ಬೆಂಗಳೂರು ಮತ್ತು ಮುಂಬೈನಲ್ಲಿ ಹೊಸ ಕಚೇರಿ ತೆರೆಯಲಿರುವ OpenAI
Photo Credit : indiatoday.in
OpenAI ಸಂಸ್ಥೆಯು ಭಾರತದಲ್ಲಿ ಪ್ರಮುಖ AI ಯೋಜನೆಯೊಂದನ್ನು ಘೋಷಿಸಿದ್ದು, ಅದಕ್ಕಾಗಿ ಬೆಂಗಳೂರು ಮತ್ತು ಮುಂಬೈನಲ್ಲಿ ಕಚೇರಿಗಳನ್ನು ತೆರೆಯುತ್ತಿದೆ. ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (TCS) ಜೊತೆಗೆ ಸಹಯೋಗದಲ್ಲಿ AI ಮೂಲ ಸೌಕರ್ಯ ವಿಸ್ತರಿಸುವುದು ಮತ್ತು ಕಾರ್ಯಪಡೆ ಸಾಮರ್ಥ್ಯವನ್ನು ನಿರ್ಮಿಸಲು ಯೋಜನೆ ರೂಪಿಸಿದೆ.
ಅಮೆರಿಕ ಮೂಲದ AI ದೈತ್ಯ ಸಂಸ್ಥೆಗಳು ಭಾರತದಲ್ಲಿ ತಮ್ಮ ಯೋಜನೆಗಳಿಗೆ ಮಹತ್ವ ಕೊಡುತ್ತಿವೆ. ಗೂಗಲ್ ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಯತ್ನಿಸಿದ ನಂತರ ಇನ್ಫೋಸಿಸ್ ಕೂಡ ಅಂಥ್ರೋಪಿಕ್ ಜೊತೆಗೆ ಸಹಯೋಗಕ್ಕೆ ಒಪ್ಪಂದ ಮಾಡಿಕೊಂಡಿದೆ. ಇದೀಗ ChatGPT ಅನ್ನು ಸೃಷ್ಟಿ ಮಾಡಿರುವ ಓಪನ್ AI ಜೊತೆಗೆ ಟಾಟಾ ದೇಶದ AI ಮಾರುಕಟ್ಟೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಲು ಯೋಜನೆಗಳನ್ನು ರೂಪಿಸುತ್ತಿದೆ.
ಸದ್ಯದ ಮಟ್ಟಿಗೆ ಓಪನ್ AI ಹೊಸದಿಲ್ಲಿಯಲ್ಲಿ ಕಚೇರಿಯನ್ನು ಹೊಂದಿದೆ. ಆದರೆ ಇದೀಗ ಭಾರತದ ತಂತ್ರಜ್ಞಾನ ರಾಜಧಾನಿ ಬೆಂಗಳೂರು ಮತ್ತು ದೇಶದ ಹಣಕಾಸು ರಾಜಧಾನಿ ಮುಂಬೈನಲ್ಲೂ ತನ್ನ ಕಚೇರಿಗಳನ್ನು ತೆರೆಯುವುದಾಗಿ ಘೋಷಿಸಿದೆ. ಭಾರತದಲ್ಲಿ ವಾರ-ವಾರ ChatGPT ಬಳಸುವವರ ಸಂಖ್ಯೆ 100 ಮಿಲಿಯನ್ ದಾಟಿದೆ ಎನ್ನುವ ಸತ್ಯವನ್ನು ಓಪನ್ AI ಘೋಷಿಸಿದ ನಂತರ ಈ ಬೆಳವಣಿಗೆ ಕಂಡುಬಂದಿದೆ. ಏಷ್ಯಾದಲ್ಲಿಯೇ ಇದು ದೊಡ್ಡ ಮಾರುಕಟ್ಟೆಯಾಗಿದೆ ಮತ್ತು ಜಾಗತಿಕವಾಗಿ ಅಮೆರಿಕದ ನಂತರ ChatGPTಗೆ ಭಾರತ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಅಮೆರಿಕ ಮತ್ತು ಚೀನಾದ ನಡುವೆ AI ಕಂಪನಿಗಳ ಸ್ಪರ್ಧೆ ಮುಂದುವರಿದಿತ್ತು. ಇದೀಗ ಭಾರತವೂ ಜಾಗತಿಕ AI ಕಂಪನಿಗಳಿಗೆ ಆದ್ಯತೆಯ ಕೇಂದ್ರವಾಗುತ್ತಿದೆ. ಅತ್ಯಾಧುನಿಕ ಮತ್ತು ಶಕ್ತಿಯುತ ಭಾಷಾ ಮಾಡೆಲ್ ಗಳನ್ನು ರೂಪಿಸುವಲ್ಲಿ ಭಾರತ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ದೊಡ್ಡ ಡೆವಲಪರ್ ಗಳ ಮೂಲವಾಗಿರುವ, ಡಿಜಿಟಲ್ ಮೂಲಸೌಕರ್ಯ ವಿಸ್ತರಿಸಲು ಬಯಸುವ ಕೇಂದ್ರವಾಗಿ ಮತ್ತು ಉದ್ಯಮ ಅಳವಡಿಕೆಗಳೂ ಹೆಚ್ಚುತ್ತಿರುವುದರಿಂದ ಭಾರತವು ಜಾಗತಿಕವಾಗಿ AI ಕಂಪನಿಗಳನ್ನು ಆಕರ್ಷಿಸುತ್ತಿದೆ. ಓಪನ್ AI ಸಿಇಒ ಸ್ಯಾಮ್ ಆಲ್ಟ್ಮನ್ ಪ್ರಕಾರ ಭಾರತ AI ಅಳವಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಜಾಗತಿಕವಾಗಿ ಪ್ರಜಾಸತ್ತಾತ್ಮಕ AI ರೂಪಿಸುವಲ್ಲಿ ಪ್ರತಿಭೆ ಮತ್ತು ನೀತಿ ನಿರೂಪಣೆಯಲ್ಲೂ ಮುಂದಿದೆ.
“ಭಾರತವು AI ಅಳವಡಿಕೆಯಲ್ಲಿ ಈಗಾಗಲೇ ಮುಂಚೂಣಿಯಲ್ಲಿದೆ. ಸ್ವದೇಶಿ ತಂತ್ರಜ್ಞಾನ ಪ್ರತಿಭೆ, ದೇಶವೊಂದಕ್ಕೆ AI ಯಾವ ಬದಲಾವಣೆ ತರಬಹುದು ಎನ್ನುವ ಆಶಾವಾದ ಮತ್ತು ಬಲಿಷ್ಠ ಸರ್ಕಾರಿ ಬೆಂಬಲದ ಜೊತೆಗೆ ಪ್ರಜಾಸತ್ತಾತ್ಮಕ AI ಅನ್ನು ಹೇಗೆ ಅಳವಡಿಸಿಕೊಳ್ಳಬಹುದು ಮತ್ತು ತನ್ನ AI ಭವಿಷ್ಯವನ್ನು ರೂಪಿಸಲು ಅತ್ಯುತ್ತಮವಾದ ಸ್ಥಾನದಲ್ಲಿ ನಿಂತಿದೆ. ಸ್ಥಳೀಯ ಸಹಭಾಗಿತ್ವಗಳ ಮೂಲಕ ಭಾರತದ ಜೊತೆಗೆ, ಭಾರತಕ್ಕಾಗಿ ಮತ್ತು ಭಾರತದಲ್ಲಿ ಓಪನ್ AI ಮೂಲಕ ಮೂಲಸೌಕರ್ಯ, ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಜೊತೆಗೂಡಿ ಕೆಲಸ ಮಾಡಲಿದ್ದೇವೆ” ಎಂದು ಸ್ಯಾಮ್ ಅವರು ಹೇಳಿದ್ದಾರೆ.
ಟಿಸಿಎಸ್ ಜೊತೆಗೆ ಮೈತ್ರಿ
ಓಪನ್ AI ಭಾರತದಲ್ಲಿ ತನ್ನ ಯೋಜನೆಯನ್ನು ವಿಸ್ತರಿಸಲು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಜೊತೆಗೆ ಸಹಭಾಗಿತ್ವ ಮಾಡಿಕೊಂಡಿದೆ. ಟಿಸಿಎಸ್ ನ ಹೊಸ ಡಾಟಾ ಸೆಂಟರ್ ಉದ್ಯಮಕ್ಕೆ ಓಪನ್ AI ಮೊದಲ ಗ್ರಾಹಕರಾಗಲಿದ್ದಾರೆ. ಜಾಗತಿಕ ಕಾರ್ಯತಂತ್ರ ಯೋಜನೆಯ ಭಾಗವಾಗಿ ಆರಂಭದಲ್ಲಿ 100 ಮೆಗಾವಾಟ್ ಸಾಮರ್ಥ್ಯದಲ್ಲಿ ಆರಂಭಿಸಲಾಗುವುದು. ನಂತರ ತರಬೇತಿ ಮತ್ತು ಇಂಟರ್ಫೆರೆನ್ಸ್ ಕಾರ್ಯಭಾರಗಳಿಗೆ ವ್ಯಾಪಕ AI ಡಾಟಾ ಕೇಂದ್ರಗಳನ್ನು ನಿರ್ಮಿಸಲು 500 ಬಿಲಿಯನ್ ಡಾಲರ್ ಕಾರ್ಯಕ್ರಮವನ್ನು ಹಾಕಿಕೊಳ್ಳಲು ಗಮನ ಕೇಂದ್ರೀಕರಿಸಲಾಗುವುದು.
ಹೆಚ್ಚುವರಿಯಾಗಿ, ಟಿಸಿಎಸ್ ನ ಮೂಲ ಕಂಪನಿ ಟಾಟಾ ಸಮೂಹವು ಮುಂದಿನ ಕೆಲವು ವರ್ಷಗಳಲ್ಲಿ ಆಂತರಿಕವಾಗಿ ತನ್ನ ಕಂಪನಿಗಳಲ್ಲಿ ಚಾಟ್ಜಿಪಿಟಿ ಉದ್ಯಮವನ್ನು ನಿಯೋಜಿಸಲು ಯೋಜನೆ ರೂಪಿಸಿದೆ. ಈ ಕಾರ್ಯಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ ಓಪನ್ AIನ ಕಾರ್ಯಸ್ಥಳ AI ಟೂಲ್ ಗಳ ಅತಿ ದೊಡ್ಡ ನಿಯೋಜನೆಗಳಲ್ಲಿ ಒಂದಾಗಲಿದೆ. ಚಾಟ್ಜಿಪಿಟಿ ಉದ್ಯಮವು ಸುಧಾರಿತ ಭದ್ರತೆ, ಗೌಪ್ಯತೆ ನಿಯಂತ್ರಣಗಳು ಮತ್ತು ದೊಡ್ಡ ಸಂಸ್ಥೆಗಳಿಗೆ ವಿನ್ಯಾಸಗೊಳಿಸಲಾದ ಆಡಳಿತಾತ್ಮಕ ವೈಶಿಷ್ಟ್ಯಗಳನ್ನು ನೀಡುತ್ತದೆ.
“ಭಾರತದಲ್ಲಿ ಅತ್ಯಾಧುನಿಕ AI ಮೂಲಸೌಕರ್ಯವನ್ನು ರೂಪಿಸಲು ಓಪನ್ AI ಜೊತೆಗೆ ಪಾಲುದಾರಿಕೆಗೆ ಸಂತೋಷಪಡುತ್ತೇವೆ. ಉದ್ಯಮಗಳನ್ನು ಪರಿವರ್ತನೆಗೊಳಿಸಲು ಓಪನ್ AI ಮತ್ತು ಟಿಸಿಎಸ್ಗೆ ಇದು ವಿಶೇಷ ಅವಕಾಶವಾಗಿದೆ. ಜೊತೆಗೂಡಿ ನಾವು ಭಾರತದ ಯುವಜನರಿಗೆ ಕೌಶಲ್ಯ ನೀಡುತ್ತೇವೆ ಮತ್ತು AI ಯುಗದಲ್ಲಿ ಐಶಸ್ಸು ಸಾಧಿಸಲು ಅವರನ್ನು ಸ್ವಾವಲಂಬಿಗಳನ್ನಾಗಿಸುತ್ತೇವೆ” ಎಂದು ಟಾಟಾ ಸಂಸ್ಥೆ ಹೇಳಿದೆ.