Photo: NDTV

ಲೋಕಸಭೆಯ ಗಡಿಯಾರ ರಾತ್ರಿ 10.30 ತೋರಿಸುತ್ತಿತ್ತು. ಸದನದೊಳಗೆ ತೀವ್ರ ಕುತೂಹಲ, ರಾಜಕೀಯ ಉದ್ವಿಗ್ನತೆ ಮನೆಮಾಡಿತ್ತು. ಸಭಾಧ್ಯಕ್ಷ ರಬಿ ರೇ ಅವರು ವಿಶ್ವಾಸಮತದ ಫಲಿತಾಂಶ ಪ್ರಕಟಿಸಿದರು. ಸರಕಾರದ ಪರವಾಗಿ 142 ಮತಗಳು, ವಿರುದ್ಧವಾಗಿ 346 ಮತಗಳು!

ಇದರೊಂದಿಗೆ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ (ವಿ.ಪಿ. ಸಿಂಗ್) ನೇತೃತ್ವದ ಸರಕಾರ ಪತನಗೊಂಡಿತು. ಕೇವಲ 343 ದಿನಗಳ ಆಡಳಿತಕ್ಕೆ ತೆರೆ ಬಿದ್ದಿತು. ಕೆಲವೇ ಕ್ಷಣಗಳಲ್ಲಿ ರಾಷ್ಟ್ರಪತಿ ಭವನಕ್ಕೆ ತೆರಳಿದ ವಿ.ಪಿ. ಸಿಂಗ್ ರಾಜೀನಾಮೆ ಸಲ್ಲಿಸಿದರು.

ಬೋಫೋರ್ಸ್ ಹಗರಣದ ವಿರುದ್ಧ ಹೋರಾಡಿ ಕಾಂಗ್ರೆಸ್ ತೊರೆದು, ನೆಹರೂ–ಗಾಂಧಿ ಕುಟುಂಬದ ರಾಜಕೀಯ ಪ್ರಾಬಲ್ಯಕ್ಕೆ ಸವಾಲೊಡ್ಡಿ ಅಧಿಕಾರಕ್ಕೆ ಬಂದಿದ್ದ 'ರಾಜಾ ಸಾಹೇಬ'ನ ಸರಕಾರ ಹೀಗೆ ಅಲ್ಪಾವಧಿಯಲ್ಲೇ ಅಂತ್ಯ ಕಂಡಿತು. ಆದರೆ, ಈ ಪತನದ ಹಿಂದೆ ನಡೆದ ರಾಜಕೀಯ ಬೆಳವಣಿಗೆಗಳು ಭಾರತದ ರಾಜಕೀಯದ ದಿಕ್ಕನ್ನೇ ಬದಲಿಸುವಷ್ಟು ಮಹತ್ವ ಪಡೆದಿದ್ದವು.

ಮಂಡಲ್ ಆಯೋಗದ ಮೀಸಲಾತಿ ಜಾರಿ, ಅದಕ್ಕೆ ಪ್ರತಿಯಾಗಿ ಮುನ್ನೆಲೆಗೆ ಬಂದ ಕಮಂಡಲ ರಾಜಕಾರಣ, ಅಡ್ವಾಣಿ ಅವರ ರಾಮ ರಥಯಾತ್ರೆ, ಬಂಧನ ಹಾಗೂ ಜನತಾದಳದೊಳಗಿನ ಬಂಡಾಯ- ಇವೆಲ್ಲವೂ ಸೇರಿ ವಿ.ಪಿ. ಸಿಂಗ್ ಸರಕಾರದ ಪತನಕ್ಕೆ ವೇದಿಕೆ ಸಿದ್ಧಪಡಿಸಿದ್ದವು.

► ಅಧಿಕಾರಕ್ಕೆ ಬಂದ ವಿಭಿನ್ನ ರಾಜಕೀಯ ಶಕ್ತಿಗಳು

ಕಥೆ ಆರಂಭವಾಗಿದ್ದು 1989ರ ಡಿಸೆಂಬರ್‌ ನಲ್ಲಿ. ಬೋಫೋರ್ಸ್ ಹಗರಣದ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ ತೊರೆದಿದ್ದ ವಿ.ಪಿ. ಸಿಂಗ್, ಜನತಾದಳ ರಚಿಸಿ ರಾಷ್ಟ್ರೀಯ ರಂಗ (National Front) ಸರಕಾರವನ್ನು ಅಧಿಕಾರಕ್ಕೆ ತಂದಿದ್ದರು.

ಈ ಸರಕಾರದ ವಿಶೇಷವೆಂದರೆ, ಸೈದ್ಧಾಂತಿಕವಾಗಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದ ಬಿಜೆಪಿ ಮತ್ತು ಎಡಪಕ್ಷಗಳ ಬೆಂಬಲ. 85 ಸಂಸದರನ್ನು ಹೊಂದಿದ್ದ ಬಿಜೆಪಿ ಬಲಪಂಥೀಯ ರಾಜಕೀಯ ಶಕ್ತಿಯಾಗಿದ್ದರೆ, 52 ಸಂಸದರನ್ನು ಹೊಂದಿದ್ದ ಎಡಪಕ್ಷಗಳು ಎಡಪಂಥೀಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದವು. ಈ ಎರಡೂ ಶಕ್ತಿಗಳು ಹೊರಗಿನಿಂದ ನೀಡಿದ್ದ ಬೆಂಬಲವೇ ಸರಕಾರದ ಅಸ್ತಿತ್ವಕ್ಕೆ ಆಧಾರವಾಗಿತ್ತು.

ಆದರೆ, ಸರಕಾರದ ಒಳಗೇ ಭಿನ್ನಮತದ ಕಿಡಿ ಹೊತ್ತಿಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ.

ಉಪಪ್ರಧಾನಿಯಾಗಿದ್ದ ಹರಿಯಾಣದ ಪ್ರಭಾವಿ ರೈತ ನಾಯಕ 'ತಾವು' ದೇವಿಲಾಲ್, ತಮ್ಮ ಪುತ್ರ ಓಂ ಪ್ರಕಾಶ್ ಚೌಟಾಲ ಅವರನ್ನು ಮುಖ್ಯಮಂತ್ರಿ ಮಾಡುವ ವಿಚಾರದಲ್ಲಿ ಪಟ್ಟು ಹಿಡಿದರು. ಇದಕ್ಕಾಗಿ ವಿ.ಪಿ. ಸಿಂಗ್ ಸರಕಾರದ ಮೇಲೆಯೇ ಒತ್ತಡ ಹೇರಲು ಮುಂದಾದರು. ಇದನ್ನು ಸಹಿಸದ ಸಿಂಗ್, 1990ರ ಆಗಸ್ಟ್ 1ರಂದು ದೇವಿಲಾಲ್ ಅವರನ್ನು ಸಂಪುಟದಿಂದ ವಜಾಗೊಳಿಸಿದರು.

ಇದರಿಂದ ಕೆರಳಿದ ದೇವಿಲಾಲ್, ಆಗಸ್ಟ್ 9ರಂದು ದಿಲ್ಲಿಯ ಬೋಟ್ ಕ್ಲಬ್ ನಲ್ಲಿ ಬೃಹತ್ ರೈತ ಸಮಾವೇಶ ಆಯೋಜಿಸಿ ತಮ್ಮ ರಾಜಕೀಯ ಶಕ್ತಿ ಪ್ರದರ್ಶಿಸಲು ಮುಂದಾದರು.

Full View

► ಮಂಡಲ್ ಬಾಂಬ್ ಸಿಡಿಸಿದ ವಿ.ಪಿ. ಸಿಂಗ್

ದೇವಿಲಾಲ್ ಅವರ ರೈತ ಸಮಾವೇಶಕ್ಕೆ ಕೇವಲ ಎರಡು ದಿನ ಬಾಕಿ ಇರುವಾಗ, ಅಂದರೆ ಆಗಸ್ಟ್ 7ರಂದು ವಿ.ಪಿ. ಸಿಂಗ್ ಮಹತ್ವದ ರಾಜಕೀಯ ಘೋಷಣೆ ಮಾಡಿದರು. ಹತ್ತು ವರ್ಷಗಳಿಂದ ಅನುಷ್ಠಾನಕ್ಕೆ ಕಾಯುತ್ತಿದ್ದ ಮಂಡಲ್ ಆಯೋಗದ ವರದಿಯನ್ನು ಜಾರಿಗೊಳಿಸಿ, ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಶೇ. 27ರಷ್ಟು ಮೀಸಲಾತಿ ಪ್ರಕಟಿಸಿದರು.

ಈ ನಿರ್ಧಾರ ಉತ್ತರ ಭಾರತದ ರಾಜಕೀಯದಲ್ಲಿ ಸಂಚಲನ ಮೂಡಿಸಿತು. ದಿಲ್ಲಿ ಸೇರಿದಂತೆ ಹಲವು ನಗರಗಳಲ್ಲಿ ಮೇಲ್ಜಾತಿಯ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ದಿಲ್ಲಿಯ ದೇಶಬಂಧು ಕಾಲೇಜಿನ ವಿದ್ಯಾರ್ಥಿ ರಾಜೀವ್ ಗೋಸ್ವಾಮಿ ಸಾರ್ವಜನಿಕವಾಗಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತು.

ಪ್ರತಿಭಟನೆಗಳ ವೇಳೆ ಹಲವು ವಿದ್ಯಾರ್ಥಿಗಳು ಬೆಂಕಿಗೆ ಆಹುತಿಯಾದರು. ಬಸ್ ಗಳಿಗೆ ಬೆಂಕಿ ಹಚ್ಚಲಾಯಿತು. ಮೀಸಲಾತಿ ಪರ ಮತ್ತು ವಿರೋಧದ ಸಂಘರ್ಷ ದೇಶದಾದ್ಯಂತ ತೀವ್ರ ಚರ್ಚೆಗೆ ಕಾರಣವಾಯಿತು.

ಮಂಡಲ್ ಆಯೋಗದ ಮೀಸಲಾತಿ ಜಾರಿಯಿಂದ ಹಿಂದುತ್ವದ ಆಧಾರದಲ್ಲಿ ಹಿಂದೂ ಸಮಾಜವನ್ನು ಒಗ್ಗೂಡಿಸುವ ತಮ್ಮ ರಾಜಕೀಯ ಕಾರ್ಯತಂತ್ರಕ್ಕೆ ಹಿನ್ನಡೆಯಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿತ್ತು. ಹೀಗಾಗಿ, ಮಂಡಲ್ ರಾಜಕಾರಣಕ್ಕೆ ಪ್ರತಿಯಾಗಿ ಕಮಂಡಲ ರಾಜಕಾರಣವನ್ನು ಮುನ್ನೆಲೆಗೆ ತರಲು ಮುಂದಾಯಿತು.

► ಸೋಮನಾಥದಿಂದ ಅಯೋಧ್ಯೆಯವರೆಗೆ ರಥಯಾತ್ರೆ

1990ರ ಸೆಪ್ಟೆಂಬರ್ 25. ಗುಜರಾತ್ ನ ಸೋಮನಾಥ ದೇಗುಲದಿಂದ ಅಯೋಧ್ಯೆಯವರೆಗೆ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ರಾಮ ರಥಯಾತ್ರೆ ಆರಂಭಿಸಿದರು.

ಟೊಯೋಟಾ ವ್ಯಾನ್ ಅನ್ನು ರಥದಂತೆ ಸಿಂಗರಿಸಿ ಆರಂಭಿಸಿದ ಈ ಯಾತ್ರೆ ಸಾಗಿದ ಪ್ರದೇಶಗಳಲ್ಲಿ ಧಾರ್ಮಿಕ ಉದ್ವಿಗ್ನತೆ ಹೆಚ್ಚಿತು. ಹಲವು ಕಡೆ ಕೋಮು ಗಲಭೆಗಳು ಸಂಭವಿಸಿದವು.

ಅಕ್ಟೋಬರ್ 30ರಂದು ಅಯೋಧ್ಯೆಯಲ್ಲಿ ಕರಸೇವೆ ನಡೆಸಿ ಬಾಬರಿ ಮಸೀದಿಯ ಮೇಲೆ ಭಗವಾಧ್ವಜ ಹಾರಿಸುವುದಾಗಿ ಸಂಘ ಪರಿವಾರ ಘೋಷಿಸಿತ್ತು.

ಇದರಿಂದ ವಿ.ಪಿ. ಸಿಂಗ್ ಸರಕಾರ ಇಕ್ಕಟ್ಟಿಗೆ ಸಿಲುಕಿತು. ರಥಯಾತ್ರೆಗೆ ಅವಕಾಶ ನೀಡಿದರೆ ಬಿಜೆಪಿ ಬೆಂಬಲ ಉಳಿಯಬಹುದು. ಆದರೆ, ದೇಶದ ಜಾತ್ಯತೀತ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಏಳಬಹುದು. ಯಾತ್ರೆಯನ್ನು ತಡೆದರೆ ಬಿಜೆಪಿ ಬೆಂಬಲ ಹಿಂಪಡೆಯುವ ಸಾಧ್ಯತೆ ಎದುರಾಗಿತ್ತು.

ಸರಕಾರದ ಉಳಿವಿಗಿಂತ ಸಂವಿಧಾನ ಮತ್ತು ಜಾತ್ಯತೀತ ನಿಲುವಿಗೆ ಆದ್ಯತೆ ನೀಡುವ ನಿರ್ಧಾರ ಕೈಗೊಂಡ ವಿ.ಪಿ. ಸಿಂಗ್, ರಥಯಾತ್ರೆ ತಡೆಯಲು ಮುಂದಾದರು.

1990ರ ಅಕ್ಟೋಬರ್ 23ರಂದು ನಸುಕಿನ ಜಾವ 5 ಗಂಟೆ. ಅಡ್ವಾಣಿ ಅವರ ರಥ ಬಿಹಾರದ ಸಮಷ್ಟಿಪುರ ಸರ್ಕಿಟ್ ಹೌಸ್ ತಲುಪಿತ್ತು. ಬಿಹಾರದ ಅಂದಿನ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಹಿರಿಯ IAS ಅಧಿಕಾರಿ ಆರ್.ಕೆ. ಸಿಂಗ್ ಮತ್ತು IPS ಅಧಿಕಾರಿ ರಾಮೇಶ್ವರ್ ಓರಾನ್ ಅವರನ್ನು ಅಲ್ಲಿಗೆ ಕಳುಹಿಸಿದರು. ಅವರು ನಿದ್ರೆಯಲ್ಲಿದ್ದ ಅಡ್ವಾಣಿ ಅವರನ್ನು ಎಬ್ಬಿಸಿ ಬಂಧಿಸಿದರು.

► ಅಡ್ವಾಣಿ ಬಂಧನ: ಬಿಜೆಪಿಯಿಂದ ಬೆಂಬಲ ವಾಪಸ್

ಅಡ್ವಾಣಿ ಬಂಧನದ ಸುದ್ದಿ ದಿಲ್ಲಿಯಲ್ಲಿ ರಾಜಕೀಯ ಸಂಚಲನ ಮೂಡಿಸಿತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಅವರ ಕಡೆಯಿಂದ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರಿಗೆ ಪತ್ರ ರವಾನೆಯಾಯಿತು. ವಿ.ಪಿ. ಸಿಂಗ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ತಕ್ಷಣದಿಂದಲೇ ಹಿಂಪಡೆಯುವುದಾಗಿ ಬಿಜೆಪಿ ತಿಳಿಸಿತು.

ಇದರೊಂದಿಗೆ ಸರಕಾರ ಅಲ್ಪಮತಕ್ಕೆ ಕುಸಿಯಿತು. ಆದರೆ, ವಿ.ಪಿ. ಸಿಂಗ್ ರಾಜೀನಾಮೆ ನೀಡಲು ಸಿದ್ಧರಿರಲಿಲ್ಲ. ಸಂಸತ್ತಿನಲ್ಲೇ ವಿಶ್ವಾಸಮತ ಎದುರಿಸುವುದಾಗಿ ಘೋಷಿಸಿ, ನವೆಂಬರ್ 7ರಂದು ಮತಯಾಚನೆಗೆ ದಿನ ನಿಗದಿಪಡಿಸಿದರು.

► ಜನತಾದಳದೊಳಗೇ ಬಂಡಾಯ: ಚಂದ್ರಶೇಖರ್ ಕೈಹಿಡಿದ ಕಾಂಗ್ರೆಸ್

ಬಿಜೆಪಿ ಬೆಂಬಲ ಹಿಂಪಡೆದ ಬೆನ್ನಲ್ಲೇ ಜನತಾದಳದೊಳಗಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿತು. ಮೊದಲಿನಿಂದಲೂ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಜನತಾದಳದ ನಾಯಕ ಚಂದ್ರಶೇಖರ್, ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ ಅವರೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡರು.

ವಿ.ಪಿ. ಸಿಂಗ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ, ಚಂದ್ರಶೇಖರ್ ಅವರಿಗೆ ಪ್ರಧಾನಿಯಾಗಲು ಹೊರಗಿನಿಂದ ಬೆಂಬಲ ನೀಡಲು ಕಾಂಗ್ರೆಸ್ ಸಮ್ಮತಿಸಿತು. ಇದರ ಪರಿಣಾಮವಾಗಿ ಜನತಾದಳ ವಿಭಜನೆಯಾಯಿತು. ದೇವಿಲಾಲ್ ಮತ್ತು ಚಂದ್ರಶೇಖರ್ ಬಣಗಳು ವಿ.ಪಿ. ಸಿಂಗ್ ವಿರುದ್ಧ ನಿಂತವು.

► ನವೆಂಬರ್ 7: ವಿಶ್ವಾಸಮತದಲ್ಲಿ ಸೋಲು

ವಿಶ್ವಾಸಮತದ ದಿನ ಲೋಕಸಭೆಯಲ್ಲಿ ನಡೆದ ಚರ್ಚೆ ರಾಜಕೀಯವಾಗಿ ಮಹತ್ವ ಪಡೆದಿತ್ತು. ತಮ್ಮ ಸರಕಾರದ ಸೋಲು ಬಹುತೇಕ ಖಚಿತವಾಗಿದ್ದರೂ ವಿ.ಪಿ. ಸಿಂಗ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಸಾಮಾಜಿಕ ನ್ಯಾಯ ಮತ್ತು ದೇಶದ ಜಾತ್ಯತೀತತೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದು ಅವರು ಪ್ರತಿಪಾದಿಸಿದರು. ಮಂಡಲ್ ಆಯೋಗದ ವರದಿ ಶೋಷಿತ ವರ್ಗಗಳಿಗೆ ಧ್ವನಿ ನೀಡಿದೆ. ಅಡ್ವಾಣಿ ಅವರನ್ನು ಬಂಧಿಸುವ ಮೂಲಕ ಸಂವಿಧಾನದ ಆಶಯಗಳನ್ನು ರಕ್ಷಿಸಲಾಗಿದೆ ಎಂಬ ನಿಲುವು ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಯಾಗಿ ಮಾತನಾಡಿದ ರಾಜೀವ್ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ, ದೇಶವನ್ನು ಜಾತಿ ಮತ್ತು ಧರ್ಮದ ಆಧಾರದಲ್ಲಿ ವಿಭಜಿಸಿದ ಆರೋಪವನ್ನು ವಿ.ಪಿ. ಸಿಂಗ್ ಅವರ ಮೇಲೆ ಹೊರಿಸಿದರು.

ರಾತ್ರಿ ನಡೆದ ಮತದಾನದಲ್ಲಿ ಸರಕಾರದ ಪರವಾಗಿ 142 ಮತಗಳು ಹಾಗೂ ವಿರುದ್ಧವಾಗಿ 346 ಮತಗಳು ಚಲಾವಣೆಯಾದವು. ಇದರೊಂದಿಗೆ ವಿ.ಪಿ. ಸಿಂಗ್ ಸರಕಾರದ ಪತನ ಖಚಿತವಾಯಿತು.

► ಚಂದ್ರಶೇಖರ್ ಪ್ರಧಾನಿಯಾದರೂ ಉಳಿಯದ ಸರಕಾರ

ನವೆಂಬರ್ 10ರಂದು ಕಾಂಗ್ರೆಸ್ ಬೆಂಬಲದೊಂದಿಗೆ ಚಂದ್ರಶೇಖರ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ, ಅವರ ಸರಕಾರವೂ ಹೆಚ್ಚು ಕಾಲ ಉಳಿಯಲಿಲ್ಲ. ಕೇವಲ ನಾಲ್ಕು ತಿಂಗಳಲ್ಲೇ ಪತನಗೊಂಡಿತು.

► ಭಾರತದ ರಾಜಕೀಯಕ್ಕೆ ಹೊಸ ತಿರುವು

ವಿ.ಪಿ. ಸಿಂಗ್ ಸರಕಾರದ ಆಡಳಿತಾವಧಿ ಕೇವಲ 343 ದಿನಗಳಿಗೆ ಸೀಮಿತವಾದರೂ, ಆ ಅವಧಿಯಲ್ಲಿ ಮುನ್ನೆಲೆಗೆ ಬಂದ ಮಂಡಲ್ ಮತ್ತು ಕಮಂಡಲ ರಾಜಕಾರಣ ಭಾರತದ ರಾಜಕೀಯದ ಸ್ವರೂಪವನ್ನೇ ಬದಲಿಸಿತು.

ಮಂಡಲ್ ರಾಜಕಾರಣದ ಮೂಲಕ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು ರಾಷ್ಟ್ರೀಯ ರಾಜಕೀಯದ ಕೇಂದ್ರಕ್ಕೆ ಬಂದರೆ, ಕಮಂಡಲ ರಾಜಕಾರಣದ ಮೂಲಕ ರಾಮಮಂದಿರ ಚಳವಳಿ ಮತ್ತು ಧಾರ್ಮಿಕ ಗುರುತಿನ ರಾಜಕಾರಣ ಪ್ರಬಲ ಚರ್ಚೆಗೆ ಕಾರಣವಾಯಿತು.

ಹೀಗಾಗಿ, 1990ರ ನವೆಂಬರ್ 7ರ ರಾತ್ರಿ ನಡೆದದ್ದು ಕೇವಲ ಒಂದು ಸರಕಾರದ ಪತನವಷ್ಟೇ ಆಗಿರಲಿಲ್ಲ. ಭಾರತದ ರಾಜಕೀಯದಲ್ಲಿ ಸಾಮಾಜಿಕ ನ್ಯಾಯ, ಜಾತಿ ಸಮೀಕರಣ ಮತ್ತು ಧಾರ್ಮಿಕ ರಾಜಕಾರಣದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ ಮಹತ್ವದ ತಿರುವು ಅದಾಗಿತ್ತು.

►► ಆ ದಿನಗಳು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor