×
Ad

ಯಾದಗಿರಿ | ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ಪೌರಾಯುಕ್ತರ ಭೇಟಿ

Update: 2024-12-03 17:26 IST

ಯಾದಗಿರಿ : ಜಿಲ್ಲೆಯ ವಿವಿಧ ತಾಲ್ಲೂಕು, ಜಿಲ್ಲೆಗಳಿಂದ ವಲಸೆ ಬಂದ ಕೂಲಿ ಕಾರ್ಮಿಕರಿಗೆ ಹಾಗೂ ದಿನಗೂಲಿ ನೌಕರರಿಗೆ ಅನುಕೂಲವಾಗುವ ದೃಷ್ಟಿಯಿಂದ ನಗರದಲ್ಲಿ ಸ್ಥಾಪಿಸಲಾದ ವಸತಿ ರಹಿತರ ಆಶ್ರಯ ಕೇಂದ್ರದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ನಗರಸಭೆಯ ಪೌರಾಯುಕ್ತ ಉಮೇಶ್‌ ಚವ್ಹಾಣ ಮನವಿ ಮಾಡಿದ್ದಾರೆ.

ನಿರಾಶ್ರಿತ ವರ್ಗದ ಕಾರ್ಮಿಕರ ಅನುಕೂಲಕ್ಕಾಗಿ ಡೇ ಎನ್ ಯು ಎಲ್ ಎಮ್ ಅಭಿಯಾನದ ಅಡಿಯಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ನಗರಸಭೆ ವತಿಯಿಂದ ಯಾದಗಿರಿ ನಗರದ ರೈಲ್ವೆ ಸ್ಟೇಷನ್ ಹತ್ತಿರ ಶಹಾಪುರ ರಸ್ತೆಯಲ್ಲಿ( ಮೀನುಗಾರಿಕೆ ಕಟ್ಟಡದ ಎದುರುಗಡೆ) ಇರುವ ನಗರ ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ಭೇಟಿ ಪರಿಶೀಲನೆ ನಡೆಸಿ ಮಾತನಾಡಿದರು.

ಕೆಲಸದ ನಿಮಿತ್ತ ಯಾದಗಿರಿಗೆ ಆಗಮಿಸುವ ನೂರಾರು ಬಡ ಕೂಲಿ ಕಾರ್ಮಿಕರು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಖಾಲಿ ಇರುವ ಕಟ್ಟಡ, ಫುಟ್ಪಾತ್ ಮೇಲೆ ರಾತ್ರಿ ಕಳೆಯುವ ದೃಶ್ಯ ನಿತ್ಯ ಕಾಣಿಸುತ್ತದೆ. ಕೆಲಸದ ನಿಮಿತ್ತ ಹಾಗೂ ಕೆಲಸ ಅರಸಿ ನಿತ್ಯ ನಗರಕ್ಕೆ ಆಗಮಿಸುವವರಲ್ಲಿ ಬಹಳಷ್ಟು ಜನರಿಗೆ ನಗರದಲ್ಲಿ ನೆಲೆ ಇರುವುದಿಲ್ಲ. ನಿತ್ಯ ಲಾಡ್ಜ್ನಲ್ಲಿ ಉಳಿಯುವುದು ವೆಚ್ಚದಾಯಕ. ಹಾಗಾಗಿ ಎಷ್ಟೋ ಬಡ ಜನರು ನಗರದ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಫುಟ್ಪಾತ್ ಮೇಲೆ ರಾತ್ರಿ ಕಳೆಯುತ್ತಾರೆ. ಇಂಥವರಿಗೆ ಒಂದಿಷ್ಟು ದಿನ ನೆಲೆ ಒದಗಿಸಲಿದೆ. ನಗರ ವಸತಿ ರಹಿತರ ಆಶ್ರಯ ಕೇಂದ್ರ ಆರಂಭಗೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ಕೆ. ವೈದ್ಯ ಹಾಗೂ ಸಿಬ್ಬಂದಿ ವರ್ಗ ಮತ್ತು ನಿರಾಶ್ರಿತರ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News