ಪೊಲೀಸ್ ಕಸ್ಟಡಿಯಲ್ಲಿದ್ದ ಕೊಡಗಿನ ವ್ಯಕ್ತಿಯ ದೇಹದ ಮೇಲಿತ್ತು 24 ಗಾಯಗಳು; ನಿಜವಾಗಿಯೂ ಹೃದಯಾಘಾತದಿಂದ ಅವರು ಮೃತಪಟ್ಟಿದ್ದರೇ?
ಅನಿಶಾ ಶೇಠ್ - thenewsminute. com ವರದಿ
ರಾಯ್ ಡಿಸೋಜಾ | Photo Credit : thenewsminute.com
2021ರ ಜೂನ್‌ನಲ್ಲಿ 50 ವರ್ಷದ ರಾಯ್ ಡಿಸೋಜಾ ಎಂಬ ವ್ಯಕ್ತಿಯನ್ನು ಕಾನೂನುಬಾಹಿರವಾಗಿ ವಶದಲ್ಲಿಟ್ಟುಕೊಂಡು, ಭೀಕರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಕೊಡಗು ಜಿಲ್ಲೆಯ ಆರು ಪೊಲೀಸ್ ಅಧಿಕಾರಿಗಳು ಈಗ ವಿಚಾರಣೆ ಎದುರಿಸುತ್ತಿದ್ದಾರೆ. ಪೊಲೀಸರ ಹಲ್ಲೆಯ ಬಳಿಕ ರಾಯ್ ಕೇವಲ ಎರಡು ದಿನಗಳಲ್ಲಿ ಮೃತಪಟ್ಟಿದ್ದು, ಇದು ಲಾಕಪ್ ಡೆತ್ (ಪೊಲೀಸ್ ಕಸ್ಟಡಿ ಸಾವು) ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ರಾಯ್ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಅಧಿಕೃತ ವೈದ್ಯಕೀಯ ವರದಿ ಹೇಳಿದ್ದರೂ, ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಿದ ವಿಧಿವಿಜ್ಞಾನ ತಜ್ಞರು ಈ ತೀರ್ಮಾನವನ್ನು ಒಪ್ಪುತ್ತಿಲ್ಲ. ಆ ವರದಿಯಲ್ಲಿರುವ ಅಂಶಗಳು ಹೃದಯಾಘಾತದ ತೀರ್ಮಾನಕ್ಕೆ ಪೂರಕವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿರಾಜಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಸೇರಿದ್ದ ಆರು ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಐಡಿ ದಾಖಲಿಸಿರುವ ದೋಷಾರೋಪ ಪಟ್ಟಿಯನ್ನು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿಶ್ವನಾಥ್ ಎ. ಅವರು ಜುಲೈ 9ರಂದು ಅಂಗೀಕರಿಸಿದ್ದಾರೆ. ಪೊಲೀಸ್ ಅಧಿಕಾರಿಗಳಾದ ತನುಕುಮಾರ್ ಎಚ್.ಜಿ., ಲೋಕೇಶ್ ಎನ್.ಎಸ್., ಸುನಿಲ್ ಎಂ.ಯು., ಸತೀಶ್ ಎನ್.ಎಸ್., ನೆಹರೂ ಅರುಣ್ ಕುಮಾರ್ ಕೆ.ಸಿ. ಮತ್ತು ಸಂಗಮೇಶ ಎಂಬುವವರು 2021ರ ಜೂನ್ 9 ಮತ್ತು 10ರ ಮಧ್ಯರಾತ್ರಿ ರಾಯ್ ಡಿಸೋಜಾ ಅವರ ಮೇಲೆ ಭೀಕರ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ರಾಯ್ ಅವರನ್ನು ಅಕ್ರಮವಾಗಿ ಬಂಧನದಲ್ಲಿಟ್ಟು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ರಾಯ್ ಅವರನ್ನು ವಿರಾಜಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಕರೆತರುವ ಮುನ್ನ ಅವರು ಆಕ್ರೋಶಗೊಂಡು ಕುಡುಗೋಲಿನಿಂದ ಪೊಲೀಸರು ಮತ್ತು ಹೋಂಗಾರ್ಡ್‌ಗಳ ಮೇಲೆ ದಾಳಿ ನಡೆಸಿದ್ದರು ಎಂದು ಪೊಲೀಸ್ ದಾಖಲೆಗಳು ಹೇಳುತ್ತವೆ. ಆದರೆ, ರಾಯ್ ಮನೆಗೆ ಮರಳಿದಾಗ ಅವರ ಇಡೀ ದೇಹ ಒದ್ದೆಯಾಗಿತ್ತು, ಮೈತುಂಬ ಗಾಯಗಳಾಗಿದ್ದವು ಮತ್ತು ಅವರಿಗೆ ಸ್ವತಃ ನಡೆಯಲು ಕೂಡ ಸಾಧ್ಯವಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕಸ್ಟಡಿಯಿಂದ ಬಂದ ಎರಡು ದಿನಗಳ ನಂತರ ಅವರು ಪ್ರಜ್ಞೆ ಮರಳದೆಯೇ ಮೃತಪಟ್ಟಿದ್ದರು. ಮೃತದೇಹದ ಮಹಜರು ವೇಳೆ ಅವರ ದೇಹದ ಮೇಲೆ ಸುಮಾರು 20 ಗಾಯಗಳಿರುವುದು ದಾಖಲಾಗಿದೆ. ಪೊಲೀಸರ ಹಲ್ಲೆಯೇ ರಾಯ್ ಸಾವಿಗೆ ಕಾರಣ ಎಂದು ಮಹಜರು ಸಮಯದಲ್ಲಿ ಉಪಸ್ಥಿತರಿದ್ದ ಮೂವರು ಸಾಕ್ಷಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರಾಯ್ ಸಾವು ಹೃದಯ ಸಂಬಂಧಿ ಕಾಯಿಲೆಯಿಂದ ಉಂಟಾದ ಹೃದಯಾಘಾತದಿಂದ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ, ಈ ವರದಿಯನ್ನು ಪರಿಶೀಲಿಸಿದ ವಿಧಿವಿಜ್ಞಾನ ತಜ್ಞರು ಈ ತೀರ್ಮಾನಕ್ಕೆ ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಅಥವಾ ಹಿಸ್ಟೋಪಾಥಾಲಜಿ ವರದಿಗಳೆರಡೂ ರಾಯ್ ಅವರಿಗೆ ಹೃದಯ ಕಾಯಿಲೆ ಇತ್ತು ಎಂಬುದನ್ನು ದೃಢೀಕರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ರಾಯ್ ದೇಹದ ಮೇಲಿದ್ದ 24 ಗಾಯಗಳು ಸಾವಿಗೆ ಯಾವುದೇ ರೀತಿಯಲ್ಲಿ ಕಾರಣವಾಗಿಲ್ಲ ಎಂದು ವರದಿಯಲ್ಲಿ ಹೇಗೆ ತೀರ್ಮಾನಿಸಲಾಯಿತು ಎಂಬುದಕ್ಕೂ ಸ್ಪಷ್ಟ ವಿವರಣೆ ಇಲ್ಲ. ರಾಯ್ ಮೃತಪಟ್ಟ ನಂತರದ ದಿನಗಳಲ್ಲಿ ಪ್ರಕರಣವನ್ನು ಕೈಬಿಡುವಂತೆ ತಮ್ಮ ಮೇಲೆ ತೀವ್ರ ಒತ್ತಡ ಹೇರಲಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯಡಿ (RTI) ಪಡೆದ ದಾಖಲೆಗಳು, ನ್ಯಾಯಾಲಯದ ದಾಖಲೆಗಳು, ಮಾಧ್ಯಮ ವರದಿಗಳು ಮತ್ತು ಎಫ್‌ಐಆರ್ ಆಧರಿಸಿ ರಾಯ್ ಸಾವಿಗೆ ಕಾರಣವಾದ ಘಟನೆಗಳ ವಿವರ ಇಲ್ಲಿದೆ.
ಕೋವಿಡ್ ಲಾಕ್‌ಡೌನ್ ಜಾರಿಯಲ್ಲಿದ್ದ 2021ರ ಜೂನ್ 9ರ ರಾತ್ರಿ ಸುಮಾರು 11 ಗಂಟೆಗೆ ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದ ತಮ್ಮ ಮನೆಯಿಂದ ರಾಯ್ ಡಿಸೋಜಾ ನಾಪತ್ತೆಯಾಗಿದ್ದರು. ಅವರು ಅಪಸ್ಮಾರದ (ಫಿಟ್ಸ್) ಮಾತ್ರೆಗಳನ್ನು ತೆಗೆದುಕೊಳ್ಳದ ಕಾರಣ ಅಂದು ಸಂಜೆಯಿಂದಲೇ ತೀವ್ರ ಆತಂಕ ಹಾಗೂ ಆಕ್ರೋಶದಲ್ಲಿದ್ದರು ಎಂದು ಅವರ ತಾಯಿ ತಿಳಿಸಿದ್ದಾರೆ.
ಮಗ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ತಾಯಿ ಮಟಿಲ್ಡಾ, ತಕ್ಷಣವೇ ಸಮೀಪದಲ್ಲೇ ವಾಸಿಸುತ್ತಿದ್ದ ತಮ್ಮ ಸಂಬಂಧಿಕರ ಸಹಾಯ ಪಡೆದು ಮಗನ ಹುಡುಕಾಟಕ್ಕೆ ಮುಂದಾಗಿದ್ದರು.
ಪೊಲೀಸ್ ದಾಖಲೆಗಳ ಪ್ರಕಾರ, ರಾಯ್ ಮಾನಸಿಕ ಸಮತೋಲನ ತಪ್ಪಿದವರಂತೆ ವರ್ತಿಸುತ್ತಿದ್ದರು. 'ಆಸ್ತಿಗಾಗಿ ಕೊಲೆ' ಎಂದು ಜೋರಾಗಿ ಕಿರುಚಾಡುತ್ತಾ ಬೋಯಿಕೇರಿ ರಸ್ತೆ ಬಳಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ತನುಕುಮಾರ್ ಮತ್ತು ಹೋಂಗಾರ್ಡ್ ಬೇಬಿ ಅವರ ಮೇಲೆ ದಾಳಿಗೆ ಯತ್ನಿಸಿದ್ದರು. ಅವರಿಬ್ಬರು ರಾಯ್ ಅವರಿಂದ ತಪ್ಪಿಸಿಕೊಂಡಿದ್ದರು. ನಂತರ ಮೂರ್ನಾಡು ರಸ್ತೆಯತ್ತ ತೆರಳಿದ ರಾಯ್, ಅದೇ ರೀತಿ ಕಿರುಚುತ್ತಾ ಅಲ್ಲಿದ್ದ ಹೋಂಗಾರ್ಡ್ ಅಧಿಕಾರಿಗಳಾದ ಎನ್.ಎಸ್. ಲೋಕೇಶ್ ಮತ್ತು ರಂಜಿತ್ ಅವರ ಮೇಲೂ ದಾಳಿಗೆ ಯತ್ನಿಸಿದರು. ಅವರು ಕೂಡ ಅಲ್ಲಿಂದ ತಪ್ಪಿಸಿಕೊಂಡರು. ಆ ಬಳಿಕ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದ ಸಂಗಮೇಶ್ ಎಂಬ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ತಡೆದ ರಾಯ್, "ನಿನ್ನನ್ನು ಕೊಲ್ಲುತ್ತೇನೆ" ಎಂದು ಕೂಗಾಡಿದ್ದರು. ರಾಯ್ ಅವರು ಸಂಗಮೇಶ್ ಅವರ ಕುತ್ತಿಗೆಗೆ ಕುಡುಗೋಲಿನಿಂದ ಬೀಸಿದಾಗ, ಸಂಗಮೇಶ್ ಅವರು ತಮ್ಮ ಎಡಗೈಯನ್ನು ಅಡ್ಡ ಇಟ್ಟು ದಾಳಿಯಿಂದ ಬಚಾವಾಗಿದ್ದರು. ಈ ವೇಳೆ ಅವರ ಎಡಗೈಗೆ ಗಾಯವಾಗಿತ್ತು.
ಜೂನ್ 10ರ ಮುಂಜಾನೆ ಸುಮಾರು 1.20ಕ್ಕೆ ಮಟಿಲ್ಡಾ ಅವರ ಸಂಬಂಧಿ ಜೂಡಿ ಡೇವಿಡ್ ಡಿಸೋಜಾ ಅವರಿಗೆ ವಿರಾಜಪೇಟೆ ಪೊಲೀಸ್ ಠಾಣೆಯ ಅಧಿಕಾರಿ ಸುನಿಲ್ ಅವರಿಂದ ಕರೆ ಬಂದಿತ್ತು. ರಾಯ್ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಪ್ರಸ್ತುತ ಪೊಲೀಸ್ ಠಾಣೆಯಲ್ಲಿದ್ದಾರೆ ಎಂದು ಅವರು ತಿಳಿಸಿದ್ದರು.
ಠಾಣೆಗೆ ಹೋದಾಗ ಮಟಿಲ್ಡಾ, ಜೂಡಿ ಡೇವಿಡ್ ಮತ್ತು ಇತರ ಸಂಬಂಧಿಕರಿಗೆ ನೆಹರೂ, ಸುನಿಲ್, ತನು ಹಾಗೂ ಸತೀಶ್ ಸೇರಿದಂತೆ ಸುಮಾರು 15-20 ಪೊಲೀಸ್ ಅಧಿಕಾರಿಗಳು ರಾಯ್ ನನ್ನು ಸುತ್ತುವರಿದಿರುವುದು ಕಂಡುಬಂದಿತ್ತು. ರಾಯ್ ಸಂಪೂರ್ಣವಾಗಿ ಒದ್ದೆಯಾಗಿದ್ದರು ಮತ್ತು ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸಂಬಂಧಿಕರೇ ಅವರನ್ನು ಎತ್ತಿಕೊಂಡು ಆಟೋದಲ್ಲಿ ಮನೆಗೆ ಕರೆತಂದಿದ್ದರು. ಮನೆಯಲ್ಲಿ ಅವರ ಬಟ್ಟೆ ಬದಲಾಯಿಸುವಾಗ ದೇಹದ ಮೇಲಿದ್ದ ಗಾಯಗಳು ಕಾಣಿಸಿದ್ದವು. ಸಂಬಂಧಿಕರು ಅವರಿಗೆ ಬಿಸಿ ನೀರಿನಿಂದ ಮೈ ತೊಳೆದು ಮಲಗಿಸಿದ್ದರು.
ಅದೇ ದಿನ ಬೆಳಿಗ್ಗೆ ಸುಮಾರು 10.30ಕ್ಕೆ ಜೂಡಿ ಡೇವಿಡ್ ಅವರು ರಾಯ್ ಅವರ ಆರೋಗ್ಯ ವಿಚಾರಿಸಲು ಅವರ ಮನೆಗೆ ಬಂದಾಗ, ರಾಯ್ ಇನ್ನೂ ಎದ್ದಿಲ್ಲ ಎಂದು ಮಟಿಲ್ಡಾ ತಿಳಿಸಿದ್ದರು. ಜೂಡಿ ಅವರು ರಾಯ್ ನನ್ನು ಎಬ್ಬಿಸಲು ಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ವೇಳೆ ರಾಯ್ ಅವರ ಎರಡೂ ಕೈಗಳು ತೀವ್ರವಾಗಿ ಬಾತಿರುವುದು ಅವರ ಗಮನಕ್ಕೆ ಬಂದಿತ್ತು.
ತಕ್ಷಣವೇ ಕುಟುಂಬಸ್ಥರು ಅವರನ್ನು ವೈದ್ಯರ ಬಳಿ ಕರೆದೊಯ್ದರು. ವೈದ್ಯರ ಸಲಹೆಯ ಮೇರೆಗೆ ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ, ಬಳಿಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜೂನ್ 12ರಂದು ರಾಯ್ ಮೃತಪಟ್ಟರು.
ಪೊಲೀಸರೇ ತನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಾಯಿ ಮಟಿಲ್ಡಾ ವಿರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ 2021ರ ಜೂನ್ 10ರಂದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 323 ಮತ್ತು 324ರ ಅಡಿಯಲ್ಲಿ (ಹಲ್ಲೆ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ) ಪ್ರಕರಣ ದಾಖಲಾಗಿತ್ತು.
2021ರ ಜೂನ್ 12ರಂದು ನಡೆದ ಮಹಜರು ವೇಳೆ ರಾಯ್ ದೇಹದಾದ್ಯಂತ ಸುಮಾರು 20 ಗಾಯಗಳಿರುವುದು ಪತ್ತೆಯಾಗಿತ್ತು. "ದೇಹದ ಮೇಲೆ ಗಂಭೀರ ಗಾಯಗಳು ಕಂಡುಬಂದಿವೆ. ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ರೋಗಿ ಮೃತಪಟ್ಟಿದ್ದಾರೆ. ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿದುಬರಬೇಕಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಮಡಿಕೇರಿ ತಹಶೀಲ್ದಾರ್ ಮತ್ತು ತಾಲೂಕು ಮ್ಯಾಜಿಸ್ಟ್ರೇಟ್ ಪಿ.ಎನ್. ಮಹೇಶ್ ಈ ಮಹಜರು ವರದಿ ಸಿದ್ಧಪಡಿಸಿದ್ದರು.
ಮಹಜರು ಸಮಯದಲ್ಲಿ ಉಪಸ್ಥಿತರಿದ್ದ ಮೂವರು ಸಾಕ್ಷಿಗಳು ರಾಯ್ ಸಾವಿನ ಬಗ್ಗೆ ತೀವ್ರ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ಮತ್ತು ಹೋಂಗಾರ್ಡ್‌ಗಳು ನಡೆಸಿದ ಭೀಕರ ಹಲ್ಲೆಯೇ ಈ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
►ಬೆದರಿಕೆ ಮತ್ತು ಒತ್ತಡ
ರಾಯ್ ಸಾವನ್ನಪ್ಪಿದ ನಂತರದ ದಿನಗಳಲ್ಲಿ, ಆರೋಪಗಳನ್ನು ಕೈಬಿಡುವಂತೆ ಅವರ ಕುಟುಂಬದ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿತ್ತು ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿದ್ದವು.
ಕನ್ನಡ ದಿನಪತ್ರಿಕೆ 'ಶಕ್ತಿ' ವರದಿ ಮಾಡಿರುವ ಪ್ರಕಾರ, 2021ರ ಜೂನ್ 14ರಂದು ನಾಲ್ವರು ಮಹಿಳೆಯರು ಸಾಂತ್ವನ ಹೇಳುವ ನೆಪದಲ್ಲಿ ಮಟಿಲ್ಡಾ ಅವರ ಮನೆಗೆ ಬಂದಿದ್ದರು. ಅವರು ಕುಟುಂಬಕ್ಕೆ ಧೈರ್ಯ ತುಂಬುವಂತೆ ನಟಿಸುತ್ತಲೇ ಹಲವು ಅನುಮಾನಾಸ್ಪದ ಪ್ರಶ್ನೆಗಳನ್ನು ಕೇಳಿದ್ದರು. ನಂತರದ ದಿನಗಳಲ್ಲಿ, ಆ ಮಹಿಳೆಯರು ಆರೋಪಿ ಪೊಲೀಸರ ಪತ್ನಿಯರಾಗಿದ್ದರು ಎಂದು ರಾಯ್ ಸಹೋದರ ರಾಬಿನ್ ಆರೋಪಿಸಿದ್ದರು. ಈ ಸುದ್ದಿಯೊಂದಿಗೆ 'ಶಕ್ತಿ' ಪತ್ರಿಕೆಯು ಆ ಮಹಿಳೆಯರ ಫೋಟೋಗಳನ್ನೂ ಪ್ರಕಟಿಸಿತ್ತು.
ಮರುದಿನ, ಅಂದರೆ ಜೂನ್ 15ರಂದು, ರಾಯ್ ಸಹೋದರ ರಾಬಿನ್ ಮನೆಯಿಂದ ಹೊರಗೆ ಹೋದ ತಕ್ಷಣವೇ ಇಬ್ಬರು ಸ್ಥಳೀಯ ಪೊಲೀಸರು ಸಮವಸ್ತ್ರದಲ್ಲಿ ಮಟಿಲ್ಡಾ ಅವರ ಮನೆಗೆ ಬಂದಿದ್ದರು ಎಂದು 'ಶಕ್ತಿ' ವರದಿ ಮಾಡಿದೆ. ತಾವು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಎಂದು ಹೇಳಿಕೊಂಡ ಆ ಪೊಲೀಸರು, ಘಟನೆ ನಡೆದ ದಿನ ರಾಯ್ ಧರಿಸಿದ್ದ ಬಟ್ಟೆಗಳನ್ನು ನೀಡುವಂತೆ ಮತ್ತು ಖಾಲಿ ಕಾಗದದ ಮೇಲೆ ಸಹಿ ಹಾಕುವಂತೆ ಮಟಿಲ್ಡಾ ಅವರಿಗೆ ಒತ್ತಾಯಿಸಿದ್ದರು. ಮಟಿಲ್ಡಾ ಅವರು ಇದಕ್ಕೆ ಸಂಪೂರ್ಣವಾಗಿ ನಿರಾಕರಿಸಿದ್ದರು ಎಂದು ರಾಬಿನ್ ಪತ್ರಿಕೆಗೆ ತಿಳಿಸಿದ್ದರು.
ಮರಣೋತ್ತರ ಪರೀಕ್ಷೆಯ ವರದಿ ಮತ್ತು ರಾಯ್ ದೇಹದ ಮೇಲಿದ್ದ ಗಂಭೀರ ಗಾಯಗಳ ಕುರಿತು ಕನ್ನಡ ದಿನಪತ್ರಿಕೆ 'ವಿಜಯವಾಣಿ' ಕೂಡ ವರದಿ ಮಾಡಿತ್ತು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಾದ ತನುಕುಮಾರ್ ಎಚ್.ಜಿ., ಲೋಕೇಶ್ ಎನ್.ಎಸ್., ಸುನಿಲ್ ಎಂ.ಯು., ಸತೀಶ್ ಎನ್.ಎಸ್., ನೆಹರೂ ಅರುಣ್ ಕುಮಾರ್ ಕೆ.ಸಿ., ಬಿ.ಟಿ. ಪ್ರದೀಪ್ ಮತ್ತು ಎ. ರಮೇಶ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು 'ವಿಜಯವಾಣಿ' ವರದಿ ಮಾಡಿತ್ತು.
►ವೈದ್ಯಕೀಯ ವರದಿ ಮತ್ತು ಪೊಲೀಸರ ವಾದ
ರಾಯ್ ಅವರನ್ನು ಕಾನೂನುಬಾಹಿರವಾಗಿ ಬಂಧನದಲ್ಲಿಟ್ಟು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಆರು ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆದರೆ, ಮರಣೋತ್ತರ ಪರೀಕ್ಷೆ, ಹಿಸ್ಟೋಪಾಥಾಲಜಿ, ಟಾಕ್ಸಿಕಾಲಜಿ ವರದಿಗಳನ್ನು ಪರಿಶೀಲಿಸಿದ ಇಬ್ಬರು ಹಿರಿಯ ವಿಧಿವಿಜ್ಞಾನ ತಜ್ಞರು, ವೈದ್ಯಕೀಯ ವರದಿಯಲ್ಲಿರುವ ಅಂಶಗಳು ರಾಯ್ ಸಾವು ಹೃದಯ ಸಂಬಂಧಿ ಕಾಯಿಲೆಯಿಂದ ಸಂಭವಿಸಿದೆ ಎಂಬುದನ್ನು ದೃಢಪಡಿಸುವುದಿಲ್ಲ ಎಂದು ಹೇಳಿದ್ದಾರೆ.
ಹೆಸರು ಹೇಳಲು ಇಚ್ಛಿಸದ ಆ ವೈದ್ಯರು, ಮರಣೋತ್ತರ ಪರೀಕ್ಷೆ ಮತ್ತು ಹಿಸ್ಟೋಪಾಥಾಲಜಿ ವರದಿಗಳಲ್ಲಿ ರಾಯ್ ಅವರಿಗೆ ಹೃದಯ ಕಾಯಿಲೆ ಇತ್ತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ. ರಾಯ್ ಹೃದಯಾಘಾತದಿಂದಲೇ ಮೃತಪಟ್ಟರು ಎಂಬ ತೀರ್ಮಾನಕ್ಕೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಗೆ ಬಂದರು ಎಂಬುದನ್ನು ವರದಿಯಲ್ಲಿ ಸರಿಯಾಗಿ ವಿವರಿಸಿಲ್ಲ. ಅಷ್ಟೇ ಮುಖ್ಯವಾಗಿ, ದೇಹದ ಮೇಲಿದ್ದ ತೀವ್ರ ಗಾಯಗಳು ಹೃದಯಾಘಾತಕ್ಕೆ ಕಾರಣವಾಗಿರಬಹುದು ಎಂಬ ಸಾಧ್ಯತೆಯನ್ನು ವೈದ್ಯಕೀಯ ವರದಿಯಲ್ಲಿ ಏಕೆ ಪರಿಗಣಿಸಿಲ್ಲ ಎಂಬ ಬಗ್ಗೆಯೂ ಅಂತಿಮ ವರದಿಯಲ್ಲಿ ಯಾವುದೇ ವಿವರಣೆ ಇಲ್ಲ.
ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆಯು ರಾಯ್ ಅವರ ಮೇಲೆ ಭೀಕರ ಹಲ್ಲೆ ನಡೆದಿರುವುದನ್ನು ಖಚಿತಪಡಿಸಿದೆ. ರಾಯ್ ದೇಹದ ಮೇಲೆ 24 ಬಾಹ್ಯ ಗಾಯಗಳಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಇವುಗಳಲ್ಲಿ ಆರು ಗೀರು ಗಾಯಗಳು, 17 ರಕ್ತಗಟ್ಟಿದ ಗಾಯಗಳು ಮತ್ತು ಕೈಬೆರಳಿನ ಒಂದು ಉಗುರು ಕಿತ್ತುಬಂದಿರುವುದು ಸೇರಿದೆ. ಆದರೆ, ಹೃದಯ ಕಾಯಿಲೆಯಿಂದ ಉಂಟಾದ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತನಿಖೆಯ ವೇಳೆ ವಶಪಡಿಸಿಕೊಳ್ಳಲಾದ ನಾಲ್ಕು ಲಾಠಿಗಳಿಂದ ರಾಯ್ ದೇಹದ ಮೇಲಿನ ಗಾಯಗಳು ಉಂಟಾಗಿರಬಹುದೇ ಎಂದು ಸಿಐಡಿ ತನಿಖಾಧಿಕಾರಿಗಳು ವೈದ್ಯಕೀಯ ಅಭಿಪ್ರಾಯ ಕೋರಿದ್ದರು. ಇದಕ್ಕೆ ಉತ್ತರಿಸಿದ್ದ ವೈದ್ಯರು, "ಪರಿಶೀಲಿಸಲಾದ ಆ ನಾಲ್ಕು ಮರದ ಲಾಠಿಗಳಿಂದಲೇ ರಾಯ್ ದೇಹದ ಮೇಲಿನ 1ರಿಂದ 24ರವರೆಗಿನ ಗಾಯಗಳು ಉಂಟಾಗಲು ಸಾಧ್ಯವಿದೆ" ಎಂದು ಬರೆದುಕೊಟ್ಟಿದ್ದಾರೆ.
ಸಾವಿನ ಕಾರಣದ ಕುರಿತು ಪೊಲೀಸರು ಹೆಚ್ಚಿನ ಸ್ಪಷ್ಟೀಕರಣ ಕೇಳಿದಾಗ, ಆ ಗಾಯಗಳಿಂದ ಹೃದಯಾಘಾತ ಸಂಭವಿಸಲು ಸಾಧ್ಯವಿಲ್ಲ ಮತ್ತು ಅಪಸ್ಮಾರಕ್ಕೆ (ಫಿಟ್ಸ್) ಅವರು ಪಡೆಯುತ್ತಿದ್ದ ಚಿಕಿತ್ಸೆಯು ಈ ಸಾವಿಗೆ ಕಾರಣವಾಗಿರಬಹುದು ಎಂಬ ಸಾಧ್ಯತೆಯನ್ನು ತಳ್ಳಿಹಾಕಲು ಬರುವುದಿಲ್ಲ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿದ್ದಾರೆ.
►ಮರಣೋತ್ತರ ಪರೀಕ್ಷೆಯ ವರದಿಯಲ್ಲಿನ ಲೋಪದೋಷಗಳು
ರಾಯ್ ಅವರ ಎರಡೂ ಕೈಕಾಲುಗಳು, ಬೆರಳುಗಳು, ಬೆನ್ನು, ಮುಖ, ಹೊಟ್ಟೆ, ಪೃಷ್ಠ ಹಾಗೂ ವೃಷಣ ಸೇರಿದಂತೆ ದೇಹದಾದ್ಯಂತ ಗಾಯಗಳಾಗಿದ್ದವು. ಅವರ ಒಂದು ಕೈಬೆರಳಿನ ಉಗುರನ್ನು ಕಿತ್ತುಹಾಕಲಾಗಿತ್ತು. TNM ಕೋರಿಕೆಯ ಮೇರೆಗೆ ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಿದ ಇಬ್ಬರೂ ವಿಧಿವಿಜ್ಞಾನ ತಜ್ಞರು, ಈ ಗಾಯಗಳು ಗಂಭೀರ ಸ್ವರೂಪದ್ದಾಗಿದ್ದು, ಇವುಗಳಲ್ಲಿ ಹಲವು ಗಾಯಗಳು ಸಾಮಾನ್ಯವಾಗಿ ಪೊಲೀಸ್ ದೌರ್ಜನ್ಯದ ಸಂದರ್ಭದಲ್ಲಿ ಕಂಡುಬರುವಂತಹವೇ ಆಗಿವೆ ಎಂದು ಗುರುತಿಸಿದ್ದಾರೆ.
ರಾಯ್ ಅವರ ಬೆನ್ನು ಮತ್ತು ಸೊಂಟದ ಕೆಳಭಾಗದಲ್ಲಿದ್ದ ಕನಿಷ್ಠ ಎರಡು ರಕ್ತಗಟ್ಟಿದ ಗಾಯಗಳು ವಿಧಿವಿಜ್ಞಾನ ತಜ್ಞರ ಭಾಷೆಯಲ್ಲಿ 'ಟ್ರಾಮ್ ಟ್ರ್ಯಾಕ್' (ರೈಲು ಹಳಿಯಂತಹ ಗುರುತು) ಮಾದರಿಯಲ್ಲಿದ್ದವು.
ದೇಹದ ಮೇಲೆ ಬಲವಾದ ಕೋಲು ಅಥವಾ ರಾಡಿನಿಂದ ತೀವ್ರವಾಗಿ ಹೊಡೆದಾಗ ಇಂತಹ 'ಟ್ರಾಮ್ ಟ್ರ್ಯಾಕ್' ಗುರುತುಗಳು ಮೂಡುತ್ತವೆ. ಈ ಗಾಯಗಳಲ್ಲಿ ಮಧ್ಯದ ಚರ್ಮವು ಬಿಳಿಯಾಗಿದ್ದು, ಅದರ ಇಕ್ಕೆಲಗಳಲ್ಲೂ ಸಮಾನಾಂತರವಾಗಿ ರಕ್ತಗಟ್ಟಿದ ಗೆರೆಗಳು ಕಾಣಿಸುತ್ತವೆ. ಇಂತಹ ಬಲವಾದ ಏಟು ಬಿದ್ದಾಗ, ಹೊಡೆತ ಬಿದ್ದ ಜಾಗದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಅದೇ ಸಮಯದಲ್ಲಿ ಕೋಲಿನ ಅಂಚುಗಳ ಭಾಗದಲ್ಲಿದ್ದ ರಕ್ತನಾಳಗಳು ತೀವ್ರ ಒತ್ತಡಕ್ಕೆ ಸಿಲುಕಿ ಒಡೆದುಹೋಗುತ್ತವೆ. ಇದರಿಂದಾಗಿ ರಕ್ತವು ಸುತ್ತಲಿನ ಅಂಗಾಂಶಗಳಿಗೆ ಹರಿದು ಎರಡು ಸಮಾನಾಂತರ ಗೆರೆಗಳಂತೆ ಕಾಣಿಸಿ, ಗಾಯಕ್ಕೆ ಈ ವಿಶಿಷ್ಟ ರೂಪ ನೀಡುತ್ತದೆ.
ಇದೇ ರೀತಿ, ಬಲಗೈ ತೋರುಬೆರಳಿನ ಉಗುರು ಕಿತ್ತುಬಂದಿರುವುದು ಕೂಡ ಪೊಲೀಸರ ಚಿತ್ರಹಿಂಸೆಯ ಸ್ಪಷ್ಟ ಸಂಕೇತವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ರಾಯ್ ಅವರ ಕೈಗಳು, ಕಾಲುಗಳು, ಪೃಷ್ಠ, ಬೆನ್ನು ಮತ್ತು ವೃಷಣದ ಮೇಲಿದ್ದ ರಕ್ತಗಟ್ಟಿದ ಗಾಯಗಳು ಸಾಕಷ್ಟು ದೊಡ್ಡದಾಗಿದ್ದವು. ಇವುಗಳಲ್ಲಿ ಬಹುತೇಕ ಗಾಯಗಳು ದಾಳಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯತ್ನಿಸಿದಾಗ ಉಂಟಾಗುವ ಗಾಯಗಳಂತೆ ಕಾಣಿಸುತ್ತವೆ ಎಂದು ಡಾ. ರೀನಾ* ತಿಳಿಸಿದ್ದಾರೆ.
ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಗಾಯಗಳನ್ನು ವಿವರಿಸಲು ಬಳಸಿರುವ ಭಾಷೆ ತೀರಾ ಅಸ್ಪಷ್ಟವಾಗಿದೆ ಎಂದು ಡಾ. ದೀಪನ್ ಹೇಳಿದ್ದಾರೆ. ಗಾಯಗಳ ವಿವರಣೆಯು ಮೂರು ಆಯಾಮಗಳಲ್ಲಿರಬೇಕು. ಆದರೆ ಇಲ್ಲಿ ಗಾಯದ ಆಳವನ್ನು ಎಲ್ಲೂ ನಮೂದಿಸಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಗಾಯಗಳ ಉದ್ದ ಮತ್ತು ಅಗಲವನ್ನು ಮಾತ್ರ ದಾಖಲಿಸಲಾಗಿದೆಯೇ ಹೊರತು ಆಳವನ್ನು ಉಲ್ಲೇಖಿಸಿಲ್ಲ ಎಂದಿದ್ದಾರೆ ಅವರು.
ಸಿಐಡಿ ತನಿಖೆ ನಡೆಸುತ್ತಿರುವ ಇತರ ಲಾಕಪ್ ಡೆತ್ ಪ್ರಕರಣಗಳ ಮರಣೋತ್ತರ ಪರೀಕ್ಷೆಯ ವರದಿಗಳಲ್ಲಿ ಗಾಯಗಳು ಚರ್ಮದ ಮಟ್ಟದ್ದೇ, ಚರ್ಮದ ಕೆಳಭಾಗದವರೆಗೂ ಅಥವಾ ಸ್ನಾಯುಗಳ ಆಳದವರೆಗೂ ಇವೆಯೇ ಎಂಬುದನ್ನು ಸ್ಪಷ್ಟವಾಗಿ ಬರೆಯಲಾಗುತ್ತದೆ. ಇದು ಬಿದ್ದ ಹೊಡೆತದ ತೀವ್ರತೆಯನ್ನು ತೋರಿಸುತ್ತದೆ.
ರಾಯ್ ಅವರಿಗೆ ಹೃದಯ ಕಾಯಿಲೆ ಇತ್ತು. ಅದರಿಂದಲೇ ಹೃದಯಾಘಾತ ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದ್ದರೂ, ಅದಕ್ಕೆ ಯಾವುದೇ ಬಲವಾದ ಪುರಾವೆಗಳಿಲ್ಲ ಎಂದು ದೀಪನ್ ಮತ್ತು ರೀನಾ ಇಬ್ಬರೂ ಒಮ್ಮತದಿಂದ ಹೇಳಿದ್ದಾರೆ.
ಡಾ. ರೀನಾ ಮಾತನಾಡಿ, "ಹಿಸ್ಟೋಪಾಥಾಲಜಿ ವರದಿಯಲ್ಲಿ ಅವರಿಗೆ ಆರಂಭಿಕ ಹಂತದ ಅಥೆರೋಸ್ಕ್ಲೆರೋಸಿಸ್ (ರಕ್ತನಾಳಗಳ ಸಂಕುಚಿತಗೊಳ್ಳುವಿಕೆ) ಇತ್ತು ಎಂದು ಹೇಳಲಾಗಿದೆ. ಆದರೆ ಇದು ಅವರ ವಯಸ್ಸಿನ ಯಾರಿಗೇ ಆದರೂ ಸಾಮಾನ್ಯವಾಗಿ ಇರುವಂತದ್ದೇ ಆಗಿದೆ" ಎಂದಿದ್ದಾರೆ.
ಡಾ. ದೀಪನ್ ಕೂಡ ಇದನ್ನು ಒಪ್ಪಿದ್ದು, "ಅವರ ಹೃದಯವು ಬೇರೆ ಯಾವುದೇ ಸಾಮಾನ್ಯ ವ್ಯಕ್ತಿಯ ಹೃದಯದಷ್ಟೇ ಆರೋಗ್ಯವಾಗಿತ್ತು. ಅವರ ಹಿಸ್ಟೋಪಾಥಾಲಜಿ ವರದಿಯೂ ಎಲ್ಲರಂತೆ ಸಾಮಾನ್ಯವಾಗಿದೆ" ಎಂದು ಹೇಳಿದ್ದಾರೆ.
ದೇಹದ ಮೇಲಿದ್ದ ಗಾಯಗಳು ಸಾವಿಗೆ ಕಾರಣವಾಗಿರಬಹುದು ಎಂಬ ಸಾಧ್ಯತೆಯನ್ನು ವೈದ್ಯಕೀಯ ವರದಿಯಲ್ಲಿ ಸ್ಪಷ್ಟವಾಗಿ ತಳ್ಳಿಹಾಕಲಾಗಿಲ್ಲ ಎಂದು ಇಬ್ಬರೂ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ತಾವು ಈ ಮರಣೋತ್ತರ ಪರೀಕ್ಷೆ ನಡೆಸಿದ್ದರೆ ದಾಖಲಿಸುತ್ತಿದ್ದ ಒಟ್ಟು ಮಾಹಿತಿಯಲ್ಲಿ ಕೇವಲ ಶೇಕಡಾ 30ರಷ್ಟು ಮಾಹಿತಿ ಮಾತ್ರ ಈ ವರದಿಯಲ್ಲಿದೆ ಎಂದು ಡಾ. ರೀನಾ ಹೇಳಿದ್ದಾರೆ. ದೇಹದ ಮೇಲೆ ಯಾವ ಗುರುತುಗಳು ಇಲ್ಲ ಎಂಬುದನ್ನೂ ಸಹ ತಾವು ದಾಖಲಿಸುತ್ತಿದ್ದಾಗಿ ಅವರು ವಿವರಿಸಿದ್ದಾರೆ. ಇದು ಸಾವಿನ ನಿಖರ ಕಾರಣವನ್ನು ತಿಳಿಯಲು ಮತ್ತು ಗಾಯಗಳ ತೀವ್ರತೆಯನ್ನು ಅಳೆಯಲು ಸಹಕಾರಿಯಾಗುತ್ತಿತ್ತು ಎನ್ನುತ್ತಾರೆ ಅವರು.
ಇದಕ್ಕೊಂದು ಉದಾಹರಣೆ ನೀಡಿದ ರೀನಾ, ರಾಯ್ ಅವರ ಎದೆ ಮತ್ತು ಕುತ್ತಿಗೆಯ ಮೇಲಿದ್ದ ರಕ್ತಗಟ್ಟಿದ ಗಾಯಗಳಿಗೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಯಾವುದೇ ಪ್ರಾಮುಖ್ಯತೆ ನೀಡಿಲ್ಲ. ಅವು ಸಾವಿನಲ್ಲಿ ವಹಿಸಿದ ಪಾತ್ರದ ಬಗ್ಗೆಯೂ ಉಲ್ಲೇಖಿಸಿಲ್ಲ. "ಹೃದಯಾಘಾತವೊಂದೇ ಈ ಸಾವಿಗೆ ನೇರ ಕಾರಣವಾಗಿತ್ತೇ ಅಥವಾ ದೇಹದ ಮೇಲಿನ ಗಾಯಗಳು ಆ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದವೇ ಎಂಬ ಬಗ್ಗೆ ತನಿಖೆಯೇ ನಡೆದಿಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಈ ಇಬ್ಬರು ವಿಧಿವಿಜ್ಞಾನ ತಜ್ಞರ ತೀರ್ಮಾನ ನಿಜವೇ ಆಗಿದ್ದಲ್ಲಿ ಮತ್ತು ರಾಯ್ ಅವರ ಸಾವು ಗಾಯಗಳಿಂದಲೇ ಸಂಭವಿಸಿದ್ದಲ್ಲಿ, ಪೊಲೀಸರು ಕೇವಲ ಹಲ್ಲೆಯ ಆರೋಪವಷ್ಟೇ ಅಲ್ಲದೆ ಇನ್ನೂ ಗಂಭೀರವಾದ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.
(ಗುರುತು ಪತ್ತೆಯಾಗದಿರಲು ವರದಿಯಲ್ಲಿ ವ್ಯಕ್ತಿಗಳ ಹೆಸರುಗಳನ್ನು ಬದಲಾಯಿಸಲಾಗಿದೆ.)
ಸೌಜನ್ಯ: thenewsminute.com