Yadgiri | ಕಾಳಬೆಳಗುಂದಿಯಲ್ಲಿ 2 ಕೋಟಿ ರೂ. ವೆಚ್ಚದ ಟ್ರೀ ಪಾರ್ಕ್‌ಗೆ ಶಾಸಕ ಶರಣಗೌಡ ಕಂದಕೂರ ಚಾಲನೆ

Update: 2026-08-07 18:39 IST

ಯಾದಗಿರಿ : ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಾಳಬೆಳಗುಂದಿ ಅರಣ್ಯ ಪ್ರದೇಶದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬನದೇಶ್ವರ ಪ್ರಾಣವಾಯು ವೃಕ್ಷ ಉದ್ಯಾನ (ಟ್ರೀ ಪಾರ್ಕ್) ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಯಿಂದ ಒಟ್ಟು 2 ಕೋಟಿ ರೂ. ಅನುದಾನದಲ್ಲಿ ಟ್ರೀ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಮೊದಲ ಹಂತದಲ್ಲಿ 50 ಲಕ್ಷ ರೂ. ಬಿಡುಗಡೆಯಾಗಿದೆ. ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿದ್ದು, ಸಾರ್ವಜನಿಕರಿಗೆ ಪ್ರಕೃತಿಯ ಮಡಿಲಲ್ಲಿ ವಿರಾಮ ಕಳೆಯಲು ಉತ್ತಮ ಸ್ಥಳವಾಗಲಿದೆ ಎಂದು ಹೇಳಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಕನಸಿನ ಯೋಜನೆಯಾದ ಟ್ರೀ ಪಾರ್ಕ್‌ಗಳನ್ನು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಹಂತದ ಅನುದಾನ ಬಿಡುಗಡೆಯಾಗಿದ್ದು, ಉಳಿದ ಅನುದಾನವನ್ನು ಕೂಡ ಶೀಘ್ರದಲ್ಲೇ ತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಆಧುನೀಕರಣದ ಪರಿಣಾಮ ಪರಿಸರ ಹಾನಿ ಹೆಚ್ಚುತ್ತಿದ್ದು, ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಉಷ್ಣಾಂಶ ಏರಿಕೆ, ಬರ, ನೆರೆ ಸೇರಿದಂತೆ ಪ್ರಕೃತಿ ವಿಕೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಗಾಗಿ ಗಿಡ-ಮರಗಳನ್ನು ಬೆಳೆಸುವುದು ಅತ್ಯಗತ್ಯವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ಪ್ರದೇಶ ಕಡಿಮೆ ಇರುವುದರಿಂದ ಕೃಷಿಯೊಂದಿಗೆ ಅರಣ್ಯ ಬೆಳೆಸಲು ರೈತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಹೇಳಿದರು.

ಸಾಮಾಜಿಕ ಅರಣ್ಯ ಇಲಾಖೆಯ ಡಿಸಿಎಫ್‌ಒ ಚೇತನ ಗಸ್ತಿ ಮಾತನಾಡಿ, 5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುವ ಟ್ರೀ ಪಾರ್ಕ್‌ನಲ್ಲಿ ಆಮ್ಲಜನಕ ನೀಡುವ ವಿವಿಧ ಜಾತಿಯ ಸಸಿಗಳು, ವಾಕಿಂಗ್ ಟ್ರ್ಯಾಕ್, ಯೋಗ ವೇದಿಕೆ, ಮಕ್ಕಳ ಆಟದ ಸಾಧನಗಳು, ಓಪನ್ ಜಿಮ್, ಎರಡು ಪರಗೋಲಗಳು, ಆರ್‌ಒ ಶುದ್ಧ ಕುಡಿಯುವ ನೀರಿನ ಘಟಕ, ಪ್ರತ್ಯೇಕ ಶೌಚಾಲಯ, ಭದ್ರತಾ ತಂತಿಬೇಲಿ ಹಾಗೂ ಆಕರ್ಷಕ ಪ್ರವೇಶ ದ್ವಾರ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಯೋಜನೆಗಾಗಿ ಭೂಮಿ ಗುರುತಿಸಲಾಗಿದ್ದು, ಪೂರ್ವಸಿದ್ಧತಾ ಕಾಮಗಾರಿಗಳು ಆರಂಭಗೊಂಡಿವೆ. ಈ ಟ್ರೀ ಪಾರ್ಕ್ ಗುರುಮಠಕಲ್ ಕ್ಷೇತ್ರಕ್ಕೆ ಹೊಸ ಗುರುತನ್ನು ತಂದುಕೊಡುವುದರ ಜೊತೆಗೆ ಪ್ರವಾಸೋದ್ಯಮ, ಪರಿಸರ ಸಂರಕ್ಷಣೆ ಹಾಗೂ ಸ್ಥಳೀಯ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಎಸಿಎಫ್‌ಒ ಮಹ್ಮದ್ ಅಸದ್, ಸಾಮಾಜಿಕ ಆರ್‌ಎಫ್‌ಒ ಚನ್ನಬಸವ ಕಟ್ಟಿಮನಿ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಮುಖಂಡರಾದ ಅಜಯರಡ್ಡಿ ಎಲ್ಹೇರಿ, ಮಲ್ಲಣಗೌಡ ಕೌಳೂರು, ಶರಣಪ್ಪಗೌಡ ಹೊಸಳ್ಳಿ, ಪರ್ವತರಡ್ಡಿ, ಬಸವರಾಜ ಕಣೇಕಲ್, ಲಕ್ಷ್ಮಣ ನಾಯಕ ಕಾಳಬೆಳಗುಂದಿ, ಪೋಲಪ್ಪ ನೀಲಹಳ್ಳಿ, ಬೆಂಜಮನ್, ರಾಜೇಶ ಉಪ್ಪಿನ್, ಮಹಿಪಾಲರಡ್ಡಿ ಮಲ್ಹಾರ, ರಾಜು ಕಾಳಬೆಳಗುಂದಿ, ನರಸಿಂಹರಡ್ಡಿ ಚಿಂತಗುಂಟಾ, ಲಕ್ಷ್ಮಣ ನಾಯಕ, ರಾಜೇಶ ಉಡುಪಿ, ಅಲ್ಲಾವುದ್ದೀನ್, ಚೌಡಯ್ಯ, ಶರಣಗೌಡ ಮಾಧ್ವಾರ, ಮಲ್ಲಣಗೌಡ ಬದ್ದೇಪಲ್ಲಿ, ಶರಣು ಗಾಡಿ ಮೊಟ್ನಳ್ಳಿ, ವೆಂಕಟರಮಣ ಮೊಟ್ನಳ್ಳಿ. ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.

ನೈಸರ್ಗಿಕ ಕಾಡುಗಳ ಮಾದರಿಯಲ್ಲದೆ, ಕುಟುಂಬ ಸಮೇತರಾಗಿ ಬರುವ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯಗಳೊಂದಿಗೆ ಅತ್ಯುತ್ತಮ ಉದ್ಯಾನವನ ನಿರ್ಮಿಸುವ ಗುರಿ ಹೊಂದಿದ್ದೇವೆ. ಶೌಚಾಲಯ, ವಾಕಿಂಗ್ ಟ್ರ್ಯಾಕ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಜನರಿಗೆ ವಿಶ್ರಾಂತಿ ತಾಣವನ್ನಾಗಿ ರೂಪಿಸಲಾಗುವುದು.

- ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News