ ಕದಲುವಂತಿರಲಿಲ್ಲ. ಏಕೆಂದರೆ, ನಾವು ಸ್ವಲ್ಪವೇ ಚಲಿಸಿದರೂ ನಮ್ಮ ಹಡಗಿನ ಮೇಲೂ ದಾಳಿ ನಡೆಯುವ ಭೀತಿಯಿತ್ತು ಎಂದು ಆ ದಿನಗಳ ಭೀಕರತೆಯನ್ನು ನೆನೆದಿದ್ದಾರೆ.
ಜಾಗತಿಕವಾಗಿ ನಾವಿಕರನ್ನು ಪೂರೈಸುವ ದೇಶಗಳಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ. ವಿಶ್ವದ ಒಟ್ಟು ನಾವಿಕರಲ್ಲಿ ಸುಮಾರು ಶೇಕಡಾ 10ರಿಂದ 12ರಷ್ಟು, ಅಂದರೆ 3 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಣಿಜ್ಯ ಹಡಗುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಪ್ರಸ್ತುತ ನಡೆಯುತ್ತಿರುವ ಅಮೆರಿಕ-ಇರಾನ್ ಯುದ್ಧವು ಕಡಲ ಪ್ರದೇಶವನ್ನು ಅತ್ಯಂತ ಅಪಾಯಕಾರಿ ಕೆಲಸದ ಸ್ಥಳವಾಗಿ ಮಾರ್ಪಡಿಸಿದೆ.
ಹಡಗುಗಳು ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ಒಂದೇ ಸ್ಥಳದಲ್ಲಿ ಸಿಲುಕಿಕೊಳ್ಳುವುದರಿಂದ ಹಡಗು ಹಾಗೂ ಸಿಬ್ಬಂದಿ ಇಬ್ಬರಿಗೂ ಭಾರೀ ಅಪಾಯವಿದೆ ಎಂದು ಹಡಗು ಯಾನ ತಜ್ಞರು ಹೇಳುತ್ತಾರೆ.
ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ನಾವಿಕರ ಒಕ್ಕೂಟದ (FSUI) ಪ್ರಧಾನ ಕಾರ್ಯದರ್ಶಿ ಮನೋಜ್ ಯಾದವ್, ಹಡಗುಗಳು ದೀರ್ಘಕಾಲದವರೆಗೆ ಒಂದೇ ಕಡೆ ಲಂಗರು ಹಾಕಿ ನಿಲ್ಲುವುದರಿಂದ ಅವುಗಳಲ್ಲಿ ತುಕ್ಕು ಹಿಡಿಯುತ್ತಿದೆ. ಅಲ್ಲದೆ, ಹಡಗಿನ ತಳಭಾಗದಲ್ಲಿ ಪಾಚಿ ಮತ್ತು ಜೆಲ್ಲಿಫಿಶ್‌ಗಳು ಜಮೆಯಾಗುತ್ತಿವೆ. ಇದೇ ಸಮಯದಲ್ಲಿ ಹಡಗುಗಳ ದುರಸ್ತಿಗೆ ಬೇಕಾದ ಪ್ರಮುಖ ಬಿಡಿಭಾಗಗಳು ಸಿಗದೆ ಅನೇಕರು ಪರದಾಡುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಪರಿಸ್ಥಿತಿ ತಿಳಿಯಾದಾಗಲೂ ಹಡಗುಗಳು ಅಲ್ಲಿಂದ ಹೊರಡಲು ತೊಂದರೆ ಉಂಟುಮಾಡಬಹುದು ಎಂದು ತಿಳಿಸಿದ್ದಾರೆ.
"ಹಡಗುಗಳು ಸದಾ ಚಲಿಸುತ್ತಿರಬೇಕೇ ಹೊರತು, ತಿಂಗಳುಗಟ್ಟಲೆ ಒಂದೇ ಕಡೆ ನಿಲ್ಲಲು ಸಿದ್ಧಪಡಿಸಿದ್ದಲ್ಲ" ಎಂದು ಯಾದವ್ ಹೇಳಿದ್ದಾರೆ. ಹೀಗೆ ದೀರ್ಘಕಾಲ ಹಡಗುಗಳು ನಿಶ್ಚಲವಾಗಿ ನಿಲ್ಲುವುದರಿಂದ ಹಡಗಿನ ಒಳಗಿನ ಸಣ್ಣ ಕೋಣೆಗಳಲ್ಲಿ ವಿಷಕಾರಿ ಅನಿಲಗಳು ಉತ್ಪತ್ತಿಯಾಗುವ ಸಾಧ್ಯತೆಯಿರುತ್ತದೆ. ಇದು ಸಿಬ್ಬಂದಿಯ ಆರೋಗ್ಯ ಮತ್ತು ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು ಎಂದು ಅವರು ವಿವರಿಸಿದ್ದಾರೆ.
ಪ್ರಸ್ತುತ ಬಿಕ್ಕಟ್ಟಿನಲ್ಲಿ ಮತ್ತೊಬ್ಬ ಭಾರತೀಯ ನಾವಿಕ ಸಾವನ್ನಪ್ಪಿರುವುದಕ್ಕೆ ಭಾರತ ಸರ್ಕಾರ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ಈ ಯುದ್ಧದಲ್ಲಿ ಭಾರತೀಯ ನಾವಿಕರು ಯಾವುದೇ ತಪ್ಪಿಲ್ಲದೆ ಬಲಿಯಾಗುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಸೌಜನ್ಯ: firstpost.com