Jacob & Coದಿಂದ 13.7 ಕೋಟಿ ರೂ. ಮೌಲ್ಯದ ವಂತಾರ ವಾಚ್ ಬಿಡುಗಡೆ; ಐಷಾರಾಮಿ ವಾಚ್‌ಗಳು ಇಷ್ಟೊಂದು ದುಬಾರಿ ಯಾಕೆ?
Photo Credit : Instagram\Jacob&Co.
ಐಷಾರಾಮಿ ವಾಚ್ ತಯಾರಕ ಜಾಕೋಬ್ & ಕಂಪೆನಿ ಜನವರಿ 21ರಂದು ‘ಒಪೆರಾ ವಂತಾರ ಗ್ರೀನ್ ಕ್ಯಾಮೊ’ (Opera Vantara Green Camo) ವಾಚ್ ಅನ್ನು ಬಿಡುಗಡೆ ಮಾಡಿದೆ. ಇದರ ಮೌಲ್ಯ 1.5 ಮಿಲಿಯನ್ ಡಾಲರ್ (ಸುಮಾರು 13.7 ಕೋಟಿ ರೂ.) ಎಂದು ಅಂದಾಜಿಸಲಾಗಿದೆ. ಈ ವಾಚ್, ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ನೇತೃತ್ವದ ಗುಜರಾತ್‌ನಲ್ಲಿರುವ ವನ್ಯಜೀವಿ ರಕ್ಷಣೆ ಮತ್ತು ಸಂರಕ್ಷಣಾ ಕೇಂದ್ರ ‘ವಂತಾರ’ದಿಂದ ಪ್ರೇರಿತವಾಗಿದೆ.
ಜಾಕೋಬ್ & ಕಂಪೆನಿಯ ಒಪೆರಾ ಕಲೆಕ್ಷನ್‌ನ ಈ ವಾಚ್‌ನಲ್ಲಿ ಡಯಲ್‌ನ ಮಧ್ಯಭಾಗದಲ್ಲಿ ಸಿಂಹ ಮತ್ತು ಬಂಗಾಳ ಹುಲಿಯ ಮಿನಿಯೇಚರ್ ಅಳವಡಿಸಲಾಗಿದೆ. ಅನಂತ್ ಅಂಬಾನಿ ಅವರ ಪುಟ್ಟ ಪುತ್ಥಳಿಯೂ ಇದರಲ್ಲಿ ಸೇರಿದೆ. ಇದೇ ವೇಳೆ, ಕೇಸ್ ಮತ್ತು ಡಯಲ್ ಅನ್ನು 397 ರತ್ನದಕಲ್ಲುಗಳಿಂದ ಅಲಂಕರಿಸಲಾಗಿದೆ. ಇದರಲ್ಲಿ ಡೆಮಂಟಾಯ್ಡ್ ಗಾರ್ನೆಟ್‌ಗಳು, ಟ್ಸಾವೊರೈಟ್‌ಗಳು, ಹಸಿರು ನೀಲಮಣಿಗಳು ಮತ್ತು ಬಿಳಿ ವಜ್ರಗಳು ಸೇರಿವೆ. ಒಟ್ಟು ರತ್ನಗಳ ತೂಕ 21.98 ಕ್ಯಾರೆಟ್.
ಜಾಕೋಬ್ & ಕಂಪೆನಿ ಇಂತಹ ವಿಶೇಷ ಕೈಗಡಿಯಾರಗಳನ್ನು ತಯಾರಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಸಂಸ್ಥೆ ರಾಮ ಜನ್ಮಭೂಮಿ ಆವೃತ್ತಿಯ ಕೈಗಡಿಯಾರವನ್ನೂ ಬಿಡುಗಡೆ ಮಾಡಿತ್ತು.
‘ಐಷಾರಾಮಿ’ ವಾಚ್‌ಗಳು ದುಬಾರಿ ಯಾಕೆ?
ಐಷಾರಾಮಿ ಕೈಗಡಿಯಾರಗಳು ಅವುಗಳ ಚಲನ ವ್ಯವಸ್ಥೆ, ಬಳಸುವ ವಸ್ತುಗಳು ಮತ್ತು ಉತ್ಪಾದನಾ ವಿಧಾನಗಳ ಕಾರಣದಿಂದ ಸಾಮಾನ್ಯ ವಾಚ್‌ಗಳಿಗಿಂತ ಭಿನ್ನವಾಗಿವೆ. ಸಾಮೂಹಿಕ ಉತ್ಪಾದನೆಯ ಕ್ವಾರ್ಟ್ಜ್ ಗಡಿಯಾರಗಳಿಗಿಂತ ಭಿನ್ನವಾಗಿ, ಈ ಕೈಗಡಿಯಾರಗಳನ್ನು ನೂರಾರು ಘಟಕಗಳನ್ನು ಬಳಸಿ ಜೋಡಿಸಲಾಗುತ್ತದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಯಿಂದಲೇ ನಿರ್ಮಿಸಲಾಗುತ್ತದೆ.
ಟೂರ್‌ಬಿಲ್ಲನ್‌ಗಳು (ಸಂಕೀರ್ಣ ತಿರುಗುವ ವ್ಯವಸ್ಥೆ), ನಿಮಿಷ ಪುನರಾವರ್ತಕಗಳು ಮತ್ತು ಶಾಶ್ವತ ಕ್ಯಾಲೆಂಡರ್‌ಗಳಂತಹ ಅತ್ಯಂತ ಸಂಕೀರ್ಣ ಘಟಕಗಳನ್ನು ಈ ಗಡಿಯಾರಗಳು ಒಳಗೊಂಡಿರುತ್ತವೆ. ಇವುಗಳಿಗೆ ಪರಿಣತ ಎಂಜಿನಿಯರಿಂಗ್ ಜ್ಞಾನ ಮತ್ತು ವಿಶೇಷ ಗಡಿಯಾರ ತಯಾರಿಕಾ ಕೌಶಲ್ಯ ಅಗತ್ಯವಿರುತ್ತದೆ.
ಆದ್ದರಿಂದ, ಐಷಾರಾಮಿ ಕೈಗಡಿಯಾರಗಳ ಬೆಲೆ ಅವುಗಳಲ್ಲಿ ಬಳಸಿದ ವಸ್ತುಗಳಿಗೆ ಮಾತ್ರ ಸೀಮಿತವಾಗದೆ, ಶ್ರಮ, ಬ್ರ್ಯಾಂಡ್ ಇತಿಹಾಸ ಮತ್ತು ಮುಖ್ಯವಾಗಿ ವಿರಳತೆಯನ್ನು ಪ್ರತಿಬಿಂಬಿಸುತ್ತದೆ. ಐಷಾರಾಮಿ ವಾಚ್‌ಗಳ ಪಟ್ಟಿಯಲ್ಲಿ ಸ್ಥಾಪಿತ ಸ್ವಿಸ್ ಬ್ರ್ಯಾಂಡ್‌ಗಳ ಯಾಂತ್ರಿಕ ಕೈಗಡಿಯಾರಗಳ ಬೆಲೆ ಸಾಮಾನ್ಯವಾಗಿ ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಇನ್ನು ಬೆಸ್ಪೋಕ್ ಅಥವಾ ಅತ್ಯಂತ ಸಂಕೀರ್ಣ ವಾಚ್‌ಗಳು ಕೋಟಿಗಟ್ಟಲೆ ಬೆಲೆ ಹೊಂದಿರುತ್ತವೆ.
ಜಾಗತಿಕ ಐಷಾರಾಮಿ ಕೈಗಡಿಯಾರ ಮಾರುಕಟ್ಟೆಯಲ್ಲಿ ಯಾವ ಬ್ರ್ಯಾಂಡ್‌ಗಳು ಪ್ರಾಬಲ್ಯ ಹೊಂದಿವೆ?
ಜಾಗತಿಕವಾಗಿ ಐಷಾರಾಮಿ ಕೈಗಡಿಯಾರ ಉದ್ಯಮವು ದಶಕಗಳು, ಕೆಲವೊಮ್ಮೆ ಶತಮಾನಗಳ ಇತಿಹಾಸ ಹೊಂದಿರುವ ಸ್ವಿಸ್ ತಯಾರಕರ ಸಣ್ಣ ಗುಂಪಿನಿಂದಲೇ ಆಳಲ್ಪಡುತ್ತಿದೆ. ರೋಲೆಕ್ಸ್ ಆದಾಯದ ದೃಷ್ಟಿಯಿಂದ ಅತಿದೊಡ್ಡ ಕಂಪೆನಿಯಾಗಿಯೇ ಉಳಿದಿದೆ. ಇವುಗಳನ್ನು ಮರುಮಾರಾಟಗಾರರಿಂದ ಖರೀದಿಸಿದರೂ ಹೆಚ್ಚಿನ ಬೆಲೆ ಕಟ್ಟಬೇಕಾಗುತ್ತದೆ. ರೋಲೆಕ್ಸ್ ಸೀಮಿತ ಪ್ರಮಾಣದಲ್ಲಿ ಮಾತ್ರ ವಾಚ್‌ಗಳನ್ನು ಬಿಡುಗಡೆ ಮಾಡುವುದರಿಂದ ಖರೀದಿದಾರರು ದೀರ್ಘಕಾಲ ಕಾಯಬೇಕಾಗುತ್ತದೆ.
ಪಾಟೆಕ್ ಫಿಲಿಪ್, ಆಡೆಮರ್ಸ್ ಪಿಗುಯೆಟ್ ಮತ್ತು ವಾಚೆರಾನ್ ಕಾನ್ಸ್ಟಾಂಟಿನ್ ಕಡಿಮೆ ಪ್ರಮಾಣದಲ್ಲಿ ಕೈಗಡಿಯಾರಗಳನ್ನು ಉತ್ಪಾದಿಸುತ್ತವೆ. ಆದರೆ ಇವುಗಳ ಬೆಲೆ ಅತ್ಯಂತ ದುಬಾರಿಯಾಗಿರುತ್ತದೆ.
ಒಮೆಗಾ, ಜೇಗರ್-ಲೀಕೌಲ್ಟ್ರೆ, ಐಡಬ್ಲ್ಯೂಸಿ ಮತ್ತು ಬ್ರೆಗುಯೆಟ್‌ನಂತಹ ಬ್ರ್ಯಾಂಡ್‌ಗಳು ದುಬಾರಿ ಪಟ್ಟಿಯ ಮಧ್ಯಮ ವಿಭಾಗದಲ್ಲಿದ್ದು, ತಾಂತ್ರಿಕ ವೈಶಿಷ್ಟ್ಯಗಳು ಮತ್ತು ಹೆಚ್ಚಿನ ಉತ್ಪಾದನಾ ಸಾಮರ್ಥ್ಯವನ್ನು ಒದಗಿಸುತ್ತವೆ. ಜಾಕೋಬ್ & ಕೋ ಈ ಪಟ್ಟಿಯ ಅಗ್ರ ತುದಿಯಲ್ಲಿ ನಿಂತಿದ್ದು, ಅಲ್ಟ್ರಾ-ಲೋ-ವಾಲ್ಯೂಮ್ ಹಾಗೂ ಅತ್ಯಾಕರ್ಷಕ ಕೈಗಡಿಯಾರಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಗಡಿಯಾರ ಮತ್ತು ಆಭರಣಗಳ ನಡುವಿನ ರೇಖೆಯನ್ನು ಮಸುಕುಗೊಳಿಸುತ್ತದೆ.
ಭಾರತದಲ್ಲಿ ಐಷಾರಾಮಿ ಕೈಗಡಿಯಾರಗಳ ಮಾರುಕಟ್ಟೆ ಎಷ್ಟು ದೊಡ್ಡದು?
ಭಾರತವು ಉನ್ನತ ಮಟ್ಟದಲ್ಲಿ ದೊಡ್ಡ ದೇಶೀಯ ಐಷಾರಾಮಿ ಕೈಗಡಿಯಾರ ತಯಾರಿಕಾ ಉದ್ಯಮವನ್ನು ಹೊಂದಿಲ್ಲ. ಅಧಿಕೃತ ಚಿಲ್ಲರೆ ವ್ಯಾಪಾರಿಗಳ ಮೂಲಕ ಮಾರಾಟವಾಗುವ ಆಮದು ಮಾಡಿದ ಸ್ವಿಸ್ ಬ್ರ್ಯಾಂಡ್‌ಗಳಿಂದ ಮಾರುಕಟ್ಟೆ ಬಹುತೇಕ ಸಂಪೂರ್ಣವಾಗಿ ನಿಯಂತ್ರಿತವಾಗಿದೆ.
ಭಾರತದಲ್ಲಿ ಪ್ರವೇಶ ಮಟ್ಟದ ಐಷಾರಾಮಿ ಯಾಂತ್ರಿಕ ಕೈಗಡಿಯಾರಗಳ ಬೆಲೆ ಸಾಮಾನ್ಯವಾಗಿ ರೂ.3–5 ಲಕ್ಷದಿಂದ ಆರಂಭವಾಗುತ್ತದೆ. ರೋಲೆಕ್ಸ್, ಪಾಟೆಕ್ ಫಿಲಿಪ್ ಅಥವಾ ಆಡೆಮರ್ಸ್ ಪಿಗುಯೆಟ್‌ನ ಐಕಾನಿಕ್ ಮಾದರಿಗಳು ಸಾಮಾನ್ಯವಾಗಿ 10 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯ ಹೊಂದಿರುತ್ತವೆ.
ಎಥೋಸ್ ಮತ್ತು ದಿ ವಾಚ್ ಲ್ಯಾಬ್‌ನಂತಹ ಚಿಲ್ಲರೆ ವ್ಯಾಪಾರಿಗಳು ರೋಲೆಕ್ಸ್, ಒಮೆಗಾ, ಹ್ಯೂಬ್ಲಾಟ್, ಬಲ್ಗರಿ, ಬ್ರೈಟ್ಲಿಂಗ್, ಗಿರಾರ್ಡ್-ಪೆರೆಗಾಕ್ಸ್, ಜೆನಿತ್ ಮತ್ತು ಜಾಕೋಬ್ & ಕೋ ಸೇರಿದಂತೆ ಹಲವಾರು ಬ್ರ್ಯಾಂಡ್‌ಗಳನ್ನು ಭಾರತದ ಪ್ರೀಮಿಯಂ ವಿಭಾಗದಲ್ಲಿ ಮಾರಾಟ ಮಾಡುತ್ತಿದ್ದಾರೆ.
ಅಲ್ಟ್ರಾ-ಪ್ರೀಮಿಯಂ ವಾಚ್‌ಗಳ ಬೆಲೆ ಕೋಟಿಗಳಲ್ಲಿ ಇರುತ್ತದೆ. ಇವು ಅತ್ಯಂತ ಅಪರೂಪವಾಗಿದ್ದು, ಸಾಮಾನ್ಯವಾಗಿ ಪ್ರೀ-ಆರ್ಡರ್ ಅಥವಾ ಸೀಮಿತ ಆವೃತ್ತಿಗಳಾಗಿರುತ್ತವೆ. ಇಂತಹ ವಾಚ್‌ಗಳು ಪ್ರಮಾಣಿತ ಚಿಲ್ಲರೆ ಮಾರ್ಗಗಳ ಮೂಲಕ ಮಾರಾಟವಾಗುವ ಬದಲು ಖಾಸಗಿಯಾಗಿ ವ್ಯವಹರಿಸಲಾಗುತ್ತವೆ.
ಭಾರತದಲ್ಲಿ ಐಷಾರಾಮಿ ಕೈಗಡಿಯಾರಗಳನ್ನು ಯಾರು ಖರೀದಿಸುತ್ತಾರೆ? ಅವುಗಳಿಗೆ ಏಕೆ ಬೇಡಿಕೆ ಇದೆ?
ಖರೀದಿದಾರರನ್ನು ಸಾಮಾನ್ಯವಾಗಿ ಮೂರು ವರ್ಗಗಳಾಗಿ ವಿಂಗಡಿಸಬಹುದು. ಮೊದಲನೆಯವರು ಸಂಗ್ರಹಕಾರರು. ಇವರು ಕೇವಲ ಬ್ರ್ಯಾಂಡ್‌ಗೆ ಮಾತ್ರ ಸೀಮಿತರಾಗದೆ, ಒಳಗಿನ ಸೂಕ್ಷ್ಮ ಚಲನ ವ್ಯವಸ್ಥೆ, ನಿರ್ದಿಷ್ಟ ಮಾದರಿ ಸಂಖ್ಯೆ ಮತ್ತು ಇತಿಹಾಸದ ಮೇಲೂ ಗಮನ ಹರಿಸುತ್ತಾರೆ. ಕರಕುಶಲತೆಯ ಮೇಲಿನ ಪ್ರೀತಿಯಿಂದ ಅವರು ಕೈಗಡಿಯಾರಗಳನ್ನು ಖರೀದಿಸುತ್ತಾರೆ. ಈ ಗಡಿಯಾರಗಳು ದಶಕಗಳವರೆಗೆ ಮೌಲ್ಯ ಕಾಪಾಡಿಕೊಳ್ಳುತ್ತವೆ ಎಂಬ ನಂಬಿಕೆ ಇವರದಲ್ಲಿದೆ.
ಎರಡನೆಯವರು ಶ್ರೀಮಂತರು. ಇವರು ಕೈಗಡಿಯಾರಗಳನ್ನು ತಮ್ಮ ಸ್ಥಾನಮಾನ ಅಥವಾ ವೈಯಕ್ತಿಕ ಮೈಲಿಗಲ್ಲುಗಳ ಸಂಕೇತವಾಗಿ ಪರಿಗಣಿಸುತ್ತಾರೆ. ಮೂರನೆಯವರು ಹೂಡಿಕೆದಾರರು. ದ್ವಿತೀಯ ಮಾರುಕಟ್ಟೆಯಲ್ಲಿ ಕೆಲವು ಮಾದರಿಗಳ ಮರುಮಾರಾಟ ಸಾಮರ್ಥ್ಯ ಇವರನ್ನು ಕೈಗಡಿಯಾರಗಳತ್ತ ಆಕರ್ಷಿಸುತ್ತದೆ.
ಭಾರತದಲ್ಲಿ ಹೆಚ್ಚುತ್ತಿರುವ ಸಂಪತ್ತು ಮತ್ತು ಜಾಗತಿಕ ಐಷಾರಾಮಿ ಬಳಕೆಯ ಮೇಲಿನ ಒಡ್ಡಿಕೊಳ್ಳುವಿಕೆಯಿಂದ ಬೇಡಿಕೆಯೂ ವಿಸ್ತರಿಸಿದೆ. ಆದರೂ, ಮಾಲೀಕತ್ವವು ವ್ಯಾಪಾರ ಕುಟುಂಬಗಳು, ಹಿರಿಯ ಕಾರ್ಪೊರೇಟ್ ಕಾರ್ಯನಿರ್ವಾಹಕರು, ಸಿನಿಮಾ ತಾರೆಯರು ಮತ್ತು ಕ್ರೀಡಾಪಟುಗಳಲ್ಲಿ ಹೆಚ್ಚಿನ ಮಟ್ಟಿಗೆ ಸೀಮಿತವಾಗಿದೆ.
ಸೀಮಿತ ಆವೃತ್ತಿಯ ಐಷಾರಾಮಿ ಗಡಿಯಾರ ಎಂದರೇನು?
ಸೀಮಿತ ಆವೃತ್ತಿಯ (ಲಿಮಿಟೆಡ್ ಎಡಿಷನ್) ವಾಚ್‌ಗಳನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ಉತ್ಪಾದಿಸಲಾಗುತ್ತದೆ. ಕೆಲವೊಮ್ಮೆ ವಿಶ್ವಾದಾದ್ಯಂತ 10 ಕ್ಕಿಂತ ಕಡಿಮೆ ವಾಚ್‌ಗಳನ್ನೇ ತಯಾರಿಸಲಾಗುತ್ತದೆ. ಉತ್ಪಾದನೆ ಮುಗಿದ ನಂತರ ಅದನ್ನು ಮತ್ತೆ ತಯಾರಿಸಲಾಗುವುದಿಲ್ಲ. ಇದರಿಂದ ಬ್ರ್ಯಾಂಡ್ ಸ್ಥಾನಮಾನವನ್ನು ಕಾಪಾಡಲು ಮತ್ತು ಸಂಗ್ರಹ ಮೌಲ್ಯವನ್ನು ಹೆಚ್ಚಿಸಲು ಉದ್ದೇಶಪೂರ್ವಕ ಕೊರತೆಯನ್ನು ಸೃಷ್ಟಿಸಲಾಗುತ್ತದೆ.
ನಿರ್ದಿಷ್ಟ ವಾರ್ಷಿಕೋತ್ಸವಗಳು, ಪಾಲುದಾರಿಕೆಗಳು ಮತ್ತು ವಿಷಯಾಧಾರಿತ ಅಂಶಗಳಿಗೆ ಹೊಂದುವಂತೆ ಈ ವಾಚ್‌ಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಉದಾಹರಣೆಗೆ, ವಂತಾರ ಗಡಿಯಾರವು ಅದರ ವಿಶಿಷ್ಟ ವಿನ್ಯಾಸ ವೈಶಿಷ್ಟ್ಯಗಳ ಮೂಲಕ ಸಂರಕ್ಷಣಾ ಪ್ರಯತ್ನಗಳಿಗೆ ಸಂಬಂಧಿಸಿದ ಕಥೆಯನ್ನು ಹೇಳುತ್ತದೆ; ಅದನ್ನು ನಕಲು ಮಾಡುವುದು ಸಾಧ್ಯವಿಲ್ಲ.
ಹೀಗಾಗಿ, ವಾಚ್‌ಗಳ ಕೊರತೆ ಬೆಲೆ ನಿಗದಿ ಮತ್ತು ಗ್ರಹಿಕೆ ಎರಡರ ಮೇಲೂ ಪರಿಣಾಮ ಬೀರುತ್ತದೆ. ಸೀಮಿತ ಉತ್ಪಾದನೆಯು ಸಾಮೂಹಿಕ ಉತ್ಪಾದನೆಯಲ್ಲಿ ಸಾಧ್ಯವಿಲ್ಲದ ಕಾರ್ಮಿಕ-ತೀವ್ರ ತಂತ್ರಗಳನ್ನು ಬಳಸಲು ಬ್ರ್ಯಾಂಡ್‌ಗಳಿಗೆ ಅವಕಾಶ ನೀಡುತ್ತದೆ. ಸಮಯ ತೋರಿಸುವುದು ಮಾತ್ರವೇ ಗಡಿಯಾರದ ಮುಖ್ಯ ಉದ್ದೇಶವಾಗಿರುವ ಹಂತವನ್ನು ಮಾರುಕಟ್ಟೆ ಬಹಳ ಹಿಂದೆಯೇ ದಾಟಿದೆ.
ಖರೀದಿದಾರರಿಗೆ ಕೊರತೆಯು ಪ್ರತ್ಯೇಕತೆಯನ್ನು ಸೂಚಿಸುತ್ತದೆ. ಬ್ರ್ಯಾಂಡ್‌ಗಳಿಗೆ ಇದು ಬೆಲೆ ನಿಗದಿಪಡಿಸುವ ಶಕ್ತಿಯನ್ನು ಒದಗಿಸುತ್ತದೆ.