×
Ad

ಯಾದಗಿರಿ ಜಿಲ್ಲೆಯ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಯಲ್ಲಿ ಶೇ.85 ರಷ್ಟು ಪ್ರಗತಿ ಸಾಧನೆ : ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ.

Update: 2025-05-27 18:36 IST

ಯಾದಗಿರಿ : ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಯಲ್ಲಿ 2,79,230 ಪ.ಜಾ ಜನರ ಸಮೀಕ್ಷೆ ನಡೆಸುವ ಮೂಲಕ ಶೇ.85 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಪ.ಜಾ ಒಳಮೀಸಲಾತಿ ಸಮೀಕ್ಷೆ ಕುರಿತಂತೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಜಿಲ್ಲೆಯಲ್ಲಿ 2025 ರಲ್ಲಿ ಅಂದಾಜು 3,28,428 ಪರಿಶಿಷ್ಟ ಜಾತಿಯ ಜನಸಂಖ್ಯೆ ಇದ್ದು, ಈ ಪೈಕಿ ಈವರೆಗೆ 2,79,230 ಜನಸಂಖ್ಯೆಯ ಸಮೀಕ್ಷೆ ನಡೆಸುವ ಮೂಲಕ ಶೇ.85ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ತಿಳಿಸಿದರು.

ನ್ಯಾ.ಡಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿದ ಸರ್ಕಾರ, ಪರಿಶಿಷ್ಟ ಜಾತಿ ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ (ಆರ್ಥಿಕ) ಸ್ಥಿತಿ ಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ ಒಳಮೀಸಲಾತಿ ವರ್ಗೀಕರಣ ಮಾಡಲು ದಿನಾಂಕ 5-5-25ರಿಂದ 17-5-25 ವರೆಗೆ ಮನೆ ಮನೆ ಸಮೀಕ್ಷೆಗೆ ಸೂಚಿಸಿ, ನಂತರ ಆಯೋಗದ ನಿರ್ದೇಶನದಂತೆ ಸಮೀಕ್ಷೆ ಅವಧಿಯನ್ನು ದಿ:29-5-25 ರವರೆಗೆ ವಿಸ್ತರಿಸಲಾಗಿದೆ.

ಅದರಂತೆ ದಿ:19-5-25 ರಿಂದ 30-6-25 ರವರೆಗೆ ವಿಶೇಷ ಶಿಬಿರ ಏರ್ಪಡಿಸಲಾಗಿದೆ. ಆನ್ ಲೈನ್ ಮೂಲಕ ಸ್ವಯಂ ಘೋಷಣೆಯನ್ನು https://schedulecastesurvey.karnataka.gov.in/selfdeclaration/ ಪೋರ್ಟಲ್ ಮುಖಾಂತರ ಸಲ್ಲಿಸಬೇಕು. ಪಡಿತರ ಚೀಟಿ, ಆಧಾರ್ ಕಾರ್ಡ್, ಆಧಾರ್ ನೋಂದಣಿ ಸಂಖ್ಯೆ ಮುಖಾಂತರ, ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಈ ಸಮೀಕ್ಷೆಯಲ್ಲಿ ಜಿಲ್ಲೆಯ ಪ್ರತಿಯೊಂದು ಮತಗಟ್ಟೆಯನ್ನು Enumeration Block ಎಂದು ಪರಿಗಣಿಸಲಾಗಿದೆ. EDCS ನಿರ್ದೇಶನಾಲಯದಿಂದ ಅಭಿವೃದ್ಧಿ ಪಡಿಸಲಾದ ಮೊಬೈಲ್ ಆಪ್ ಮೂಲಕ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಯ ಪ್ರತಿ ಮತಕ್ಷೇತ್ರಕ್ಕೆ ಸಹಾಯಕ ಆಯುಕ್ತರ ದರ್ಜೆಯ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.

ಯಾದಗಿರಿ ಮತಕ್ಷೇತ್ರಕ್ಕೆ ಯಾದಗಿರಿ ಸಹಾಯಕ ಆಯುಕ್ತರು, ಶಹಾಪುರ ಮತಕ್ಷೇತ್ರಕ್ಕೆ ಯಾದಗಿರಿ ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ, ಸುರಪುರ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಗುರುಮಠಕಲ್ ಮತ ಕ್ಷೇತ್ರಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಜಿಲ್ಲೆಯ 1,134 ಗಣತಿದಾರರು, ಮತಗಟ್ಟೆವಾರು ಸಮೀಕ್ಷೆ ನಡೆಸುವರು. ಪ್ರತಿ 1 ರಿಂದ 12 ಮತಗಟ್ಟೆಗಳಿಗೆ ಒಬ್ಬರನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಪ.ಜಾ ಕುಟುಂಬಗಳು ಹೆಚ್ಚಿರುವ ಗ್ರಾಮ/ನಗರಗಳಲ್ಲಿ 350 ಹೆಚ್ಚುವರಿ ಗಣತಿದಾರರನ್ನು ನೇಮಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಮಾಸ್ಟರ್ ಟ್ರೈನರ್‌ಗಳನ್ನು ನೇಮಿಸಲಾಗಿದೆ. ಪ್ರತಿ ಹತ್ತು ಎನುಮರೇಶನ್ ಬ್ಲಾಕ್ ಉಸ್ತುವಾರಿ ನೋಡಿಕೊಳ್ಳಲು ಓರ್ವ ಸೂಪರ್ ವೈಝರ್ ಅನ್ನು ನೇಮಿಸಲಾಗಿದೆ. ಇವರು ಗಣತಿದಾರರು ಮಾಡಿದ ಗಣತಿಯ ಎನ್ಯುಮರೇಶನ್ ಬ್ಲಾಕ್ ಪ್ರಕಾರ ಶೇ.10ರಷ್ಟು ಮರು ಪರಿಶೀಲನೆಯನ್ನು ಮೊಬೈಲ್ ಆಪ್ ಮೂಲಕ ಮರು ಪರಿಶೀಲನೆ ಮಾಡುವರು ಎಂದು ಹೇಳಿದರು.

ಈ ವೇಳೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News