ಯಾದಗಿರಿ: ರಾಜ್ಯ ಸರ್ಕಾರ ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತು ನೀಡಿ ಹಾಲು ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುತ್ತಿರುವಂತೆ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡುತ್ತಿಲ್ಲ. ಇದರಿಂದ ಈ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಯಾದಗಿರಿ ಜಿಲ್ಲೆಯ ದೋರನಹಳ್ಳಿ ಹಾಲು ಸಂಸ್ಕರಣಾ ಕೇಂದ್ರವನ್ನು ಪುನರ್‌ಪ್ರಾರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೋರನಹಳ್ಳಿ ಹಾಲು ಸಂಸ್ಕರಣಾ ಕೇಂದ್ರವನ್ನು ಪುನರ್‌ಪ್ರಾರಂಭಿಸುವುದರ ಜೊತೆಗೆ ರೈತರು ಹಾಲು ಮಾರಾಟ ಮಾಡಲು ಪ್ರತಿ ಹಳ್ಳಿಯಲ್ಲೂ ಹಾಲು ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಸದ್ಯ ಬರಗಾಲ ಘೋಷಣೆಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸಂಕಷ್ಟದಲ್ಲಿರುವ ರೈತರನ್ನು ಬಲಪಡಿಸಲು ಪ್ರತಿ ರೈತನಿಗೆ ಸರ್ಕಾರದ ವತಿಯಿಂದ ಎರಡು ಹಸುಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಲಬುರಗಿ–ಬೀದರ್ ಹಾಲು ಒಕ್ಕೂಟದ ವತಿಯಿಂದ ಪ್ರತಿ ಹಳ್ಳಿಯಲ್ಲಿ ಕೆಎಂಎಫ್ ಮಳಿಗೆ ಹಾಗೂ ಹಾಲು ಮಾರಾಟ ಕೇಂದ್ರಗಳ ಫ್ರಾಂಚೈಸಿಗಳನ್ನು ಆರಂಭಿಸಿ, ರೈತರ ಮಕ್ಕಳಿಗೆ ಸರ್ಕಾರದ ಸಹಾಯಧನದ ಮೂಲಕ ನೀಡಬೇಕು. ಇದರಿಂದ ಹಾಲು ಉತ್ಪನ್ನಗಳು ಪ್ರತಿಯೊಂದು ಹಳ್ಳಿಯಲ್ಲೂ ಮಾರಾಟವಾಗುವುದರ ಜೊತೆಗೆ ರೈತರ ಮಕ್ಕಳಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

ಹಳ್ಳಿಗಳಲ್ಲಿ ಸರ್ಕಾರದ ವತಿಯಿಂದ ಕೋ-ಆಪರೇಟಿವ್ ಸೊಸೈಟಿಗಳ ಮೂಲಕ ರೈತರಿಗೆ ನೇರವಾಗಿ ಸಾಲ ಸೌಲಭ್ಯ ಒದಗಿಸಬೇಕು. ರೈತರಿಗೆ ಅನುಕೂಲವಾಗುವಂತೆ ಹಾಗೂ ಜನರ ಗುಳೆ ತಪ್ಪಿಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿಯಿಂದ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ತರಬೇಕು. ಸಂಪೂರ್ಣ ಬರಪೀಡಿತ ಯಾದಗಿರಿ ಜಿಲ್ಲೆಯನ್ನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರೈತರ ನೆರವಿಗೆ ಸರ್ಕಾರ ಧಾವಿಸಲು ಇದು ಸೂಕ್ತಕಾಲವಾಗಿದೆ. ಉತ್ತರ ಕರ್ನಾಟಕದ ರೈತರಿಗೆ, ವಿಶೇಷವಾಗಿ ಸಂಪೂರ್ಣ ಬರಪೀಡಿತ ಯಾದಗಿರಿ ಜಿಲ್ಲೆಗೆ ವಿಶೇಷ ಆದ್ಯತೆ ನೀಡಿ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲೆಯ ನಾಲ್ವರು ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಶ ಹತ್ತಿಮನಿ, ಅಬ್ದುಲ್ ಚಿಗಾನೂರ, ನಿಂಗಪ್ಪ ಗುಡಗುಡಿ, ಚೌಡಯ್ಯ ಬಾವೂರ, ಹಣಮಂತ ತೇಕರಾಳ, ಭೀಮರಾಯ ರಾಮಸಮುದ್ರ, ಅಂಬ್ರೇಶ ಕಟ್ಟಿಮನಿ, ಮಲ್ಲಿಕಾರ್ಜುನ ದೋರನಹಳ್ಳಿ, ಕಾಶೀನಾಥ ನಾನೇಕ, ಅಶೋಕ ನಾಯಕ, ಬಸವರಾಜ ಜಗನ್ನಾಥ, ಸಿದ್ದಪ್ಪ ಕ್ಯಾಸಪನಳ್ಳಿ, ಸಿದ್ದಪ್ಪ ಕೂಯಿಲೂರು, ಮರೆಪ್ಪ ಕಡ್ಡಿ ಹಾಗೂ ರಮೇಶ ನಾಯಕ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor