Yadgiri | ಮಳೆ ನಡುವೆಯೂ 33 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪೂರೈಕೆ
ಯಾದಗಿರಿ : ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿದ್ದರೂ ಹುಣಸಗಿ, ಗುರುಮಠಕಲ್, ವಡಗೇರಾ ಹಾಗೂ ಯಾದಗಿರಿ ತಾಲೂಕಿನ 23 ಗ್ರಾಮ ಪಂಚಾಯಿತಿ ವ್ಯಾಪ್ತಿಯ 33 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದೆ. ಈ ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ತಿಳಿಸಿದ್ದಾರೆ.
ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಪ್ರತಿ ಬೋರ್‌ವೆಲ್‌ಗೆ ತಿಂಗಳಿಗೆ 10 ಸಾವಿರ ರೂ. ಬಾಡಿಗೆ ಪಾವತಿಸಲಾಗುತ್ತಿದೆ. ಮಳೆ ಆರಂಭವಾದರೂ ಕೆಲವು ಭಾಗಗಳಲ್ಲಿ ಅಂತರ್ಜಲ ಮಟ್ಟ ನಿರೀಕ್ಷಿತ ಮಟ್ಟಕ್ಕೆ ಏರಿಕೆಯಾಗದ ಕಾರಣ ಈ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 471 ಆರ್‌ಒ ಘಟಕಗಳಿದ್ದು, ಅವುಗಳಲ್ಲಿ 344 ಕಾರ್ಯನಿರ್ವಹಿಸುತ್ತಿವೆ. ಉಳಿದ 127 ಘಟಕಗಳಿಗೆ ದುರಸ್ತಿ ಅಗತ್ಯವಿದ್ದು, ಅವುಗಳಲ್ಲಿ 77 ಘಟಕಗಳ ದುರಸ್ತಿಗಾಗಿ 3.10 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ದುರಸ್ತಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಇದಲ್ಲದೆ, ಸಂಪೂರ್ಣವಾಗಿ ಹಾಳಾಗಿರುವ 50 ಆರ್‌ಒ ಘಟಕಗಳನ್ನು ಹರಾಜು ಮಾಡಲು ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ಹರಾಜಿನಿಂದ ಬರುವ ಹಣವನ್ನು ಆರ್‌ಒ ಘಟಕಗಳ ನಿರ್ವಹಣೆ ಹಾಗೂ ದುರಸ್ತಿಗೆ ಬಳಸಲಾಗುವುದು ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗದಂತೆ ಅಧಿಕಾರಿಗಳು ಗ್ರಾಮಗಳ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಅಗತ್ಯವಿದ್ದರೆ ಹೆಚ್ಚುವರಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಲವೀಶ್ ಒರಡಿಯಾ ತಿಳಿಸಿದ್ದಾರೆ.