ಯಾದಗಿರಿ | ಶೇಂಗಾ ದರ ಹಠಾತ್ ಕುಸಿತ: ಎಪಿಎಂಸಿ ಯಾರ್ಡ್‌ನಲ್ಲಿ ರೈತರ ಪ್ರತಿಭಟನೆ
ಯಾದಗಿರಿ: ಶೇಂಗಾ ದರ ಹಠಾತ್ ಕುಸಿತಗೊಂಡ ಪರಿಣಾಮ ನಗರದ ಎಪಿಎಂಸಿ ಯಾರ್ಡ್‌ನ ಅಡತ್ ಅಂಗಡಿಗಳ ಮುಂದೆ ಹಾಗೂ ಎಪಿಎಂಸಿ ಕಚೇರಿ ಎದುರು ಹತ್ತಾರು ಹಳ್ಳಿಗಳ ರೈತರು ಮಂಗಳವಾರ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೊನ್ನೆ ತನಕ ಗರಿಷ್ಠ ದರದಲ್ಲಿ ಶೇಂಗಾ ಮಾರಾಟವಾಗುತ್ತಿದ್ದರೆ, ನಿನ್ನೆ ಹಾಗೂ ಇಂದು ಏಕಾಏಕಿ ಪ್ರತಿ ಕ್ವಿಂಟಾಲ್‌ಗೆ ಕೇವಲ 5 ರಿಂದ 6 ಸಾವಿರ ರೂ. ದರ ನಿಗದಿಯಾಗಿರುವುದು ರೈತರ ಅಸಮಾಧಾನಕ್ಕೆ ಕಾರಣವಾಯಿತು. ಇದರಿಂದ ಶೇಂಗಾ ಮಾರಾಟಕ್ಕೆ ಬಂದಿದ್ದ ನೂರಾರು ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರಾಶಿ ಮಾಡಿಕೊಂಡು ಯಾರ್ಡ್‌ಗೆ ತಂದ ಶೇಂಗಾ ಬೆಳೆಗೆ ಸರಿಯಾದ ದರ ನಿಗದಿಯಾಗದೆ ರೈತರು ತೀವ್ರ ಸಂಕಷ್ಟ ಅನುಭವಿಸಿದರು. ವಿವಿಧ ಅಡತ್ ಅಂಗಡಿಗಳ ಮುಂದೆ ರಾಶಿಗಟ್ಟಲೇ ಶೇಂಗಾ ಬೀಜಗಳನ್ನು ಇಳಿಸಿದ ರೈತರು, ಉತ್ತಮ ದರ ಇಲ್ಲದ ಕಾರಣ ತಲೆ ಮೇಲೆ ಕೈ ಇಟ್ಟುಕೊಂಡು ಅಸಹಾಯಕತೆ ವ್ಯಕ್ತಪಡಿಸಿದರು.
ಸಾಲ ಮಾಡಿ ಶೇಂಗಾ ಬೆಳೆದಿದ್ದೇವೆ. ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಸಾಲ ತೀರಿಸಬೇಕೆಂದುಕೊಂಡಿದ್ದೆವು. ಆದರೆ ಹೀಗೆ ಏಕಾಏಕಿ ದರ ಇಳಿಸಿದರೆ ನಮಗೆ ಸಾವೇ ಗತಿ ಎಂದು ಅನೇಕ ರೈತರು ಕಣ್ಣೀರಿಟ್ಟರು.
ಕಳೆದ ಎರಡು ದಿನಗಳಿಂದ ಬಳಿಚಕ್ರ, ಟೋಕಾಪುರ, ರಾಮಸಮುದ್ರ, ಕಾಳೆಬೆಳಗುಂದಿ, ಕಿಲ್ಲನಕೇರಾ, ನಾಗರಬಂಡಿ, ಗೌಡಗೇರಾ ಸೇರಿದಂತೆ ಹಲವು ಗ್ರಾಮಗಳಿಂದ ನೂರಾರು ರೈತರು ಶೇಂಗಾ ರಾಶಿಗಳನ್ನು ತಂದು ಅಡತ್ ಅಂಗಡಿಗಳ ಮುಂದೆ ಇಳಿಸಿದ್ದಾರೆ. ವ್ಯಾಪಾರಿಗಳು ಬಂದು ಹೆಚ್ಚಿನ ದರಕ್ಕೆ ಖರೀದಿ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದರು. ಆದರೆ ಖರೀದಿದಾರರು ಬಾರದ ಕಾರಣ ಹಾಗೂ ಕಡಿಮೆ ದರ ನಿಗದಿಯಾಗಿರುವ ಸುದ್ದಿ ತಿಳಿದು ರೈತರು ಆಕ್ರೋಶಗೊಂಡರು.
ನಂತರ ರೈತರು ಎಪಿಎಂಸಿ ಕಚೇರಿಗೆ ತೆರಳಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಆದರೆ ಕಾರ್ಯದರ್ಶಿ ಸುರಪುರ ಕಚೇರಿಗೆ ತೆರಳಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ದೂರವಾಣಿಯಲ್ಲಿ ಸಂಪರ್ಕಿಸಿದಾಗ, ಧಾರಣಿ ಹೆಚ್ಚಳ–ಇಳಿಕೆಯ ಕಾರಣದಿಂದ ದರದಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಸ್ಪಷ್ಟನೆ ನೀಡಲಾಗಿದೆ ಎಂದು ರೈತರು ತಿಳಿಸಿದ್ದಾರೆ.