×
Ad

ಇರಾನ್ ಸಂಘರ್ಷ | ಹಳಿ ತಪ್ಪಲಿದೆ ಗುಜರಾತ್‌ ನ ವಜ್ರ ಮತ್ತು ಸೆರಾಮಿಕ್ ಉದ್ಯಮ!

Update: 2026-03-08 19:46 IST

ಸಾಂದರ್ಭಿಕ ಚಿತ್ರ | Photo Credit : freepik

ಭಾರತದ ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ಕೇಂದ್ರ ಸ್ಥಳವಾಗಿರುವ ಗುಜರಾತ್ ಹಾಗೂ ಸೆರಾಮಿಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮೊರ್ಬಿ ಮೇಲೆ ಯುದ್ಧದ ಕರಿನೆರಳು ಹರಡಿದೆ.

ಅಮೆರಿಕ–ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ನಡೆಸುತ್ತಿರುವ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಗುಜರಾತ್‌ ನ ರಫ್ತು ಚಾಲಿತ ಕೈಗಾರಿಕೆಗಳ ಮೇಲೆ ಹೊಡೆತ ನೀಡುತ್ತಿದೆ. ಮುಖ್ಯವಾಗಿ ವಜ್ರಗಳು ಮತ್ತು ಪಿಂಗಾಣಿ ವಸ್ತುಗಳ ರಫ್ತಿನ ಮೇಲೆ ಕರಿನೆರಳು ಬಿದ್ದಿದೆ. ಅಮೆರಿಕದ ತೀವ್ರ ಸುಂಕಗಳಿಂದ ಉಂಟಾಗಿದ್ದ ತಿಂಗಳುಗಟ್ಟಲೆ ಆರ್ಥಿಕ ಒತ್ತಡದಿಂದ ರಾಜ್ಯದ ವ್ಯವಹಾರಗಳು ಚೇತರಿಸಿಕೊಳ್ಳಲು ಪ್ರಾರಂಭಿಸುತ್ತಿದ್ದಂತೆಯೇ, ಜಾಗತಿಕ ವ್ಯಾಪಾರ ಮಾರ್ಗಗಳು ಮತ್ತು ಇಂಧನ ಪೂರೈಕೆಗಳಲ್ಲಿ ಹೊಸ ಅಡಚಣೆಗಳು ಹುಟ್ಟಿಕೊಂಡಿವೆ.

ಭಾರತದ ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ಕೇಂದ್ರ ಸ್ಥಳವಾಗಿರುವ ಗುಜರಾತ್ ಹಾಗೂ ಸೆರಾಮಿಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮೊರ್ಬಿ ಮೇಲೆ ಯುದ್ಧದ ಕರಿನೆರಳು ಹರಡಿದೆ. ಯುದ್ಧವು ರಫ್ತಿಗೆ ಮಾತ್ರವಲ್ಲದೆ ಉದ್ಯೋಗ ಮತ್ತು ಈ ವಲಯದಲ್ಲಿನ ದೀರ್ಘಕಾಲೀನ ಸ್ಥಿರತೆಗೋ ಬೆದರಿಕೆ ಉಂಟುಮಾಡಿದೆ.

ಭಾರತವು ಜಾಗತಿಕವಾಗಿ ಪ್ರತಿ 10 ವಜ್ರಗಳಲ್ಲಿನ ಸರಿಸುಮಾರು 9 ವಜ್ರಗಳನ್ನು ಕತ್ತರಿಸಿ ಹೊಳಪು ಮಾಡುತ್ತದೆ. ಆದರೆ ಕಚ್ಚಾ ವಸ್ತುಗಳು ಮತ್ತು ಮಾರುಕಟ್ಟೆಗಾಗಿ ದುಬೈ ಮತ್ತು ಇಸ್ರೇಲ್‌ನಂತಹ ಬಾಹ್ಯ ಕೇಂದ್ರಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಏನಿದು ವಜ್ರ ಉದ್ಯಮದ ಬಿಕ್ಕಟ್ಟು?

ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವಿನ ಉಲ್ಬಣಗೊಳ್ಳುತ್ತಿರುವ ಯುದ್ಧವು ಗುಜರಾತ್‌ ನ ವಜ್ರ ವ್ಯಾಪಾರವನ್ನು ತೀವ್ರವಾಗಿ ಬಾಧಿಸಿದೆ. ಭಾರತವು ವಿಶ್ವದ ಸುಮಾರು ಶೇ 90ರಷ್ಟು ವಜ್ರಗಳನ್ನು ಕತ್ತರಿಸಿ ಹೊಳಪು ಮಾಡುತ್ತದೆ. ಸೂರತ್‌ ನ ರಫ್ತು ವ್ಯವಹಾರ ಶೇ 70ರಷ್ಟು ದುಬೈ ಮೂಲಕ ಸಾಗುತ್ತದೆ. ಯುಎಇ ವಾಯುಪ್ರದೇಶದ ಅಡಚಣೆಗಳಿಂದಾಗಿ ದುಬೈನಿಂದ ದೈನಂದಿನ 400–500 ಪಾರ್ಸೆಲ್‌ಗಳ ಬದಲಾಗಿ 200–300 ಪಾರ್ಸೆಲ್‌ಗಳಿಗೆ ಆಮದು ಕುಸಿದಿದೆ.

ದೀರ್ಘಕಾಲ ಅಸ್ಥಿರತೆ ಮುಂದುವರಿದರೆ ಕಾರ್ಯನಿರ್ವಹಣಾ ವೆಚ್ಚಗಳು ಏರಬಹುದು. ಉತ್ಪಾದನಾ ವೇಳಾಪಟ್ಟಿ ವಿಳಂಬವಾಗಬಹುದು ಮತ್ತು ಹಣಕಾಸಿನ ಮೇಲೆ ಒತ್ತಡ ಹೆಚ್ಚಬಹುದು. ಸಣ್ಣ ಮತ್ತು ಮಧ್ಯಮ ಕಂಪನಿಗಳು ಈಗಾಗಲೇ ಬಂಡವಾಳದ ಸಮಸ್ಯೆಯನ್ನು ಎದುರಿಸುತ್ತಿವೆ. ಅವಲಂಬನೆಯ ಪ್ರಮಾಣ ಎಷ್ಟಿದೆಯೆಂದರೆ, 2024–25ರಲ್ಲಿ ಇಸ್ರೇಲ್‌ ಗೆ ಮಾತ್ರ 548.27 ದಶಲಕ್ಷ ಡಾಲರ್ ಮೌಲ್ಯದ ರಫ್ತು ಮಾಡಲಾಗಿದೆ. ಆದರೆ ಆಮದು 259 ದಶಲಕ್ಷ ಡಾಲರ್ ಆಗಿತ್ತು.

ಗಲ್ಫ್ ಮಾರುಕಟ್ಟೆಗಳೊಂದಿಗೆ ಸಂಬಂಧ

ಜಾಗತಿಕ ವ್ಯಾಪಾರ ಕೇಂದ್ರ ಮತ್ತು ಬೆಳ್ಳಿ ಕಾರಿಡಾರ್ ಆಗಿರುವ ದುಬೈನಲ್ಲಿ ಯುದ್ಧ ಭೀತಿಯು ಮಾರುಕಟ್ಟೆಯಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ. 2024–25ರಲ್ಲಿ ಭಾರತದಿಂದ ದುಬೈಗೆ ರತ್ನ ಮತ್ತು ಆಭರಣಗಳ ರಫ್ತು 7,868.16 ದಶಲಕ್ಷ ಡಾಲರ್ ಮೌಲ್ಯದಷ್ಟಿತ್ತು. ಆದರೆ ಆಮದು 11,000.51 ದಶಲಕ್ಷ ಡಾಲರ್ ಮೌಲ್ಯದಷ್ಟಿತ್ತು.

ಗಲ್ಫ್ ಪ್ರದೇಶವು ನೇರವಾಗಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ದೊಡ್ಡ ಭಾರತೀಯ ವಲಸೆಗಾರ ಸಮುದಾಯವನ್ನು ಹೊಂದಿದೆ. ದುಬೈನಲ್ಲಿ ಇಂಡಿಯಾ ಜ್ಯುವೆಲ್ಲರಿ ಎಕ್ಸ್ಪೋಸಿಷನ್ ಸೆಂಟರ್ ಮತ್ತು ಸೌದಿ ಅರೇಬಿಯಾದ ಜ್ಯುವೆಲ್ಲರಿ ಎಕ್ಸ್ಪೊಸಿಷನ್‌ ಗಳಂತಹ ದೀರ್ಘಕಾಲೀನ ಹೂಡಿಕೆಗಳಿವೆ.

ಯಾವುದೇ ದೀರ್ಘಕಾಲೀನ ಉದ್ಯಮ ಅಸ್ಥಿರತೆಯು ಸರಕುಗಳ ಚಲನೆ ಮತ್ತು ಒಟ್ಟು ಮಾರುಕಟ್ಟೆಯ ಚಲನಶೀಲತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಉದ್ಯಮ ತಜ್ಞರು ಎಚ್ಚರಿಸಿದ್ದಾರೆ.

ಸೆರಾಮಿಕ್ ಉದ್ಯಮಕ್ಕೆ ಇಂಧನದ ಕೊರತೆ

ವಜ್ರ ಉದ್ಯಮ ಲಾಜಿಸ್ಟಿಕ್ಸ್ ಸಮಸ್ಯೆಯಲ್ಲಿ ಹೆಣಗಾಡುತ್ತಿದ್ದರೆ, ಗುಜರಾತ್‌ ನ ಸೆರಾಮಿಕ್ ಉದ್ಯಮವು ಹಾರ್ಮುಜ್ ಜಲಸಂಧಿಯಿಂದ ಇಂಧನ ಪೂರೈಕೆಯಲ್ಲಿನ ಅಡಚಣೆಗಳಿಂದಾಗಿ ಅಸ್ತಿತ್ವದ ಸವಾಲುಗಳನ್ನು ಎದುರಿಸುತ್ತಿದೆ. ವಾರ್ಷಿಕ 50,000 ಕೋಟಿ ರೂ. ವಹಿವಾಟು ಮತ್ತು 3,50,000 ಕಾರ್ಮಿಕರನ್ನು ಹೊಂದಿರುವ ಈ ವಲಯವು ಹೆಚ್ಚಾಗಿ ಎಲ್‌ಪಿಜಿ ಮತ್ತು ಪೆಟ್ರೋಲಿಯಂ ಅನ್ನು ಅವಲಂಬಿಸಿದೆ.

ಸೆರಾಮಿಕ್ ಟೈಲ್ ಉತ್ಪಾದನೆ ಶಕ್ತಿ–ತೀವ್ರವಾಗಿದ್ದು, ಸುಣ್ಣದ ಗೂಡುಗಳು ನಿರಂತರವಾಗಿ 1,000–1,200°C ಉಷ್ಣತೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಇಂಧನ ವೆಚ್ಚಗಳು ಉತ್ಪಾದನಾ ವೆಚ್ಚದ ಶೇ 30–40ರಷ್ಟಿದೆ. ಕೆಲವು ದಿನಗಳವರೆಗೆ ಮಾತ್ರ ಇಂಧನ ಮೀಸಲು ಉಳಿದಿರುತ್ತದೆ.

ಸರ್ಕಾರ ಇಂಧನ ಕೊರತೆಯ ಕಾರಣದಿಂದ ಕೈಗಾರಿಕಾ ಪೂರೈಕೆಗೆ ಬದಲಾಗಿ ದೇಸಿ ಬಳಕೆಗೆ ಆದ್ಯತೆ ನೀಡಿದರೆ ಸುಮಾರು 500 ಘಟಕಗಳು ಸ್ಥಗಿತಗೊಳ್ಳಬಹುದು ಎಂದು ಉದ್ಯಮ ಪ್ರತಿನಿಧಿಗಳು ಎಚ್ಚರಿಸಿದ್ದಾರೆ.

ವಜ್ರ ಉದ್ಯಮದಲ್ಲಿನ ಲಾಜಿಸ್ಟಿಕ್ ಅಡಚಣೆಗಳು ಮತ್ತು ಸೆರಾಮಿಕ್ ಉದ್ಯಮದ ಇಂಧನ ಕೊರತೆ ಎಂಬ ಎರಡು ಹೊಡೆತಗಳು ಒಂದೇ ವೇಳೆ ಬಿದ್ದರೆ ಗುಜರಾತ್‌ನ ಅರ್ಥವ್ಯವಸ್ಥೆಗೆ ಗಂಭೀರ ಧಕ್ಕೆಯಾಗಲಿದೆ. ರಫ್ತು ಎರಡೂ ಕೈಗಾರಿಕೆಗಳ ಕೇಂದ್ರವಾಗಿರುವ ಕಾರಣದಿಂದ ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲೀನ ಅಸ್ಥಿರತೆಯು ಉದ್ಯಮದ ಬೆಳವಣಿಗೆ, ಉದ್ಯೋಗ ಹಾಗೂ ಭಾರತದ ಜಾಗತಿಕ ವ್ಯಾಪಾರದ ಸ್ಥಿತಿಯನ್ನೂ ಹಳಿ ತಪ್ಪಿಸಬಹುದು.

ಕೃಪೆ: indiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News