×
Ad

ಜಿಟಿಟಿಸಿ ವಿದ್ಯಾರ್ಥಿಗಳಿಗೆ ಕೌಶಲ್ಯ ಜೊತೆಗೆ ಇಂಗ್ಲಿಷ್ ಜ್ಞಾನ ಅಗತ್ಯ: ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

Update: 2026-03-02 20:24 IST

ಯಾದಗಿರಿ: ಜಿಟಿಟಿಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಲಭ್ಯವಿದ್ದರೂ, ಕೌಶಲ್ಯದ ಜೊತೆಗೆ ಮಾತನಾಡುವ ಶಿಸ್ತು ಹಾಗೂ ಇಂಗ್ಲಿಷ್ ಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಹೇಳಿದರು.

ಸೈದಾಪುರ ಸಮೀಪದ ಕಡೆಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಸರಕಾರಿ ಉಪಕರಣಗಾರ ತರಬೇತಿ ಕೇಂದ್ರ (GTTC)ಕ್ಕೆ ದಿಢೀರ್ ಭೇಟಿ ನೀಡಿದ ಸಚಿವರು, ಕೇಂದ್ರದ ವ್ಯವಸ್ಥೆಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಜಿಟಿಟಿಸಿ ಕೋರ್ಸ್‌ಗಳ ಮೂಲಕ ಲಭ್ಯವಾಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ದೇಶದಲ್ಲಿಯೇ ಅಲ್ಲದೆ ವಿದೇಶಗಳಲ್ಲಿಯೂ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಟಿಎನ್‌ಸಿ, ಇಡಿಯಂ, ಪಿಲ್ಲಿಂಗ್ ಮಷಿನ್ ಸೇರಿದಂತೆ ವಿವಿಧ ಯಂತ್ರೋಪಕರಣಗಳಿರುವ ಕಾರ್ಯಾಗಾರಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಂದ ವಾಸ್ತವ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.

ಹಾಸ್ಟೆಲ್ ಹಾಗೂ ಊಟದ ವ್ಯವಸ್ಥೆ, ಬಸ್ ನಿಲುಗಡೆ ಸೇರಿದಂತೆ ಅಗತ್ಯ ಸೌಲಭ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು. ತರಗತಿ ಕೊಠಡಿಗಳಿಗೆ ಬಣ್ಣ ಹಚ್ಚಿಸಿ, ಸ್ವಚ್ಛತೆ ಹಾಗೂ ವ್ಯವಸ್ಥೆಯನ್ನು ಸುಧಾರಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಆಡಳಿತ ಮಂಡಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಟಿಟಿಸಿ ಪ್ರಾಂಶುಪಾಲ ಶಿವಕುಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News