×
Ad

ಮಾನವ ವನ್ಯಜೀವಿ ಸಂಘರ್ಷ : ನಿರಂತರ ನಿಗಾಕ್ಕೆ ಈಶ್ವರ್ ಖಂಡ್ರೆ ಸೂಚನೆ

Update: 2025-07-28 13:07 IST

ಈಶ್ವರ್‌ ಬಿ ಖಂಡ್ರೆ 

ಯಾದಗಿರಿ : ʼಮಾನವ-ವನ್ಯಜೀವಿ ಸಂಘರ್ಷ ಇರುವ ವಲಯಗಳ ಮೇಲೆ ಉನ್ನತಾಧಿಕಾರಿಗಳು ಸತತ ನಿಗಾ ಇಟ್ಟು, ಜನರ ಅಮೂಲ್ಯ ಜೀವ ಮತ್ತು ರೈತರ ಬೆಳೆ ರಕ್ಷಣೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕುʼ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ, ಎನ್.ಆರ್.ಪುರ ತಾಲೂಕು ಬಾಳೆ ಹೊನ್ನೂರು ಬಳಿ ಕಳೆದ 4 ದಿನಗಳ ಅಂತರದಲ್ಲಿ ಇಬ್ಬರು ಮೃತಪಟ್ಟಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ ಅವರು, ಆನೆಗಳು ನಾಡಿನಲ್ಲಿ ಕಾಣಿಸಿಕೊಂಡ ಕೂಡಲೇ ಅರಣ್ಯಾಧಿಕಾರಿಗಳು ಕ್ರಮ ವಹಿಸಬೇಕು. ಸ್ಥಳೀಯರಿಗೆ ಮಾಹಿತಿ ನೀಡಬೇಕು. ಆನೆಗಳನ್ನು ಕಾಡಿಗೆ ಮರಳಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ರಾಜ್ಯದೆಲ್ಲೆಡೆ ಮಳೆಯಾಗುತ್ತಿದೆ. ಕೆರೆ, ಕಟ್ಟೆಗಳು ತುಂಬಿವೆ. ಕಾಡಿನಲ್ಲಿ ಹುಲ್ಲು, ಸೊಪ್ಪು, ತೊಗಟೆ ಇತ್ಯಾದಿ ಆಹಾರ ಲಭ್ಯವಿದ್ದರೂ ಆನೆಗಳು ಏಕೆ ನಾಡಿಗೆ ಬರುತ್ತಿವೆ ಎಂಬ ಬಗ್ಗೆ ಅಧಿಕಾರಿಗಳು ಗಮನ ಹರಿಸಿ, ಮುಂದೆ ಈ ರೀತಿ ಅನಾಹುತ ಸಂಭವಿಸದಂತೆ ಕ್ರಮ ವಹಿಸಬೇಕು ಎಂದರು.

ನಿರ್ವಹಣೆಗೆ ಸೂಚನೆ:

ಆನೆ ಕಂದಕಗಳು ಸತತ ಮಳೆಯಿಂದ ಮುಚ್ಚಿಹೋಗಿವೆ, ಸೌರ ತಂತಿ ಬೇಲಿ, ಟೆಂಟಕಲ್ ಫೆನ್ಸಿಂಗ್ ಮರಬಿದ್ದು ಸಂಪರ್ಕ ಕಡಿದುಕೊಂಡಿವೆ ಎಂಬ ದೂರುಗಳಿವೆ. ಕೂಡಲೇ ಇವುಗಳ ನಿರ್ವಹಣೆ ಮಾಡಬೇಕು. ಅರಣ್ಯ ಗಸ್ತು ಸಿಬ್ಬಂದಿ ಈ ಬಗ್ಗೆ ನಿರಂತರ ನಿಗಾ ಇಟ್ಟು, ಉನ್ನತಾಧಿಕಾರಿಗಳಿಗೆ ವರದಿ ಮಾಡಿ ದುರಸ್ತಿ ಮಾಡಿಸಬೇಕು ಎಂದರು.

ಆನೆಗಳಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ಹೆಚ್ಚುವರಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಕೂಡಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಕಾಮಗಾರಿ ಆರಂಭಿಸಿ, ನಿಗದಿತ ಕಾಲಮಿತಿಯಲ್ಲಿ ಕಾಮಾಗಾರಿ ಪೂರ್ಣಗೊಳಿಸಿ ಜನರ ಅಮೂಲ್ಯ ಜೀವ ಮತ್ತು ರೈತರ ಬೆಳೆ ರಕ್ಷಣೆಗೆ ಅರಣ್ಯ ಸಿಬ್ಬಂದಿ ಮುಂದಾಗಬೇಕು ಎಂದರು.

ಹೊಸ ಪ್ರದೇಶಕ್ಕೆ ಸಂಘರ್ಷ ವಿಸ್ತರಣೆ:

ಇಷ್ಟು ವರ್ಷಗಳ ಕಾಲ ಆನೆ ಸಮಸ್ಯೆಯೇ ಇಲ್ಲದ ಪ್ರದೇಶಗಳಲ್ಲೂ ಈಗ ಆನೆ-ಮಾನವ ಸಂಘರ್ಷ ಹೆಚ್ಚಳವಾಗುತ್ತಿದೆ. ಯಾವ ಕಾರಣದಿಂದ ಸಂಘರ್ಷ ವಿಸ್ತರಣೆ ಆಗುತ್ತಿದೆ ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿ ಎಂದ ಸಚಿವರು, ಹೊಸ ಪ್ರದೇಶದಲ್ಲಿ ವನ್ಯಜೀವಿಗಳು ಕಾಣಿಸಿಕೊಂಡಾಗ ನೆರೆಯ ಜಿಲ್ಲೆಯ ಆನೆ ಕ್ಷಿಪ್ರಕಾರ್ಯಪಡೆ ಸಿಬ್ಬಂದಿಯ ನೆರವು ಪಡೆದು ಆನೆಗಳನ್ನು ಕಾಡಿಗೆ ಮರಳಿಸಬೇಕು. ಪುಂಡಾನೆ ಇದ್ದರೆ ಸೆರೆ ಹಿಡಿಯಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ಕಮಾಂಡ್ ಸೆಂಟರ್ ಡಿಪಿಆರ್ ಸಲ್ಲಿಕೆಗೂ ಸೂಚನೆ:

ಇತ್ತೀಚೆಗೆ ತಾವು ಸಭೆ ನಡೆಸಿ ವನ್ಯಜೀವಿಗಳ ಸಂರಕ್ಷಣೆ ಹಾಗೂ ವನ್ಯಜೀವಿಗಳಿಂದ ಮಾನವ ಜೀವ ಹಾನಿ, ಬೆಳೆ ಹಾನಿ ಆಗದಂತೆ ನಿಯಂತ್ರಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಕಾವಲು ಕಾಯಲು ಮತ್ತು ಕಾಡಿನಂಚಿನ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲು ಏಕೀಕೃತ ಕಮಾಂಡ್ ಕೇಂದ್ರ ಸ್ಥಾಪಿಸಲು ಸೂಚಿಸಿದ್ದು, ಕೂಡಲೇ ಇದಕ್ಕೆ ರೂಪುರೇಶೆ ಸಿದ್ಧಪಡಿಸಿ, ಡಿಪಿಆರ್ ಸಲ್ಲಿಸಲು ತಿಳಿಸಿದರು.

ಅಪಾಯಭತ್ಯೆ ನೀಡಲು ಸೂಚನೆ:

ಹೊರಗುತ್ತಿಗೆಯ ಮುಂಚೂಣಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸಲು ಮತ್ತು ಅವರೆಲ್ಲರಿಗೂ ಅಪಾಯ ಭತ್ಯೆ ಆಹಾರ ಭತ್ಯೆ ಸಕಾಲದಲ್ಲಿ ಪಾವತಿ ಆಗುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಸೂಚಿಸಿದ ಸಚಿವರು, ಈ ಬಗ್ಗೆ ಇನ್ನು ಮುಂದೆ ದೂರು ಬಂದರೆ, ಸಂಬಂಧಿತ ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ವರ್ಚುವಲ್ ಸಭೆಯಲ್ಲಿ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ, ಉನ್ನತಾಧಿಕಾರಿಗಳಾದ ಮನೋಜ್ ರಾಜನ್ ಮತ್ತಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News