×
Ad

ವರ್ಷಾಂತ್ಯದೊಳಗೆ ರಾಜ್ಯದಲ್ಲಿ 43 ಸ್ವಯಂಚಾಲಿತ ಡ್ರೈವಿಂಗ್ ಟೆಸ್ಟ್ ಟ್ರಾಕ್: ಸಚಿವ ರಾಮಲಿಂಗಾ ರೆಡ್ಡಿ

Update: 2025-02-12 21:37 IST

ಮಂಗಳೂರು, ಫೆ.12: ಕರ್ನಾಟಕದಲ್ಲಿ ಪ್ರಸಕ್ತ ವರ್ಷದ ಅಂತ್ಯದೊಳಗೆ 43 ಸ್ವಯಂಚಾಲಿತ ಡ್ರೈವಿಂಗ್ ಟೆಸ್ಟ್ ಟ್ರಾಕ್ ಮತ್ತು 11 ಸ್ವಯಂಚಾಲಿತ ಡ್ರೈವಿಂಗ್ ಪರೀಕ್ಷಾ ಕೇಂದ್ರಗಳು ಕಾರ್ಯಾರಂಭಗೊಳ್ಳಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಮಂಗಳೂರಿನ ಆರ್‌ಟಿಒ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ವಯಂಚಾಲಿತ ಡ್ರೈವಿಂಗ್ ಟೆಸ್ಟ್ ಟ್ರಾಕ್ ಮತ್ತು 11 ಸ್ವಯಂಚಾಲಿತ ಡ್ರೈವಿಂಗ್ ಪರೀಕ್ಷಾ ಕೇಂಮೂಲಕ ಆರ್‌ಟಿಒ ಸೇವೆಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಲು ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಸಾಧ್ಯವಾಗಬಹುದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ನೂತನ ವ್ಯವಸ್ಥೆಯಲ್ಲಿ ಅಭ್ಯರ್ಥಿಗಳ ಚಾಲನಾ ದಕ್ಷತೆಯನ್ನು ಸೆನ್ಸಾರ್‌ಗಳನ್ನು ಬಳಸಿಕೊಂಡು ನಿರ್ಣಯಿಸಲಾಗುತ್ತದೆ. ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳಿಂದಾಗಿ ಸಾರಿಗೆ ಮತ್ತು ಖಾಸಗಿ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ (ಎಫ್‌ಸಿ) ನೀಡುವ ಮ್ಯಾನುಲ್ ವ್ಯವಸ್ಥೆ ಬದಲಾಗಲಿದೆ ಎಂದು ಅವರು ಹೇಳಿದರು.

*1,500 ಕೋಟಿ ರೂ. ಬಾಕಿ : ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕಾಗಿ ರಾಜ್ಯ ಸರಕಾರ ಕೆಎಸ್‌ಆರ್‌ಟಿಸಿಗೆ 1,500 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ಸಚಿವ ರೆಡ್ಡಿ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮಾಹಿತಿ ನೀಡಿದರು.

* 3 ಆರ್‌ಟಿಒ ಕಚೇರಿಗೆ ಮನವಿ: ಮುಂಬರುವ ರಾಜ್ಯ ಬಜೆಟ್‌ನಲ್ಲಿ ಹೊಸ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಖರೀದಿಸಲು, ಬಸ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಮತ್ತು ಯಾದಗಿರಿಯಲ್ಲಿ ಒಂದು ಸೇರಿದಂತೆ ಮೂರು ಹೊಸ ಆರ್‌ಟಿಒ ಕಚೇರಿ ಗಳನ್ನು ತೆರೆಯಲು ಹಣವನ್ನು ಮೀಸಲಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ರೆಡ್ಡಿ ಹೇಳಿದರು.

ಕೆಪಿಎಸ್ಸಿ ಮೂಲಕ 75 ಆರ್‌ಟಿಒ ನಿರೀಕ್ಷಕರ ಹುದ್ದೆಗಳ ಆಯ್ಕೆಗೆ ಪರೀಕ್ಷೆ ನಡೆಸುವಂತೆ ಕೇಳಲಾಗಿದೆ. ರಾಜ್ಯದ ಸಾರಿಗೆ ನಿಗಮಗಳಿಗೆ 9,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ ಅವರು ಎರಡು ತಿಂಗಳ ಒಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಕಲ್ಯಾಣ ಕರ್ನಾಟಕದಲ್ಲಿ ನೇಮಕಗೊಂಡಿರುವ ಸಿಬ್ಬಂದಿ ಈಗಾಗಲೇ ಕರ್ತವ್ಯಕ್ಕೆ ವರದಿ ಮಾಡಿದ್ದಾರೆ. ಉಳಿದ ಕಡೆಗಳಲ್ಲಿ ದಾಖಲೆ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಅನುಕಂಪದ ಆಧಾರದ ಮೇಲೆ ನೇಮಕ ಮಾಡಲಾಗಿದೆ ಎಂದರು.

*ವರ್ಗಾವಣೆ ಕೋರಿರುವ 1,300 ಮಂದಿ : ಉತ್ತರ ಕರ್ನಾಟಕದ ಚಾಲಕರು ಮತ್ತು ನಿರ್ವಾಹಕರು ಸೇರಿದಂತೆ 1,300 ಕ್ಕೂ ಹೆಚ್ಚು ಸಿಬ್ಬಂದಿ ತಮ್ಮ ಸ್ಥಳೀಯ ಸ್ಥಳಗಳಿಗೆ ವರ್ಗಾವಣೆ ಕೋರಿದ್ದಾರೆ ಎಂದು ಅವರು ಹೇಳಿದರು.

ಮೆಟ್ರೋ ಪ್ರಯಾಣ ದರ ಏರಿಕೆಯಲ್ಲಿ ರಾಜ್ಯ ಸರಕಾರದ ಪಾತ್ರವಿಲ್ಲ :ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.

ಕೇಂದ್ರ ಸರಕಾರದ ನಗರಾಭಿವೃದ್ಧಿ ಕಾರ್ಯದರ್ಶಿ ಮೆಟ್ರೋ ಅಧ್ಯಕ್ಷರಾಗಿದ್ದಾರೆ. ಸಮಿತಿಯು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರತಿನಿಧಿಗಳನ್ನು ಒಳಗೊಂಡಿದ್ದು, ಈ ಸಮಿತಿಯು ಶುಲ್ಕ ಪರಿಷ್ಕರಣೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿದೆ. ಆದರೆ ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಸಂಸದ ಪಿ.ಸಿ.ಮೋಹನ್ ಸೇರಿ ದಂತೆ ಬಿಜೆಪಿ ನಾಯಕರಿಗೆ ಈ ಎಲ್ಲ ವಿಚಾರ ಗೊತ್ತಿದ್ದು, ರಾಜ್ಯ ಸರಕಾರದ ಕಡೆಗೆ ಕೈ ತೋರಿಸುತ್ತಿದ್ದಾರೆ. ಬಿಜೆಪಿಯವರು ಎಡೆಬಿಡಂಗಿಗಳು. ಒಳ್ಳೆಯದಾದರೆ ತಾವು ಮಾಡಿದ್ದು ಜನರಿಗೆ ತೊಂದರೆ ಅದರೆ ಕಾಂಗ್ರೆಸ್ ಮಾಡಿದ್ದು ಎನ್ನುವ ಚಾಳಿ ಅವರದ್ದು ಎಂದು ಕುಟುಕಿದರು.

ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ಲಾಡ್ ಉಪಸ್ಥಿತರಿದ್ದರು. 






 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News