×
Ad

ಬಿಜೆಪಿಗೆ ‘ಚುನಾವಣೆ’ ಬಗ್ಗೆ ಮಾತನಾಡುವ ನೈತಿಕತೆ ಇದೆಯೆ? : ಜೀವನಹಳ್ಳಿ ವೆಂಕಟೇಶ್

Update: 2024-10-07 21:58 IST

ಯಾದಗಿರಿ : ‘ಜನರಿಂದ ಆಯ್ಕೆಯಾದ ರಾಜ್ಯ ಸರಕಾರಗಳನ್ನು ಉರುಳಿಸಲು ‘ಆಪರೇಷನ್ ಕಮಲ’ದ ಹೆಸರಿನಲ್ಲಿ ಅಕ್ರಮ ನಡೆಸುವವರಿಗೆ ‘ಚುನಾವಣೆ’ ಬಗ್ಗೆ ಮಾತನಾಡುವ ನೈತಿಕತೆ ಇದೆಯೆ?’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಕಾರ್ಯಕಾರಿ ಸಮಿತಿ ಸಂಚಾಲಕ ಜೀವನಹಳ್ಳಿ ಆರ್. ವೆಂಕಟೇಶ್ ಪ್ರಶ್ನಿಸಿದ್ದಾರೆ.

ಸೋಮವಾರ ಇಲ್ಲಿನ ಸುರಪುರ ಪ್ರವಾಸಿ ಮಂದಿರದಲ್ಲಿ ದಸಂಸದಿಂದ ಏರ್ಪಡಿಸಿದ್ದ ‘ಪುನರ್ ಚೈತನ್ಯ’ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಒಂದು ದೇಶ-ಒಂದು ಚುನಾವಣೆ ಘೋಷಣೆ ಆಕರ್ಷಕವಾಗಿ ಕಾಣುತ್ತದೆ. ಆದರೆ, ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ಒಂದೇ ದೇಶ, ಒಂದೇ ಧರ್ಮ, ಒಂದೇ ಭಾಷೆ. ಒಂದೇ ಉಡುಪು, ಒಂದೇ ಆಹಾರ ಪದ್ಧತಿ, ಒಂದು ಚುನಾವಣೆ ದೇಶದ ಏಕತೆಗೆ ಮಾರಕ ಎಂದು ವಿಶ್ಲೇಷಿಸಿದರು.

‘ಒಂದೇ ಚುನಾವಣೆ ಮಾಡಿದರೆ ದೇಶದ ಜ್ವಲಂತ ಸಮಸ್ಯೆಗಳಾದ ಅಸ್ಪೃಶ್ಯತೆ, ನಿರುದ್ಯೋಗ, ಬಡತನ ಇಲ್ಲವಾಗುತ್ತದೆಯೇ? ಬೆಲೆ ಏರಿಕೆ ನಿಯಂತ್ರಣಕ್ಕೆ ಬರುತ್ತದೆಯೇ? ಇದೆಲ್ಲಾ ಜನರ ದಿಕ್ಕು ತಪ್ಪಿಸುವ ಕೆಲಸ ಎಂದು ಟೀಕಿಸಿದ ವೆಂಕಟೇಶ್, ಹಸಿವು, ಅಸ್ಪೃಶ್ಯತೆ, ಅಸಮಾನತೆ ಇಲ್ಲದ ಸಮಾಜ ನಿರ್ಮಾಣದ ಗುರಿ ದಲಿತ ಚಳವಳಿಯ ಆಶಯ ಎಂದರು.

ದಸಂಸ ರಾಜ್ಯದಲ್ಲಿ ನಿರಂತರವಾಗಿ ಸ್ವಾಭಿಮಾನಿ ಚಳವಳಿ ನಡೆಸಿ ಹಲವು ಮೈಲುಗಲ್ಲುಗಳನ್ನು ನಿರ್ಮಿಸಿ ಇದೀಗ 50 ವರ್ಷ ಸಂದಿದೆ. ಆದರೆ, ಸಂಘಟನೆ ಹಲವು ಬಾರಿ ವಿಘಟನೆಗೊಂಡು ಕವಲು ಒಡೆದಿದ್ದರೂ ಮತ್ತೆ ಒಂದಾಗುವ ಕನಸು ಕಾಣುತ್ತಿದ್ದೇವೆ ಎಂದ ಅವರು, ಆರೋಪಿಯೊಬ್ಬ ತಪ್ಪು ಮಾಡಿದ್ದಾನೆಂದು ‘ಬುಲ್ಡೋಝರ್’ ಬಳಸಿ ಇಡೀ ಕುಟುಂಬಕ್ಕೆ ಶಿಕ್ಷೆ ಕೊಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News