×
Ad

ಟ್ರಂಪ್ ಅವರ ‘ಶಾಂತಿ ಮಂಡಳಿ’ಯ ಉದ್ದೇಶ ಏನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಇದರಲ್ಲಿ ಯಾವೆಲ್ಲ ದೇಶಗಳಿವೆ?

Update: 2026-01-23 21:30 IST

ಡೊನಾಲ್ಡ್ ಟ್ರಂಪ್ | Photo Credit ; PTI

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (WEF) ಕಾರ್ಯಕ್ರಮದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ‘ಶಾಂತಿ ಮಂಡಳಿ’ (Board of Peace) ಅನ್ನು ಉದ್ಘಾಟಿಸಿದ್ದಾರೆ. ಗಾಝಾದಲ್ಲಿ ಶಾಶ್ವತ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಈ ಮಂಡಳಿಯನ್ನು ರಚಿಸಲಾಗಿದೆ. ಇಸ್ರೇಲ್ ಹಾಗೂ ಗಾಝಾ ಪಟ್ಟಿಯ ಹಮಾಸ್ ಬಂಡುಕೋರರ ನಡುವಿನ ಕದನ ವಿರಾಮ ಒಪ್ಪಂದದ ಎರಡನೇ ಹಂತದ ಭಾಗವಾಗಿ ಟ್ರಂಪ್ ಈ ‘ಶಾಂತಿ ಮಂಡಳಿ’ಯನ್ನು ಘೋಷಿಸಿದ್ದರು.

ಕಳೆದ ಸೆಪ್ಟೆಂಬರ್‌ನಲ್ಲಿ ಗಾಝಾ ಯುದ್ಧವನ್ನು ಅಂತ್ಯಗೊಳಿಸುವ ಯೋಜನೆಯನ್ನು ಪ್ರಕಟಿಸುವ ವೇಳೆ ಟ್ರಂಪ್ ಮೊದಲ ಬಾರಿಗೆ ಶಾಂತಿ ಮಂಡಳಿಯ ಆಲೋಚನೆಯನ್ನು ಮುಂದಿಟ್ಟಿದ್ದರು. ನಂತರ ಗಾಝಾವನ್ನು ಮೀರಿ ಜಗತ್ತಿನ ಇತರ ಸಂಘರ್ಷ ಪ್ರದೇಶಗಳಿಗೂ ಇದರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ಶಾಂತಿ ಮಂಡಳಿಗೆ ಅನುಮೋದನೆ ನೀಡಿತ್ತು.

ದಾವೋಸ್ ಶೃಂಗಸಭೆಯ ಸಂದರ್ಭ ನಡೆದ ಉನ್ನತ ಮಟ್ಟದ ಸಮಾರಂಭದಲ್ಲಿ ಟ್ರಂಪ್ ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಮತ್ತು ಹಿರಿಯ ರಾಜತಾಂತ್ರಿಕರಿಗೆ ಆತಿಥ್ಯ ವಹಿಸಿದ್ದರು. ಶ್ವೇತಭವನ ಈ ಸಭೆಯನ್ನು ಹೊಸ ಗುಂಪಿನ ಅಧಿಕೃತ ಉದ್ಘಾಟನೆ ಎಂದು ಬಣ್ಣಿಸಿದೆ. ಆದರೆ ಮಂಡಳಿಗೆ ಸಂಬಂಧಿಸಿದ ಅಧಿಕೃತ ದಾಖಲೆ ಅಥವಾ ಸದಸ್ಯರ ಪೂರ್ಣ ಪಟ್ಟಿಯನ್ನು ಪ್ರಕಟಿಸಲಾಗಿಲ್ಲ. ಈ ಸಂದರ್ಭದಲ್ಲಿ ಟ್ರಂಪ್ ಅವರೊಂದಿಗೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ರಾಯಭಾರಿ ಸ್ಟೀವ್ ವಿಟ್ಕಾಫ್ ಹಾಜರಿದ್ದರು.

ಇಸ್ರೇಲ್–ಹಮಾಸ್ ಯುದ್ಧವು “ನಿಜವಾಗಿಯೂ ಅಂತ್ಯದ ಹಂತದಲ್ಲಿದೆ” ಎಂದು ಟ್ರಂಪ್ ಹೇಳಿದ್ದು, ಗಾಝಾದಲ್ಲಿ ಉಳಿದಿರುವ ಹಿಂಸಾಚಾರವನ್ನು “ಸಣ್ಣ ಬೆಂಕಿ” ಎಂದು ವರ್ಣಿಸಿ, ಅದನ್ನು ಶೀಘ್ರ ನಂದಿಸಬಹುದು ಎಂದು ಹೇಳಿದ್ದಾರೆ. ಗಾಝಾ, ಶಾಂತಿ ಮಂಡಳಿಗೆ ಒಂದು ‘ಪರೀಕ್ಷಾ ನೆಲೆ’ಯಾಗಿ ಕಾರ್ಯನಿರ್ವಹಿಸಲಿದೆ. ಇದು ಯಶಸ್ವಿಯಾದರೆ ಇದೇ ಮಾದರಿಯನ್ನು ಇತರ ಸಂಘರ್ಷ ಪ್ರದೇಶಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ಜಾಗತಿಕ ಸಂಸ್ಥೆಗಳ ಪರಿಣಾಮಕಾರಿತ್ವದ ಕುರಿತಾಗಿ ದೀರ್ಘಕಾಲದಿಂದಿರುವ ಟೀಕೆಗಳ ನಡುವೆಯೂ, ಮಂಡಳಿ “ವಿಶ್ವಸಂಸ್ಥೆಯೊಂದಿಗೆ ಸಹಕರಿಸಲಿದೆ” ಎಂದು ಟ್ರಂಪ್ ತಿಳಿಸಿದ್ದಾರೆ.

ಇತ್ತೀಚಿನ ಬೆಳವಣಿಗೆಗಳು ಈ ಉಪಕ್ರಮವನ್ನು ಇನ್ನಷ್ಟು ತುರ್ತುಗೊಳಿಸಿವೆ. ಕೆಲವು ಹೋರಾಟಗಳು ನಿಧಾನಗೊಂಡಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಇದೀಗ ಹಲವು ಅರಬ್ ರಾಷ್ಟ್ರಗಳೊಂದಿಗೆ ಹತ್ತಿರವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ವೇಳೆ ಗಾಝಾ, ಲೆಬನಾನ್, ಇರಾಕ್ ಮತ್ತು ಯೆಮೆನ್‌ನಲ್ಲಿ ಸಶಸ್ತ್ರ ಗುಂಪುಗಳಿಗೆ ಇರಾನ್ ನೀಡುತ್ತಿರುವ ಬೆಂಬಲವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅಮೆರಿಕದ ನಿರ್ಬಂಧಗಳು ಇರಾನ್‌ನ ಆರ್ಥಿಕತೆಯ ಮೇಲೆ ಒತ್ತಡ ಹೇರಿದ್ದರೂ, ದಾವೋಸ್ ಶೃಂಗಸಭೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಯಾವುದೇ ಅಧಿಕೃತ ಮಾತುಕತೆಗಳು ನಡೆದಿಲ್ಲ.

ಟ್ರಂಪ್ ಶಾಂತಿ ಮಂಡಳಿಯನ್ನು ರಚಿಸಿದ್ದೇಕೆ?

2025ರ ಕೊನೆಯಲ್ಲಿ ಟ್ರಂಪ್ ಇಸ್ರೇಲ್–ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿದ ಯುದ್ಧಾನಂತರದ ಆಡಳಿತ ಯೋಜನೆಗೆ ಒತ್ತಾಯಿಸಿದಾಗ ಶಾಂತಿ ಮಂಡಳಿಯ ಹಿಂದಿನ ಕಲ್ಪನೆ ರೂಪುಗೊಂಡಿತು. ದೀರ್ಘಾವಧಿಯ ರಾಜಕೀಯ ಹಾಗೂ ಆರ್ಥಿಕ ಮೇಲ್ವಿಚಾರಣೆ ಇಲ್ಲದ ಕದನ ವಿರಾಮಗಳು ವಿಫಲವಾಗುತ್ತವೆ ಎಂದು ಟ್ರಂಪ್ ವಾದಿಸಿದ್ದಾರೆ. ಆ ಕೊರತೆಯನ್ನು ಈ ಮಂಡಳಿ ತುಂಬುತ್ತದೆ ಎನ್ನುವುದು ಅವರ ಅಭಿಪ್ರಾಯ.

ಔಪಚಾರಿಕವಾಗಿ, ಶಾಂತಿ ಮಂಡಳಿಯನ್ನು ಸಂಘರ್ಷಪೀಡಿತ ಪ್ರದೇಶಗಳಲ್ಲಿ ಸ್ಥಿರತೆ ಪುನಃಸ್ಥಾಪಿಸುವುದು, ಸಂಸ್ಥೆಗಳನ್ನು ಮರುನಿರ್ಮಿಸುವುದು ಹಾಗೂ ದೀರ್ಘಕಾಲೀನ ಭದ್ರತೆಯನ್ನು ಖಚಿತಪಡಿಸುವ ಉದ್ದೇಶ ಹೊಂದಿರುವ ಅಂತರರಾಷ್ಟ್ರೀಯ ಸಂಸ್ಥೆಯಾಗಿ ವಿವರಿಸಲಾಗಿದೆ. ದೊಡ್ಡ ಸಭೆಗಳು ಹಾಗೂ ಸಂಕೀರ್ಣ ಅಧಿಕಾರ ರಚನೆಯ ಮೂಲಕ ಕಾರ್ಯನಿರ್ವಹಿಸುವ ವಿಶ್ವಸಂಸ್ಥೆಯಂತಲ್ಲದೆ, ಈ ಮಂಡಳಿಯನ್ನು ಸಣ್ಣ, ಕೇಂದ್ರೀಕೃತ ಮತ್ತು ವೇಗವಾಗಿ ನಿರ್ಧಾರ ಕೈಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ಮಂಡಳಿ ರಾಜತಾಂತ್ರಿಕತೆ, ಆರ್ಥಿಕ ಹೂಡಿಕೆ ಮತ್ತು ಭದ್ರತಾ ಖಾತರಿಗಳನ್ನು ಸಂಯೋಜಿಸುವ ಮಾದರಿಯನ್ನು ಅಳವಡಿಸಿಕೊಂಡಿದೆ. ಇದರ ಆಡಳಿತ ರಚನೆ ಸಾಂಪ್ರದಾಯಿಕ ಅಂತರಸರ್ಕಾರಿ ಸಂಸ್ಥೆಗಳಿಗಿಂತ ಕಾರ್ಪೊರೇಟ್ ಶೈಲಿಗೆ ಹೆಚ್ಚು ಹತ್ತಿರವಾಗಿದೆ. ಅಂದರೆ, ಉಸ್ತುವಾರಿ ಹೊಂದಿರುವ ವ್ಯಕ್ತಿಗೆ ಮಂಡಳಿಯ ಕಾರ್ಯವ್ಯಾಪ್ತಿ ಹಾಗೂ ಸದಸ್ಯತ್ವದ ಕುರಿತು ಹೆಚ್ಚಿನ ಅಧಿಕಾರವಿರುತ್ತದೆ.

ಇದರ ಅತ್ಯಂತ ವಿವಾದಾತ್ಮಕ ಅಂಶ ನಾಯಕತ್ವವಾಗಿದೆ. ನಿಯಮಾವಳಿಯ ಪ್ರಕಾರ ಟ್ರಂಪ್ ಸ್ವತಃ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದು, ಅವರ ಅವಧಿಗೆ ಯಾವುದೇ ನಿಗದಿತ ಅಂತಿಮ ದಿನಾಂಕವಿಲ್ಲ. ಈ ಅಂಶಕ್ಕೆ ಯುರೋಪಿಯನ್ ರಾಜತಾಂತ್ರಿಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ರಾಷ್ಟ್ರೀಯ ನಾಯಕತ್ವ ಮತ್ತು ಅಂತರರಾಷ್ಟ್ರೀಯ ಅಧಿಕಾರದ ನಡುವಿನ ರೇಖೆ ಮಸುಕಾಗುತ್ತದೆ ಎಂಬುದು ಅವರ ಆಕ್ಷೇಪ. ಆದರೆ ಟ್ರಂಪ್ ಇದನ್ನು “ನಿಯಂತ್ರಣವಲ್ಲ, ನಿರಂತರತೆ” ಎಂದು ಸಮರ್ಥಿಸಿಕೊಂಡಿದ್ದು, ನಾಯಕತ್ವವು ಪದೇಪದೇ ಬದಲಾಗುವುದರಿಂದ ಶಾಂತಿ ಪ್ರಯತ್ನಗಳು ವಿಫಲವಾಗುತ್ತವೆ ಎಂದು ವಾದಿಸಿದ್ದಾರೆ.

ಈ ವ್ಯವಸ್ಥೆಯ ಮೂಲಕ ಮಂಡಳಿ ಸರ್ಕಾರಗಳು, ಹಣಕಾಸು ಸಂಸ್ಥೆಗಳು ಮತ್ತು ಖಾಸಗಿ ಹೂಡಿಕೆದಾರರೊಂದಿಗೆ ನೇರವಾಗಿ ಸಮನ್ವಯ ಸಾಧಿಸಬಹುದು. ಇದರಿಂದ ಪುನರ್ನಿರ್ಮಾಣಕ್ಕೆ ಹಣ ಹಂಚಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಅಧಿಕಾರ ವರ್ಗಾವಣೆಯ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಮಂಡಳಿಗೆ ಲಭ್ಯವಾಗುತ್ತದೆ.

ಶಾಂತಿ ಮಂಡಳಿಯಲ್ಲಿ ಯಾರು ಸದಸ್ಯರು?

ಆರಂಭಿಕ ಹಂತದಲ್ಲಿ ಶಾಂತಿ ಮಂಡಳಿಯಲ್ಲಿ ರಾಜಕೀಯ ನಾಯಕರು, ರಾಜತಾಂತ್ರಿಕರು ಮತ್ತು ರಾಜ್ಯ ಪ್ರತಿನಿಧಿಗಳು ಸೇರಿದ್ದಾರೆ. ಮಂಡಳಿಯ ಅಧ್ಯಕ್ಷತೆಯನ್ನು ಟ್ರಂಪ್ ವಹಿಸಿದ್ದು, ಸ್ಥಾಪಕ ಕಾರ್ಯನಿರ್ವಾಹಕ ಸದಸ್ಯರನ್ನು ಅವರೇ ಘೋಷಿಸಿದ್ದಾರೆ. ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ಟ್ರಂಪ್‌ನ ಆಪ್ತ ಮಿತ್ರ ಹಾಗೂ ಅಂತರರಾಷ್ಟ್ರೀಯ ಮಾತುಕತೆಯಲ್ಲಿ ತೊಡಗಿಸಿಕೊಂಡಿರುವ ಸ್ಟೀವ್ ವಿಟ್ಕಾಫ್ ಪ್ರಮುಖರು.

ಟ್ರಂಪ್ ಏಳು ಸದಸ್ಯರ ಕಾರ್ಯನಿರ್ವಾಹಕ ಮಂಡಳಿಯನ್ನು ನೇಮಕ ಮಾಡಿದ್ದಾರೆ. ಅವರು:

ಮಾರ್ಕೊ ರೂಬಿಯೊ – ಯುಎಸ್ ವಿದೇಶಾಂಗ ಕಾರ್ಯದರ್ಶಿ

ಜರೆಡ್ ಕುಶ್ನರ್ – ಮಧ್ಯಪ್ರಾಚ್ಯ ಪ್ರಾದೇಶಿಕ ಏಕೀಕರಣ ತಂತ್ರಜ್ಞ

ಸ್ಟೀವ್ ವಿಟ್ಕಾಫ್ – ಮಧ್ಯಪ್ರಾಚ್ಯಕ್ಕೆ ಯುಎಸ್ ವಿಶೇಷ ರಾಯಭಾರಿ

ಟೋನಿ ಬ್ಲೇರ್ – ಬ್ರಿಟನ್ ಮಾಜಿ ಪ್ರಧಾನಿ

ಅಜಯ್ ಬಂಗಾ – ವಿಶ್ವಬ್ಯಾಂಕ್ ಅಧ್ಯಕ್ಷ

ಮಾರ್ಕ್ ರೋವನ್ – ಅಪೊಲೊ ಗ್ಲೋಬಲ್ ಮ್ಯಾನೇಜ್‌ಮೆಂಟ್ ಸಿಇಒ

ನಿಕೋಲೇ ಮ್ಲಾಡೆನೋವ್ – ಗಾಝಾದ ಉನ್ನತ ಪ್ರತಿನಿಧಿ

ಅಂತರರಾಷ್ಟ್ರೀಯ ಮಟ್ಟದಲ್ಲಿ ಮಂಡಳಿ ವ್ಯಕ್ತಿಗಳಿಗಿಂತ ದೇಶಗಳ ಭಾಗವಹಿಸುವಿಕೆಗೆ ಒತ್ತು ನೀಡಿದೆ. ಸೌದಿ ಅರೇಬಿಯಾ, ಯುಎಇ, ಈಜಿಪ್ಟ್, ಖತರ್, ಜೋರ್ಡಾನ್, ಬಹ್ರೇನ್, ಟರ್ಕಿ, ಪಾಕಿಸ್ತಾನ ಮತ್ತು ಇಂಡೋನೇಷ್ಯಾ ಮೊದಲಾಗಿ ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿದ ದೇಶಗಳಾಗಿವೆ. ಮೊರಾಕೊ, ಕೊಸೊವೊ, ಹಂಗೇರಿ, ವಿಯೆಟ್ನಾಂ, ಅರ್ಮೇನಿಯಾ, ಅಜೆರ್ಬೈಜಾನ್, ಉಜ್ಬೇಕಿಸ್ತಾನ್, ಕಝಾಕಿಸ್ತಾನ್ ಮತ್ತು ಪರಾಗ್ವೆಯಂತಹ ದೇಶಗಳು ಆಹ್ವಾನವನ್ನು ಸ್ವೀಕರಿಸಿವೆ ಅಥವಾ ಬೆಂಬಲ ಸೂಚಿಸಿವೆ.

ದೃಢೀಕರಿಸಿದ ಸದಸ್ಯರಲ್ಲಿ ಇಸ್ರೇಲ್, ಅರ್ಜೆಂಟೀನಾ, ಸೌದಿ ಅರೇಬಿಯಾ, ಈಜಿಪ್ಟ್, ಯುಎಇ, ಪಾಕಿಸ್ತಾನ, ಟರ್ಕಿ, ಕತಾರ್, ಹಂಗೇರಿ, ವಿಯೆಟ್ನಾಂ, ಕಝಾಕಿಸ್ತಾನ್, ಮೊರಾಕೊ, ಬೆಲಾರಸ್, ಅಝರ್ಬೈಜಾನ್, ಬಹ್ರೇನ್ ಮತ್ತು ಉಝ್ಬೆಕಿಸ್ತಾನ್ ಸೇರಿವೆ.

ಗಮನಾರ್ಹ ಗೈರುಹಾಜರಿ: ಭಾರತ (ಆಹ್ವಾನಿತವಾಗಿದ್ದರೂ ದೂರ ಉಳಿದಿದೆ), ಫ್ರಾನ್ಸ್, ಜರ್ಮನಿ, ಸ್ವೀಡನ್ ಮತ್ತು ನಾರ್ವೆ.

ಕೆನಡಾಕ್ಕೆ ನೀಡಿದ್ದ ಆಹ್ವಾನ ಹಿಂಪಡೆದ ಟ್ರಂಪ್

ಹೊಸದಾಗಿ ರಚಿಸಲಾದ ಶಾಂತಿ ಮಂಡಳಿಗೆ ಸೇರ್ಪಡೆಯಾಗಲು ಕೆನಡಾಕ್ಕೆ ನೀಡಿದ್ದ ಆಹ್ವಾನವನ್ನು ಟ್ರಂಪ್ ಹಿಂತೆಗೆದುಕೊಂಡಿದ್ದಾರೆ. “ಈ ಪತ್ರದ ಮೂಲಕ ಕೆನಡಾ ಸೇರ್ಪಡೆಗೆ ನೀಡಿದ್ದ ಆಹ್ವಾನವನ್ನು ಶಾಂತಿ ಮಂಡಳಿ ಹಿಂತೆಗೆದುಕೊಳ್ಳುತ್ತಿದೆ” ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಪ್ರಧಾನಿ ಮಾರ್ಕ್ ಕಾರ್ನಿ ಅವರಿಗೆ ಉದ್ದೇಶಿಸಿ ಬರೆದಿದ್ದಾರೆ.

ಮಂಡಳಿಗೆ ಸೇರ್ಪಡೆಯಾಗಲು ಅಗತ್ಯವಿರುವ 1 ಬಿಲಿಯನ್ ಡಾಲರ್ ಸದಸ್ಯತ್ವ ಶುಲ್ಕವನ್ನು ಕೆನಡಾ ಪಾವತಿಸುವುದಿಲ್ಲ ಎಂದು ತಿಳಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಆಹ್ವಾನ ಹಿಂಪಡೆಯಲು ಕಾರಣವನ್ನು ಸ್ಪಷ್ಟಪಡಿಸಿಲ್ಲ.

ಟ್ರಂಪ್ ಶಾಂತಿ ಮಂಡಳಿಗೆ ಸೇರುವುದಿಲ್ಲ: ಸ್ಪೇನ್

ಜಾಗತಿಕ ಸಂಘರ್ಷಗಳನ್ನು ನಿಭಾಯಿಸಲು ಟ್ರಂಪ್ ಆರಂಭಿಸಿದ ಶಾಂತಿ ಮಂಡಳಿಯಲ್ಲಿ ಸ್ಪೇನ್ ಭಾಗವಹಿಸುವುದಿಲ್ಲ ಎಂದು ಪ್ರಧಾನಿ ಪೆಡ್ರೊ ಸ್ಯಾಂಚೆಜ್ ತಿಳಿಸಿದ್ದಾರೆ. ಬಹುಪಕ್ಷೀಯತೆ ಹಾಗೂ ವಿಶ್ವಸಂಸ್ಥಾ ವ್ಯವಸ್ಥೆಯ ಮೇಲಿನ ನಂಬಿಕೆಗೆ ಅನುಗುಣವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಗುರುವಾರ ಬ್ರಸೆಲ್ಸ್‌ನಲ್ಲಿ ನಡೆದ ಯುರೋಪಿಯನ್ ಯೂನಿಯನ್ ಶೃಂಗಸಭೆಯ ನಂತರ ಮಾತನಾಡಿದ ಸ್ಯಾಂಚೆಜ್, “ನಾವು ಆಹ್ವಾನವನ್ನು ಮೆಚ್ಚುತ್ತೇವೆ, ಆದರೆ ಅದನ್ನು ನಿರಾಕರಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News