ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣ : ಸಚಿವ ಶರಣಬಸಪ್ಪ ದರ್ಶನಾಪುರ ಖಂಡನೆ
ಯಾದಗಿರಿ: ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇದು ಘಟನೆ ಎನ್ನುವಂತದ್ದೇ ಅಲ್ಲ. ದಾಖಲಾಗಿರುವ ದೂರು ಸಂಪೂರ್ಣ ತಪ್ಪಾಗಿದೆ. ವಿಡಿಯೋವನ್ನು ಗಮನಿಸಿದ್ದೇನೆ. ಅದರಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲು ಯೋಗ್ಯವಾದ ಯಾವುದೇ ಸನ್ನಿವೇಶಗಳಿಲ್ಲ. ಗುರು-ಶಿಷ್ಯರ ಒಡನಾಟವನ್ನು ಸಾಮಾಜಿಕ ಜಾಲತಾಣ ಹಾಗೂ ಕೆಲ ಮಾಧ್ಯಮಗಳು ತಿರುಚಿ ತೋರಿಸಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ” ಎಂದು ಆರೋಪಿಸಿದರು.
ಮುತ್ಯಾ ಅವರ ತಂದೆ-ತಾಯಿ ಭೇಟಿ ನೀಡಿ ಅಳಲನ್ನು ವ್ಯಕ್ತಪಡಿಸಿರುವುದಾಗಿ ತಿಳಿಸಿದ ಸಚಿವರು, ಆಯೋಗಗಳೂ ಅವಸರದಲ್ಲಿ ಕ್ರಮ ಕೈಗೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಲ್ಪ್ ರಾಷ್ಟ್ರಗಳಲ್ಲಿ ಯುದ್ಧದಿಂದ ಸಂಕಷ್ಟದಲ್ಲಿರುವ ಕನ್ನಡಿಗರನ್ನು ರಕ್ಷಿಸಲು ರಾಜ್ಯ ಸರ್ಕಾರ ಸಿದ್ಧವಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು.
ಬಜೆಟ್ ನಂತರ ಮುಖ್ಯಮಂತ್ರಿ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಅಂತಹ ಯಾವುದೇ ವಿಚಾರವಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ. ಉಳಿದದ್ದು ಮಾಧ್ಯಮ ಸೃಷ್ಟಿ” ಎಂದರು.
ಈ ವೇಳೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ, ಜಿಲ್ಲಾ ವಕ್ತಾರ ಶಾಮಸನ್ ಮಾಳಿಕೇರಿ, ಯುವ ಮುಖಂಡ ಬಸ್ಸುಗೌಡ ಬಿಳ್ಹಾರ್, ಹನುಮಂತ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮುತ್ಯಾ ನಿರ್ದೋಷಿ ಹೊರಬರುತ್ತಾರೆ: ಶಾಸಕ ತುನ್ನೂರು ವಿಶ್ವಾಸ
ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಅವರು ಶೀಘ್ರದಲ್ಲೇ ನಿರ್ದೋಷಿಯಾಗಿ ಹೊರಬರುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಏಳು ವರ್ಷದ ಮಗು ಪಾಲಕರೊಂದಿಗೆ ಆಶೀರ್ವಾದ ಪಡೆಯಲು ಭೇಟಿ ನೀಡಿದ ವೇಳೆ ಗುರುವಾಗಿ ಮುತ್ಯಾ ಮಗುವನ್ನು ಪ್ರೀತಿಯಿಂದ ಅಪ್ಪಿಕೊಂಡು ಮಾತಾಡಿದ್ದಾರೆ. ಇದನ್ನು ಅನುಚಿತ ವರ್ತನೆ ಎಂದು ಹೇಳುವುದು ಸಮಂಜಸವಲ್ಲ. ಪ್ರಕರಣದ ಸತ್ಯಾಸತ್ಯತೆ ಪರಿಶೀಲನೆಗೊಳಪಡಿಸಬೇಕು ಎಂದು ಅವರು ಆಗ್ರಹಿಸಿದರು.