ಕಡೇಚೂರು | ಕೈಗಾರಿಕೆಗಳಲ್ಲಿ ಸುರಕ್ಷತೆ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ: ಡಿಸಿ ರಾಹುಲ್ ಪಾಡ್ವೇ
ಕಡೇಚೂರು (ಸೈದಾಪುರ), ಆ.8: ಕೈಗಾರಿಕಾ ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಅತ್ಯುನ್ನತ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ರಾಹುಲ್ ತುಕರಾಮ್ ಪಾಡ್ವೇ ಕೈಗಾರಿಕೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.
ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ಜಿಲ್ಲೆಯ ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳೊಂದಿಗೆ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಸಿಐಎಲ್ ಕಂಪನಿಯಲ್ಲಿ ಸಂಭವಿಸಿದ ಅನಿಲ ಸೋರಿಕೆ ಘಟನೆಯ ಹಿನ್ನೆಲೆಯಲ್ಲಿ ಎಲ್ಲ ಕೈಗಾರಿಕೆಗಳು ಹಾಗೂ ಸಂಬಂಧಿತ ಇಲಾಖೆಗಳು ಕಾನೂನುಬದ್ಧ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದ್ರವ ಮತ್ತು ಘನ ತ್ಯಾಜ್ಯವನ್ನು ಚರಂಡಿ, ಕಾಲುವೆ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ವಿಸರ್ಜಿಸುವ ಕೈಗಾರಿಕೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿ ಕೈಗಾರಿಕೆಯು ತನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಾರ್ಮಿಕರ ಸಂಪೂರ್ಣ ಮಾಹಿತಿಯನ್ನು ದಾಖಲಿಸಿ ನಿರ್ವಹಿಸಬೇಕು. ಎಲ್ಲ ಕಾರ್ಮಿಕರ ಪೊಲೀಸ್ ಪರಿಶೀಲನೆ ಕಡ್ಡಾಯವಾಗಿದ್ದು, ಕಾರ್ಮಿಕ ಇಲಾಖೆಯು ಅರ್ಹ ಕಾರ್ಮಿಕರನ್ನು ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ಇಎಸ್‌ಐ) ಹಾಗೂ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸುವುದನ್ನು ಖಚಿತಪಡಿಸಬೇಕು ಎಂದು ಸೂಚಿಸಿದರು.
ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ಪ್ರವೇಶಿಸುವ ಲಾರಿಗಳಿಗೆ ಏಕ ಪ್ರವೇಶ ವ್ಯವಸ್ಥೆ ಜಾರಿಗೊಳಿಸಬೇಕು. ಪ್ರವೇಶಿಸುವ ಹಾಗೂ ಹೊರಹೋಗುವ ಎಲ್ಲ ವಾಹನಗಳ ದಾಖಲೆ ನಿರ್ವಹಿಸಬೇಕು. ಸಾರ್ವಜನಿಕ ಸುರಕ್ಷತೆ ಮತ್ತು ಸಂಚಾರ ಸುಗಮತೆಗೆ ರಾತ್ರಿ ವೇಳೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸುವಂತೆ ಸೂಚನೆ ನೀಡಿದರು.
ಜಂಟಿ ಕೈಗಾರಿಕಾ ನಿರ್ದೇಶಕರು, ಜಂಟಿ ಕಾರ್ಖಾನೆಗಳ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮುಂದಿನ 15 ದಿನಗಳೊಳಗೆ ಜಿಲ್ಲೆಯ ಎಲ್ಲ ಕೈಗಾರಿಕೆಗಳನ್ನು ಪರಿಶೀಲಿಸಿ, ಸುರಕ್ಷತಾ ಕ್ರಮಗಳು, ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣ ನಿಯಮಗಳ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿ ಅನುಪಾಲನಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಸುರಕ್ಷತೆ ಹಾಗೂ ಪರಿಸರ ನಿಯಮಗಳನ್ನು ಉಲ್ಲಂಘಿಸುವ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕೆಗಳು ಪರಿಶೀಲನಾ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿ, ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾಡಳಿತವು ಕೈಗಾರಿಕಾ ಸುರಕ್ಷತೆಯನ್ನು ಬಲಪಡಿಸುವುದು, ಪರಿಸರ ಸಂರಕ್ಷಣೆ, ಕಾರ್ಮಿಕರ ಹಿತಾಸಕ್ತಿ ಕಾಪಾಡುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ನಿರಂತರ ಮೇಲ್ವಿಚಾರಣೆ ಮತ್ತು ಸಮನ್ವಯದೊಂದಿಗೆ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಂಟಿ ಕೈಗಾರಿಕಾ ನಿರ್ದೇಶಕರು, ಜಂಟಿ ಕಾರ್ಖಾನೆಗಳ ನಿರ್ದೇಶಕರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಕೆಐಎಡಿಬಿ ಅಧಿಕಾರಿಗಳು ಹಾಗೂ ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.