ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ: ಮಂಜುನಾಥ್ ಭಾರತಿ ಶ್ರೀ
ಬೀದರ್: ವಿದ್ಯಾರ್ಥಿಗಳಲ್ಲಿ ಗುಣಾತ್ಮಕ ಶಿಕ್ಷಣದ ಜೊತೆಗೆ ಅವರಲ್ಲಿ ಸಂಸ್ಕಾರ ಒಡಮೂಡಬೇಕಾದಲ್ಲಿ ಸುಸಂಸ್ಕೃತ ಶಿಕ್ಷಣದ ಅಗತ್ಯವಿದೆ ಎಂದು ಬೆಂಗಳೂರಿನ ಗೋಸಾವಿ ಮಠದ ಜಗದ್ಗುರು ವೇದಾಚಾರ್ಯ ಮಂಜುನಾಥ್ ಭಾರತಿ ಮಹಾ ಸ್ವಾಮಿಜಿ ಅವರು ನುಡಿದರು.
ಇಂದು ಅಣದೂರವಾಡಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಿಸಲಾದ ಪರಿವರ್ತನ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜು ಉದ್ಘಾಟಿಸಿ ಮಾತನಾಡಿರುವ ಅವರು, ಇಂದು ವಿದ್ಯಾರ್ಥಿಗಳಲ್ಲಿ ಸನ್ನಡತೆ, ಸಹನಶೀಲತೆ, ಸದ್ಗುಣಗಳು ಬೇರೂರಲು ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ವಿದ್ಯಾಥಿಗಳಲ್ಲಿ ಶಿಸ್ತು ಬರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ನೈತಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣದ ಅನಿವಾರ್ಯತೆ ಇದೆ ಎಂದರು.
ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರ, ಜೀವನದ ನಡತೆಯನ್ನು ಕಲಿಸಿ ಕೊಡಬೇಕಿದೆ. ಅದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅನುಕೂಲ ಆಗಲಿದೆ. ಇವತ್ತಿಗೂ ಕೂಡ ಎಷ್ಟೋ ಜನರಿಗೆ ಬಸ್ ಮೇಲಿರುವ ಬೋರ್ಡ್ ಗಳನ್ನು ಓದಿ ತಿಳಿಯಲು ಆಗುವುದಿಲ್ಲ. ಇತರರಿಗೆ ಕೇಳಿ ಬಸ್ ಒಳಗೆ ಏರಬೇಕಾದ ಪರಿಸ್ಥಿತಿಯಿದ್ದು, ಶಿಕ್ಷಣ ಇದ್ದರೆ ಎಲ್ಲವೂ ಸಾಧ್ಯ. ಹಾಗಾಗಿ ಮನುಷ್ಯನ ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಣ ರಹದಾರಿಯಾಗಿದೆ ಎಂದು ತಿಳಿಸಿದರು.
ಚಿದಂಬರ ಆಶ್ರಮದ ಡಾ.ಶಿವಕುಮಾರ್ ಮಹಾಸ್ವಾಮಿಜಿ ಸಾನಿಧ್ಯ ವಹಿಸಿ ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ಮೆಕಾಲೆ ಶಿಕ್ಷಣ ಬೇಕಿಲ್ಲ. ಬದಲಿಗೆ ತಂದೆ, ತಾಯಿ ಹಾಗೂ ಧರ್ಮವನ್ನು ಅರಿತುಕೊಳ್ಳುವ ನೈತಿಕ ಹಾಗೂ ಮಾನವಿಯ ಮೌಲ್ಯಯುತ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಾರೂತಿರಾವ್ ಮುಳೆ ಅವರು ಮಾತನಾಡಿ, ಇಂದು ಸ್ಪರ್ಧಾತ್ಮಕ ಶಿಕ್ಷಣದ ಅಗತ್ಯವಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಹಾಗೂ ಸಾಮಾನ್ಯ ಜ್ಞಾನವುಳ್ಳ ಶಿಕ್ಷಣ ಬೋಧಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಶರಣು ಸಲಗರ್, ಗ್ರಾಮ್ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಮಾದಪ್ಪ, ಉಪಾಧ್ಯಕ್ಷೆ ಶ್ರೀದೇವಿ ಅಂಬಾದಾಸ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಚಿದ್ರಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಾಬುರಾವ್ ಕಾರಬಾರಿ, ಮಾಜಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಂಡಿತರಾವ್ ಚಿದ್ರಿ, ಮರಾಠಾ ಸಮಾಜದ ಮುಖಂಡರಾದ ಕಿಶನರಾವ್ ಪಾಟೀಲ್ ಇಂಚೂರಕರ್, ಜರ್ನಾಧನ್ ಬಿರಾದಾರ್, ಜನಾರ್ಧನ್ ಪಾಟೀಲ್, ಅಶೋಕ್ ಸೋಂಜಿ, ಡಿಗಂಬರರಾವ್ ಮಾನಕಾರಿ, ಕೇಶವರಾವ್ ಕಣಜಿಕರ್, ಸತೀಶ್ ವಾಸರೆ, ಮಾಧವರಾವ್ ಕಾದೆಪುರಕರ್, ವಸಂತಾ ಕಾಲೇಜಿನ ಅಧ್ಯಕ್ಷ ಚಂದ್ರಕಾಂತ್ ಗದ್ದಗಿ ಹಾಗೂ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.