×
Ad

ಯಾದಗಿರಿ: ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ನ್ಯಾಯಕ್ಕಾಗಿ ಜನಾಗ್ರಹ

Update: 2025-10-09 14:13 IST

ಯಾದಗಿರಿ: ಧರ್ಮಸ್ಥಳದಲ್ಲಿ 2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ–ಕೊಲೆ ಪ್ರಕರಣಕ್ಕೆ 13 ವರ್ಷಗಳು ಪೂರೈಸಿದರೂ ನೈಜ ಆರೋಪಿಗಳನ್ನು ಬಂಧಿಸಲು ಸರ್ಕಾರ ವಿಫಲವಾಗಿದೆ ಎಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ರಾಜ್ಯವ್ಯಾಪಿ “ನ್ಯಾಯಕ್ಕಾಗಿ ಜನಾಗ್ರಹ” ನಡಿಸಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾದಗಿರಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ ಅವರು, "ಸೌಜನ್ಯ ಕೊಲೆ ಪ್ರಕರಣದ ಸಂಪೂರ್ಣ ಮರು ತನಿಖೆ ನಡೆಸಿ, ವಿಶೇಷ ನ್ಯಾಯಾಲಯ ಸೂಚಿಸಿದಂತೆ ವೈದ್ಯಕೀಯ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮನವಿಯಲ್ಲಿ, ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳ ಹಾಗೂ ಸುತ್ತಮುತ್ತ ನಡೆದ ಅಸಹಜ ಸಾವು, ಅತ್ಯಾಚಾರ, ನಾಪತ್ತೆ, ಭೂ ಹಗರಣ ಮತ್ತು ಆರ್ಥಿಕ ಅಪರಾಧ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಎಸ್‌.ಐ‌.ಟಿ.ಗೆ ಅಧಿಕಾರ ನೀಡಬೇಕೆಂದು ಒತ್ತಾಯಿಸಿದರು. ದಲಿತರು, ಮಹಿಳೆಯರು ಮತ್ತು ಶೋಷಿತ ವರ್ಗಗಳ ಹಕ್ಕು ಉಲ್ಲಂಘನೆ ವಿರುದ್ಧ ಹೋರಾಟ ನಡೆಸುತ್ತಿರುವ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ತಕ್ಷಣ ವಾಪಸ್ ಪಡೆಯಬೇಕು" ಎಂದು ವೇದಿಕೆ ಸರ್ಕಾರವನ್ನು ಮನವಿ ಮಾಡಿದರು.

ಧರ್ಮಸ್ಥಳ ಅಶೋಕನಗರ ಮತ್ತು ಮುಂಡ್ರುಪಾಡಿ ಪ್ರದೇಶಗಳ ದಲಿತ ಕುಟುಂಬಗಳಿಗೆ ಭೂ ಹಕ್ಕು ಪತ್ರ ನೀಡಿ, ಟ್ರಸ್ಟ್ ಅತಿಕ್ರಮಿಸಿರುವ ಸರ್ಕಾರಿ ಭೂಮಿಯನ್ನು ವಾಪಸ್ ಪಡೆದು ದಲಿತರಿಗೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದ ಅವರು, ಇತ್ತೀಚೆಗೆ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ B.R.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್‌  ಶೂ ಎಸೆದ ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ರಚಿಸಿದ ಸಂವಿಧಾನವನ್ನು ಕಾನೂನಿನ ರಕ್ಷಣೆ ನೀಡದೆ, ಕೆಲವು ಸಂದರ್ಭಗಳಲ್ಲಿ ಸಂಸತ್ತಿನ ಮುಂದೆ ಸುಟ್ಟ ಘಟನೆಗಳಿಗೆ ಕ್ರಮ ಕೈಗೊಳ್ಳದಿರುವುದು ಗಮನಾರ್ಹವಾಗಿದೆ. ಇಂತಹ ಹಿನ್ನೆಲೆಯಲ್ಲಿಯೇ ಮುಖ್ಯ ನ್ಯಾಯಮೂರ್ತಿ ಮೇಲೆ ಈ ಕೃತ್ಯ ಮಾಡಲಾಗಿದೆ. ತಕ್ಷಣ ಕೀಶೋರ್ ವಕೀಲನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಶೂ ಎಸೆದ ವ್ಯಕ್ತಿಯ ಹಿಂದಿರುವ ಸನಾತನ ಧರ್ಮದ ಕುತಂತ್ರಗಳನ್ನು ಬಹಿರಂಗಪಡಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು, ದೇಶದ ಗೃಹ ಸಚಿವರಾದ ಅಮೀತ್ ಶಾ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್. ಎಂ. ಸಾಗರ, ಭೀಮರಾಯ ಪೂಜಾರಿ, ಬಸವರಾಜ ದೊರೆ, ದೇವು ಕುಮಾರ್, ಅನಿತಾ ಹಿರೇಮಠ, ಅಯ್ಯಣ ಅನೂಸುರ, ನಿಂಗಪ್ಪ ಕೊಂಬಿನ್, ಮಹಿಬೂಬ್, ಚಂದ್ರಶೇಖರ ಚವ್ಹಾಣ, ಮಹಿಬೂಬ್ ಸಾಬ್ ಮರೆಪ್ಪ ಬೀರನೂರ, ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News