ಯಾದಗಿರಿ | ಕೆಕೆಆರ್‌ಡಿಬಿ ಯೋಜನೆಯಲ್ಲಿ ಸ್ಥಳೀಯ ಲೇಖಕರ ಪುಸ್ತಕ ಖರೀದಿ ಸಭೆ
ಯಾದಗಿರಿ: ಕೆಕೆಆರ್‌ಡಿಬಿ ಮ್ಯಾಕ್ರೋ ಕ್ರಿಯಾ ಯೋಜನೆಯಡಿ ಜಿಲ್ಲೆಯ ಸ್ಥಳೀಯ ಲೇಖಕರು ಬರೆದ ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಇಂದಿನ ದಿನಮಾನದಲ್ಲಿ ಓದುಗರ ರುಚಿಗೆ ಅನುಗುಣವಾದ ಪುಸ್ತಕಗಳನ್ನು ಪುನರ್ ಆಯ್ಕೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕೆಕೆಆರ್‌ಡಿಬಿ ಯೋಜನೆಯಲ್ಲಿ ಸ್ಥಳೀಯ ಲೇಖಕರ ಪುಸ್ತಕ ಖರೀದಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕೆಕೆಆರ್‌ಡಿಬಿ ಕಾರ್ಯದರ್ಶಿಗಳ ನಿರ್ದೇಶನದಂತೆ 2024-25ನೇ ಸಾಲಿನ ಕ್ರಿಯಾ ಯೋಜನೆಯಡಿ ಪುಸ್ತಕ ಖರೀದಿಗಾಗಿ 25 ಲಕ್ಷ ರೂ. ಮಂಜೂರಾಗಿದೆ. ಈ ಅನುದಾನಕ್ಕೆ ಅನುಗುಣವಾಗಿ, ಪ್ರತಿ ಪುಸ್ತಕ ನಿಗದಿಪಡಿಸಿದ ದರಗಳಲ್ಲಿ ತಲಾ 1,300 ಪ್ರತಿಗಳನ್ನು ಖರೀದಿಸಬೇಕು. ಇವನ್ನು ಜಿಲ್ಲೆಯ ಗ್ರಾಮ ಪಂಚಾಯತ್ ಗಳಿಗೆ ಸರಬರಾಜು ಮಾಡಬೇಕಾಗಿದ್ದು, ಪುಸ್ತಕಗಳಿಗೆ ನೀಡಿದ ಅನುದಾನದನ್ವಯ ಕ್ರಮವಹಿಸುವಂತೆ ಸೂಚಿಸಿದರು.
ಜಿಲ್ಲಾ ಗ್ರಂಥಾಲಯ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿ ಅವಶ್ಯಕ ಮಾಹಿತಿ ನೀಡಿದರು. ಪ್ರ.ದ.ಸ ಮೆಹಬೂಬ್ ಪಟೇಲ್ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.