ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು ತರಲು ಕೇಂದ್ರ ಸರಕಾರ ಚಿಂತನೆ
ಮಕ್ಕಳಿಗೆ ವಯೋಮಾನ ಆಧರಿತ ಡಿಜಿಟಲ್ ವೇದಿಕೆ
ಸಾಂದರ್ಭಿಕ ಚಿತ್ರ | Photo Credit : freepik
ಪ್ರಸ್ತಾಪಿತ ಕ್ರಮಗಳಲ್ಲಿ ಮೂರು ವಯೋಮಾನದ ಗುಂಪನ್ನು ಪ್ರತ್ಯೇಕವಾಗಿಸಿ ಕಾನೂನು ತರುವ ಉದ್ದೇಶವೂ ಸೇರಿದೆ
ಭಾರತ ಸರ್ಕಾರವು ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನು ತರುವುದನ್ನು ಪರಿಗಣಿಸುತ್ತಿದೆ. ಸಂಪೂರ್ಣ ನಿಷೇಧದ ಬದಲಾಗಿ ವಯಸ್ಸು ಆಧರಿತ ನಿರ್ಬಂಧಗಳ ಮೇಲೆ ಗಮನ ಕೇಂದ್ರೀಕರಿಸಲು ನಿರ್ಧರಿಸಿದೆ. ಪ್ರಸ್ತಾಪಿತ ಕ್ರಮಗಳಲ್ಲಿ ಮೂರು ವಯೋಮಾನದ ಗುಂಪನ್ನು ಪ್ರತ್ಯೇಕವಾಗಿಸಿ ಕಾನೂನು ತರುವ ಉದ್ದೇಶವೂ ಸೇರಿದೆ. 8-12 ವರ್ಷ ವಯಸ್ಸು, 12-16 ವರ್ಷ ವಯಸ್ಸು ಮತ್ತು 16-18 ವರ್ಷ ವಯಸ್ಸಿನವರಿಗೆ ಪ್ರತ್ಯೇಕ ಕಾನೂನು ತರಲಾಗುತ್ತದೆ. ಕಠಿಣ ನಿಷೇಧಗಳನ್ನು ವಿಧಿಸದೆ ಸುರಕ್ಷತೆಯನ್ನು ಖಚಿತಪಡಿಸುವ ಗುರಿಯಿಂದ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಮಯ ಆಧಾರಿತ ನಿಯಮ
ಐಟಿ ಸಚಿವಾಲಯವು ಚೀನಾದ ಒಂದು ಗಂಟೆಯ ಗೇಮಿಂಗ್ ನಿಯಮದ ರೀತಿಯಲ್ಲಿಯೇ ಸ್ಥಿರವಾದ ಬಳಕೆಯ ಸಮಯ ಮತ್ತು ದೈನಂದಿನ ಸಮಯದ ಮಿತಿಗಳಂತಹ ಆಯ್ಕೆಗಳನ್ನು ಪರಿಗಣಿಸುತ್ತಿದೆ. ಸಂಜೆ ಮತ್ತು ರಾತ್ರಿಗಳಲ್ಲಿ ಲಾಗಿನ್ ಆಗುವುದನ್ನು ನಿರ್ಬಂಧಿಸುವುದು ಮತ್ತು ಇಂಟರ್ನೆಟ್ ಪ್ರವೇಶಕ್ಕೆ ಪೋಷಕರ ಒಪ್ಪಿಗೆ ಅಗತ್ಯಗೊಳಿಸುವುದು ಒಳಗೊಂಡಿರಬಹುದು.
ಮಕ್ಕಳ ಸುರಕ್ಷೆಗಾಗಿ ಜಾಗತಿಕವಾಗಿ ಒತ್ತು
ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸ್ಟ್ರೇಲಿಯ, ಇಂಡೋನೇಷ್ಯಾ, ಫ್ರಾನ್ಸ್ ಮತ್ತು ಸ್ಪೇನ್ಗಳಂತಹ ದೇಶಗಳು ನಿರ್ದಿಷ್ಟ ವಯೋಮಾನದ ಮಕ್ಕಳಿಗೆ ನಿಷೇಧಗಳನ್ನು ಪರಿಚಯಿಸಿವೆ ಮತ್ತು ಪ್ರಸ್ತಾಪಿಸಿವೆ. ಹಾನಿಕರ ಡಿಜಿಟಲ್ ಮಾನ್ಯತೆಯಿಂದ ಮಕ್ಕಳನ್ನು ರಕ್ಷಿಸುವ ಜಾಗತಿಕ ಪ್ರಯತ್ನಗಳಿಗೆ ಭಾರತ ಕೈಜೋಡಿಸಬೇಕೆಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಇತ್ತೀಚೆಗೆ ಒತ್ತಾಯಿಸಿದ್ದಾರೆ.
ರಾಜ್ಯ ಮಟ್ಟದ ನಿಷೇಧದ ಕಳವಳ
ಆಂಧ್ರಪ್ರದೇಶ ಮತ್ತು ಕರ್ನಾಟಕದಂತಹ ರಾಜ್ಯಗಳು ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಯ ಕುರಿತಾಗಿ ಕಠಿಣ ಕ್ರಮಗಳನ್ನು ಘೋಷಿಸಿವೆ. ಆಂಧ್ರಪ್ರದೇಶ 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಾಮಾಜಿಕ ಜಾಲತಾಣ ನಿಷೇಧಿಸಿದ್ದರೆ, ಕರ್ನಾಟಕ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ನಿಷೇಧ ಹೇರಿದೆ. ಆದರೆ ಹೀಗೆ ರಾಜ್ಯಮಟ್ಟದ ನಿಯಮಗಳು ಅಸಮಂಜಸವಾಗಿ ಜಾರಿಗೆ ಬರುತ್ತಿರುವ ಬಗ್ಗೆ ತಂತ್ರಜ್ಞಾನ ಕಂಪನಿಗಳು ಎಚ್ಚರಿಸಿವೆ. ಕಾರ್ಯನಿರ್ವಹಣೆಯ ಸಮಸ್ಯೆ ತಪ್ಪಿಸಲು ಕೇಂದ್ರೀಯ ಮಟ್ಟದಲ್ಲಿ ಏಕರೂಪದ ಕಾನೂನು ಬೇಕು ಎಂದು ತಂತ್ರಜ್ಞಾನ ಕಂಪನಿಗಳು ಒತ್ತಡ ಹೇರಿವೆ.
ಸಂಪೂರ್ಣ ನಿಷೇಧದ ಅಪಾಯ
ಡಿಜಿಟಲ್ ಹಕ್ಕುಗಳಿಗೆ ಸಂಬಂಧಿಸಿದ ಸಮೂಹಗಳಾಗಿರುವ ಇಂಟರ್ನೆಟ್ ಫ್ರೀಡಂ ಫೌಂಡೇಶನ್ (ಐಎಫ್ಎಫ್) ಹೀಗೆ ಸಂಪೂರ್ಣ ನಿಷೇಧ ಹೇರುವುದರಿಂದ ಡಿಜಿಟಲ್ ಲಿಂಗ ವಿಭಜನೆ ಇನ್ನಷ್ಟು ಹೆಚ್ಚಾಗಬಹುದು ಎಂದು ಎಚ್ಚರಿಸಿದೆ. ಭಾರತದಲ್ಲಿ ಬಾಲಕಿಯರು ಈಗಾಗಲೇ ಆನ್ಲೈನ್ ಬಳಕೆಯ ಮಿತಿ ಎದುರಿಸುತ್ತಿದ್ದಾರೆ. ಬಾಲಕಿಯರಿಗೆ ಸಂಪೂರ್ಣವಾಗಿ ಡಿಜಿಟಲ್ ಪ್ರವೇಶವನ್ನು ನಿರಾಕರಿಸಲು ಅಂತಹ ಕಾನೂನನ್ನು ಹೆತ್ತವರು ಬಳಸಿಕೊಳ್ಳುವ ಸಾಧ್ಯತೆಯಿರುತ್ತದೆ. ಇಂತಹ ನಿರ್ಬಂಧಗಳು ವೇದಿಕೆಗಳ ದೋಷವನ್ನು ಮತ್ತು ಜವಾಬ್ದಾರಿಯನ್ನು ನಗಣ್ಯಗೊಳಿಸುತ್ತದೆ. ಡೇಟಾ ರಕ್ಷಣೆ ಕುರಿತಾದ ಕಳವಳವನ್ನು ಪರಿಹರಿಸುವುದಿಲ್ಲ. ಡಿಜಿಟಲ್ ಸಾಕ್ಷರತೆಯ ಮೂಲಸೌಕರ್ಯ ಇನ್ನಷ್ಟು ಕಳಪೆಯಾಗಿಬಿಡಬಹುದು.
ಆರ್ಥಿಕ ಸಮೀಕ್ಷೆಯ ಶಿಫಾರಸುಗಳು
ಭಾರತದಲ್ಲಿ 2025-26ರ ಆರ್ಥಿಕ ಸಮೀಕ್ಷೆಯು ಮಕ್ಕಳಲ್ಲಿ ಡಿಜಿಟಲ್ ವ್ಯಸನದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸರಳ ಸಾಧನಗಳನ್ನು (ಕರೆ ಮಾತ್ರವಿರುವ ಫೋನ್ಗಳು, ಶಿಕ್ಷಣ ಮಾತ್ರವಿರುವ ಟ್ಯಾಬ್ಲೆಟ್ಗಳು) ಪ್ರಚಾರ ಮಾಡುವುದು, ಬಳಕೆಯ ಮಿತಿಗಳನ್ನು ಜಾರಿಗೊಳಿಸುವುದು ಮತ್ತು ಹಾನಿಕಾರಕ ಕಂಟೆಂಟ್ಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ಕಂಟೆಂಟ್ ಫಿಲ್ಟರ್ಗಳನ್ನು ಅನ್ವಯಿಸುವುದನ್ನು ಶಿಫಾರಸು ಮಾಡಿದೆ.
ಸುರಕ್ಷೆ ಮತ್ತು ಪ್ರವೇಶ ಎರಡರ ನಡುವಿನ ಸಮತೋಲನ
ಮೊದಲನೆಯದಾಗಿ ಪ್ರಜೆಗಳಿಗೆ ಸುರಕ್ಷೆಯಾಗಿರುವಂತೆ ಡಿಜಿಟಲ್ ವ್ಯವಸ್ಥೆ ಅಭಿವೃದ್ಧಿಯಾಗಬೇಕು ಎಂದು ಸರ್ಕಾರಿ ಅಧಿಕಾರಿಗಳು ಒತ್ತಡ ಹೇರಿದ್ದಾರೆ. ಸಂಪೂರ್ಣ ನಿಷೇಧದಿಂದ ಮಕ್ಕಳು ಸುರಕ್ಷಿತವಲ್ಲದ ಮತ್ತು ಅನಿಯಂತ್ರಿತ ವೇದಿಕೆಗಳನ್ನು ಬಳಸಿಕೊಳ್ಳುವ ಸಾಧ್ಯತೆಯಿರುತ್ತದೆ. ಕೇಂದ್ರದ ಕಾನೂನು ರಕ್ಷಣೆ ಮತ್ತು ಪ್ರವೇಶದ ನಡುವೆ ಸಮತೋಲನ ಕಾಯ್ದುಕೊಳ್ಳಲು ಬಯಸಿದೆ. ಮಾನಸಿಕ ಆರೋಗ್ಯ ವಿಷಯಗಳು ಮತ್ತು ಹಾನಿಕರ ಕಂಟೆಂಟ್ಗೆ ಒಡ್ಡಿಕೊಳ್ಳುವ ಅಪಾಯವನ್ನು ತಡೆಯುವ ಜೊತೆಗೆ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ.
ಕೃಪೆ: indianexpress.com