ಸಾಂದರ್ಭಿಕ ಚಿತ್ರ (AI) 

ಕಳೆದ ಒಂದು ತಿಂಗಳ ಅವಧಿಯಲ್ಲಿ ಚಿನ್ನದ ದರವು ತನ್ನ ಗರಿಷ್ಠ ಮಟ್ಟವಾದ ರೂ.1.80 ಲಕ್ಷದಿಂದ ಶೇ.30ರಷ್ಟು ಕುಸಿದಿದೆ. ಇದರಿಂದಾಗಿ ಈ ಹಿಂದೆ ನೀಡಲಾದ ಕೆಲವು ಸಾಲಗಳಿಗೆ ಭದ್ರತೆಯಾಗಿ ಅಡವಿಟ್ಟಿರುವ ಚಿನ್ನದ ಮೌಲ್ಯ ಕಡಿಮೆಯಾಗಿದ್ದು, 'ಸಾಲ ಮತ್ತು ಚಿನ್ನದ ಮೌಲ್ಯದ ಅನುಪಾತ' (LTV) ಆರ್‌ಬಿಐ ನಿಗದಿಪಡಿಸಿರುವ ಶೇ.85ರ ಮಿತಿಯನ್ನು ಮೀರುವಂತಾಗಿದೆ.

ಚಿನ್ನದ ಬೆಲೆ ಇಳಿಕೆಯು ಸಾಲ ನೀಡುವ ಸಂಸ್ಥೆಗಳಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇರುವುದರಿಂದ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFC) ತಮ್ಮ ಚಿನ್ನದ ಸಾಲಗಳ ಮೇಲೆ ತೀವ್ರ ನಿಗಾ ವಹಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೂಚಿಸಿದೆ.

ಇತ್ತೀಚೆಗೆ ಎನ್‌ಬಿಎಫ್‌ಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ (CEO) ನಡೆದ ಸಭೆಯಲ್ಲಿ ಆರ್‌ಬಿಐ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಮಾರ್ಚ್ 2027ರೊಳಗೆ ಕನಿಷ್ಠ ರೂ.10 ಕೋಟಿ ನಿವ್ವಳ ಸ್ವಂತ ನಿಧಿ (Net Owned Fund) ಹೊಂದಲು ವಿಫಲವಾಗುವ ಕಂಪನಿಗಳಿಗೆ ಯಾವುದೇ ಕಾರಣಕ್ಕೂ ಹೆಚ್ಚುವರಿ ಕಾಲಾವಕಾಶ ನೀಡುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ ಎಂದು ಸಭೆಯ ಮಾಹಿತಿ ಬಲ್ಲ ಮೂಲಗಳು ತಿಳಿಸಿರುವುದಾಗಿ ʼಟೈಮ್ಸ್ ಆಫ್ ಇಂಡಿಯಾʼ ವರದಿ ಮಾಡಿದೆ.

ಅಲ್ಲದೆ, ಅತಿಯಾದ ವೇಗದಲ್ಲಿ ವಹಿವಾಟು ವಿಸ್ತರಿಸುವುದರ ವಿರುದ್ಧವೂ ಆರ್‌ಬಿಐ ಎಚ್ಚರಿಕೆ ನೀಡಿದೆ. ಹೆಚ್ಚುತ್ತಿರುವ ಸೈಬರ್ ಅಪಾಯಗಳ ಹಿನ್ನೆಲೆಯಲ್ಲಿ, ಹೊಸ ತಂತ್ರಜ್ಞಾನ ಪಾಲುದಾರರನ್ನು ನೇಮಿಸಿಕೊಳ್ಳುವಾಗ ಹೆಚ್ಚಿನ ಎಚ್ಚರಿಕೆ ಮತ್ತು ಪರಿಶೀಲನೆ ನಡೆಸುವಂತೆ ಆರ್‌ಬಿಐ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಚಿನ್ನದ ಬೆಲೆ ಕುಸಿತ: ಚಿನ್ನದ ಸಾಲಗಳ ಮೇಲಿನ ಪರಿಣಾಮ

ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ದೇಶದ ಚಿನ್ನದ ಸಾಲ ಮಾರುಕಟ್ಟೆಯಲ್ಲಿ ವಸೂಲಾಗದ ಸಾಲದ (NPA) ಪ್ರಮಾಣ ದುಪ್ಪಟ್ಟಾಗಿದೆ. ಸಾಲ ನೀಡಿಕೆಯ ನಿಯಮಗಳಲ್ಲಿ ಆಗಿರುವ ಬದಲಾವಣೆಗಳೇ ಇದಕ್ಕೆ ಕಾರಣವಾಗಿದ್ದು, ಗ್ರಾಹಕರು ಹೊಸ ನಿಯಮಗಳಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಉದ್ಯಮದ ಪ್ರಮುಖರು ತಿಳಿಸಿದ್ದಾರೆ.

ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಚಿನ್ನದ ಸಾಲಗಳಿಗೆ ಪ್ರತಿ ತಿಂಗಳು ಕಂತುಗಳ ರೂಪದಲ್ಲಿ ಬಡ್ಡಿಯನ್ನು ವಸೂಲಿ ಮಾಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ಸಂಸ್ಥೆಗಳಿಗೆ ಸೂಚಿಸಿದೆ. ಸಾಲದ ಅವಧಿ ಮುಗಿದ ನಂತರ ಅಸಲು ಮತ್ತು ಬಡ್ಡಿ ಎರಡನ್ನೂ ಒಟ್ಟಿಗೆ ಪಾವತಿಸುವ ಹಳೆಯ ಪದ್ಧತಿಗೆ ಇದು ಬದಲಾವಣೆ ತಂದಿದೆ.

"ಚಿನ್ನದ ಬೆಲೆ ಶೇ.35 ರಿಂದ ಶೇ.40 ರಷ್ಟು ಇಳಿಕೆಯಾಗಿದ್ದು, ಕೆಲವು ಕಂಪನಿಗಳ ಸಾಲ ಮತ್ತು ಚಿನ್ನದ ಮೌಲ್ಯದ ಅನುಪಾತ (LTV) ಶೇ.75ರ ಸಮೀಪಕ್ಕೆ ಬಂದಿದೆ. ಹೀಗಾಗಿ ಕಂಪನಿಗಳು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಆರ್‌ಬಿಐ ಸೂಚಿಸಿದೆ. ಇದುವರೆಗಿನ ಬೆಳವಣಿಗೆ ಉತ್ತಮವಾಗಿದ್ದರೂ, ಅತಿಯಾದ ವೇಗದಲ್ಲಿ ವಹಿವಾಟು ವಿಸ್ತರಿಸದಂತೆ ಎನ್‌ಬಿಎಫ್‌ಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಬೆಳೆ ಸಾಲಗಳಿಗೆ ನೀಡಲಾಗಿರುವ ವಿನಾಯಿತಿಗಳ ಬಗ್ಗೆ ಕೆಲವು ಕಿರು ಹಣಕಾಸು ಸಂಸ್ಥೆಗಳು ಕೇಳಿದ ಪ್ರಶ್ನೆಗಳಿಗೆ ಸಭೆಯಲ್ಲಿ ಸ್ಪಷ್ಟನೆ ನೀಡಲಾಯಿತು" ಎಂದು ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯ ಮಾಹಿತಿ ಬಲ್ಲ ಮೂಲಗಳು ʼಎಕನಾಮಿಕ್ ಟೈಮ್ಸ್ʼ ಗೆ ತಿಳಿಸಿವೆ.

ಟ್ರಾನ್ಸ್‌ಯೂನಿಯನ್ ಸಿಬಿಲ್ (TransUnion Cibil) ವರದಿಯ ಪ್ರಕಾರ, 2026 ಮಾರ್ಚ್ 31ರ ವೇಳೆಗೆ ಶೇ.0.16 ರಷ್ಟಿದ್ದ ಚಿನ್ನದ ಸಾಲದ ಎನ್‌ಪಿಎ ಪ್ರಮಾಣ, ಆಗಸ್ಟ್ ಅಂತ್ಯದ ವೇಳೆಗೆ ಶೇ.0.3ಕ್ಕೆ ಏರಿಕೆಯಾಗಿದೆ. ಒಂದಕ್ಕಿಂತ ಹೆಚ್ಚು ಚಿನ್ನದ ಸಾಲದ ಖಾತೆಗಳನ್ನು ಹೊಂದಿರುವ ಗ್ರಾಹಕರು ಮರುಪಾವತಿಯಲ್ಲಿ ವಿಳಂಬ ಮಾಡುವ ಸಾಧ್ಯತೆ ಹೆಚ್ಚಿದೆ ಎಂದೂ ಅದು ಉಲ್ಲೇಖಿಸಿದೆ.

ಈ ಸಭೆಯಲ್ಲಿ ಎನ್‌ಬಿಎಫ್‌ಸಿಗಳು, ಗೃಹ ಹಣಕಾಸು ಕಂಪನಿಗಳು ಮತ್ತು ಕಿರು ಹಣಕಾಸು ಸಂಸ್ಥೆಗಳ ಎರಡು ಡಜನ್‌ಗೂ ಹೆಚ್ಚು ಮುಖ್ಯಸ್ಥರು ಭಾಗವಹಿಸಿದ್ದರು. 'ಸಾ-ಧನ್' (Sa-Dhan), ಮೈಕ್ರೋಫೈನಾನ್ಸ್ ಇಂಡಸ್ಟ್ರಿ ನೆಟ್‌ವರ್ಕ್ (MFIN) ಮತ್ತು ಫೈನಾನ್ಸ್ ಇಂಡಸ್ಟ್ರಿ ಡೆವಲಪ್‌ಮೆಂಟ್ ಕೌನ್ಸಿಲ್ (FIDC) ಸೇರಿದಂತೆ ಪ್ರಮುಖ ಉದ್ಯಮ ಸಂಘಟನೆಗಳ ಪ್ರತಿನಿಧಿಗಳೂ ಹಾಜರಿದ್ದರು.

ಇದರೊಂದಿಗೆ, ಆಯ್ದ ನಗರ ಸಹಕಾರಿ ಬ್ಯಾಂಕ್‌ಗಳು (UCB), ನ್ಯಾಷನಲ್ ಅರ್ಬನ್ ಕೋಆಪರೇಟಿವ್ ಫೈನಾನ್ಸ್ ಅಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಹಾಗೂ ನ್ಯಾಷನಲ್ ಫೆಡರೇಶನ್ ಆಫ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಸ್ ಅಂಡ್ ಕ್ರೆಡಿಟ್ ಸೊಸೈಟೀಸ್ ಪ್ರತಿನಿಧಿಗಳೊಂದಿಗೆ ಆರ್‌ಬಿಐ ಪ್ರತ್ಯೇಕ ಸಭೆ ನಡೆಸಿದೆ.

ಚಿನ್ನದ ಮೌಲ್ಯದ ಅನುಪಾತ (LTV) ಬಗ್ಗೆ ಗ್ರಾಹಕರು ತಿಳಿಯಬೇಕಾದ ಸಂಗತಿಗಳು

ದೇಶದಲ್ಲಿ ಬುಧವಾರವೂ ಚಿನ್ನದ ಬೆಲೆ ಇಳಿಕೆ ಮುಂದುವರಿದಿದ್ದು, ನವೆಂಬರ್ 25ರಂದು 24 ಕ್ಯಾರೆಟ್ ಚಿನ್ನದ ಸರಾಸರಿ ದರ ಪ್ರತಿ ಗ್ರಾಂಗೆ 12,458 ರೂಪಾಯಿಯಿಂದ 12,632 ರೂಪಾಯಿ ಆಸುಪಾಸಿನಲ್ಲಿದೆ. 2026 ಜನವರಿ ದಾಖಲೆಯ ಗರಿಷ್ಠ ಮಟ್ಟದಲ್ಲಿದ್ದ ಚಿನ್ನದ ಬೆಲೆ, ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳೆರಡರಲ್ಲೂ ಸದ್ಯ ಸುಮಾರು ಶೇ.30 ರಿಂದ ಶೇ.35ರಷ್ಟು ಕುಸಿದಿದೆ. ಚಿನ್ನದ ದರ ಇಳಿಕೆಯು ಖರೀದಿದಾರರು ಮತ್ತು ಹೂಡಿಕೆದಾರರಿಗೆ ಸಿಹಿಸುದ್ದಿಯಾಗಿದ್ದರೂ, ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಇದು ಆತಂಕ ತಂದೊಡ್ಡಿದೆ.

ಚಿನ್ನದ ಸಾಲಗಳಿಗೆ ಲೋನ್-ಟು-ವ್ಯಾಲ್ಯೂ (LTV) ಅನುಪಾತ

ಅಡವಿಟ್ಟ ಚಿನ್ನದ ಮಾರುಕಟ್ಟೆ ಮೌಲ್ಯವು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿರುವ 'ಲೋನ್-ಟು-ವ್ಯಾಲ್ಯೂ' (LTV) ಮಿತಿಗಿಂತ ಕೆಳಗೆ ಇಳಿದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಆರ್‌ಬಿಐ ನಿಯಮಗಳ ಪ್ರಕಾರ, ಚಿನ್ನದ ಸಾಲಗಳಿಗೆ ನಿಗದಿಪಡಿಸಲಾದ ಗರಿಷ್ಠ ಎಲ್‌ಟಿವಿ ಮಿತಿಗಳು ಹೀಗಿವೆ:

2.5 ಲಕ್ಷ ರೂಪಾಯಿವರೆಗಿನ ಸಾಲಕ್ಕೆ: ಗರಿಷ್ಠ ಶೇ.85ರವರೆಗೆ ಎಲ್‌ಟಿವಿ

2.5 ಲಕ್ಷ ರೂಪಾಯಿಗಿಂತ ಹೆಚ್ಚು ಮತ್ತು 5 ಲಕ್ಷ ರೂಪಾಯಿವರೆಗಿನ ಸಾಲಕ್ಕೆ: ಗರಿಷ್ಠ ಶೇ.80ರವರೆಗೆ ಎಲ್‌ಟಿವಿ

5 ಲಕ್ಷ ರೂಪಾಯಿಗಿಂತ ಹೆಚ್ಚಿನ ಸಾಲಕ್ಕೆ: ಗರಿಷ್ಠ ಶೇ.75ರವರೆಗೆ ಎಲ್‌ಟಿವಿ

ಅಡವಿಟ್ಟ ಚಿನ್ನದ ಮೌಲ್ಯವು ಭಾರೀ ಪ್ರಮಾಣದಲ್ಲಿ ಕುಸಿದಿರುವುದರಿಂದ ಸಾಲ ನೀಡಿದ ಸಂಸ್ಥೆಗಳು ತೀವ್ರ ಒತ್ತಡಕ್ಕೆ ಸಿಲುಕಲಿವೆ ಎಂದು ಶಿಮ್ಲಾ ಮೂಲದ ಸಾವಿತ್ರಿ ಜ್ಯುವೆಲ್ಲರ್ಸ್ ಮಾಲಕ ಸೌರಭ್ ಸೂದ್ ಎಎನ್‌ಐಗೆ ತಿಳಿಸಿದ್ದಾರೆ.

"ಚಿನ್ನದ ಮೇಲೆ ಸಾಲ ನೀಡುವ ಹಣಕಾಸು ಕಂಪನಿಗಳು ಮತ್ತು ಅಧಿಕೃತ ಆಭರಣ ವ್ಯಾಪಾರಿಗಳು ಭಾರೀ ನಷ್ಟ ಅನುಭವಿಸಲಿದ್ದಾರೆ. ಏಕೆಂದರೆ ಅವರು ಯಾವ ಆಸ್ತಿಯ (ಚಿನ್ನದ) ಮೇಲೆ ಸಾಲ ನೀಡಿದ್ದರೋ, ಅದರ ಮೌಲ್ಯ ಈಗ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ಅವರ ಸಾಲದ ವಹಿವಾಟುಗಳ ಮೇಲೂ ತೀವ್ರ ಒತ್ತಡ ಬೀಳಲಿದೆ" ಎಂದು ಅವರು ಹೇಳಿದ್ದಾರೆ.

ಸಾಲ ಮರುಪಾವತಿ ವಿಳಂಬ ಪ್ರಕರಣಗಳಲ್ಲಿ ಹೆಚ್ಚಳ

ಚಿನ್ನದ ಬೆಲೆ ಕುಸಿತದ ನಡುವೆಯೇ ಸಾಲ ಮರುಪಾವತಿ ತಪ್ಪಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಟ್ರಾನ್ಸ್‌ಯೂನಿಯನ್ ಸಿಬಿಲ್ (TransUnion CIBIL) ವರದಿಯ ಪ್ರಕಾರ, 2026 ಮಾರ್ಚ್ 31ರ ವೇಳೆಗೆ ಶೇ.0.16 ರಷ್ಟಿದ್ದ ಚಿನ್ನದ ಸಾಲದ ಎನ್‌ಪಿಎ (NPA), ಆಗಸ್ಟ್ ಅಂತ್ಯದ ವೇಳೆಗೆ ಶೇ.0.3ಕ್ಕೆ ಏರಿಕೆಯಾಗಿದೆ. ಒಂದಕ್ಕಿಂತ ಹೆಚ್ಚು ಚಿನ್ನದ ಸಾಲದ ಖಾತೆಗಳನ್ನು ಹೊಂದಿರುವ ಗ್ರಾಹಕರು ಕಂತು ಪಾವತಿಸುವಲ್ಲಿ ವಿಳಂಬ ಮಾಡುವ ಸಾಧ್ಯತೆ ಹೆಚ್ಚಿದೆ ಎಂದೂ ವರದಿ ತಿಳಿಸಿದೆ.

ಆರ್‌ಬಿಐ ನಿಯಮಗಳ ಪ್ರಕಾರ, ಚಿನ್ನದ ಸಾಲದ ಅಸಲು ಮತ್ತು/ಅಥವಾ ಬಡ್ಡಿಯ ಕಂತುಗಳು 90 ದಿನಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿದಿದ್ದರೆ, ಅಂತಹ ಖಾತೆಗಳನ್ನು ವಸೂಲಾಗದ ಸಾಲ (NPA) ಎಂದು ಪರಿಗಣಿಸಲಾಗುತ್ತದೆ.

ಚಿನ್ನ ಹರಾಜು ಪ್ರಕ್ರಿಯೆ ಹೆಚ್ಚಾಗುವ ಸಾಧ್ಯತೆ

ಕಳೆದ ಎರಡು ವರ್ಷಗಳಲ್ಲಿ ಕಂಡುಬರದ ರೀತಿಯಲ್ಲಿ, ದೀರ್ಘಾವಧಿಯವರೆಗೆ ಚಿನ್ನದ ದರ ಸ್ಥಿರಗೊಂಡ ನಂತರ ಈ ವರ್ಷ ಚಿನ್ನ ಹರಾಜು ಪ್ರಕ್ರಿಯೆಗಳಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಐಐಎಫ್‌ಎಲ್ ಫೈನಾನ್ಸ್‌ನ (IIFL Finance) ಸಾಲ ವಿಭಾಗದ ಅಧ್ಯಕ್ಷ ಮಯಾಂಕ್ ಶರ್ಮಾ ಹೇಳಿರುವುದಾಗಿ ಲೈವ್ ಮಿಂಟ್ ವರದಿ ಉಲ್ಲೇಖಿಸಿದೆ.

"ಪ್ರಸ್ತುತ ಚಿನ್ನದ ಬೆಲೆಯ ಹಿನ್ನೆಲೆಯಲ್ಲಿ, ಗ್ರಾಹಕರಿಂದ ಸಾಲ ವಸೂಲಾತಿ ಮತ್ತು ಬಡ್ಡಿ ಸಂಗ್ರಹಣೆಯ ಮೇಲೆ ಹೆಚ್ಚಿನ ಗಮನ ಹರಿಸಲಾಗುವುದು" ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ. ಬೆಲೆ ಇಳಿಕೆಯ ನಂತರ ಸಾಲ ನೀಡಿದ ಸಂಸ್ಥೆಗಳು ವಸೂಲಾತಿ ಕ್ರಮಗಳನ್ನು ಚುರುಕುಗೊಳಿಸಿರುವುದರಿಂದ, ಈ ವರ್ಷ ಇಡೀ ಉದ್ಯಮದಲ್ಲಿ ಚಿನ್ನ ಹರಾಜು ಹಾಕುವ ಪ್ರಕರಣಗಳು ಹೆಚ್ಚಾಗಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚಿನ್ನದ ಬೆಲೆ ಇಳಿಕೆಯ ನಂತರ ಸಾಲ ಮರುಪಾವತಿಯಲ್ಲಿ ಸವಾಲುಗಳು ಎದುರಾಗಿವೆ, ಆದರೆ ಹೊಸ ಸಾಲಗಳಿಗೆ ಬೇಡಿಕೆ ಉತ್ತಮವಾಗಿಯೇ ಇದೆ ಎಂದು ಫೆಡರೇಶನ್ ಆಫ್ ಗೋಲ್ಡ್ ಲೋನ್ ಕಂಪನೀಸ್‌ನ (FGLOC) ನಿಯೋಜಿತ ಸಿಇಒ ಪಿನಾಕಿ ನಾಥ್ ಬ್ಯಾನರ್ಜಿ ತಿಳಿಸಿದ್ದಾರೆ.

ಈ ಹಿಂದೆ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರಿಂದ ಅಡವಿಟ್ಟ ಚಿನ್ನದ ಮೌಲ್ಯ ಹೆಚ್ಚಾಗಿ ಸಾಲದ ಬೆಳವಣಿಗೆಗೆ ಪೂರಕವಾಗಿತ್ತು. ಈಗ ಬೆಲೆ ಇಳಿಕೆಯಾಗಿರುವುದರಿಂದ, ಉದ್ಯಮದಲ್ಲಿ ಮೊದಲಿನಷ್ಟೇ ಪ್ರಮಾಣದ ಬೆಳವಣಿಗೆ ಕಂಡುಬರುವ ಸಾಧ್ಯತೆ ಕಡಿಮೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆ: ಮಾರಾಟ ಹೆಚ್ಚಳ, ಆದರೆ ಆಭರಣ ವ್ಯಾಪಾರಿಗಳಲ್ಲಿ ಆತಂಕ:

ಕಳೆದ 15 ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಇಳಿಕೆಯಾಗಿರುವುದು ಆಭರಣ ಖರೀದಿದಾರರಿಗೆ, ವಿಶೇಷವಾಗಿ ಮದುವೆ ತಯಾರಿ ನಡೆಸುತ್ತಿರುವವರು ಮತ್ತು ಉಡುಗೊರೆ ನೀಡಲು ಖರೀದಿಸುವವರಿಗೆ ನೆಮ್ಮದಿ ತಂದಿದೆ. ಮತ್ತೊಂದೆಡೆ, ಸಂಭವನೀಯ ನಷ್ಟದ ಭೀತಿಯಿಂದ ಹೂಡಿಕೆದಾರರು ಮತ್ತು ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ.

ಬೆಲೆ ಇಳಿಕೆಯ ನಂತರ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಆಭರಣ ವ್ಯಾಪಾರಿಗಳು ತಿಳಿಸಿದ್ದರೂ, ವ್ಯಾಪಾರದ ಮೇಲಿನ ಇದರ ಪರಿಣಾಮ ಮತ್ತು ಮುಂದಿನ ದಿನಗಳಲ್ಲಿ ಬೆಲೆ ಏರಿಳಿತದ ಬಗ್ಗೆ ಉದ್ಯಮದ ಪ್ರತಿನಿಧಿಗಳಲ್ಲಿ ಭಿನ್ನಾಭಿಪ್ರಾಯಗಳಿವೆ.

ಈ ಬಗ್ಗೆ 'ದಿ ಹಿಂದೂ' ಜತೆ ಮಾತನಾಡಿದ ಬೆಂಗಳೂರು ಆಭರಣ ವ್ಯಾಪಾರಿಗಳ ಸಂಘದ ಗೌರವ ಕಾರ್ಯದರ್ಶಿ ಶ್ರೀನಿವಾಸ್ ಆರ್. ಚಿನ್ನದ ಬೆಲೆ ಸುಮಾರು ಶೇ.34ರಷ್ಟು ಮತ್ತು ಬೆಳ್ಳಿ ಬೆಲೆ ಸುಮಾರು ಶೇ.60ರಷ್ಟು ಕುಸಿದಿದ್ದು, ಇದು ಮಾರುಕಟ್ಟೆಯ ವಿವಿಧ ವರ್ಗಗಳಿಗೆ ಅವಕಾಶ ಮತ್ತು ಸವಾಲುಗಳೆರಡನ್ನೂ ಸೃಷ್ಟಿಸಿದೆ ಎಂದಿದ್ದಾರೆ.

ಪ್ರಸ್ತುತ ಪರಿಸ್ಥಿತಿಯನ್ನು ಎರಡು ರೀತಿಯಲ್ಲಿ ವಿಶ್ಲೇಷಿಸಬಹುದು. ಮದುವೆಗಾಗಿ ಅಥವಾ ಪ್ರೀತಿಪಾತ್ರರಿಗೆ ಉಡುಗೊರೆ ನೀಡಲು ಚಿನ್ನ ಮತ್ತು ಬೆಳ್ಳಿ ಖರೀದಿಸಲು ಬಯಸುವವರಿಗೆ ಇದು ಉತ್ತಮ ಸಮಯ. ಆದರೆ, ಉತ್ತಮ ಲಾಭದ ನಿರೀಕ್ಷೆಯಲ್ಲಿ ಈ ಹಿಂದೆಯೇ ಚಿನ್ನ, ಬೆಳ್ಳಿ ಖರೀದಿಸಿದ್ದ ಹೂಡಿಕೆದಾರರಿಗೆ ಇದು ಖಂಡಿತವಾಗಿಯೂ ಒಳ್ಳೆಯ ಸಮಯವಲ್ಲ. ಅವರು ಇನ್ನೂ ಎರಡು ತಿಂಗಳು ಕಾಯಬೇಕಾಗಬಹುದು. ನನ್ನ ಅಂದಾಜಿನ ಪ್ರಕಾರ, ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು 11,500 ರೂಪಾಯಿವರೆಗೆ ಇನ್ನಷ್ಟು ಇಳಿಕೆಯಾಗಬಹುದು ಎಂದು ಅವರು ಹೇಳಿದ್ದಾರೆ.

ಕಡಿಮೆ ಬೆಲೆಯ ಲಾಭ ಪಡೆಯಲು ಗ್ರಾಹಕರು ಮುಂದಾಗಿರುವುದರಿಂದ, ಕಳೆದ 15 ದಿನಗಳಲ್ಲಿ ಆಭರಣ ಮಳಿಗೆಗಳಲ್ಲಿ ಮಾರಾಟ ಹೆಚ್ಚಾಗಿದೆ ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಸಂಸ್ಥಾಪಕ ಮತ್ತು ಮಾಲಕ ಟಿ.ಎ. ಶರವಣ ತಿಳಿಸಿದ್ದಾರೆ.

"ಚಿನ್ನದ ಬೆಲೆ ಪ್ರತಿ ಗ್ರಾಂಗೆ 18,000 ರೂಪಾಯಿಗೆ ಏರಿ, ಕೇವಲ 10 ತಿಂಗಳೊಳಗೆ ಸುಮಾರು 12,000 ರೂಪಾಯಿಗೆ ಇಳಿದಿರುವುದು ಇತಿಹಾಸದಲ್ಲೇ ಇದೇ ಮೊದಲು. ಬೆಳ್ಳಿ ಬೆಲೆಯಲ್ಲೂ ಇದೇ ರೀತಿಯ ಏರಿಳಿತ ಕಂಡುಬಂದಿದೆ" ಎಂದು ಅವರು ಹೇಳಿದ್ದಾರೆ.

ಆದರೆ, ಈ ಬೆಲೆ ಇಳಿಕೆಯು ಹೊಸದಾಗಿ ಆರಂಭವಾದ ಆಭರಣ ಮಳಿಗೆಗಳ ಮೇಲೆ, ವಿಶೇಷವಾಗಿ ಬ್ಯಾಂಕ್ ಮತ್ತು ಖಾಸಗಿ ಹಣಕಾಸುದಾರರಿಂದ ಸಾಲ ಪಡೆದು ಅಂಗಡಿ ತೆರೆದು, ಚಿನ್ನ ಖರೀದಿಸಿದ್ದವರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದ್ದಾರೆ.

"ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಹಳೆಯ ಮಳಿಗೆಗಳು ಈ ನಷ್ಟವನ್ನು ತಡೆದುಕೊಳ್ಳುವ ಅಥವಾ ಸರಿದೂಗಿಸುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ ಹೊಸದಾಗಿ ತೆರೆದ ಅಂಗಡಿಗಳಿಗೆ ಸಂಕಷ್ಟ ಎದುರಾಗಬಹುದು. ನೌಕರರ ಸಂಬಳ, ವಿದ್ಯುತ್ ಬಿಲ್ ಮತ್ತು ಇತರ ನಿರ್ವಹಣಾ ವೆಚ್ಚಗಳನ್ನು ಲೆಕ್ಕಹಾಕಿದರೆ, ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಗಳಿಗೆ ಸುಮಾರು ಶೇ.25ರಷ್ಟು ನಷ್ಟವಾಗುವ ಸಾಧ್ಯತೆಯಿದೆ ಎಂಬುದು ನನ್ನ ಅಂದಾಜು" ಎಂದು ಅವರು ವಿವರಿಸಿದ್ದಾರೆ.

ನಷ್ಟದ ಈ ಅಂದಾಜನ್ನು ಒಪ್ಪದ ಕರ್ನಾಟಕ ರಾಜ್ಯ ಆಭರಣ ವ್ಯಾಪಾರಿಗಳ ಒಕ್ಕೂಟದ (KSJW) ಅಧ್ಯಕ್ಷ ಬಿ. ರಾಮಾಚಾರಿ, ಬೆಲೆ ಇಳಿಕೆಯಿಂದ ಬಹುತೇಕ ಆಭರಣ ವ್ಯಾಪಾರಿಗಳಿಗೆ ನಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.

ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಹಲವು ವ್ಯಾಪಾರಿಗಳು ಕಡಿಮೆ ಬೆಲೆಗೆ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಿ, ಪ್ರತಿ ಗ್ರಾಂಗೆ 15,000 ರಿಂದ 18,000 ರೂಪಾಯಿವರೆಗೆ ದರ ಏರಿಕೆಯಾದಾಗ ಗ್ರಾಹಕರಿಗೆ ಮಾರಾಟ ಮಾಡಿದ್ದಾರೆ. ಆ ಅವಧಿಯಲ್ಲಿ ಗಳಿಸಿದ ಲಾಭವು ಈಗಿನ ಬೆಲೆ ಇಳಿಕೆಯಿಂದ ಆಗುವ ನಷ್ಟವನ್ನು ಸರಿದೂಗಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಯೋಜಿಸುತ್ತಿರುವವರು, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಪರಿಶೀಲಿಸುವ ಡಿಸೆಂಬರ್ 9ರವರೆಗೆ ಕಾಯುವಂತೆ ರಾಮಾಚಾರಿ ಸಲಹೆ ನೀಡಿದ್ದಾರೆ.

"ಬಡ್ಡಿದರಗಳನ್ನು ಹೆಚ್ಚಿಸಲಾಗುತ್ತದೆಯೇ ಅಥವಾ ಕಡಿಮೆ ಮಾಡಲಾಗುತ್ತದೆಯೇ ಎಂಬುದರ ಆಧಾರದ ಮೇಲೆ ಚಿನ್ನ ಮತ್ತು ಬೆಳ್ಳಿಯ ಹೂಡಿಕೆಯ ಸ್ವರೂಪ ಬದಲಾಗಬಹುದು. ಇದು ಬೇಡಿಕೆ ಮತ್ತು ಬೆಲೆಗಳ ಮೇಲೆ ಪ್ರಭಾವ ಬೀರಲಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿನ ಬದಲಾವಣೆಗಳೊಂದಿಗೆ ಡಿಸೆಂಬರ್ ಮಧ್ಯಭಾಗದ ವೇಳೆಗೆ ಬೆಲೆಗಳು ಮತ್ತೆ ಏರಿಕೆಯಾಗುವ ನಿರೀಕ್ಷೆಯಿದೆ" ಎಂದು ಅವರು ಹೇಳಿದ್ದಾರೆ.

ಚಿನ್ನದ ಸಾಲಗಳ ಮೇಲೆ ಹೆಚ್ಚಿನ ಪರಿಣಾಮವಿಲ್ಲ

ಈ ನಡುವೆ, ಚಿನ್ನದ ಬೆಲೆ ಇಳಿಕೆಯು ಈಗಾಗಲೇ ಚಿನ್ನದ ಸಾಲ ಪಡೆದಿರುವ ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಆಕ್ಸಿಸ್ ಬ್ಯಾಂಕ್‌ನ ಕಾನೂನು ವಿಭಾಗದ ಮಾಜಿ ಅಧ್ಯಕ್ಷ ಮತ್ತು ಮುಖ್ಯಸ್ಥ ಗೋಪಾಲ ಕೃಷ್ಣನ್ ಹೇಳಿರುವುದಾಗಿ ದಿ ಹಿಂದೂ ವರದಿ ಉಲ್ಲೇಖಿಸಿದೆ.

ಚಿನ್ನದ ಬೆಲೆಯಲ್ಲಿ ಏರಿಳಿತವಾಗುವುದು ಮಾರುಕಟ್ಟೆಯ ಸಾಮಾನ್ಯ ಲಕ್ಷಣವಾಗಿದ್ದು, ಆಭರಣಗಳನ್ನು ಅಡವಿಟ್ಟು ಸಾಲ ನೀಡುವಾಗ ಬ್ಯಾಂಕ್‌ಗಳು ಇಂತಹ ಏರಿಳಿತಗಳನ್ನು ಮೊದಲೇ ಗಮನದಲ್ಲಿಟ್ಟುಕೊಂಡಿರುತ್ತವೆ ಎಂದು ಅವರು ಹೇಳಿದ್ದಾರೆ.

"ಚಿನ್ನದ ದರ ಏರಿಳಿತವಾಗುತ್ತಲೇ ಇರುವುದರಿಂದ ಸಾಲಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವುದಿಲ್ಲ. ಅಡವಿಟ್ಟ ಚಿನ್ನದ ಮೌಲ್ಯ ತೀವ್ರವಾಗಿ ಕುಸಿದರೆ, ಬಾಕಿ ಮೊತ್ತವನ್ನು ಪಾವತಿಸುವಂತೆ ಅಥವಾ ಹೆಚ್ಚುವರಿ ಚಿನ್ನವನ್ನು ಅಡವಿಡುವಂತೆ ಬ್ಯಾಂಕ್‌ಗಳು ಅಥವಾ ಖಾಸಗಿ ಹಣಕಾಸು ಸಂಸ್ಥೆಗಳು ಕೇಳಬಹುದು. ಆದರೆ, ಈ ಹಿಂದೆ ಚಿನ್ನದ ಬೆಲೆ ಇಳಿಕೆಯಾದ ಸಂದರ್ಭಗಳಲ್ಲೂ ಬ್ಯಾಂಕ್‌ಗಳು ಗ್ರಾಹಕರಿಗೆ ಇಂತಹ ಯಾವುದೇ ನೋಟಿಸ್ ನೀಡಿರಲಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

ರಶ್ಮಿ ಕಾಸರಗೋಡು ಅವರು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ 17 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರು. ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿ ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿದ್ದಾರೆ. ಇಮೇಲ್ id :kasaragod10rashmi@gmail.com