ಗುಜರಾತ್ | ಮಾದಕ ದ್ರವ್ಯ ನೀಡಿ ಯುವತಿಯ ಸಾಮೂಹಿಕ ಅತ್ಯಾಚಾರ: ಬಿಜೆಪಿ ನಾಯಕನ ಬಂಧನ
ಬಂಧಿತ ಆರೋಪಿಗಳು (Photo credit : newindianexpress.com)
ಅಹಮದಾಬಾದ್: 23 ವರ್ಷದ ಯುವತಿಯೊಬ್ಬಳಿಗೆ ಪಾನೀಯದಲ್ಲಿ ಮಾದಕ ದ್ರವ್ಯ ಬೆರೆಸಿ ಕುಡಿಸಿ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆಕೆಯನ್ನು ಹೋಟೆಲ್ ಒಂದಕ್ಕೆ ಕರೆದೊಯ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಗುಜರಾತ್‌ನ ಸೂರತ್ ನಗರದಲ್ಲಿ ನಡೆದಿದೆ.
ಈ ಸಂಬಂಧ, ಸೂರತ್ ನಗರ ವಾರ್ಡ್‌ನ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಉಪಾಧ್ಯಾಯ ಹಾಗೂ ಆತನ ಸಹಚರ ಗೌರವ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು newindianexpress.com ವರದಿ ಮಾಡಿದೆ.
ತನಗೆ ಪ್ರಜ್ಞೆ ಮರಳಿದ ಕೂಡಲೇ ಪೊಲೀಸರನ್ನು ಸಂಪರ್ಕಿಸಿರುವ ಸಂತ್ರಸ್ತ ಯುವತಿಯು, ಈ ಸಂಬಂಧ ಅಧಿಕೃತ ದೂರು ದಾಖಲಿಸಿದ್ದಾಳೆ. ಇದರ ಬೆನ್ನಿಗೇ ಕ್ಷಿಪ್ರ ಕ್ರಮ ಕೈಗೊಂಡಿರುವ ಪೊಲೀಸರು, ಆರೋಪಿಗಳಾದ ಆದಿತ್ಯ ಉಪಾಧ್ಯಾಯ ಹಾಗೂ ಆತನ ಸಹಚರ ಗೌರವ್ ಸಿಂಗ್‌ನನ್ನು ಬಂಧಿಸಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆದಿತ್ಯ ಉಪಾಧ್ಯಾಯನನ್ನು ತಕ್ಷಣವೇ ಆತನ ಹುದ್ದೆಯಿಂದ ಬಿಜೆಪಿ ಅಮಾನತುಗೊಳಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸೂರತ್ ನಗರದ 5ನೇ ವಲಯದ ಉಪ ಪೊಲೀಸ್ ಆಯುಕ್ತ ರಾಕೇಶ್ ಬಾರೋತ್, "ಇಬ್ಬರು ಆರೋಪಿಗಳ ವಿರುದ್ಧ ಜಹಾಂಗೀರ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರನ್ನು ಆಧರಿಸಿ, ನಾವೀಗ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ" ಎಂದು ತಿಳಿಸಿದ್ದಾರೆ.
"ನನ್ನನ್ನು ಸಮುದ್ರ ತೀರವೊಂದಕ್ಕೆ ಕರೆದೊಯ್ದು, ನನಗೆ ತಂಪು ಪಾನೀಯ ನೀಡಲಾಯಿತು. ಇದಾಗ ನಂತರ, ನಂತರ ಇಬ್ಬರು ಆರೋಪಿಗಳು ನನ್ನನ್ನು ಹೋಟೆಲ್ ಒಂದಕ್ಕೆ ಕರೆದೊಯ್ದು, ನನ್ನ ಮೇಲೆ ಅತ್ಯಾಚಾರವೆಸಗಿದರು ಎಂದು ದೂರುದಾರೆಯು ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ" ಎಂದೂ ಅವರು ಹೇಳಿದ್ದಾರೆ.
ಈ ಸಂಬಂಧ ಬಂಧಿತರಾಗಿರುವ ಆರೋಪಿಗಳನ್ನು ಆದಿತ್ಯ ಉಪಾಧ್ಯಾಯ ಹಾಗೂ ಗೌರವ್ ಸಿಂಗ್ ಎಂದು ಗುರುತಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.