×
Ad

ಜ. 23: ’ಕೊರಗರು-ತುಳುನಾಡಿನ ಮಾತೃಸಮುದಾಯ’ ಪುಸ್ತಕ ಬಿಡುಗಡೆ

Update: 2025-01-22 19:14 IST

ಮಂಗಳೂರು: ಕೊರಗ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ಜ.23ರಂದು ನಡೆಯುತ್ತಿರುವ ’ಆದಿವಾಸಿ ಆಕ್ರೋಶ ರ್ಯಾಲಿ’ಯಲ್ಲಿ ಪತ್ರಕರ್ತ, ಬರಹಗಾರ ನವೀನ್ ಸೂರಿಂಜೆ ಬರೆದಿರುವ ’ಕೊರಗರು-ತುಳುನಾಡಿನ ಮಾತೃಸಮುದಾಯ’ ಪುಸ್ತಕ ಬಿಡುಗಡೆಗೊಳ್ಳಲಿದೆ.

ಕರಾವಳಿಯ ಮೂಲನಿವಾಸಿ ಕೊರಗ ಸಮುದಾಯ ಇಂದು ಅಳಿವಿನಂಚಿನಲ್ಲಿದೆ. ಸಾಂಸ್ಕೃತಿಕವಾಗಿ, ಐತಿಹ್ಯವಾಗಿ ಈ ಕೊರಗ ಸಮುದಾಯ ಕರಾವಳಿಯನ್ನು ಒಂದು ಕಾಲದಲ್ಲಿ ಆಳ್ವಿಕೆ ಮಾಡಿತ್ತು. ಆದರೆ ಕಾನೂನಾತ್ಮಕವಾಗಿ ತುಂಡು ಭೂಮಿಯನ್ನೂ ಹೊಂದಿಲ್ಲ. ಜಾತ್ರೆ, ನೇಮ, ಕೋಲ, ಕಂಬಳ, ಮೇಲ್ವರ್ಗಗಳ ಮದುವೆ, ಸಂಪ್ರದಾಯದ ಹೆಸರಿನಲ್ಲಿ ಅಜಲು ಶೋಷಣೆಗೆ ಒಳಗಾದ ಈ ಸಮುದಾಯ ಸಧ್ಯ ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಈ ಸಂದರ್ಭ ಕೊರಗ ಸಮುದಾಯದ ಇತಿಹಾಸ-ವರ್ತಮಾನ-ಭವಿಷ್ಯದ ಬಗ್ಗೆ ಅವಲೋಕನ ನಡೆಸಬೇಕಿದೆ. ಕೊರಗರ ಈ ಸ್ಥಿತಿಗೆ ಮನುಸ್ಮೃತಿ ಪಾಲಿಸುವ ಯಾವ ರಾಜಕಾರಣಿಗಳ ಪಾತ್ರವೇನು ? ಯಾವ್ಯಾವ ಶಾಸಕರು ಕೊರಗರ ಶಿಕ್ಷಣ, ಅಭಿವೃದ್ದಿ ವಿಷಯದಲ್ಲಿ ಸರಕಾರಕ್ಕೆ ಹೇಳಿದ್ದೇನು? ಡಾ. ಮುಹಮ್ಮದ್ ಪೀರ್ ವರದಿ ಯಾಕೆ ಜಾರಿಯಾಗಲಿಲ್ಲ? ಕೊರಗರನ್ನು ಈಗಲೂ ಶಿಕ್ಷಣ ದಿಂದ ವಂಚಿಸಬೇಕು ಎಂದು ಯೋಚಿಸುತ್ತಿರುವವರು ಯಾರು? ಕೊರಗರ ಜನಪದ ಐತಿಹ್ಯ, ಇತಿಹಾಸ, ಸರಕಾರಿ ದಾಖಲೆಗಳು ಏನು ಹೇಳುತ್ತದೆ ಎಂಬುದರ ಬಗ್ಗೆ ’ಕೊರಗರು- ತುಳುನಾಡಿನ ಮಾತೃಸಮುದಾಯ’ ಬೆಳಕು ಚೆಲ್ಲುತ್ತದೆ.

ಕ್ರಿಯಾ ಮಾಧ್ಯಮ ಪ್ರಕಟಿಸಿರುವ ಈ ಪುಸ್ತಕವನ್ನು ಆದಿವಾಸಿ ಆಕ್ರೋಶ ರ್ಯಾಲಿಯ ವೇದಿಕೆಯಲ್ಲಿ ಮಾಜಿ ಸಂಸದೆ, ಆದಿವಾಸಿ ಅಧಿಕಾರ್ ಮಂಚ್‌ನ ರಾಷ್ಟ್ರೀಯ ಉಪಾಧ್ಯಕ್ಷೆ ಬೃಂದಾ ಕಾರಟ್ ಬಿಡುಗಡೆ ಮಾಡಲಿದ್ದಾರೆ. ಡಾ.ಎಸ್.ವೈ. ಗುರುಶಾಂತ್, ಮುನೀರ್ ಕಾಟಿಪಳ್ಳ, ಡಾ. ಕೃಷ್ಣಪ್ಪಕೊಂಚಾಡಿ, ಶ್ರೀಧರ ನಾಡ, ಕರಿಯ ಕೆ., ನವೀನ್ ಸೂರಿಂಜೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News