×
Ad

ಮನುಷ್ಯ ಜೀವಕ್ಕೆ ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಿ: ಬಿಷಪ್ ಸಲ್ಡಾನ

Update: 2025-12-24 21:22 IST

ಮಂಗಳೂರು,ಡಿ.24: ಸಮಾಜದಲ್ಲಿ ಪ್ರೀತಿಯ ಮತ್ತು ಜೀವದ ಸಂಸ್ಕೃತಿ ಇದೆ. ಮನುಷ್ಯ ಜೀವಕ್ಕೆ ಗೌರವ ಕೊಡುವ ಸಂಸ್ಕೃತಿಯನ್ನು ಕ್ರೆಸ್ತರು ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಮಂಗಳೂರು ಕ್ರೆಸ್ತ ಧರ್ಮಪ್ರಾಂತದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ಹೇಳಿದರು.

ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬುಧವಾರ ಕ್ರಿಸ್ಮಸ್ ಹಬ್ಬದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಿ ಅವರು ಸಂದೇಶ ನೀಡಿದರು.

ಏಸುಸ್ವಾಮಿಯ ವಿಶ್ವಾಸಿಗಳು ಪ್ರತ್ಯೇಕವಾಗಿ ಜಗತ್ತಿನಲ್ಲಿ ಶಾಂತಿ ಮತ್ತು ಪ್ರೀತಿಯ ದ್ಯೋತಕವಾಗಿದೆ. ನಾನು ನಿಮ್ಮನ್ನು ಪ್ರೀತಿಸಿದಂತೆ, ನೀವು ಎಲ್ಲರನ್ನೂ ಪ್ರೀತಿಸಿರಿ ಎಂಬ ಏಸುವಿನ ಮಾತನ್ನು ಜೀವನದಲ್ಲಿ ಅಳವಡಿಸಿ ಕೊಂಡು ಬದುಕುತ್ತಿದ್ದಾರೆ. ಭಾರತದಲ್ಲಿ ಕ್ರೆಸ್ತರ ಕೊಡುಗೆ ಅಪಾರ. ಪ್ರತ್ಯೇಕವಾಗಿ ಪ್ರೀತಿ ಹಾಗೂ ಸೇವೆಯ ಪ್ರತೀಕವಾದ ಈ ಕ್ರೆಸ್ತರು ಏಸುಕ್ರಿಸ್ತರ ಜೀವನದ ಒಂದು ಪ್ರತಿಫಲನವಾಗಿದೆ. ಕ್ರಿಸ್ಮಸ್ ಹಬ್ಬವು ನಮಗೆ ವಿಶೇಷ ವಾಗಿ ಕ್ರೆಸ್ತನಂತೆ ಆಗಲು ಪ್ರೇರೇಪಿಸುತ್ತದೆ. ನಾವು ಶಾಂತಿಯ ದೂತರಾಗಿ ಮನುಷ್ಯರ ನಡುವೆ ಸೇತುವೆಯಾಗಿ, ಎಲ್ಲರನ್ನೂ ಪ್ರೀತಿಸುವವರಾಗಿ ಬೆಳೆಯಲು ಏಸು ಸ್ವಾಮಿಯ ಕೃಪೆ-ವರಗಳು ನಮಗೆ ಸಹಾಯ ಮಾಡುತ್ತಿವೆ ಎಂದು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಹೇಳಿದರು.

ಈ ಸಂದರ್ಭ ರೊಸಾರಿಯೋ ಕೆಥೆಡ್ರಲ್‌ನ ಪ್ರಧಾನ ಧರ್ಮಗುರು ಫಾ. ವಲೇರಿಯನ್ ಡಿಸೋಜ, ಸಹಾಯಕ ಧರ್ಮಗುರುಗಳಾದ ಫಾ. ವಲೇರಿಯನ್ ಫೆರ್ನಾಂಡೀಸ್, ಫಾ.ಜೈಸನ್ ಲೋಬೋ ಭಾಗವಹಿಸಿದ್ದರು.

*ನಗರದ ಮಿಲಾಗ್ರಿಸ್ ಚರ್ಚ್‌ನಲ್ಲಿ ಫಾ.ಬೊನವೆಂಚರ್ ನಜರತ್, ಉರ್ವ ಲೇಡಿಹಿಲ್ ಚರ್ಚ್‌ನಲ್ಲಿ ಫಾ. ಬೆಂಜಮಿನ್ ಪಿಂಟೋ, ಅಶೋಕನಗರದ ಸಂತ ಡೊಮಿನಿಕ್ ಚರ್ಚ್‌ನಲ್ಲಿ ಫಾ. ಡೇನಿಯಲ್ ಸಂಪತ್ ವೇಗಸ್, ಕೂಳೂರು ಚರ್ಚ್‌ನಲ್ಲಿ ಫಾ. ವಿಜಯ ವಿಕ್ಟರ್ ಲೋಬೊ ಕ್ರಿಸ್ಮಸ್ ಸಂಭ್ರಮದ ಬಲಿಪೂಜೆಯ ನೇತೃತ್ವ ವಹಿಸಿ ಸಂದೇಶ ನೀಡಿದರು.

*ಮಂಗಳೂರು ಕ್ರೆಸ್ತ ಧರ್ಮಪ್ರಾಂತಕ್ಕೆ ಒಳಪಟ್ಟ ಚರ್ಚ್‌ಗಳಲ್ಲಿ ಸಂಜೆ ಹೊತ್ತು ಕ್ರಿಸ್ಮಸ್ ಕ್ಯಾರೆಲ್ಸ್, ಕ್ರಿಸ್ಮಸ್ ಬಲಿಪೂಜೆ ಹಾಗೂ ಕ್ರಿಸ್ಮಸ್ ಕಾರ್ಯಕ್ರಮಗಳು ನಡೆಯಿತು. ಪರಸ್ಪರ ಶುಭಾಶಯ ಕೋರುವ ಸಿಹಿತಿನಿಸುಗಳು (ಕುಸ್ವಾರ್) ಕೇಕ್‌ಗಳನ್ನು ನೀಡುವ ದೃಶ್ಯಗಳು ಎಲ್ಲೆಡೆ ಕಂಡು ಬಂತು.





 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News