×
Ad

ಯಾದಗಿರಿ | ಮೂಢನಂಬಿಕೆ ಅಳಿಸಿ ವೈಜ್ಞಾನಿಕ ಮನೋಭಾವ ಬೆಳೆಸೋಣ : ಡಾ.ದಾಕ್ಷಾಯಣಿ ಎಸ್.ಅಪ್ಪ

ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ಸಮಾರೋಪ

Update: 2025-12-30 22:53 IST

ಯಾದಗಿರಿ, ಡಿ.30: ಮೂಢನಂಬಿಕೆಗಳನ್ನು ಅಳಿಸಿ ಸಮಾಜದಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ ಉದ್ದೇಶದೊಂದಿಗೆ ಆಯೋಜಿಸಿದ್ದ ಈ ಕಾರ್ಯಕ್ರಮ ಅಪೂರ್ವ ಹಾಗೂ ಅರ್ಥಪೂರ್ಣವಾಗಿದೆ ಎಂದು ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಶ್ರ ಡಾ. ದಾಕ್ಷಾಯಣಿ ಎಸ್.ಅಪ್ಪ ಹೇಳಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನದ ಕೊನೆಯ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ತಮ್ಮ ಆಶಯ ನುಡಿಗಳನಾಡಿದ ಅವರು, ಉತ್ತಮ ಉಪನ್ಯಾಸಗಳೊಂದಿಗೆ ಪುರುಷ ಮತ್ತು ಸ್ತ್ರೀ ಸಾಧಕರಿಗೆ ಸನ್ಮಾನ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ಮಾನವನು ಯಾವುದೇ ಕಾರ್ಯ ಕೈಗೊಳ್ಳುವ ಮುನ್ನ ಸೂಕ್ತವಾಗಿ ವಿಚಾರ ಮಾಡಬೇಕು ಎಂಬ ಬಸವಣ್ಣರ ನುಡಿಯನ್ನು ಸ್ಮರಿಸಿದ ಅವರು, ವೈಜ್ಞಾನಿಕ ಚಿಂತನೆಯಿಂದಲೇ ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಕ ಮೂಡುತ್ತದೆ. ಮೂಢನಂಬಿಕೆ ಹಾಗೂ ಅಪನಂಬಿಕೆಗಳನ್ನು ಹೊಡೆದೋಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಈ ಕಾರ್ಯಕ್ರಮ ಮಾಡಿದೆ ಎಂದು ಹೇಳಿದರು.

ವಿಜ್ಞಾನವು ಮಾನವನ ಕಲ್ಯಾಣ, ಪರಿಸರ ಸಂರಕ್ಷಣೆ, ಆರೋಗ್ಯ ರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಬಳಸಬೇಕು. ಮಾನವೀಯ ಮೌಲ್ಯಗಳೊಂದಿಗೆ ವಿಜ್ಞಾನವನ್ನು ಬೆಳೆಸಿದಾಗ ಮಾತ್ರ ಸಮಾಜ ಸರ್ವಾಂಗೀಣವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಬೆಳಗಾವಿಯಲ್ಲಿ 2026ರ 6ನೇ ವೈಜ್ಞಾನಿಕ ಸಮ್ಮೇಳನ: ಮುಂದಿನ 6ನೇ ವೈಜ್ಞಾನಿಕ ಸಮ್ಮೇಳನವನ್ನು ರಾಜ್ಯದ ಗಡಿಜಿಲ್ಲೆ, ಕುಂದಾನಗರಿ ಬೆಳಗಾವಿಯಲ್ಲಿ ನಡೆಸಲು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಕಾರ್ಯಕಾರಿ ಸಮಿತಿಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ.

ಮಂಗಳವಾರ ನಡೆದ ಪರಿಷತ್ತಿನ ಮಹಾಧಿವೇಶನದಲ್ಲಿ ಬೆಳಗಾವಿಯಲ್ಲಿ 2026ರ 6ನೇ ವೈಜ್ಞಾನಿಕ ಸಮ್ಮೇಳನವನ್ನು ನಡೆಸುವುದು ಸೂಕ್ತ ಎನ್ನುವ ನಿಲುವಿಗೆ ಪರಿಷತ್ತು ಒಪ್ಪಿಗೆ ನೀಡಿತು. ಡಾ. ಹುಲಿಕಲ್ ನಟರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಅಧಿವೇಶನದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಒಮ್ಮತದಿಂದ ಸಮ್ಮತಿ ನೀಡಿದರು.

ಖ್ಯಾತ ವಿಜ್ಞಾನಿ ಹಾಗೂ ಪರಿಷತ್ತಿನ ಮಹಾ ಪೋಷಕ ಡಾ. ಎ.ಎಸ್. ಕಿರಣ್ ಕುಮಾರ್ ಅವರು ಬೆಳಗಾವಿಯಲ್ಲಿ 6ನೇ ವೈಜ್ಞಾನಿಕ ಸಮ್ಮೇಳನ ನಡೆಸುವ ಬಗ್ಗೆ ಅನುಮೋದನೆ ನೀಡಿದರು. ನಂತರ ಮುಂದಿನ ‘ನಮ್ಮ ವೈಜ್ಞಾನಿಕ ನಡೆ- ಕುಂದಾನಗರಿ ಬೆಳಗಾವಿ ಕಡೆ’ ಎಂದು ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಘೋಷಿಸಿದರು. ಸರ್ವಸದಸ್ಯರೆಲ್ಲರೂ ಚಪ್ಪಾಳೆ ತಟ್ಟಿ ಬೆಂಬಲಿಸಿದರು.

ಸಚಿವರು ಸ್ವತಃ ಉದ್ಗಾಟನಾ ಸಮಾರಂಭದ ವೇದಿಕೆಯಲ್ಲಿಯೇ ಬೆಳಗಾವಿಯಲ್ಲಿ 6ನೇ ಸಮ್ಮೇಳನ ನಡೆಸಲು ಮನವಿ ಮಾಡಿಕೊಂಡಿದ್ದರು.

ದೇವರ ಹೆಸರಿನಲ್ಲಿ ಮಹಿಳೆಯರ ಉಪವಾಸ ಅಪೌಷ್ಠಿಕತೆಗೆ ಕಾರಣ :

ದೇವರ ಹೆಸರಲ್ಲಿ ಮಹಿಳೆಯರು ವಾರದಲ್ಲಿ ಮೂರು ನಾಲ್ಕು ದಿನಗಳ ಕಾಲ ಉಪವಾಸ ಮಾಡುವ ಮೂಲಕ ಅಪೌಷ್ಠಿಕತೆಗೆ ಒಳಗಾಗುತ್ತಿದ್ದಾರೆ ಎಂದು ಯಾದಗಿರಿಯ ಸರಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಜಯದೇವಿ ಗಾಯಕವಾಡ ಆತಂಕ ವ್ಯಕ್ತಪಡಿಸಿದ್ದಾರೆ.

‘ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ’ ಚಿಂತನಾ ಗೋಷ್ಠಿಯಲ್ಲಿ ಸಾಮಾಜಿಕ ಜಾಲ ತಾಣಗಳ ತಲ್ಲಣಗಳು ಎಂಬ ವಿಷಯ ಮಂಡಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಆಧುನಿಕತೆಯತ್ತ ಮುಖ ಮಾಡುತ್ತಿದ್ದೇವೆ ನಿಜ. ಆದರೆ, ಅಷ್ಟೇ ಅಜ್ಞಾನ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣ, ಟಿವಿಗಳಲ್ಲಿ ಮೌಡ್ಯ ಹೆಚ್ಚಾಗಿ ಬಿತ್ತರಿಸಲಾಗುತ್ತಿದೆ. ಇದರಿಂದ ಬಡತನ ಕಾಡುತ್ತಿದೆ, ಸಾಮಾಜಿಕ ಪಿಡುಗು ಹೆಚ್ಚಾಗುತ್ತಿದೆ. ಶಾಸ್ತ್ರ, ಸಂಪ್ರದಾಯ ಮೌಡ್ಯತೆಗಳು ನಮ್ಮನ್ನು ಕಿತ್ತು ತಿನ್ನುತ್ತಿವೆ ಎಂದರು.

ಸಮಾಜದಲ್ಲಿ ಅಜ್ಞಾನವನ್ನು ತೊಲಗಿಸಬೇಕಿದೆ. ಜಾತಿ, ಮತ, ಧರ್ಮ ಮೀರಿ ಬೆಳೆಯಬೇಕು. ತಾರತಮ್ಯ ದೂರವಾಗಬೇಕು. ಇಂದು ಭಾರತ ವಿಶ್ವಮಟ್ಟದಲ್ಲಿ ಬಹಳಷ್ಟು ಬೆಳೆಯುತ್ತಿದೆ, ನಿಜ. ಆದರೆ, ಭಾರತ ದೇಶ ಮೂಢ, ಮೌಢ್ಯಗಳ ತವರೂರು ಆಗಿ ಮಾರ್ಪಟ್ಟಿರುವುದು ಆತಂಕದ ಸಂಗತಿ. ಇತ್ತೀಚೆಗೆ ಪ್ರಜ್ಞಾವಂತ, ಬುದ್ದಿವಂತರೇ ಹೆಚ್ಚು ಮೂಢನಂಬಿಕೆಗೆ ಬಲಿಯಾಗಿ ಸಲ್ಲದ ಆಚರಣೆಗಳನ್ನು ಮಾಡುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News