ಯಾದಗಿರಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.9 ರಂದು ಪ್ರತಿಭಟನೆ
ಯಾದಗಿರಿ : ಜಿಲ್ಲೆಗೆ ಕೌಶಲ್ಯಾಭಿವೃದ್ದಿ, ವಿಶ್ವವಿದ್ಯಾಲಯ ನೀಡುವುದು ಸೇರಿದಂತೆ ಶೈಕ್ಷಣಿಕ ರಂಗಕ್ಕೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳು ಈಡೇರಿಕೆಗೆ ಆಗ್ರಹಿಸಿ ಡಿ.9 ರಂದು ಬೆಳಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನೆಯನ್ನು ನಗರದಲ್ಲಿ ಹಮ್ಮಿಕೊಳ್ಳಲು ನಿರ್ಣಯಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯ ತಿಳಿಸಿದ್ದಾರೆ.
ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ಘಟಕದ ಜಿಲ್ಲಾದ್ಯಕ್ಷ ವಿಶ್ವರಾಜ ಹೊನಗೇರಾ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಅಂದು ನಗರದ ಸರಕಾರಿ ಪದವಿಪೂರ್ವ ಕಾಲೇಜು ಆವರಣದಿಂದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದವರೆಗೆ ವಿದ್ಯಾರ್ಥಿಗಳ ಮೆರವಣಿಗೆ ನಡೆಸಿ ನಂತರ ಬಹಿರಂಗ ಪ್ರತಿಭಟನೆ ನಡೆಸಿ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ಶೈಕ್ಷಣಿಕವಾಗಿ ಹಿಂದುಳಿದಿರುವ ಯಾದಗಿರಿ ಜಿಲ್ಲೆಯನ್ನು ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಜಿಲ್ಲೆಯೆಂದು ಗುರುತಿಸಿ ಹಿಂದುಳಿದಿರುವುದನ್ನು ಸರಿಪಡಿಸಲು ಮುಂದಾಗಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಶೈಕ್ಷಣಿಕವಾಗಿ ಜಿಲ್ಲೆಯನ್ನು ಮೇಲೆತ್ತಲು ಪೂರಕ ಕ್ರಮಗಳು ಇದುವರೆಗೆ ಆಗಿಲ್ಲದಿರುವುದು ನಾಚಿಕೆಗೇಡು ಸಂಗತಿಯಾಗಿದ್ದು, ಸರಕಾರ ಈ ಕುರಿತು ಗಂಭೀರವಾಗಿ ಆಲೋಚಿಸಬೇಕು ಮತ್ತು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ದನಿ ಎತ್ತಬೇಕು ಎಂದು ಒತ್ತಾಯಿಸಿದರು.
ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ವಿಶೇಷವಾಗಿ ಇಲ್ಲಿ ಕೌಶಲ್ಯಾಭಿವೃದ್ಧಿ (ಸ್ಕಿಲ್ ಡೆವಲಪ್ ಮೆಂಟ್) ವಿಶ್ವವಿದ್ಯಾಲಯ ಆರಂಭಿಸಲು ಸರಕಾರ ತಕ್ಷಣ ಮುಂದಾಗಬೇಕು, ಒಂದು ತಾಂತ್ರಿಕ (ಇಂಜಿನಿಯರಿಂಗ್) ಕಾಲೇಜು ಅಲ್ಲದೇ, ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ವರದಿಗಳ ಹಿನ್ನೆಲೆಯಲ್ಲಿ ಒಂದು ವಿವಿಯನ್ನು ಆರಂಭಿಸಬೇಕೆಂದು ಅವರು ಒತ್ತಾಯಿಸಿದರು.
ಹಿಂದುಳಿದ ಜಿಲ್ಲೆಯಲ್ಲಿ ಒಂದು 500 ಹಾಸಿಗೆಗಳಿರುವ ಸುಸಜ್ಜಿತ ಹೈಟೆಕ್ ವಸತಿ ನಿಲಯವನ್ನು ಆರಂಭಿಸಿದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿ ಜಿಲ್ಲೆಯ ಶೈಕ್ಷಣಿಕ ಏಳಿಗೆ ಆಗಲಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಶರಣು ಬಂದಳ್ಳಿ, ಚನ್ನು ಬಿ. ಮೇದಾ, ಸದ್ದಾಂ ಹುಸೇನ್, ಕೆರುಣೇಶ ಸ್ವಾಮಿ, ಮಂಜು ಸಮನಾಪುರ, ಸುರೇಶ ಗಣಪೂರ, ನಾಗು ಶೆಟ್ಟಿಗೇರಿ, ಬಸ್ಸು ಎನ್. ನಾಯಕ, ವಿಶ್ವಾ ಶಹಾಪುರ, ಗೊಲ್ಲಾಳ್ಳೆಪ್ಪ, ರವಿ ಅರಕೇರಾ, ಮಲ್ಲು ಬಡಿಗೇರ, ಯಲ್ಲು ಚಾಮನಳ್ಳಿ ಸೇರಿದಂತೆ ಇನ್ನಿತರ ಕರವೇ ಮುಖಂಡರು ಪಾಲ್ಗೊಂಡಿದ್ದರು.