ಸಿರವಾರ | ವಾರ್ಡ್ ನಂ.3ಕ್ಕೆ ಮೂಲಭೂತ ಸೌಲಭ್ಯ ನೀಡಲು ಮನವಿ
ಸಿರವಾರ : ಸಿರವಾರ ಪಟ್ಟಣವು ತಾಲೂಕು ಕೇಂದ್ರವಾಗಿದ್ದು ಸಿರವಾರ ಪಟ್ಟಣದ ವಾರ್ಡ್ ನಂ 3ರ ಗಿರಿಜಾ ಶಂಕರ ಕಾಲೋನಿಯಲ್ಲಿ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳು ಇರುವುದಿಲ್ಲ, ಕಾಲೋನಿಗೆ ಬೇಕಾಗಿರುವ ಮೂಲಭೂತ ಸೌಲಭ್ಯ ಒದಗಿಸುವಂತೆ ಕರ್ನಾಟಕ ರೈತ ಸಂಘ ತಾಲೂಕು ಘಟಕ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಾಲೋನಿಯಲ್ಲಿ ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ರಸ್ತೆ, ಹಾಗೂ ಬಡ ಜನರಿಗೆ ಸೂರಿಲ್ಲದೆ ಪಟ್ಟಣ ಪಂಚಾಯತ್ ವತಿಯಿಂದ ಮನೆಗಳನ್ನು ಮಂಜೂರು ಮಾಡಬೇಕು. ಕಾಲೋನಿಗೆ ಸಾರ್ವಜನಿಕ ಶೌಚಾಲಯ ಇರುವುದಿಲ್ಲ ಮತ್ತು ಸುಮಾರು 20 ವರ್ಷಗಳಿಂದ ಯಾವುದೇ ರೀತಿಯ ಮೂಲ ಸೌಲಭ್ಯಗಳಿಲ್ಲ ಜನರು ಪರದಾಡುವಂತಾಗಿದೆ. ಆದ್ದರಿಂದ ಗಿರಿಜಾ ಶಂಕರ ಕಾಲೋನಿಗೆ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಒಂದು ವೇಳೆ ಮೂಲ ಭೂತ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಬಗೆಹರಿಸದೇ ಇದ್ದಲ್ಲಿ ಪ.ಪಂ ಕಾರ್ಯಾಲಯದ ಮುಂದೆ ಧರಣಿ ಉಪವಾಸ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭೀಮವ್ವ, ಚೆನ್ನಮ್ಮ, ನರಸಮ್ಮ, ಮಹಾದೇವಿ, ಲಕ್ಷ್ಮೀ, ರೇಣುಕಮ್ಮ, ಹನುಮಂತಿ, ಖುರ್ಷೀದ, ಅಯ್ಯಮ್ಮ, ಅಲೀಮ, ಯಲ್ಲಮ್ಮ, ಅಮೀ, ಲಕ್ಷ್ಮೀ, ಚೆನ್ನಯ್ಯ ತಾತ, ಅನೀಫ, ಮಂಜು ಹಾಗೂ ಮೈಬೂ ಸೇರಿದಂತೆ ಇತರರಿದ್ದರು.