ಯಾದಗಿರಿ | ಜಿಲ್ಲೆಯನ್ನು ಪ್ರತಿ ಕ್ಷೇತ್ರದಲ್ಲೂ ಮುಂಚೂಣಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿ : ಡಿಸಿ ಡಾ.ಸುಶೀಲಾ ಬಿ.
ಯಾದಗಿರಿ: ಪಾರದರ್ಶಕ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯನ್ನು ಪ್ರತಿಯೊಂದು ಕ್ಷೇತ್ರದಲ್ಲಿ ಮುಂಚೂಣಿಗೆ ತರಲು ಪ್ರಯತ್ನಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಕರೆ ನೀಡಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಕಂದಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹವಿದೆ. ಕಂದಾಯ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗಳು ಪ್ರಾಮಾಣಿಕ ಹಾಗೂ ಪಾರದರ್ಶಕ ಸೇವೆ ಕಲ್ಪಿಸಿ ಜಿಲ್ಲೆಯನ್ನು ಮುಂಚೂಣಿಗೆ ತರಲು ಪ್ರಯತ್ನಿಸುವಂತೆ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ,ತಹಶೀಲ್ದಾರರ ಕಚೇರಿಗಳ ವ್ಯಾಪ್ತಿಯಲ್ಲಿ ವಿವಿಧ ಫೈಲ್ ಹಾಗೂ ರಿಜಿಸ್ಟರ್ ಗಳ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಕಾರ್ಯದಲ್ಲಿ ಯಾದಗಿರಿ ತಾಲ್ಲೂಕು ಶೇ.100 ರಷ್ಟು ಪ್ರಗತಿ ಸಾಧಿಸಿದೆ. ಶಹಾಪುರ ಟಾಪ್ 10 ರಲ್ಲಿ ಸ್ಥಾನಗಳಿಸಿದೆ. ಕಳೆದ ಎರಡು ವರ್ಷಗಳಿಂದ ನಿರಂತರ ಪ್ರಯತ್ನದಿಂದ ಸಾಧನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮಂಗಳವಾರ ಕೇಕ್ ಕಟ್ ಮಾಡುವ ಮೂಲಕ ಕಂದಾಯ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ ಅಂಕಲಗಿ, ಶಿರಸ್ತೆದಾರ ಶಬ್ಬೀರ್ ಪಟೇಲ್ ಸೇರಿದಂತೆ ಗ್ರಾಮ ಸಹಾಯಕ ಸಿಬ್ಬಂದಿಗಳ ಜೋತೆ ಇದ್ದರು.