Yadagiri | ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಿ: ಶ್ರೀನಿವಾಸರಡ್ಡಿ ಪಾಟೀಲ್
ಯಾದಗಿರಿ: ದೇಶದ ವೈದ್ಯಕೀಯ ಪದ್ಧತಿಗಳಲ್ಲಿ ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ಮಹತ್ವವಿದೆ. ಪ್ರಸಕ್ತ ದಿನಗಳಲ್ಲಿ ಜನರು ಆಯುರ್ವೇದ ಚಿಕಿತ್ಸೆಯತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಸರ್ಕಾರ ಜಿಲ್ಲೆಯಲ್ಲಿ ಇನ್ನಷ್ಟು ಆಯುರ್ವೇದ ಆಸ್ಪತ್ರೆಗಳನ್ನು ಆರಂಭಿಸಿ, ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಅವುಗಳನ್ನು ಕ್ರಿಯಾಶೀಲಗೊಳಿಸಬೇಕು. ಇದರಿಂದ ಜನರಿಗೆ ಸಕಾಲದಲ್ಲಿ ಆಯುರ್ವೇದ ಚಿಕಿತ್ಸೆ ದೊರೆಯುವಂತಾಗಿ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆಗೆ ಪ್ರೇರಣೆ ಸಿಗುತ್ತದೆ ಎಂದು ವಡಗೇರಾ ಜಿ.ಪಂ. ಮಾಜಿ ಸದಸ್ಯ ಶ್ರೀನಿವಾಸರಡ್ಡಿ ಪಾಟೀಲ್ ಚೆನ್ನೂರ ಹೇಳಿದರು.
ಬುಧವಾರ ನಗರದ ಆಯುರ್ವೇದ ಜಿಲ್ಲಾಸ್ಪತ್ರೆಯಲ್ಲಿ ಏಷಿಯನ್ ನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ವತಿಯಿಂದ ಆರೋಗ್ಯ ಕ್ಷೇತ್ರದಲ್ಲಿ ನೀಡಲಾಗುವ ‘ಆಯುರ್ಭೂಷಣ’ ಪ್ರಶಸ್ತಿಗೆ ಭಾಜನರಾದ ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯ ಡಾ. ಪ್ರಮೋದ ಕುಲಕರ್ಣಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಡಾ. ಪ್ರಮೋದ ಕುಲಕರ್ಣಿ ಅವರು ಗಡಿಭಾಗದ ಮಾದ್ವಾರ ಆಯುರ್ವೇದ ಆಸ್ಪತ್ರೆಯಲ್ಲಿ 30 ವರ್ಷಗಳ ಕಾಲ ಪ್ರಾಮಾಣಿಕವಾಗಿ ಹಾಗೂ ಜನಸ್ನೇಹಿಯಾಗಿ ಸೇವೆ ಸಲ್ಲಿಸಿದ್ದಾರೆ. ಆಯುರ್ವೇದ ಚಿಕಿತ್ಸೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಅದರ ಪ್ರಯೋಜನಗಳನ್ನು ಜನರಿಗೆ ತಲುಪಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದಾರೆ ಎಂದು ಹೇಳಿದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶರಣಪ್ಪಗೌಡ ಕೌಳೂರ ಮಾತನಾಡಿ, ಜಿಲ್ಲೆಯಲ್ಲಿ ಕೇವಲ ಎರಡು ಆಯುರ್ವೇದ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಮೂರು ಚಿಕಿತ್ಸಾಲಯಗಳಿವೆ. ಸರ್ಕಾರ ಜಿಲ್ಲೆಯಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ರೋಗಿಗಳಿಗೆ ದೊರೆಯುವಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಇದರಿಂದ ರೋಗಿಗಳು ಚಿಕಿತ್ಸೆಗಾಗಿ ದೂರದ ಧರ್ಮಸ್ಥಳ, ಹಾಸನ, ಮಂಗಳೂರು, ಉಡುಪಿ, ಬೆಂಗಳೂರು, ಸಾಂಗ್ಲಿ ಹಾಗೂ ಮೀರಜ್‌ನ ಆಸ್ಪತ್ರೆಗಳಿಗೆ ಅಲೆದಾಡುವುದು ತಪ್ಪಲಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪ್ರಮೋದ ಕುಲಕರ್ಣಿ, ತಮ್ಮ ಇಲಾಖೆಯಿಂದ ಈಗಾಗಲೇ ನಗರದಲ್ಲಿ 50 ಹಾಸಿಗೆಗಳ ಆಯುರ್ವೇದ ಜಿಲ್ಲಾಸ್ಪತ್ರೆ ಸ್ಥಾಪಿಸಲು ಯೋಜನಾ ಪ್ರಸ್ತಾವನೆಯನ್ನು ಹಿರಿಯ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆಸ್ಪತ್ರೆ ಆರಂಭಗೊಂಡರೆ ಕಲ್ಯಾಣ ಕರ್ನಾಟಕ ಭಾಗದ ರೋಗಿಗಳಿಗೆ ಆಯುರ್ವೇದದ ವಿವಿಧ ಚಿಕಿತ್ಸಾ ಸೌಲಭ್ಯಗಳನ್ನು ಒಂದೇ ಕಡೆ ಒದಗಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಹಿರಿಯ ಮುಖಂಡ ಹೊನ್ನಪ್ಪ ಮುಸ್ಟೂರ, ಸಂಗಮೇಶ ಕೆಂಭಾವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.