ಯಾದಗಿರಿ: ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಕೀರ್ತಿ ಬೆಳಗಿಸಬೇಕು ಎಂದು ಶಾಲಾ ಶಿಕ್ಷಣ (ಪದವಿಪೂರ್ವ ಶಿಕ್ಷಣ) ಇಲಾಖೆ ಉಪನಿರ್ದೇಶಕ ಸುದೀಪ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 2026-27ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ಸಿಎಂ ಕಪ್ ಕ್ರೀಡಾಕೂಟ ಹಾಗೂ ವೇಟ್‌ಲಿಫ್ಟಿಂಗ್‌ನ ನೂತನ ಸಾಧನ–ಸಲಕರಣೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಆಧುನಿಕ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬರಬೇಕು. ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಸೋಲು–ಗೆಲುವಿಗೆ ಹೆಚ್ಚಿನ ಮಹತ್ವ ನೀಡದೆ, ಸಕ್ರಿಯವಾಗಿ ಹಾಗೂ ಕ್ರೀಡಾ ಮನೋಭಾವದಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಯಶಸ್ವಿಯಾಗಬೇಕು ಎಂದು ಸಲಹೆ ನೀಡಿದರು.

ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ತಂಡದ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ (ಪ್ರ) ಸುಲೈಮಾನ್ ನದಾಫ್, ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಹಣಮಂತ ಹೊಸಮನಿ, ಮಾನಯ್ಯ ಗೋನಾಲ, ಸಂಗಮೇಶ ಕೊಂಬಿನ್, ಸ್ಟೀವನ್ ಹಾಗೂ ಸ್ಟೀಫನ್ ಸುಪ್ರೀತ್ ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಲಾಯಿತು. ದೈಹಿಕ ಶಿಕ್ಷಕ ತುಳಜಪ್ಪ ಪ್ರಮಾಣ ವಚನ ಬೋಧಿಸಿದರು. ಏಳು ಜಿಲ್ಲೆಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ರಾಯಚೂರು ಬಾಲಕಿಯರ ತಂಡ ಪ್ರಾರ್ಥನೆ ಸಲ್ಲಿಸಿತು. ಯಾದಗಿರಿ ಕ್ರೀಡಾ ತಂಡದ ಬಾಲಕರು ಕ್ರೀಡಾ ಜ್ಯೋತಿ ಹಸ್ತಾಂತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor