Yadgiri | ಕಡೇಚೂರ್ ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸಿ : ಮಾಜಿ ಸಂಸದ ಡಾ.ಉಮೇಶ್ ಜಾಧವ್ ಆಗ್ರಹ

ಕಡೇಚೂರ್ ಕೈಗಾರಿಕಾ ಘಟಕ ದುರಂತ ಸ್ಥಳ ಪರಿಶೀಲಿಸಿದ ಬಿಜೆಪಿ ತಂಡ

Update: 2026-08-07 20:48 IST

ಯಾದಗಿರಿ : ಕಡೇಚೂರ್ ಕೈಗಾರಿಕಾ ಪ್ರದೇಶದ ಕಂಪನಿಯಲ್ಲಿ ಸಂಭವಿಸಿದ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಹಾಗೂ ಬಾಡಿಯಾಳ ಕೈಗಾರಿಕಾ ಪ್ರದೇಶದ ಪರಿಸರ ಮಾಲಿನ್ಯದ ಕುರಿತು ಮಾಜಿ ಸಂಸದ ಡಾ. ಉಮೇಶ್ ಜಾಧವ್ ನೇತೃತ್ವದ ಬಿಜೆಪಿ ತಂಡ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಘಟನೆಯನ್ನು ತುರ್ತು ಸಮಸ್ಯೆ ಎಂದು ಪರಿಗಣಿಸಿ ಸಮಗ್ರ ತನಿಖೆ ಕೈಗೊಳ್ಳುವಂತೆ ತಂಡ ಒತ್ತಾಯಿಸಿತು.

ಪರಿಶೀಲನೆಯ ಬಳಿಕ ಮಾತನಾಡಿದ ಡಾ. ಉಮೇಶ್ ಜಾಧವ್, ಇದು ಸರ್ಕಾರದ ತೀವ್ರ ನಿರ್ಲಕ್ಷ್ಯದ ಪರಿಣಾಮವಾಗಿದೆ. ದುರಂತ ಸಂಭವಿಸಿದ ಕಂಪನಿಯಲ್ಲಿ ಒಟ್ಟು 35 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮಧ್ಯಪ್ರದೇಶದ ಇಬ್ಬರು ಹಾಗೂ ತೆಲಂಗಾಣದ ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಕಾರ್ಮಿಕ ಕಾನೂನು ಹಾಗೂ ಪರಿಸರ ಸಂರಕ್ಷಣಾ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದ ಕಾರಣ ಇಂತಹ ದುರ್ಘಟನೆ ಸಂಭವಿಸಿದೆ. ಯಾದಗಿರಿ, ಗುರುಮಠಕಲ್, ಸೈದಾಪುರ, ಬಾಡಿಯಾಳ ಹಾಗೂ ಕಡೇಚೂರ್ ಭಾಗದ ಜನರು ವಿಷಮಿಶ್ರಿತ ಮಲಿನ ನೀರಿನ ನಡುವೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ದುರ್ವಾಸನೆಯಿಂದ ಸಾರ್ವಜನಿಕರ ಜೀವನ ದುಸ್ತರವಾಗಿದೆ ಎಂದು ಆರೋಪಿಸಿದರು.

ಬಿಜೆಪಿ ತಂಡ ರಾಜಕೀಯ ಉದ್ದೇಶದಿಂದ ಅಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಭೇಟಿ ನೀಡಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೈಗಾರಿಕೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಪರಿಸರ ಇಲಾಖೆಯ ಸದಸ್ಯ ಕಾರ್ಯದರ್ಶಿ ಗೋಕುಲ್ ಅವರೊಂದಿಗೂ ಈ ಕುರಿತು ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.

ಬಾಡಿಯಾಳ ಭಾಗದಲ್ಲಿ ಹರಿಯುವ ನೀರು ಸಂಪೂರ್ಣ ಕಲುಷಿತವಾಗಿದ್ದು, ಕೈಗಾರಿಕೆಗಳ ಮಾಲಿನ್ಯದಿಂದ ಜನಜೀವನ ಸಂಕಷ್ಟಕ್ಕೀಡಾಗಿದೆ. ಈ ಸಮಸ್ಯೆ ನಿವಾರಣೆಗೆ ಸರ್ಕಾರ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಡಾ. ಉಮೇಶ್ ಜಾಧವ್ ಆಗ್ರಹಿಸಿದರು.

ಬಿಜೆಪಿ ಪರಿಶೀಲನಾ ತಂಡದಲ್ಲಿ ಮಹೇಶ್ ರೆಡ್ಡಿ ಗೌಡ ಮುದ್ನಾಳ್, ದೇವರಾಜ್ ನಾಯಕ್, ರವಿ ರಾಥೋಡ್, ಬಂಗಾರು ರಾಥೋಡ್, ಪರಶುರಾಮ ಕುರುಕುಂಟ, ಅಮೃತ ಬೋರಬಂಡ, ವಿಕ್ರಂ ಚೌಹಾಣ್, ವಿಜಯ ಜಾಧವ್, ವಿನೋದ್ ಚೌಹಾಣ್ ಯಾಗಾಪುರ, ರವಿ ಸಾಹುಕಾರ್ ಯುವರಾಜ್ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News