ಆ.10ರವರೆಗೆ ಬೆಳೆ ವಿಮೆ ಮಾಡಿಸಿಕೊಳ್ಳಿ ; ರೈತರಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ಮನವಿ
ಸುರಪುರ: ರೈತರು ಆಗಸ್ಟ್ 10ರೊಳಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮನವಿ ಮಾಡಿದರು.
ಪಟ್ಟಣದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಪುರ ಕ್ಷೇತ್ರದಲ್ಲಿ ಶೇ.60ರಷ್ಟು ನೀರಾವರಿ ಪ್ರದೇಶವಿದ್ದರೂ ಮಳೆ ಕೊರತೆಯಿಂದ ಜಲಾಶಯಗಳಿಗೆ ನೀರು ಹರಿದುಬರದ ಕಾರಣ ಹತ್ತಿ, ತೊಗರಿ ಹಾಗೂ ಹೆಸರು ಬೆಳೆಗಳು ಹಾನಿಗೊಳಗಾಗಿವೆ. ಕಳೆದ ಎರಡು ದಿನಗಳಿಂದ ಬೆಳೆಹಾನಿ ಪ್ರದೇಶಗಳನ್ನು ವೀಕ್ಷಣೆ ಮಾಡಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಹವಾಮಾನ ಇಲಾಖೆಯ ಮಾಹಿತಿಯಂತೆ 10ರಿಂದ 15 ವರ್ಷಗಳಿಗೊಮ್ಮೆ ಒಣ ಹವಾಮಾನ ಉಂಟಾಗುವ ಸಾಧ್ಯತೆ ಇರುತ್ತದೆ. ಈ ವರ್ಷವೂ ಅಂತಹ ಪರಿಸ್ಥಿತಿ ಇರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಲಾಶಯಗಳಲ್ಲಿ ನೀರನ್ನು ಸಂರಕ್ಷಿಸಲಾಗುತ್ತಿದೆ. ಸದ್ಯ ಜಲಾಶಯಗಳಲ್ಲಿ ನೀರಿದ್ದು, ಮಳೆಯೂ ಆರಂಭವಾಗಿರುವುದರಿಂದ ಭತ್ತ ಬೆಳೆದ ರೈತರಿಗೆ ಅನುಕೂಲವಾಗಲಿದೆ. ಆದರೂ ಎಲ್ಲ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಡಂಗೂರ ಸಾರುವ ಮೂಲಕ ಬೆಳೆ ವಿಮೆ ಕುರಿತು ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬರ ಘೋಷಣೆ ಕುರಿತಂತೆ ಸರ್ಕಾರ, ಕಂದಾಯ ಇಲಾಖೆ ಹಾಗೂ ಎನ್‌ಡಿಆರ್‌ಎಫ್‌ನ ಮಾನದಂಡಗಳ ಪ್ರಕಾರ ಪರಿಶೀಲನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.
ಬಿಜೆಪಿ ನಡೆಸುತ್ತಿರುವ ಬರ ವೀಕ್ಷಣೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಕೇವಲ ನಾಮಕಾವಸ್ಥೆಗೆ ಬರ ವೀಕ್ಷಣೆ ನಡೆಸುತ್ತಿದೆ. ಅವರ ಆಡಳಿತಾವಧಿಯಲ್ಲಿ ರೈತರಿಗೆ ಯಾವುದೇ ವಿಶೇಷ ನೆರವು ನೀಡಿಲ್ಲ. ಕೋವಿಡ್ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿದರು.
ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡದಿರುವ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಯಾವುದೇ ಜಿಲ್ಲೆಗೆ ಅನ್ಯಾಯ ಮಾಡುವುದಿಲ್ಲ. ಈ ಹಿಂದೆ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಪ್ರಸ್ತುತ ಕೆಲವು ಕಾರಣಗಳಿಂದ ಅವಕಾಶ ದೊರಕಿಲ್ಲ. ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿದೆ ಎಂದು ಹೇಳಿದರು.
ಮಹಿಳೆಯರಿಗೆ ಸಚಿವ ಸ್ಥಾನ ನೀಡದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಮಹಿಳೆಯರ ಪರವಾಗಿದ್ದು, ಶೇ.33ರಷ್ಟು ಮೀಸಲಾತಿಗೆ ಬದ್ಧವಾಗಿದೆ. ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಜಾರಿಗೆ ಮುಂದಾದರೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ. ರಾಜ್ಯದಲ್ಲಿಯೂ ಮಹಿಳೆಯರಿಗೆ ಸಚಿವ ಸ್ಥಾನ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂವಿಧಾನದ ಕಲಂ 371(ಜೆ) ಅಡಿಯಲ್ಲಿ ಇದುವರೆಗೆ 80 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆದಿದೆ. ಇನ್ನೂ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಶೀಘ್ರದಲ್ಲೇ 15 ಸಾವಿರ ಶಿಕ್ಷಕರ ನೇಮಕಾತಿಯೂ ನಡೆಯಲಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ, ಕೆ-ವೈ ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠಲ ಯಾದವ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರಡ್ಡಿಗೌಡ ಅನಪೂರ,ಕೃಒಹುಮಾಸ ಸಂಘದ ಅಧ್ಯಕ್ಷ ರಾಜಾ ಸಂತೋಷ ನಾಯಕ, ಮುಖಂಡರಾದ ಗುಂಡಪ್ಪ ಸೋಲಾಪುರ, ನಿಂಗಣ್ಣ ಬಾಚಿಮಟ್ಟಿ,ವೆಂಕಟೇಶ ಹೊಸಮನಿ ಸೇರಿದಂತೆ ಅನೇಕದಿದ್ದರು.