ಸುರಪುರ | 16.5 ಟನ್ ಪಡಿತರ ಅಕ್ಕಿ ಜಪ್ತಿ; ವಾಹನ ಸಹಿತ ವ್ಯಕ್ತಿ ವಶಕ್ಕೆ
ಸುರಪುರ: ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸಲಾಗುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿಯನ್ನು ವಾಹನ ಸಮೇತ ಅಧಿಕಾರಿಗಳು ಜಪ್ತಿ ಮಾಡಿ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.
ತಾಲೂಕಿನ ಕಕ್ಕೇರ ಪಟ್ಟಣದ ಕಡೆಯಿಂದ ಕಲಬುರಗಿ ಕಡೆಗೆ ಹೊರಟಿದ್ದ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿರೀಕ್ಷಕ ಚಿದಾನಂದ ಕಕ್ಕಳಮೇಲಿ ಅವರ ನೇತೃತ್ವದ ತಂಡ ಪಟ್ಟಣದ ಕುಂಬಾರಪೇಟ ಕ್ರಾಸ್ ಬಳಿ ವಾಹನವನ್ನು ತಡೆದು ನಿಲ್ಲಿಸಿತು.
ವಾಹನವನ್ನು ತಪಾಸಣೆ ನಡೆಸಿದಾಗ ತಲಾ 50 ಕೆ.ಜಿ. ತೂಕದ ಸುಮಾರು 330 ಚೀಲ ಪಡಿತರ ಅಕ್ಕಿ ಇರುವುದು ಪತ್ತೆಯಾಗಿದೆ. ಒಟ್ಟು 16,500 ಕೆ.ಜಿ. ಪಡಿತರ ಅಕ್ಕಿ ಇದ್ದು, ಇದರ ಅಂದಾಜು ಮೌಲ್ಯ 3,82,800 ರೂ. ಎಂದು ತಿಳಿಸಲಾಗಿದೆ.
ಅಕ್ಕಿಯನ್ನು ವಾಹನ ಸಮೇತ ಜಪ್ತಿ ಮಾಡಲಾಗಿದ್ದು, ವಾಹನ ಚಾಲನೆ ಮಾಡುತ್ತಿದ್ದ ಆಳಂದ ತಾಲೂಕಿನ ಮಮದಾಪುರ ಗ್ರಾಮದ 32 ವರ್ಷದ ಮೌನೇಶ ಮಾಲಿ ಪಾಟೀಲ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ.
ಈ ಕುರಿತು ಆಹಾರ ನಿರೀಕ್ಷಕ ಚಿದಾನಂದ ಕಕ್ಕಳಮೇಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ದಾಳಿ ಸಂದರ್ಭದಲ್ಲಿ ಪಿಎಸ್‌ಐ ಕೃಷ್ಣ ಸುಬೇದಾರ, ಎಂಎಸ್‌ಐ ಬೀರಪ್ಪ, ಆಹಾರ ನಿರೀಕ್ಷಕ ಆದಾಯ ಹಿರೇಮಠ ಸೇರಿದಂತೆ ಇತರರು ಭಾಗವಹಿಸಿದ್ದರು.