ಯಾದಗಿರಿ | ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕೃತಿ ದಹಿಸಿ ಡಿಎಸ್ಎಸ್ ಪ್ರತಿಭಟನೆ
ಯಾದಗಿರಿ/ ಸುರಪುರ : ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ದೇಶದಿಂದ ಗಡಿಪಾರು ಮಾಡುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಅಮಿತ್ ಶಾ ಬಾಬಾ ಸಾಹೇಬ್ ಅಂಬೇಡ್ಕರ್‌ರ ಕುರಿತು ಮಾತನಾಡುವಾಗ, ಮಹಿಳೆಯರು ಅಂಬೇಡ್ಕರ್ ಹೆಸರನ್ನು ಜಪಿಸುವಷ್ಟು ಮಹಿಳೆಯರು ದೇವರ ಹೆಸರನ್ನು ಜಪಿಸಿದ್ದರೆ ಏಳು ಜನ್ಮದ ಪುಣ್ಯ ಬರುತ್ತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್‌ರನ್ನು ಅವಮಾನಿಸಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆಯದಿದ್ದರೆ ಇಷ್ಟೊತ್ತಿಗೆ ದೇಶದಲ್ಲಿನ ಮಹಿಳೆಯರ ಸ್ಥಿತಿ ಹೇಗಿರುತ್ತಿತ್ತು ಎನ್ನುವುದು ದೇಶದ ಮಹಿಳೆಯರಿಗೆ ಗೊತ್ತಿದೆ. ಈ ಹಿಂದೆ ಗುಜರಾತ್‌ನಲ್ಲಿ ಗಲಭೆ ಮಾಡಿಸಿದ್ದರಿಂದ ಗಡಿಪಾರು ಮಾಡಲಾಗಿತ್ತು, ಈಗ ಅಂಬೇಡ್ಕರ್‌ರ ಬಗ್ಗೆ ಹೀಗೆ ಮಾತನಾಡುವ ಅಮಿತ್ ಶಾ ಅವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿ ಅವರ ಪ್ರತಿಕೃತಿ ದಹನಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನಿವೃತ್ತ ಉಪನ್ಯಾಸಕ ಹಾಗೂ ಪ್ರಗತಿಪರ ಚಿಂತಕ ಮಾನು ಗುರಿಕಾರ, ವಕೀಲ ಮಲ್ಲಿಕಾರ್ಜುನ ತಳ್ಳಳ್ಳಿ, ಮೂರ್ತೆಪ್ಪ ಬೊಮ್ಮನಹಳ್ಳಿ, ಮುಖಂಡರಾದ ಮಾನಪ್ಪ ಬಿಜಾಸಪುರ, ದೇವಿಂದ್ರಪ್ಪ ಬಾದ್ಯಾಪುರ, ಅಯ್ಯಣ್ಣ ಕೆಂಭಾವಿ ವಕೀಲ, ತಾ.ಸಂಚಾಲಕ ಬಸವರಾಜ ದೊಡ್ಮನಿ, ರಾಮಣ್ಣ ಬಿಜಾಸಪುರ, ಮಾನಪ್ಪ ಇಸ್ಲಾಂಪುರ,ಹುಲೆಪ್ಪ ಶೆಳ್ಳಗಿ,ಖಾಜಾಹುಸೇನ ಗುಡಗುಂಟಿ, ರವಿಚಂದ್ರ ಬೊಮ್ಮನಹಳ್ಳಿ, ವಕೀಲ ಸುಭಾಸ ತೇಲ್ಕರ್, ತಿರುಪತಿ ಹಂದ್ರಾಳ, ಜೆಟ್ಟೆಪ್ಪ ನಾಗರಾಳ, ಬುದ್ಧಿವಂತ ನಾಗರಾಳ, ಮಹೇಶ ಯಾದಗಿರಿ, ಶಂಕರ ಬೊಮ್ಮನಹಳ್ಳಿ, ಬಸವರಾಜ ನಾಟೆಕಾರ್, ಪರಸಪ್ಪ ಕೊಟೆಕಲ್ ಸೇರಿದಂತೆ ಅನೇಕರಿದ್ದರು.