ಸುರಪುರ: ರಸ್ತೆ ಸಂಚಾರ ನಿಯಮಗಳನ್ನು ಪಾಲಿಸದಿದ್ದರೆ ದಂಡ ವಿಧಿಸುವುದು ಅನಿವಾರ್ಯವಾಗಲಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಮುದುಕಪ್ಪ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಪಟ್ಟಣದ ನ್ಯಾಯಾಲಯದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಹಾಗೂ ಕಾನೂನು ಅರಿವು–ನೆರವು ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರು ತಪ್ಪದೇ ಸಂಚಾರ ನಿಯಮಗಳನ್ನು ಪಾಲಿಸಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡುವುದು ಕಾನೂನು ಉಲ್ಲಂಘನೆಯಾಗುತ್ತದೆ. ಜಾಗೃತಿ ಮೂಡಿಸಿದ ಬಳಿಕವೂ ನಿಯಮ ಪಾಲಿಸದಿದ್ದರೆ ದಂಡ ವಿಧಿಸಲಾಗುತ್ತದೆ. ಈ ಕುರಿತು ಅ.3ರಂದು ಬೆಳಗ್ಗೆ ಪಟ್ಟಣದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಹಾಗೂ ಕಾನೂನು ಅರಿವು–ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ ನಗರದ ಪ್ರಮುಖ ರಾಜಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಲಿದೆ ಎಂದರು.

ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡಬಾರದು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಬೈಕ್ ಓಡಿಸಬಾರದು. ಅತಿವೇಗ ಅಪಘಾತಕ್ಕೆ ಕಾರಣವಾಗುತ್ತದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಕಾನೂನು ಉಲ್ಲಂಘನೆಯಾಗಿದ್ದು, ಇದರಿಂದ ಸಾಕಷ್ಟು ತೊಂದರೆಗಳು ಉಂಟಾಗುತ್ತವೆ. ಆದ್ದರಿಂದ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಗೂಡ್ಸ್ ವಾಹನಗಳಲ್ಲಿ ಜನರನ್ನು ಕೂರಿಸಿಕೊಂಡು ಸಾಗಿಸುವುದು ನಿಯಮಬಾಹಿರವಾಗಿದ್ದು, ಈ ಕುರಿತು ಮೊದಲು ಕಾನೂನು ತಿಳಿವಳಿಕೆ ನೀಡುವುದು ಆರ್‌ಟಿಒ ಹಾಗೂ ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ. ಆಟೋ ಚಾಲಕರು ನಿಯಮ ಉಲ್ಲಂಘಿಸಿ ಹೆಚ್ಚಿನ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗಬಾರದು. ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಚಾಲಕರಿಗೆ ಈ ಕುರಿತು ಜಾಗೃತಿ ಮೂಡಿಸಬೇಕು. ನಿಯಮ ಪಾಲಿಸದಿದ್ದರೆ ದಂಡ ವಿಧಿಸಬಹುದು. ಆಟೋ ಚಾಲಕರು ತಮ್ಮ ಹೆಸರು ಹಾಗೂ ಚಾಲನಾ ಪರವಾನಗಿಯನ್ನು ಆಟೋದಲ್ಲಿ ಪ್ರದರ್ಶಿಸಬೇಕು ಎಂದು ಹೇಳಿದರು.

ಬೈಕ್, ಆಟೋ ಅಥವಾ ಯಾವುದೇ ವಾಹನಗಳಲ್ಲಿ ಕರ್ಕಶ ಧ್ವನಿ ಮಾಡುವ ಹಾರ್ನ್ ಬಳಸಿಕೊಂಡು ಸಂಚರಿಸುವುದು ಕಾನೂನುಬಾಹಿರವಾಗಿದೆ. ತ್ರಿಬಲ್ ರೈಡಿಂಗ್ ಮಾಡದಂತೆ ಜಾಗೃತಿ ಮೂಡಿಸಬೇಕು. ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ಅರಿವು ಮೂಡಿಸಬೇಕು. ರಸ್ತೆ ನಿಯಮಗಳ ಕುರಿತು ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಎಲ್ಲರೂ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಸವರಾಜ ಡಿ. ಅನಸೂರ ಮಾತನಾಡಿದರು. ಭೀಮಣ್ಣ ಬನಸೋಡೆ ನಿರೂಪಿಸಿ ವಂದಿಸಿದರು.

ಯಾದಗಿರಿ ಆರ್‌ಟಿಒ ಮಿಲಿಂದಕುಮಾರ, ಪಿಐ ಉಮೇಶ ಎಂ., ಪಿಎಸ್‌ಐಗಳಾದ ಹಣಮಂತ್ರಾಯ, ರಾಜಶೇಖರ ರಾಠೋಡ, ಭಾಗಣ್ಣ, ಗೃಹರಕ್ಷಕ ದಳದ ಘಟಕಾಧಿಕಾರಿ ವೆಂಕಟೇಶ ಸುರಪುರ, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಸಂಗಮೇಶ ದಳವಾಯಿ, ಪ್ಯಾನಲ್ ವಕೀಲರಾದ ವಿನೋದ ಜೇವರ್ಗಿ, ಜ್ಯೋತಿ ಎಲ್. ನಾಯಕ, ಮಲ್ಲಣ್ಣ, ಯಲ್ಲಪ್ಪ ಹುಲಿಕಲ್, ಮಂಜುನಾಥ ಗುರುಗುಂಟ, ಪೂಜಾ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪೋಷಕರು ಅಪ್ರಾಪ್ತರಿಗೆ ಬೈಕ್ ನೀಡದಂತೆ ಜಾಗೃತಿ ವಹಿಸಬೇಕು. ರಸ್ತೆ ನಿಯಮ ಪಾಲಿಸಿದರೆ ಅಮೂಲ್ಯ ಜೀವಗಳನ್ನು ಉಳಿಸಬಹುದು. ಈ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.

-ಮುದುಕಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor