ಯಾದಗಿರಿ | ಭತ್ತ ಕಟಾವು ಯಂತ್ರಗಳ ಮಾಲಕರ ಮೇಲೆ ಕ್ರಿಮಿನಲ್ ಕೇಸ್ : ಮಲ್ಲಿಕಾರ್ಜುನ ಸತ್ಯಂಪೇಟೆ
ಯಾದಗಿರಿ: ಭತ್ತ ಕಟಾವು ಯಂತ್ರಗಳ ದರವನ್ನು ಜಿಲ್ಲಾಧಿಕಾರಿಗಳು ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ಅಂತಹ ಯಂತ್ರಗಳ ಮಾಲಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು,ಈಗಾಗಲೇ ಜಿಲ್ಲಾಧಿಕಾರಿಗಳು ಭತ್ತ ಕಟಾವು ಯಂತ್ರಗಳ ಬಾಡಿಗೆಗೆ ಪ್ರತಿ ಗಂಟೆಗೆ 2,300 ರೂ. ದರ ನಿಗದಿ ಪಡಿಸಿ ಇದಕ್ಕಿಂತಲು ಹೆಚ್ಚಿನ ದರ ಪಡೆಯದಂತೆ ತಿಳಿಸಿದ್ದಾರೆ. ಅಲ್ಲದೆ ರೈತರಿಗೂ ಮಾಹಿತಿ ನೀಡಿ 2,300 ರೂ. ಹೆಚ್ಚಿನ ಹಣವನ್ನು ಯಾವುದೇ ರೈತರು ನೀಡಬಾರದು ಎಂದು ತಿಳಿಸಿದ್ದರು.
ಜಿಲ್ಲೆಯ ರೈತರು ಈಗಾಗಲೇ ಹೆಚ್ಚಿನ ಮಳೆ, ಚಂಡಮಾರುತ ದಿಂದ ಭತ್ತ ಹಾಳಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರ ಮದ್ಯೆ ಕೆಲವು ಕಡೆ ಭತ್ತ ಕಟಾವು ಯಂತ್ರಗಳ ಮಾಲಕರು ಗಂಟೆಗೆ 3 ಸಾವಿರ ರೂ. ವರೆಗೂ ಹಣ ಪಡೆದಿರುವ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಜಿಲ್ಲಾಧಿಕಾರಿಗಳು ತಿಳಿಸಿದಷ್ಟು ಹಣವನ್ನು ಮಾತ್ರ ಪಡೆಯಬೇಕು, ಒಂದು ವೇಳೆ ಹೆಚ್ಚಿನ ಹಣ ಕೇಳಿದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲೆಯ ರೈತರ ಪರವಾಗಿ ನಿಂತು ಯಂತ್ರಗಳ ಮಾಲಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.