ಅಶ್ರಫ್, ರಹ್ಮಾನ್ ಕೊಲೆಗಳ ತನಿಖೆ NIA ಗೆ ಕೊಡಲಿದೆಯೇ ರಾಜ್ಯ ಸರಕಾರ?
ಅಶ್ರಫ್ - ರಹ್ಮಾನ್
ಮಂಗಳೂರು : ಕುಡುಪುವಿನಲ್ಲಿ ನಡೆದ ಅಶ್ರಫ್ ಗುಂಪು ಹತ್ಯೆ ಹಾಗೂ ಕೊಳತ್ತಮಜಲಿನಲ್ಲಿ ನಡೆದ ಅಬ್ದುಲ್ ರಹ್ಮಾನ್ ಅವರ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ( NIA) ಗೆ ಕರ್ನಾಟಕ ಸರ್ಕಾರ ವಹಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಅಶ್ರಫ್ ಹತ್ಯೆ ಬಳಿಕ ನಡೆದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಕೇಂದ್ರ ಸರಕಾರದ ಗೃಹ ಸಚಿವಾಲಯದ ಆದೇಶದ ಮೇರೆಗೆ ಈಗಾಗಲೇ NIA ವಹಿಸಿಕೊಂಡಿದೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು NIA ಗೆ ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಬ್ರಿಜೇಶ್ ಚೌಟ ಅವರು ಮೋದಿ ಸರಕಾರಕ್ಕೆ ಪತ್ರ ಬರೆದಿದ್ದರು. ಬಳಿಕ ಅದರ ತನಿಖೆ NIA ಗೆ ವಹಿಸಿ ಮೋದಿ ಸರಕಾರ ಆದೇಶಿಸಿತ್ತು.
ಆಗಲೇ ಅಶ್ರಫ್ ಕೊಲೆ ಹಾಗೂ ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣಗಳ ತನಿಖೆ ಯಾಕೆ NIA ಗೆ ವಹಿಸುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.
ಸ್ಪೀಕರ್ ಯು ಟಿ ಖಾದರ್ ಅವರು ಹಜ್ ಮುಗಿಸಿ ಮಂಗಳೂರಿಗೆ ಮರಳಿದ ಬಳಿಕ ಮಂಗಳೂರು ಪೊಲೀಸ್ ಕಮಿಷನರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಪರಿಸ್ಥಿತಿಯ ಬಗ್ಗೆ ವಿವರವಾಗಿ ಚರ್ಚಿಸಿದ್ದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆ ಹಾಗೂ ಕೋಮು ಹಿಂಸಾಚಾರಕ್ಕೆ ಕಡಿವಾಣ ಹಾಕಲು ಏನೇನು ಕ್ರಮ ಕೈಗೊಳ್ಳಬೇಕು ಎಂದೂ ಚರ್ಚೆ ಮಾಡಿದ್ದರು. ಈ ಬಗ್ಗೆ ಸ್ಪೀಕರ್, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರ ನಡುವೆಯೂ ವಿವರವಾದ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಇದೀಗ ಅಶ್ರಫ್ ಗುಂಪು ಹತ್ಯೆ ಹಾಗೂ ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣಗಳನ್ನೂ NIA ಗೆ ವಹಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ. ಕೋಮು ಆಧಾರದಲ್ಲಿ ಹಾಗೂ ಸೇಡಿನ ಭಾವನೆಯಲ್ಲಿ ಈ ಎರಡೂ ಕೊಲೆಗಳು ನಡೆದಿರುವ ಹಿನ್ನೆಲೆಯಲ್ಲಿ ಇವುಗಳ ಹಿಂದಿರುವ ಶಕ್ತಿಗಳು ಹಾಗೂ ಕಾರಣಗಳ ಬಗ್ಗೆ ಸಮಗ್ರ ತನಿಖೆ ನಡೆಯುವುದು ಉತ್ತಮ, ಅದಕ್ಕೆ NIA ತನಿಖೆಯೇ ಸೂಕ್ತ ಎಂಬ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಶೀಘ್ರ ಸರಕಾರ ನಿರ್ಧಾರ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.