Photo Credit : PTI 

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆ, 2026 ಅಕ್ಟೋಬರ್ 8ರವರೆಗೆ ಕರ್ನಾಟಕದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಸಲ್ಲಿಕೆಯಾಗಿರುವ ಸುಮಾರು 29,000 ಫಾರ್ಮ್ 7 ಅರ್ಜಿಗಳ ವಿವರಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಅಥವಾ ಭಾರತೀಯ ಚುನಾವಣಾ ಆಯೋಗದ (ECI) ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಾಗಿಲ್ಲ ಎಂದು thehindu.com ವರದಿ ಮಾಡಿದೆ.

ಎಲ್ಲಾ ಫಾರ್ಮ್ 7 ಅರ್ಜಿಗಳ ವಿವರಗಳನ್ನು ಸಾರ್ವಜನಿಕ ಪರಿಶೀಲನೆಗೆ ಲಭ್ಯಗೊಳಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಹಾಗೂ ಚುನಾವಣಾ ಆಯೋಗವು ಈ ಹಿಂದೆ ತಿಳಿಸಿತ್ತು.

ಮುಖ್ಯ ಚುನಾವಣಾಧಿಕಾರಿ ವಿ. ಅನ್ಬು ಕುಮಾರ್ ಅವರ ಕಚೇರಿ ಅಕ್ಟೋಬರ್ 9 ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದ 2026 ಜೂನ್ 16ರಿಂದ ಅಕ್ಟೋಬರ್ 8 ರ ನಡುವೆ 1,10,654 ಫಾರ್ಮ್ 7 ಅರ್ಜಿಗಳು ಸ್ವೀಕೃತವಾಗಿವೆ.

ಆದರೆ, ಈ ಅವಧಿಯಲ್ಲಿ ಕೇವಲ 81,822 ಫಾರ್ಮ್ 7 ಅರ್ಜಿಗಳ ವಿವರಗಳು ಮಾತ್ರ ಇಸಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವುದು 'ದಿ ಹಿಂದೂ' ನಡೆಸಿದ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಲಭ್ಯವಿಲ್ಲದ ಉಳಿದ 28,832 ಅರ್ಜಿಗಳು, ಮುಖ್ಯ ಚುನಾವಣಾಧಿಕಾರಿಗಳ ಪ್ರಕಟಣೆಯಲ್ಲಿರುವ ಒಟ್ಟು ಅರ್ಜಿಗಳ ಸಂಖ್ಯೆಯ ಕಾಲು ಭಾಗಕ್ಕಿಂತಲೂ ಹೆಚ್ಚಾಗಿವೆ. ಈ ಫಾರ್ಮ್‌ಗಳ ವಿವರಗಳಿಲ್ಲದೆ, ಅವುಗಳನ್ನು ಯಾವ ಕ್ಷೇತ್ರಗಳಲ್ಲಿ, ಯಾರು ಮತ್ತು ಯಾರ ವಿರುದ್ಧ ಸಲ್ಲಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಬಬಲೇಶ್ವರ ಮತ್ತು ಭಾಲ್ಕಿಯಂತಹ ಕ್ಷೇತ್ರಗಳಲ್ಲಿ ಕೆಲ ವ್ಯಕ್ತಿಗಳು ಹಲವು ಮತದಾರರ ವಿರುದ್ಧ ಒಟ್ಟಾಗಿ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿರುವ ಬಗ್ಗೆ 'ದಿ ಹಿಂದೂ' ಈ ಹಿಂದೆ ವರದಿ ಮಾಡಿತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಪ್ರತಿಭಟನೆಯ ನಂತರ, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯವರು ಜಿಲ್ಲಾ ಚುನಾವಣಾ ಕಚೇರಿಗಳಿಗೆ (DEO) ನಿರ್ದೇಶನ ನೀಡಿದ್ದರು.

ಕರಡು ಎಸ್ಐಆರ್ ಪಟ್ಟಿ ಬಿಡುಗಡೆಯಾದ 2026 ಆಗಸ್ಟ್ 24ರಂದು ಮುಖ್ಯ ಚುನಾವಣಾಧಿಕಾರಿಗಳು ನೀಡಿರುವ ಹೇಳಿಕೆಯಲ್ಲಿ, "ಸಾರ್ವಜನಿಕರು ಪಟ್ಟಿಯನ್ನು ವೀಕ್ಷಿಸಲು ಮತ್ತು ಸಂಬಂಧಪಟ್ಟ ಇಆರ್‌ಒಗೆ (ERO) ಆಕ್ಷೇಪಣೆ ಸಲ್ಲಿಸಲು ಅನುಕೂಲವಾಗುವಂತೆ ಫಾರ್ಮ್‌-9, 10, 11, 11A ಮತ್ತು 11B ಯಲ್ಲಿನ ಹಕ್ಕು ಮತ್ತು ಆಕ್ಷೇಪಣೆಗಳ ಪಟ್ಟಿಯು ಕರ್ನಾಟಕ ಸಿಇಒ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ" ಎಂದು ತಿಳಿಸಲಾಗಿತ್ತು.

ನಿಯಮಗಳ ಪ್ರಕಾರ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿದಿನ ಸ್ವೀಕರಿಸಲಾಗುವ ಫಾರ್ಮ್ 7 ಅರ್ಜಿಗಳನ್ನು ಫಾರ್ಮ್ 10 ರಲ್ಲಿ ಕ್ರೋಡೀಕರಿಸಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಪೋರ್ಟಲ್‌ನಲ್ಲಿರುವ ಎಲ್ಲಾ ಫಾರ್ಮ್-10 ವಿವರಗಳನ್ನು ವಿಶ್ಲೇಷಿಸಿದಾಗ ಈ ವ್ಯತ್ಯಾಸ ಬೆಳಕಿಗೆ ಬಂದಿದೆ.

ಪರಸ್ಪರ ವಿರೋಧಾಭಾಸದ ಅಂಕಿಅಂಶಗಳು:

 

 

ಕಾಣೆಯಾಗಿರುವ ಅರ್ಜಿಗಳಲ್ಲದೆ, ಸಿಇಒ ಅವರ ಸ್ವಂತ ಪತ್ರಿಕಾ ಪ್ರಕಟಣೆಗಳು ಫಾರ್ಮ್ 7 ಅರ್ಜಿಗಳ ಕುರಿತು ಪರಸ್ಪರ ವಿರೋಧಾಭಾಸದ ಹಾಗೂ ತೀವ್ರ ವ್ಯತ್ಯಾಸವಿರುವ ಅಂಕಿಅಂಶಗಳನ್ನು ನೀಡಿವೆ.

ಜೂನ್ 16 ಮತ್ತು ಆಗಸ್ಟ್ 23 ರ ನಡುವೆ 67,307 ಫಾರ್ಮ್ 7 ಅರ್ಜಿಗಳು ಸ್ವೀಕೃತವಾಗಿವೆ ಎಂದು ಆಗಸ್ಟ್ 24 ರ ಪ್ರಕಟಣೆ ತಿಳಿಸಿದೆ. ಆದರೆ ಸೆಪ್ಟೆಂಬರ್ 11 ರ ಹೇಳಿಕೆಯು ಜೂನ್ 16 ರಿಂದ ಸೆಪ್ಟೆಂಬರ್ 9 ರವರೆಗಿನ ಸಂಖ್ಯೆಯನ್ನು 34,631 ಎಂದು ಹೇಳಿದೆ. ಇದು ಹಿಂದಿನ ಸಂಖ್ಯೆಗಿಂತ 32,676 ಕಡಿಮೆ.

ಮತ್ತೊಂದು ಪ್ರಕಟಣೆಯ ಪ್ರಕಾರ, ಜೂನ್ 16 ಮತ್ತು ಸೆಪ್ಟೆಂಬರ್ 17 ರ ನಡುವೆ 41,792 ಫಾರ್ಮ್ 7 ಅರ್ಜಿಗಳು ಬಂದಿವೆ. ಇದು ಆಗಸ್ಟ್ 23 ರ ಅಂಕಿಅಂಶಕ್ಕಿಂತ 25,515 ಕಡಿಮೆ. ಹಕ್ಕು ಮತ್ತು ಆಕ್ಷೇಪಣೆಗಳ ಅವಧಿ ಮುಗಿದ ಮರುದಿನವಾದ ಸೆಪ್ಟೆಂಬರ್ 24 ರಂದೂ ಸಹ, ಸಿಇಒ ಅವರ 61,130 ರ ಒಟ್ಟು ಮೊತ್ತವು 6,177 ರಷ್ಟು ಕಡಿಮೆಯಿತ್ತು. ಅಕ್ಟೋಬರ್ 9 ರ ಹೇಳಿಕೆಯ ಪ್ರಕಾರ, ಅಂದಿನಿಂದ ಅಕ್ಟೋಬರ್ 8 ರವರೆಗೆ ಅಂಕಿಅಂಶಗಳು ವೇಗವಾಗಿ ಏರಿಕೆಯಾಗಿ 1,10,654 ತಲುಪಿವೆ.

ದೊಡ್ಡ ಮಟ್ಟದ ವ್ಯತ್ಯಾಸ:

ಹೆಸರುಗಳನ್ನು ತೆಗೆದುಹಾಕಲು ಕೋರಿ 1,10,654 ಫಾರ್ಮ್-7 ಗಳು ಬಂದಿವೆ ಎಂದು ಕರ್ನಾಟಕ ಸಿಇಒ ಹೇಳುತ್ತಿದ್ದರೆ, ಸಾರ್ವಜನಿಕ ಪರಿಶೀಲನೆಗಾಗಿ ಇಸಿಐ ಪೋರ್ಟಲ್‌ನಲ್ಲಿ ಕೇವಲ 81,822 (ಶೇಕಡಾ 73.9) ಮಾತ್ರ ಲಭ್ಯವಿವೆ.

ಸಿಇಒ ಅವರ ಅಂಕಿಅಂಶಗಳನ್ನು ಪೋರ್ಟಲ್‌ನಲ್ಲಿರುವ ಅಂಕಿಅಂಶಗಳೊಂದಿಗೆ ಹೋಲಿಸಿದಾಗ, ಕೆಲವು ಅವಧಿಗಳಲ್ಲಿ ಪೋರ್ಟಲ್‌ನಲ್ಲಿರುವುದಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಸಿಇಒ ವರದಿ ಮಾಡಿದ್ದಾರೆ ಮತ್ತು ಇನ್ನು ಕೆಲವು ಅವಧಿಗಳಲ್ಲಿ ಇದಕ್ಕೆ ವ್ಯತಿರಿಕ್ತವಾಗಿರುವುದು ಕಂಡುಬಂದಿದೆ. ಜೂನ್ 16 ಮತ್ತು ಆಗಸ್ಟ್ 23 ರ ನಡುವೆ ಸಿಇಒ 67,307 ಫಾರ್ಮ್ 7 ಅರ್ಜಿಗಳನ್ನು ವರದಿ ಮಾಡಿದ್ದಾರೆ, ಆದರೆ ಪೋರ್ಟಲ್ ಕೇವಲ 6,951 ಅರ್ಜಿಗಳ ವಿವರಗಳನ್ನು ಮಾತ್ರ ಹೊಂದಿದೆ. ಇದರಿಂದ 60,356 ಅರ್ಜಿಗಳು ಸಾರ್ವಜನಿಕರಿಗೆ ಸಿಗದಂತಾಗಿವೆ.

ಹೆಚ್ಚಿನ ವಿಶ್ಲೇಷಣೆಯು ಜಿಲ್ಲಾ ಮಟ್ಟದಲ್ಲೂ ದೊಡ್ಡ ಮಟ್ಟದ ವ್ಯತ್ಯಾಸಗಳಿರುವುದನ್ನು ತೋರಿಸಿದೆ. ಉದಾಹರಣೆಗೆ, ಜೂನ್ 16 ಮತ್ತು ಆಗಸ್ಟ್ 23 ರ ನಡುವೆ ಬೆಂಗಳೂರು ಗ್ರಾಮಾಂತರದಿಂದ 3,061 ಫಾರ್ಮ್ 7 ಅರ್ಜಿಗಳು ಬಂದಿರುವುದಾಗಿ ಪ್ರಕಟಣೆ ತೋರಿಸಿದೆ, ಆದರೆ ಪೋರ್ಟಲ್‌ನಲ್ಲಿ ಕೇವಲ 49 ಅರ್ಜಿಗಳ ವಿವರಗಳು ಮಾತ್ರ ಇದ್ದವು. ಶಿವಮೊಗ್ಗದಲ್ಲಿ 4,105 ಅರ್ಜಿಗಳಿದ್ದರೆ, ಪೋರ್ಟಲ್‌ನಲ್ಲಿ ಕೇವಲ 17 ಮಾತ್ರ ಇದ್ದವು. ಅತಿ ಹೆಚ್ಚು ಅಂದರೆ 7,618 ಅರ್ಜಿಗಳನ್ನು ಹೊಂದಿದ್ದ ಬೆಳಗಾವಿಯಲ್ಲಿ, ಪೋರ್ಟಲ್‌ನಲ್ಲಿ ಕೇವಲ 1,776 ಮಾತ್ರ ಲಭ್ಯವಿದ್ದವು.

ಈ ವ್ಯತ್ಯಾಸಗಳ ಕುರಿತು ಕೇಳಿದಾಗ, ಕರ್ನಾಟಕ ಸಿಇಒ ಎಂ. ಅನ್ಬು ಕುಮಾರ್ ಅವರು "ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯನ್ನು ಆಗಸ್ಟ್ 24 ರಿಂದ ಸೆಪ್ಟೆಂಬರ್ 23 ರವರೆಗೆ ಮಾತ್ರ ಪರಿಗಣಿಸಬೇಕು" ಎಂದು ಹೇಳಿದರು, ಆದರೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಆ ಅವಧಿಯ ಒಳಗೂ ವ್ಯತ್ಯಾಸ ಮುಂದುವರಿದಿದ್ದು, ಪೋರ್ಟಲ್‌ನಲ್ಲಿ 28,097 ಅರ್ಜಿಗಳ ವಿವರಗಳು ಕಂಡುಬಂದಿದ್ದರೆ, ಸಿಇಒ ಅವರ ಒಟ್ಟು ಸಂಖ್ಯೆ 6,177 ರಷ್ಟು ಕಡಿಮೆಯಾಗಿದೆ. 'ದಿ ಹಿಂದೂ' ಪತ್ರಿಕೆಯು ಅನ್ಬು ಕುಮಾರ್ ಅವರನ್ನು ಮತ್ತೆ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಲಭ್ಯವಿರಲಿಲ್ಲ ಎಂದು ವರದಿ ಹೇಳಿದೆ.

ಕೃಪೆ: thehindu.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor