×
Ad

ಯಾದಗಿರಿಯ ಉದ್ಯೋಗಾಕಾಂಕ್ಷಿಗಳು ʼಕಲಬುರಗಿ ಬೃಹತ್ ಉದ್ಯೋಗ ಮೇಳʼದ ಸದುಪಯೋಗ ಪಡೆದುಕೊಳ್ಳಬೇಕು : ಜಿಲ್ಲಾಧಿಕಾರಿ ಡಾ.ಸುಶೀಲ.ಬಿ

Update: 2025-03-28 18:40 IST

ಯಾದಗಿರಿ: ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಬರುವ ಏಪ್ರಿಲ್ ಮೊದಲ ವಾರದಲ್ಲಿ, ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದ್ದು, ಜಿಲ್ಲೆಯ ನಿರುದ್ಯೋಗಿ ಅಭ್ಯರ್ಥಿಗಳು ಇದರ ಲಾಭ ಪಡೆಯುವಂತೆ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು(ಶುಕ್ರವಾರ) ಕಲಬುರಗಿ ಪ್ರಾದೇಶಿಕ ಬೃಹತ್ ಉದ್ಯೋಗ ಮೇಳದ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಕಲಬುರಗಿ ಪ್ರಾದೇಶಿಕ ಬೃಹತ್ ಉದ್ಯೋಗ ಮೇಳ ಇದಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊಳ್ಳುವ ಮೂಲಕ ಉದ್ಯೋಗದ ಲಾಭ ಪಡೆಯುವಂತೆ ಸಲಹೆ ನೀಡಿದರು.

ಉದ್ಯೋಗಾಕಾಂಕ್ಷಿಗಳ ಅನುಕೂಲಕ್ಕಾಗಿ ಗ್ರಾಮ ಪಂಚಾಯತ್, ಗ್ರಾಮವಾರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ವಾರ್ಡ್‌ವಾರು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸರ್ಕಾರಿ ಕಚೇರಿ, ಪಾಲಿಟೆಕ್ನಿಕ್, ಐಟಿಐ, ಡಿಪ್ಲೊಮಾ, ವಿವಿಧ ಕಾಲೇಜುಗಳ ವ್ಯಾಪ್ತಿಯಲ್ಲಿ ನಿರಂತರ ಅರಿವು ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಯಾದಗಿರಿ ಜಿಲ್ಲೆಯ ಎಸ್ಸೆಸೆಲ್ಸಿ, ಐ.ಟಿ.ಐ, ಡಿಪ್ಲೋಮಾ, ಯಾವುದೇ ಪದವಿ ಹಾಗೂ ಯಾವುದೇ ಸ್ನಾತಕೋತ್ತರ ಪದವಿಗಳನ್ನು ಪೂರ್ಣಗೊಳಿಸಿದ ನಿರುದ್ಯೋಗ ಯುವಕ-ಯುವತಿಯರಿಗೆ ವಿವಿಧ ಪ್ರತಿಷ್ಠಿತ ಕಂಪನಿ/ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶವಾಗಿದ್ದು, ಪ್ರತಿಯೊಬ್ಬರು www.skillconnect.koushalkar.com ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು, ಪ್ರಾದೇಶಿಕ ಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯ ಮಿಷನ್ ಸಹಾಯಕ ನಿರ್ದೇಶಕರಾದ ಶೀ ಬಸಪ್ಪ ತಳವಡಿ (9880072695) ಇವರನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಜಿ.ಪಂ.ಸಿಇಓ ಲವೀಶ್ ಒರಡಿಯಾ,ಅಪರ್ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News