×
Ad

ಇಂದೋರ್ ಕಲುಷಿತ ನೀರು ಪ್ರಕರಣ: ಇಲ್ಲಿಯವರೆಗೆ ಏನೇನಾಯ್ತು?

Update: 2026-01-02 19:54 IST

 ಸಾಂದರ್ಭಿಕ ಚಿತ್ರ 

 

ಮಧ್ಯಪ್ರದೇಶದ ಇಂದೋರ್‌ ನ ಭಾಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿ 10 ಮಂದಿ ಸಾವಿಗೀಡಾಗಿದ್ದು, 150 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. 2,456 ಜನರಲ್ಲಿ ವಾಂತಿ ಮತ್ತು ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಪ್ರಕರಣದ ಬಗ್ಗೆ ಪ್ರಾರಂಭಿಸಲಾದ ತನಿಖೆಯಲ್ಲಿ ಕುಡಿಯುವ ನೀರಿನಲ್ಲಿ “ಸಾಮಾನ್ಯವಾಗಿ ಒಳಚರಂಡಿ ನೀರಿನಲ್ಲಿ ಕಂಡುಬರುವ” ಬ್ಯಾಕ್ಟೀರಿಯಾಗಳಿರುವುದು ಕಂಡುಬಂದಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಅಧಿಕಾರಿಗಳು ತಿಳಿಸಿದ್ದಾರೆ. ಅಂದಹಾಗೆ, ಇಂದೋರ್ ಭಾರತದಲ್ಲಿನ ಅತ್ಯಂತ ಸ್ವಚ್ಛ ನಗರವೆಂಬ ಹೆಗ್ಗಳಿಕೆಯನ್ನು ಪಡೆದಿದೆ. ಭಾಗೀರಥಪುರ ಪ್ರದೇಶದಲ್ಲಿ ಪುರಸಭೆ ಪೂರೈಸುತ್ತಿರುವ ಕುಡಿಯುವ ನೀರಿನ ಗುಣಮಟ್ಟ ಕಳಪೆಯಾಗಿತ್ತು. ಇದನ್ನು ಕುಡಿದ ಸ್ಥಳೀಯ ನಿವಾಸಿಗಳಿಗೆ ವಾಂತಿ, ಅತಿಸಾರ, ನಿರ್ಜಲೀಕರಣ, ತೀವ್ರ ಜ್ವರ ಕಾಣಿಸಿಕೊಂಡಿದ್ದು, ಹಲವಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜಲ ಮಾಲಿನ್ಯವು ಜಾಗತಿಕ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿದೆ. ಕಲುಷಿತ ನೀರನ್ನು ಸೇವಿಸುವುದರಿಂದ ಬ್ಯಾಕ್ಟೀರಿಯಾದ ಗ್ಯಾಸ್ಟ್ರೋಎಂಟರೈಟಿಸ್, ಕಾಲರಾ, ಟೈಫಾಯಿಡ್ ಮತ್ತು ಭೇದಿ ಮುಂತಾದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಇದು ಜನರ ಅನಾರೋಗ್ಯ ಮತ್ತು ಸಾವಿಗೆ ಕಾರಣವಾಗುತ್ತದೆ. ಇಂದೋರ್‌ ನಲ್ಲಿ ಕುಡಿಯುವ ನೀರಿನೊಂದಿಗೆ ಕೊಳಚೆನೀರು ಸೇರಿಕೊಂಡಿದ್ದೇ ಜನರ ಸಾವಿಗೆ ಕಾರಣ ಎಂದು ಆರಂಭಿಕ ತನಿಖೆಗಳು ಸೂಚಿಸುತ್ತವೆ. ಇದು ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಗಳು ಮತ್ತು ಜಾಗರೂಕ ಮೇಲ್ವಿಚಾರಣೆಯ ಮಹತ್ವವನ್ನು ಒತ್ತಿಹೇಳುತ್ತದೆ.

►ಇಂದೋರ್‌ ನಲ್ಲಿ ಏನೇನಾಯ್ತು?

2025 ಡಿಸೆಂಬರ್ ತಿಂಗಳ ಮಧ್ಯದಲ್ಲಿ, 15,000 ಜನರು ವಾಸಿಸುವ ಜನನಿಬಿಡ ಪ್ರದೇಶವಾದ ಭಾಗೀರಥಪುರದ ನಿವಾಸಿಗಳು ತಮಗೆ ಪೂರೈಕೆಯಾಗುತ್ತಿರುವ ನೀರು ಬಣ್ಣ ಕಳೆದುಕೊಂಡು ದುರ್ವಾಸನೆ ಬೀರುತ್ತಿರುವುದನ್ನು ಗಮನಿಸಿದ್ದಾರೆ. ಸ್ಥಳೀಯರು ನೀರಿನ ಗುಣಮಟ್ಟದ ಬಗ್ಗೆ ನಾಗರಿಕ ಅಧಿಕಾರಿಗಳಿಗೆ ಪದೇಪದೇ ದೂರು ನೀಡಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ.

2025 ಡಿಸೆಂಬರ್ 25ರಂದು ನೀರಿನ ವಿತರಣೆ ಮುಂದುವರಿದಿತ್ತು. ಅನೇಕ ಕುಟುಂಬಗಳು ನೀರು ಕಹಿ ರುಚಿ ಹಾಗೂ ದುರ್ವಾಸನೆಯಿಂದ ಕೂಡಿದೆ ಎಂದು ದೂರಿದ್ದವು. ಆದರೆ ಬೇರೆ ಮಾರ್ಗವಿಲ್ಲದೆ ಕುಡಿಯಲು ಮತ್ತು ಅಡುಗೆ ಮಾಡಲು ಅದೇ ನೀರನ್ನು ಬಳಸಿದ್ದವು.

ಡಿಸೆಂಬರ್ 27–28ರಂದು ಹಲವರು ಅಸ್ವಸ್ಥರಾದರು. ನಲ್ಲಿ ನೀರನ್ನು ಸೇವಿಸಿದ ನಂತರ ಹಲವಾರು ಮಂದಿಗೆ ವಾಂತಿ, ತೀವ್ರ ಅತಿಸಾರ, ನಿರ್ಜಲೀಕರಣ ಕಾಣಿಸಿಕೊಂಡಿತು. ಇವರಿಗೆ ಸ್ಥಳೀಯ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ನಂತರ ಆರೋಗ್ಯ ತಂಡಗಳು ರೋಗಿಗಳ ಸಮೀಕ್ಷೆಯನ್ನು ಪ್ರಾರಂಭಿಸಿವೆ.

ಡಿಸೆಂಬರ್ 29ರಂದು ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾದ ರೋಗಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿತು. ಅತಿಸಾರದಿಂದ ಕನಿಷ್ಠ ಮೂರು ಸಾವುಗಳನ್ನು ಮೇಯರ್ ಪುಷ್ಯಮಿತ್ರ ಭಾರ್ಗವ ದೃಢಪಡಿಸಿದ್ದಾರೆ.

2025 ಡಿಸೆಂಬರ್ 30ರಂದು ಆಸ್ಪತ್ರೆಯಲ್ಲಿ ದಾಖಲಾದವರ ಸಂಖ್ಯೆ 100 ಕ್ಕಿಂತ ಹೆಚ್ಚಾಯಿತು. ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ 1,100 ಕ್ಕೂ ಹೆಚ್ಚು ನಿವಾಸಿಗಳು ಅಸ್ವಸ್ಥರಾಗಿದ್ದಾರೆ.

ಡಿಸೆಂಬರ್ 31, 2025: ಸಾವಿನ ಸಂಖ್ಯೆ ಏಳಕ್ಕೆ ಏರಿತು. ಆರು ತಿಂಗಳ ಮಗು ಕೂಡ ಸಾವಿಗೀಡಾಗಿರುವುದು ವರದಿಯಾಗಿದೆ. ಕಲುಷಿತ ನೀರು ಸೇವನೆಯಿಂದ ಸಾವಿಗೀಡಾದವರ ಕುಟುಂಬಗಳಿಗೆ ಸರ್ಕಾರದಿಂದ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಯಿತು. ವಲಯ ಅಧಿಕಾರಿ ಮತ್ತು ಸಹಾಯಕ ಎಂಜಿನಿಯರ್ ಸೇರಿದಂತೆ ನೀರು ಸರಬರಾಜು ಮೇಲ್ವಿಚಾರಣೆಯಲ್ಲಿನ ಲೋಪಕ್ಕಾಗಿ ಉಸ್ತುವಾರಿ ಉಪ ಎಂಜಿನಿಯರ್ ವಜಾಗೊಳಿಸಲ್ಪಟ್ಟರು.

►ಇಂದೋರ್ ಮೇಯರ್ ಪ್ರತಿಕ್ರಿಯೆ

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ ಅವರು, ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಭಾಗೀರಥಪುರದಲ್ಲಿ ಅತಿಸಾರದಿಂದ ನಾಲ್ಕು ಜನರು ಸಾವಿಗೀಡಾಗಿದ್ದಾರೆ ಎಂದರು. ಆದರೆ ಈ ಸಾಂಕ್ರಾಮಿಕ ರೋಗದಿಂದಾಗಿ 10 ಸಾವುಗಳ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದೂ ಹೇಳಿದರು. ಭಾಗೀರಥಪುರದಿಂದ ಸಂಗ್ರಹಿಸಲಾದ ಕುಡಿಯುವ ನೀರಿನ ಮಾದರಿಗಳ ಪ್ರಾಥಮಿಕ ಪರೀಕ್ಷಾ ವರದಿಗಳ ಆಧಾರದ ಮೇಲೆ ಪ್ರದೇಶದಲ್ಲಿ ಕಾಲರಾ ಹರಡಿರುವ ಶಂಕೆ ಬಗ್ಗೆ ಕೇಳಲಾದ ಪ್ರಶ್ನೆಗೆ, ಆರೋಗ್ಯ ಇಲಾಖೆ ಮಾತ್ರ ಈ ವಿಷಯದ ಬಗ್ಗೆ ಮಾಹಿತಿಯನ್ನು ನೀಡಬಹುದು ಎಂದು ಮೇಯರ್ ಉತ್ತರಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ನಗರದ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯ ಪರೀಕ್ಷಾ ವರದಿಗಳು ಪೈಪ್‌ಲೈನ್ ಸೋರಿಕೆಯಿಂದಾಗಿ ಪ್ರದೇಶದ ಕುಡಿಯುವ ನೀರು ಕಲುಷಿತವಾಗಿದೆ ಎಂದು ದೃಢಪಡಿಸಿವೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಡಾ. ಮಾಧವ್ ಪ್ರಸಾದ್ ಹಸಾನಿ ಹೇಳಿದ್ದಾರೆ. ಆದರೆ ಸಿಎಂಎಚ್‌ಒ ವರದಿಯ ವಿವರವಾದ ಸಂಶೋಧನೆಗಳನ್ನು ಹಂಚಿಕೊಳ್ಳಲಿಲ್ಲ. ಆಡಳಿತಾಧಿಕಾರಿಗಳು ಸಹ ಈ ಕುರಿತು ಸ್ಪಷ್ಟ ಮಾಹಿತಿ ನೀಡಿಲ್ಲ.

ಗುರುವಾರ ರಾತ್ರಿಯವರೆಗೆಗಿನ ಪರಿಸ್ಥಿತಿಯನ್ನು ಉಲ್ಲೇಖಿಸಿ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು, ಈ ಪ್ರದೇಶದ ಆಸ್ಪತ್ರೆಗಳಿಗೆ 272 ರೋಗಿಗಳನ್ನು ದಾಖಲಿಸಲಾಗಿದ್ದು, ಅವರಲ್ಲಿ 71 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಹೇಳಿದರು. ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿರುವ 201 ರೋಗಿಗಳಲ್ಲಿ 32 ಮಂದಿ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

►ಇಂದೋರ್‌ ನಲ್ಲಿ ನೀರಿನ ಗುಣಮಟ್ಟ ಕಳಪೆ

2025ರಲ್ಲಿ ಇಂದೋರ್ ನಗರಾದ್ಯಂತ ನೀರಿನ ಗುಣಮಟ್ಟ ಕಳಪೆಯಾಗಿದೆ ಎಂಬ ಸಂಬಂಧ 266 ದೂರುಗಳು ದಾಖಲಾಗಿವೆ. ಭಾಗೀರಥಪುರವನ್ನು ಒಳಗೊಂಡಿರುವ ವಲಯ–4ರಲ್ಲಿ 23 ಅಧಿಕೃತ ದೂರುಗಳು ದಾಖಲಾಗಿವೆ. ಇಂದೋರ್ ಮೇಯರ್ ಸಹಾಯವಾಣಿಯ ದಾಖಲೆಗಳ ಪ್ರಕಾರ, ಕಳೆದ ವರ್ಷದಲ್ಲಿ ಕಲುಷಿತ ನೀರಿನ ಕುರಿತು 16 ಪ್ರಕರಣಗಳನ್ನು ಸಹಾಯಕ ಎಂಜಿನಿಯರ್ ಯೋಗೇಶ್ ಜೋಶಿಗೆ ವಹಿಸಲಾಗಿದೆ. ಆ 16 ಪ್ರಕರಣಗಳಲ್ಲಿ ಐದು ಪ್ರಕರಣಗಳನ್ನು ಪರಿಹರಿಸಲಾಗಿದೆ. ಏಳು ಪ್ರಕರಣಗಳನ್ನು ಪೂರ್ಣಗೊಂಡಿವೆ ಎಂದು ಗುರುತಿಸಲಾಗಿದೆ.

ಇದಲ್ಲದೆ, ಇಂದೋರ್ ಪುರಸಭೆಯ ಉನ್ನತ ಸ್ಥಾನದಲ್ಲಿರುವ ಮೂಲಗಳ ಪ್ರಕಾರ, ಒಂದು ವರ್ಷದ ಹಿಂದೆಯೇ ಹೊಸ ನರ್ಮದಾ ನೀರಿನ ಪೈಪ್‌ಲೈನ್ ಹಾಕಲು ಕಡತ ಸಿದ್ಧಪಡಿಸಲಾಗಿತ್ತು. ಹಿರಿಯ ನಿಗಮದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನೀರಿನ ಪೈಪ್‌ಲೈನ್‌ಗಳನ್ನು ಸರಿಪಡಿಸುವ ಅಗತ್ಯವಿದೆ ಎಂದು ಕಂಡುಹಿಡಿದ ನಂತರ ಟೆಂಡರ್ ಕರೆಯಲಾಗಿತ್ತು. 2024 ನವೆಂಬರ್ 1ರಂದು ಕಡತ ಸಿದ್ಧವಾಗಿದ್ದು, 2025 ಜುಲೈ 30ರಂದು ಟೆಂಡರ್ ಕರೆಯಲಾಯಿತು. ಯೋಜನೆಯ ಅಂತಿಮ ಹಂತವನ್ನು ಕಾರ್ಯಗತಗೊಳಿಸಲು ಕೆಲಸದ ಆದೇಶವನ್ನು 2025 ಡಿಸೆಂಬರ್ 26ರಂದು ಅಂಗೀಕರಿಸಲಾಯಿತು. ಇದೇ ಹೊತ್ತಿನಲ್ಲಿ ಕಲುಷಿತ ನೀರು ಸೇವನೆಯಿಂದ ಜನರ ಸಾವಿನ ಪ್ರಕರಣ ಬೆಳಕಿಗೆ ಬಂತು.

ಹೊಸ ನರ್ಮದಾ ನೀರಿನ ಪೈಪ್‌ಲೈನ್ ಹಾಕುವ ಬೇಡಿಕೆಯನ್ನು ಕಳೆದ ವರ್ಷ ಮುಂದಿಟ್ಟಿದ್ದು, ನಂತರ ಕಡತವನ್ನು ಸಿದ್ಧಪಡಿಸಲಾಗಿತ್ತು. ಆದರೆ ಈ ಕಡತವನ್ನು “ಸುಮಾರು ಏಳು ತಿಂಗಳಿನಿಂದ ಹಾಗೇ ಇಡಲಾಗಿತ್ತು” ಎಂದು ಭಾಗೀರಥಪುರದ ಕಾರ್ಪೊರೇಟರ್ ಕಮಲ್ ವಘೇಲಾ ಹೇಳಿದ್ದಾರೆ ಎಂದು Indian Express ವರದಿ ಮಾಡಿದೆ.

ಡಿಸೆಂಬರ್ 31ರಂದು ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ವಘೇಲಾ ಪತ್ರ ಬರೆದಿದ್ದರು. ಅದರಲ್ಲಿ, ಹಲವು ಫಾಲೋಅಪ್‌ಗಳ ಹೊರತಾಗಿಯೂ ಅಧಿಕಾರಿಗಳು ಈ ವಿಷಯ “ಪ್ರಕ್ರಿಯೆಯಲ್ಲಿದೆ” ಎಂದು ಮಾತ್ರ ಪ್ರತಿಕ್ರಿಯಿಸುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ. ಮೇಯರ್ ಅವರನ್ನು ಸಂಪರ್ಕಿಸಿದ ನಂತರವೇ 2025 ಜುಲೈ 30ರಂದು ಟೆಂಡರ್ ನೀಡಲಾಯಿತು. ಆದರೂ ನಿಗದಿತ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ. ಈ ಘಟನೆ ಕೇವಲ ಆಡಳಿತಾತ್ಮಕ ಲೋಪವಲ್ಲ, ಸಾರ್ವಜನಿಕ ಆರೋಗ್ಯಕ್ಕೆ ಉದ್ದೇಶಪೂರ್ವಕವಾಗಿ ಅಪಾಯ ಉಂಟುಮಾಡಿದ ಗಂಭೀರ ಕ್ರಿಮಿನಲ್ ನಿರ್ಲಕ್ಷ್ಯದ ಪರಿಣಾಮವಾಗಿದೆ. ಮೇಲ್ನೋಟಕ್ಕೆ ಈ ಪ್ರಕರಣವು ಕರ್ತವ್ಯ ಲೋಪ, ಆದೇಶಗಳ ತಿರಸ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಕಾನೂನುಗಳ ಉಲ್ಲಂಘನೆಯ ಅಡಿಯಲ್ಲಿ ಬರುತ್ತದೆ ಎಂದು ವಘೇಲಾ ಬರೆದಿದ್ದಾರೆ.

ಜಲ ಮಾಲಿನ್ಯದ ದೂರುಗಳನ್ನು ಪರಿಹರಿಸದ ಕಾರಣ ಅಮಾನತುಗೊಂಡಿರುವ ವಲಯ–4ರ ಜವಾಬ್ದಾರಿಯುತ ಸಹಾಯಕ ಎಂಜಿನಿಯರ್ ಯೋಗೇಶ್ ಜೋಶಿ ಅವರನ್ನು ಸಂಪರ್ಕಿಸಿದಾಗ, “ನಾನು ಮೂರು ವಲಯಗಳನ್ನು ನಿರ್ವಹಿಸುತ್ತೇನೆ. ಇದನ್ನು ಒಬ್ಬಂಟಿಯಾಗಿ ನಿರ್ವಹಿಸುವುದು ಅಸಾಧ್ಯ. ಸ್ಥಳೀಯ ಸಿಬ್ಬಂದಿ ಈಗಾಗಲೇ ಈ ಪರಿಸ್ಥಿತಿಯ ಬಗ್ಗೆ ನನಗೆ ತಿಳಿಸಿದ್ದರು. ವಾಸ್ತವವಾಗಿ, ಈ ಪ್ರದೇಶದ ನೀರಿನ ಪೈಪ್‌ಲೈನ್‌ಗಳು ಕನಿಷ್ಠ ಒಂದು ವರ್ಷದ ಹಿಂದೆಯೇ ಹಾನಿಗೊಳಗಾಗಿವೆ ಎಂದು ಮುಖ್ಯ ಕಚೇರಿಗೆ ತಿಳಿದಿತ್ತು. ದುರಸ್ತಿಗಾಗಿ ಟೆಂಡರ್ ಕರೆಯಲಾಗಿದ್ದರೂ, ಕೆಲಸದ ಆದೇಶವನ್ನು ಕೇವಲ ಎರಡು ಅಥವಾ ಮೂರು ದಿನಗಳ ಹಿಂದೆ ನೀಡಲಾಗಿದೆ” ಎಂದು ಅವರು ಹೇಳಿದ್ದಾರೆ ಎಂದು Indian Express ವರದಿ ಉಲ್ಲೇಖಿಸಿದೆ.

►ಇದಕ್ಕೆ ಅಧಿಕಾರಿಗಳು ಏನಂತಾರೆ?

ಟೆಂಡರ್‌ಗಳನ್ನು ಪರಿಶೀಲಿಸುವ ಜವಾಬ್ದಾರಿಯುತ ಅಧಿಕಾರಿ ಹೆಚ್ಚುವರಿ ಆಯುಕ್ತ ರೋಹಿತ್ ಸಿಸೋನಿಯಾ ಈ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಒಟ್ಟು ಮೂರು ಲೈನ್‌ಗಳಿವೆ. ಮೊದಲನೆಯದು ಮುಖ್ಯ ಪೈಪ್‌ಲೈನ್, ಎರಡನೆಯದು ವಿತರಣಾ ಪೈಪ್‌ಲೈನ್, ಮೂರನೆಯದು ಮನೆಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್.

“ನೀರಿನ ಪೈಪ್‌ಲೈನ್‌ಗಳನ್ನು ದುರಸ್ತಿ ಮಾಡಲಾಗಿಲ್ಲ ಎಂದು ಹೇಳುವುದು ಸುಳ್ಳು. ದುರಸ್ತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿಲ್ಲ. ಟೆಂಡರ್ ಅನ್ನು ಹಲವು ತಿಂಗಳ ಹಿಂದೆಯೇ ಪ್ರಾರಂಭಿಸಲಾಗಿದೆ. AMRUT 2.0 ಯೋಜನೆಯಡಿಯಲ್ಲಿ ನಾವು ಈಗಾಗಲೇ ನಗರದಾದ್ಯಂತ ನೀರಿನ ಪೈಪ್‌ಲೈನ್ ಜೋಡಣೆಯ ಮೇಲೆ ಕೆಲಸ ಮಾಡುತ್ತಿದ್ದೇವೆ” ಎಂದು ಸಿಸೋನಿಯಾ ಹೇಳಿದ್ದಾರೆ.

ಈ ನಿರ್ದಿಷ್ಟ ಪ್ರದೇಶದಲ್ಲಿ, ಎರಡು ಪ್ರಮುಖ ಪೈಪ್‌ಲೈನ್‌ಗಳಲ್ಲಿ ಸುಮಾರು 80 ಪ್ರತಿಶತ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಡಿಸೆಂಬರ್ 26ರಂದು ಮೂರನೇ ಪೈಪ್‌ಲೈನ್ ಕೆಲಸ ಪ್ರಾರಂಭಿಸಲಾಗಿದೆ. ಡಿಪಿಆರ್ ಮಂಜೂರಾಗಿದೆ, ಟೆಂಡರ್ ನೀಡಲಾಗಿದೆ ಮತ್ತು ಗುತ್ತಿಗೆದಾರರನ್ನು ಗುರುತಿಸಲಾಗಿದೆ. ನಾನು ಕೇವಲ ಎರಡು ತಿಂಗಳಿನಿಂದ ಉಸ್ತುವಾರಿ ವಹಿಸಿದ್ದೇನೆ. ಇದು ಸುಮಾರು 30 ವರ್ಷ ಹಳೆಯದಾದ ಮಾರ್ಗವಾಗಿದ್ದು, ಈಗಾಗಲೇ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ತನಿಖಾ ತಂಡಗಳು ಮಾಲಿನ್ಯದ ಮೂಲವನ್ನು ಗುರುತಿಸಿವೆ. ಮುಖ್ಯ ಪೈಪ್‌ಲೈನ್ ಮೇಲೆಯೇ ಸಣ್ಣ ಪೊಲೀಸ್ ಚೌಕಿಯನ್ನು ನಿರ್ಮಿಸಲಾಗಿತ್ತು. ಅಲ್ಲಿ ಸೆಪ್ಟಿಕ್ ಟ್ಯಾಂಕ್ ಇಲ್ಲದ ಶೌಚಾಲಯವಿದ್ದು, ಎಲ್ಲಾ ಕಲುಷಿತ ತ್ಯಾಜ್ಯವನ್ನು ಒಂದು ಗುಂಡಿಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಆ ಗುಂಡಿಯ ಕೆಳಗಡೆಯೇ ಮುಖ್ಯ ಪೈಪ್‌ಲೈನ್ ಒಡೆದಿದ್ದು, ಅದರಿಂದ ಮಾಲಿನ್ಯ ಉಂಟಾಗಿದೆ. ಸ್ಥಳದಿಂದ ಸಂಗ್ರಹಿಸಿದ ಮಾದರಿಗಳು ಕಲುಷಿತವಾಗಿವೆ ಎಂದು ಪರೀಕ್ಷೆಗಳು ದೃಢಪಡಿಸಿವೆ. ಇದುವೇ ಅತಿಸಾರಕ್ಕೆ ಕಾರಣವಾಗಿರಬಹುದು ಎಂದು ಅವರು ತಿಳಿಸಿದ್ದಾರೆ.

ಒಡೆದ ನೀರಿನ ಪೈಪ್‌ಲೈನ್‌ಗಳು ಮತ್ತು ಮಾಲಿನ್ಯದ ದೂರುಗಳನ್ನು ಪರಿಹರಿಸಲು ಪುರಸಭೆಯ ಅಧಿಕಾರಿಗಳು ಈಗ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದಾರೆ. ಈ ಘಟನೆ ಮತ್ತೆ ಪುನರಾವರ್ತನೆಯಾಗದಂತೆ ತಡೆಯಲು ಈ ಪ್ರಕರಣದಲ್ಲಿ ಕೆಲಸ ಮಾಡಲು ವಿಶೇಷ ತಂಡವನ್ನು ನಿಯೋಜಿಸಲಾಗಿದೆ ಎಂದು ಸಿಸೋನಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News