ಯಾದಗಿರಿ| ಹಾಲಗೇರಾ ಯಲ್ಲಮ್ಮದೇವಿ ಅದ್ದೂರಿ ರಥೋತ್ಸವ
Update: 2026-02-01 21:54 IST
ಯಾದಗಿರಿ: ವಡಗೇರಾ ತಾಲೂಕಿನ ಸುಕ್ಷೇತ್ರ ಹಾಲಗೇರಾ ಗ್ರಾಮದಲ್ಲಿ ಶ್ರೀ ಯಲ್ಲಮ್ಮದೇವಿಯ ಭವ್ಯ ರಥೋತ್ಸವವು ಸಹಸ್ರಾರು ಭಕ್ತರ ಜಯಘೋಷದ ನಡುವೆ ಭಕ್ತಿ ಸಂಭ್ರಮದಿಂದ ರವಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆಯಿಂದಲೇ ಅಸಂಖ್ಯಾತ ಭಕ್ತರು ಹಾಲಗೇರಾ ಗ್ರಾಮಕ್ಕೆ ಆಗಮಿಸಿ ಶ್ರೀ ಯಲ್ಲಮ್ಮದೇವಿಯ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು. ಹಲಗೆ, ಡೊಳ್ಳು, ಬಾಜಾಭಜಂತ್ರಿ ಸೇರಿದಂತೆ ಮಂಗಲವಾದ್ಯಗಳನಾದದೊಂದಿಗೆ ಇಡೀ ಹಾಲಗೇರಾ ಗ್ರಾಮ ಭಕ್ತಿಮಯ ವಾತಾವರಣದಿಂದ ಕಂಗೊಳಿಸಿತು.
ಸುಡು ಬಿಸಿಲಿನ ನಡುವೆಯೂ ಭಕ್ತರು ಬಸ್, ಕಾರು, ಜೀಪು ಹಾಗೂ ಆಟೋಗಳಲ್ಲಿ ತಂಡೋಪತಂಡವಾಗಿ ಗ್ರಾಮಕ್ಕೆ ಧಾವಿಸಿ ಬಂದರು. ಸೂರ್ಯ ಮುಳುಗುವ ವೇಳೆಗೆ ದೇವಸ್ಥಾನದ ಆವರಣದಲ್ಲಿ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡು ಕಾದು ನಿಂತಿತ್ತು. ಹಾಲಗೇರಾ ಯಲ್ಲಮ್ಮದೇವಿಯ ರಥೋತ್ಸವ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಯಶಸ್ವಿಯಾಗಿ ನೆರವೇರಿತು.