ಸ್ಟೀಲ್ ಬಾಟಲಿಯಲ್ಲಿ ಲೋಹದ ರುಚಿಯೆ? ಬಾಟಲಿ ಬದಲಿಸುವ ಸಮಯ ಬಂದಿದೆ
ಬಾಟಲಿಗೆ ಲೋಹದ ರುಚಿ ಬರದಂತೆ ತಡೆಯುವುದು ಹೇಗೆ?; ಇಲ್ಲಿದೆ ಮಾಹಿತಿ...
ಸಾಂದರ್ಭಿಕ ಚಿತ್ರ | Photo Credit : freepik
ನೀರಿಗೆ ಲೋಹದ ರುಚಿ ಬಂದರೆ ಸ್ಟೇನ್ಲೆಸ್ ಸ್ಟೀಲ್ ಕಡಿಮೆ ಗುಣಮಟ್ಟದ್ದಾಗಿರುತ್ತದೆ ಅಥವಾ ಒಳಗಿನ ಫಿನಿಶಿಂಗ್ ಚೆನ್ನಾಗಿರುವುದಿಲ್ಲ.
ಕೆಲವೊಮ್ಮೆ ನೀವು ಬಾಟಲಿಯಿಂದ ಕುಡಿಯುವ ತಾಜಾ ನೀರಿಗೆ ಲೋಹದ ರುಚಿ ಇರುತ್ತದೆ. ನೀವು ನಿತ್ಯವೂ ಸ್ಟೀಲ್ ಬಾಟಲಿಯನ್ನು ಬಳಸುತ್ತಿದ್ದರೆ ಇಂತಹ ವಾಸನೆಯನ್ನು ಒಮ್ಮೆಯಾದರೂ ಗಮನಿಸಿರಬಹುದು. ಈ ವಾಸನೆ ಅಸುರಕ್ಷಿತವೆ ಅಥವಾ ಸಾಮಾನ್ಯವೆ ಎನ್ನುವ ಆತಂಕ ಬಂದಿರಬಹುದು.
ಇಂಟೆಗ್ರೇಟೆಡ್ ಗಟ್, ಹಾರ್ಮೋನಲ್ & ತೂಕ ಇಳಿಸುವ ವಿಚಾರದಲ್ಲಿ ತಜ್ಞರಾಗಿರುವ ಆಹಾರ ತಜ್ಞರಾದ ಅನುಷಿ ಜೈನ್ ಪ್ರಕಾರ, ಲೋಹದ ರುಚಿ ಬಂದಿದೆ ಎಂದರೆ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿಲ್ಲ, ಬದಲಾಗಿ ಬಾಟಲಿಯ ಗುಣಮಟ್ಟಕ್ಕೆ ಸಂಬಂಧಿಸಿದೆ.
ಸ್ಟೀಲ್ ಬಾಟಲಿಗಳಲ್ಲಿ ನೀರಿಗೆ ಲೋಹದ ರುಚಿ ಬರುವುದೇಕೆ?
ಕುಡಿಯುವ ನೀರಿಗೆ ಲೋಹದ ರುಚಿ ಬಂದರೆ ಸ್ಟೇನ್ಲೆಸ್ ಸ್ಟೀಲ್ ಕಡಿಮೆ ಗುಣಮಟ್ಟದ್ದಾಗಿರುತ್ತದೆ ಅಥವಾ ಒಳಗಿನ ಫಿನಿಶಿಂಗ್ ಚೆನ್ನಾಗಿರುವುದಿಲ್ಲ. ಎಲ್ಲಾ ಸ್ಟೇನ್ಲೆಸ್ ಸ್ಟೀಲ್ ಗಳನ್ನು ಸಮಾನವಾಗಿ ರಚಿಸಲಾಗಿಲ್ಲ. ಮುಖ್ಯವಾಗಿ 304 ಅಥವಾ 316 ಗ್ರೇಡ್ ನ ಸ್ಟೇನ್ಲೆಸ್ ಸ್ಟೀಲ್ ಉನ್ನತ ದರ್ಜೆಯದ್ದಾಗಿರುತ್ತದೆ. ಈ ದರ್ಜೆಯ ಸ್ಟೀಲ್ ಅನ್ನು ಕುಡಿಯುವ ನೀರನ್ನು ಸಂಗ್ರಹಿಸಲು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಈ ದರ್ಜೆಯ ಸ್ಟೀಲ್ ರಾಸಾಯನಿಕ ಕ್ರಿಯೆಗಳಿಗೆ ಹೆಚ್ಚು ನಿರೋಧಕತೆ ಪ್ರದರ್ಶಿಸುತ್ತವೆ. ಅಂದರೆ ನೀರಿನ ರುಚಿಯ ಮೇಲೆ ಪರಿಣಾಮ ಬೀರುವ ಸಂಯುಕ್ತಗಳನ್ನು ಸೋರಿಕೆ ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ.
ಮತ್ತೊಂದೆಡೆ ಅಗ್ಗದ ಬಾಟಲಿಗಳು ಕಡಿಮೆ ದರ್ಜೆಯ ಸ್ಟೀಲ್ ಅನ್ನು ಬಳಸುತ್ತಿದ್ದು, ಕಳಪೆ ಹೊಳಪುಳ್ಳ ಒಳ ಫಿನಿಶಿಂಗ್ ಹೊಂದಿರಬಹುದು. ಹೆಚ್ಚು ಬಳಸಿದ ಮೇಲೆ ಅದರ ತೇವಾಂಶ, ಶಾಖ ಅಥವಾ ಆಮ್ಲೀಯ ದ್ರವಗಳಿಗೆ ಒಡ್ಡಿಕೊಳ್ಳುವುದರಿಂದ ಒಳಗಿನ ಮೇಲ್ಮೈ ಜೊತೆಗೆ ಪ್ರತಿಕ್ರಿಯಿಸಬಹುದು. ಹೀಗಾಗಿ ನಿಮ್ಮ ನೀರಿಗೆ ಲೋಹದ ರುಚಿ ಬರುತ್ತದೆ. ಬಾಟಲಿಯನ್ನು ಸರಿಯಾಗಿ ಸ್ವಚ್ಛಗೊಳಿಸದೆ ಇದ್ದರೂ ಸಮಸ್ಯೆ ಬರಬಹುದು. ನಳ್ಳಿ ನೀರಿನಿಂದ ಖನಿಜಗಳು ಅಥವಾ ಹಿಂದಿನ ಬಾರಿ ನೀರು ತುಂಬಿದಾಗ ಉಳಿದ ಶೇಷಗಳು ಬಾಟಲಿಯಲ್ಲಿ ಉಳಿದುಕೊಂಡಿರಬಹುದು. ಇವು ನೀರಿನ ರುಚಿಯನ್ನು ಬದಲಿಸಬಹುದು.
ಡಬಲ್ ಲೇಯರ್ Vs ಸಿಂಗಲ್ ಲೇಯರ್ ಸ್ಟೀಲ್ ಬಾಟಲಿ
ಬಹಳಷ್ಟು ಮಂದಿ ಇನ್ಸುಲೇಟ್ ಮಾಡಿದ ಡಬಲ್ ಲೇಯರ್ ಸ್ಟೀಲ್ ಬಾಟಲಿ ಸುರಕ್ಷಿತ ಎಂದುಕೊಳ್ಳುತ್ತಾರೆ. ಆದರೆ, ಅದು ಸಂಪೂರ್ಣ ಸರಿಯಲ್ಲ. ಡಬಲ್ ಲೇಯರ್ ಇದ್ದ ಮಾತ್ರಕ್ಕೆ ನೀರು ರಾಸಾಯನಿಕವಾಗಿ ಸುರಕ್ಷಿತವಲ್ಲ. ಬಳಸಿದ ಸ್ಟೇನ್ಲೆಸ್ ಸ್ಟೀಲ್ ಅನ್ನು ಆಧರಿಸಿ ಸುರಕ್ಷಿತವಾಗಿರುತ್ತದೆ. ಆದರೆ ಇನ್ಸುಲೇಶನ್ ನಿಂದ ಪರೋಕ್ಷ ನೈರ್ಮಲ್ಯದ ಲಾಭವಾಗುತ್ತದೆ. ತಾಪಮಾನ ಉಳಿಸುವುದು ಮತ್ತು ಹೊರಗಿನ ಶಾಖದ ಬದಲಾವಣೆ ಬರದಂತೆ ಡಬಲ್ ಲೇಯರ್ ಬಾಟಲಿಗಳು ತಡೆಯುತ್ತವೆ. ಹೀಗಾಗಿ ನೀರು ಹೆಚ್ಚು ಸಮಯ ತಂಪಾಗಿರುತ್ತದೆ. ಈ ವ್ಯವಸ್ಥೆ ಮುಖ್ಯ ಏಕೆಂದರೆ ಬೆಚ್ಚಗಿನ ತಾಪಮಾನದಲ್ಲಿ ದೀರ್ಘಕಾಲದವರೆಗೆ ಸಂಗ್ರಹಿಸಿದ ನೀರಿನಲ್ಲಿ ಸೂಕ್ಷ್ಮ ಜೀವಿಗಳು ಬೆಳೆಯುತ್ತವೆ. ಮುಖ್ಯವಾಗಿ ಬಿಸಿ ತಾಪಮಾನ ಅವುಗಳ ಬೆಳವಣಿಗೆಗೆ ಸೂಕ್ತವಾಗಿರುತ್ತದೆ. ಹೀಗಾಗಿ ಇನ್ಸುಲೇಟ್ ಮಾಡಿದ ಬಾಟಲಿಗಳು ಒಟ್ಟು ನೈರ್ಮಲ್ಯವನ್ನು ಒದಗಿಸಬಹುದು ಮತ್ತು ಸಿಂಗಲ್ ಲೇಯರ್ ಬಾಟಲಿಗಳಿಗೆ ಹೋಲಿಸಿದರೆ ಉತ್ತಮ ಕುಡಿಯುವ ಅನುಭವ ನೀಡಬಹುದು.
ಬಾಟಲಿಗೆ ಲೋಹದ ರುಚಿ ಬರದಂತೆ ತಡೆಯುವುದು ಹೇಗೆ?
* 304 ಅಥವಾ 316 ಗ್ರೇಡ್ ಇರುವ ಸ್ಟೇನ್ಲೆಸ್ ಸ್ಟೀಲ್ ಬಾಟಲಿಗಳನ್ನು ಆರಿಸಿ.
* ದೀರ್ಘಕಾಲದವರೆಗೆ ಆಮ್ಲೀಯ ಪಾನೀಯ ಸಂಗ್ರಹಿಸಿಡಬೇಡಿ.
* ಸ್ವಲ್ಪ ಸಾಬೂನು ಹಾಗಿ ನಿತ್ಯವೂ ಬಾಟಲಿಯನ್ನು ತೊಳೆದು ಪೂರ್ಣ ಒಣಗಲು ಅನುವು ಮಾಡಿಕೊಡಿ.
* ತುಕ್ಕು ಹಿಡಿದಿದ್ದಲ್ಲಿ, ಕಲೆಗಳಾಗಿದ್ದಲ್ಲಿ ಅಥವಾ ನಿರಂತರವಾಗಿ ವಾಸನೆ ಬರುತ್ತಿದ್ದಲ್ಲಿ ಬಾಟಲಿ ಬದಲಿಸಿ.
ಸ್ವಲ್ಪ ಲೋಹದ ರುಚಿ ಬಾಟಲಿಯ ಗುಣಮಟ್ಟದ ಸಮಸ್ಯೆಯೇ ವಿನಾ ಗಂಭೀರ ಅನಾರೋಗ್ಯವಲ್ಲ. ಹಾಗಿದ್ದರೂ ಉತ್ತಮ ಗ್ರೇಡ್ ನ ಸ್ಟೀಲ್ ಬಾಟಲಿ ಬಳಸುವುದು ಆರೋಗ್ಯಕರ.
ಕೃಪೆ: indianexpress.com