×
Ad

ಸರಕಾರಿ ಸೇವೆಗೆ ನೇಮಕಗೊಂಡ ಬಳಿಕ ಜನ್ಮ ದಿನಾಂಕ ಬದಲಿಸುವಂತಿಲ್ಲ

ನೌಕರರ ವಯಸ್ಸನ್ನು ಖಚಿತಪಡಿಸಿಕೊಳ್ಳುವ ವಿಧೇಯಕ-2026 ಸಿದ್ಧ

Update: 2026-01-02 08:10 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ನೇರ ನೇಮಕಾತಿ ಮೂಲಕ ಸರಕಾರಿ ಸೇವೆಗೆ ಒಮ್ಮೆ ಸೇರಿದ ನಂತರವೂ ತಮ್ಮ ವಯಸ್ಸು ಮತ್ತು ಜನ್ಮ ದಿನಾಂಕವನ್ನು ಬದಲಾಯಿಸುತ್ತಿದ್ದ ಪ್ರಕರಣಗಳಿಗೆ ರಾಜ್ಯ ಸರಕಾರ ಇತಿಶ್ರೀ ಹಾಡಲು ಮುಂದಾಗಿದೆ.

ಇದಕ್ಕಾಗಿ ಕರ್ನಾಟಕ ರಾಜ್ಯ ನೌಕರರ ವಯಸ್ಸನ್ನು ಖಚಿತಪಡಿಸಿಕೊಳ್ಳುವುದು ಮತ್ತು ನಿರ್ಣಯದ 1974ರ ಕಾಯ್ದೆಯನ್ನು ರದ್ದುಗೊಳಿಸಲು ಮುಂದಾಗಿದೆ. ಈ ಕಾಯ್ದೆಯನ್ನು ಪರಿಷ್ಕರಿಸುವ ಉದ್ದೇಶದಿಂದ ರಾಜ್ಯ ಸರಕಾರಿ ನೌಕರರ ವಯಸ್ಸನ್ನು ಖಚಿತಪಡಿಸಿಕೊಳ್ಳುವ ವಿಧೇಯಕ-2026ನ್ನು ಸಿದ್ಧಪಡಿಸಿದೆ.

ಕರ್ನಾಟಕ ರಾಜ್ಯ ನೌಕರರ ವಯಸ್ಸನ್ನು ಖಚಿತಪಡಿಸಿಕೊಳ್ಳುವ ವಿಧೇಯಕ- 2026ರ ಕರಡು ಪ್ರತಿಯು ‘The-file.in’ಗೆ ಲಭ್ಯವಾಗಿದೆ.

ಸರಕಾರಿ ನೌಕರರ ನಿವೃತ್ತಿ ವಯಸ್ಸಿನಲ್ಲಿ ಏರಿಕೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಸರಕಾರಿ ನೌಕರರ ವಯಸ್ಸು ಮತ್ತು ಜನ್ಮ ದಿನಾಂಕ ಬದಲಾಯಿಸುವುದನ್ನು ನಿಷೇಧಿಸಲು ಸಿದ್ಧಪಡಿಸಿರುವ ವಿಧೇಯಕವು ಮುನ್ನೆಲೆಗೆ ಬಂದಿದೆ.

ಸರಕಾರಿ ನೌಕರರು ತಮ್ಮ ವಯಸ್ಸು ಮತ್ತು ಜನ್ಮದಿನಾಂಕವನ್ನು ಬದಲಾಯಿಸಲು ಪದೇ ಪದೇ ಕೋರಿಕೆಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುತ್ತಿದ್ದರು. ನ್ಯಾಯಾ ಲಯಗಳ ಆದೇಶವನ್ನು ಮುಂದಿರಿಸಿ ಜನ್ಮ ದಿನಾಂಕ ಮತ್ತು ವಯಸ್ಸನ್ನೂ ಬದಲಾಯಿಸುತ್ತಿದ್ದರು. ಹೀಗಾಗಿ ಕರ್ನಾಟಕರಾಜ್ಯ ನೌಕರರ ವಯಸ್ಸನ್ನು ಖಚಿತಪಡಿಸಿಕೊಳ್ಳುವ ಕಾಯ್ದೆ 1974ನ್ನು ಪರಿಷ್ಕರಿಸು ವುದು ಅಗತ್ಯವೆಂದು ಸರಕಾರವು ಪರಿಗಣಿಸಿರುವುದು ಕರಡು ವಿಧೇಯಕದ ಪ್ರತಿ ಯಿಂದ ತಿಳಿದು ಬಂದಿದೆ.

ವಯಸ್ಸಿನ ಬದಲಾವಣೆಗೆ ನಿಷೇಧ

ಯಾವುದೇ ಕಾನೂನು ಅಥವಾ ಯಾವುದೇ ನ್ಯಾಯಾಲಯ ಅಥವಾ ಇತರ ಪ್ರಾಧಿಕಾರದ ಯಾವುದೇ ತೀರ್ಪು ಅಥವಾ ಆದೇಶದಲ್ಲಿ ಏನೇ ಇದ್ದರೂ ಸಹ ಸರಕಾರಿ ನೌಕರನ ವಯಸ್ಸು ಅಥವಾ ಜನ್ಮ ದಿನಾಂಕವನ್ನು ಅಂಗೀಕರಿಸಲಾಗಿದೆ ಮತ್ತು ದಾಖಲಿಸಲಾಗಿದೆ ಅಥವಾ ಅವನ ಸೇವಾ ನೋಂದಣಿ ಅಥವಾ ಪುಸ್ತಕದಲ್ಲಿ ಅಥವಾ ಸೆಕ್ಷನ್ 3ರ ಅಡಿಯಲ್ಲಿ ಯಾವುದೇ ಇತರ ಸೇವೆಯ ನೋಂದಣಿಯಲ್ಲಿ ಅಂಗೀಕರಿಸಲಾಗಿದೆ ಮತ್ತು ದಾಖಲಿಸಲಾಗಿದೆ ಎಂದು ಪರಿಗಣಿಸಲಾಗಿದೆ ಬದಲಾಯಿಸಬಾರದು ಎಂದು ವಿಧೇಯಕದಲ್ಲಿ ಸ್ಪಷ್ಟಪಡಿಸಿರುವುದು ತಿಳಿದು ಬಂದಿದೆ.

ಈ ಕಾಯ್ದೆಯಡಿಯಲ್ಲಿ ನಿರ್ಧರಿಸ ಬೇಕಾದ ಯಾವುದೇ ಪ್ರಶ್ನೆಯನ್ನು ಇತ್ಯರ್ಥಪಡಿಸಲು, ನಿರ್ಧರಿಸಲು ಅಥವಾ ವ್ಯವಹರಿಸಲು ಯಾವುದೇ ನ್ಯಾಯಾಲಯವು, ಈ ವಿಧೇಯಕದ ಪ್ರಕಾರ ನ್ಯಾಯವ್ಯಾಪ್ತಿಯನ್ನು ಹೊಂದಿರುವುದಿಲ್ಲ. ಈ ಕಾಯ್ದೆಯಡಿಯಲ್ಲಿನ ಯಾವುದೇ ನಿರ್ಧಾರವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ ಎಂದು ಹೇಳಿದೆ.

ಈ ಕಾಯ್ದೆಯಡಿ ರೂಪಿಸುವ ನಿಬಂಧನೆಗಳು ಮತ್ತು ಅದರ ಅಡಿಯಲ್ಲಿ ಮಾಡಲಾದ ತೀರ್ಪುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯವಿರುವಷ್ಟು ನಿರ್ದೇಶನಗಳನ್ನು ಅಥವಾ ಸೂಚನೆಗಳನ್ನು ರಾಜ್ಯ ಸರಕಾರದ ಎಲ್ಲಾ ಅಧಿಕಾರಿಗಳಿಗೆ ರಾಜ್ಯ ಸರಕಾರವು ನೀಡಬಹುದು.

ಯಾವುದೇ ಸೇವೆ ಅಥವಾ ಹುದ್ದೆಗೆ ನೇರ ನೇಮಕಾತಿಯ ಮೂಲಕ ನೇಮಕಾತಿಗಾಗಿ ಆಯ್ಕೆಯಾದ ಅಭ್ಯರ್ಥಿಯ ವಯಸ್ಸು ಮತ್ತು ಜನ್ಮ ದಿನಾಂಕವನ್ನು ದೃಢೀಕರಿಸುವ ದಾಖಲೆಯು ನೈಜತೆಯಿಂದ ಕೂಡಿದೆ ಮತ್ತು ಮಾನ್ಯವಾಗಿದೆ ಎಂದು ನೇಮಕಾತಿ ಪ್ರಾಧಿಕಾರಕ್ಕೆ ಮನವರಿಕೆಯಾಗದ ಹೊರತು ಅವರನ್ನು ನೇಮಕ ಮಾಡಲಾಗುವುದಿಲ್ಲ ಎಂದು ನಿಯಮ ಮಾಡಲಾಗಿದೆ.

ಹಾಗೆಯೇ ಅಭ್ಯರ್ಥಿಯ ನೇಮಕಾತಿ ಆದೇಶವನ್ನು ಹೊರಡಿಸಿ ಅವರು ಕರ್ತವ್ಯಕ್ಕೆ ವರದಿ ಮಾಡಿಕೊಂಡರೆ, ನೇಮಕಾತಿ ಪ್ರಾಧಿಕಾರವು ಅವರ ಸೇವಾ ನೋಂದಣಿ ಅಥವಾ ಸೇವಾ ಪುಸ್ತಕ ಅಥವಾ ಯಾವುದೇ ಇತರ ಸೇವಾ ದಾಖಲೆಯಲ್ಲಿ ಹಾಗೆಯೇ ಅಂಗೀಕರಿಸಲ್ಪಟ್ಟ ವಯಸ್ಸು ಮತ್ತು ಜನ್ಮ ದಿನಾಂಕವನ್ನು ದಾಖಲಿಸಬೇಕು ಎಂದು ವಿಧೇಯಕದಲ್ಲಿ ಹೇಳಲಾಗಿದೆ.

ಸರಕಾರಿ ಸೇವೆ ಅಥವಾ ಸರಕಾರಿ ಹುದ್ದೆಗೆ ನೇರ ನೇಮಕಾತಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರನ್ನು ಸೇರಿಸಿದ ತಕ್ಷಣ, ಪ್ರತಿಯೊಬ್ಬ ಅಭ್ಯರ್ಥಿಯು ತನ್ನ ವಯಸ್ಸನ್ನು ಜನ್ಮ ದಿನಾಂಕ ಮತ್ತು ಅಂತಹ ಘೋಷಣೆಗೆ ಆಧಾರದೊಂದಿಗೆ ಘೋಷಿಸಬೇಕು. ಜನನ ನೋಂದಣಿಯಿಂದ ದೃಢೀಕರಿಸಿದ ಅಥವಾ ಮಾಧ್ಯಮಿಕ ಶಾಲಾ ಪರೀಕ್ಷೆಯಲ್ಲಿ ಅಥವಾ ಯಾವುದೇ ಇತರ ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದನ್ನು ಸಾಬೀತುಪಡಿಸುವ ಪ್ರಮಾಣಪತ್ರದಲ್ಲಿ ಜನನ ದಿನಾಂಕವನ್ನು ಸೂಚಿಸುವ ದಾಖಲೆ ಪುರಾವೆಗಳನ್ನು ನೇಮಕಾತಿ ಪ್ರಾಧಿಕಾರಕ್ಕೆ ಒದಗಿಸಬೇಕು.

ಯಾವುದೇ ನ್ಯಾಯಾಲಯದ ತೀರ್ಪು ಅಥವಾ ಆದೇಶದಲ್ಲಿ ಏನೇ ಇದ್ದರೂ, ಉಪವಿಭಾಗದ ಅಡಿಯಲ್ಲಿ ಅಭ್ಯರ್ಥಿಯು ಸಲ್ಲಿಸಿದ ದಾಖಲೆಯು ನಿಜ ಮತ್ತು ಮಾನ್ಯವಾಗಿದೆ ಎಂದು ನೇಮಕಾತಿ ಪ್ರಾಧಿಕಾರವು ತೃಪ್ತಿಪಟ್ಟರೆ, ಅದರಲ್ಲಿ ದಾಖಲಾಗಿರುವ ಜನ್ಮ ದಿನಾಂಕವನ್ನು ಸ್ವೀಕರಿಸುತ್ತದೆ.

ಅಭ್ಯರ್ಥಿಗೆ ನೇಮಕಾತಿ ಆದೇಶ ಹೊರಡಿಸಿ ಅವರು ಕರ್ತವ್ಯಕ್ಕೆ ವರದಿ ಮಾಡಿಕೊಂಡರೆ, ನೇಮಕಾತಿ ಪ್ರಾಧಿಕಾರವು ಸಾಮಾನ್ಯವಾಗಿ ಹಾಗೆ ಅಂಗೀಕರಿಸಲ್ಪಟ್ಟ ವಯಸ್ಸು ಮತ್ತು ಜನ್ಮ ದಿನಾಂಕವನ್ನು ಅಂಗೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳ ಅವಧಿಯೊಳಗೆ ಅವರ ಸೇವಾ ನೋಂದಣಿಯಲ್ಲಿ ನಮೂದಿಸಬೇಕು. ಅಥವಾ ಸೇವಾ ಪುಸ್ತಕ ಅಥವಾ ಯಾವುದೇ ಇತರ ಸೇವಾ ದಾಖಲೆಯಲ್ಲಿ ದಾಖಲಿಸಬೇಕು ಮತ್ತು ಅದನ್ನು ಅವರಿಗೆ ತಿಳಿಸಬೇಕು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್

contributor

Similar News