ಜು.14ರಿಂದ 'ಸೌಹಾರ್ದ ಸಂಚಾರ'ದ ಯಶಸ್ಸಿಗೆ ಪಣ ತೊಟ್ಟ 'ಸೌಹಾರ್ದ ಸಂಜೆ'
ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಜುಲೈ 14,15,16 ರಂದು ಕುಂದಾಪುರದಿಂದ ಸುಳ್ಯ ತನಕ ನಡೆಸಲಿರುವ 'ಕರಾವಳಿಯ ನೆಲದಲ್ಲಿ ಸೌಹಾರ್ದ ಸಂಚಾರ' ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಗರದ ಹಿರಾ ಇಂಟರ್ನ್ಯಾಷನಲ್‌ನಲ್ಲಿ ನಡೆದ 'ಸೌಹಾರ್ದ ಸಂಜೆ'ಯು ಕರೆ ನೀಡಿತು.
ಒಂದು ಕಾಲದಲ್ಲಿ ಸೌಹಾರ್ದಕ್ಕೆ ಹೆಸರಾಗಿದ್ದ ಕರಾವಳಿ ಕರ್ನಾಟಕವು ಇತ್ತೀಚಿನ ದಿನಗಳಲ್ಲಿ ಕೋಮು ವೈಷಮ್ಯದಿಂದ ಹೆಸರು ಕೆಡಿಸುತ್ತಿದೆ. ಇದಕ್ಕೊಂದು ಅಂತ್ಯ ಹಾಡಲೇಬೇಕು ಎಂಬ ಉದ್ದೇಶದಿಂದ ಎಲ್ಲ ಜಾತಿ ಮತಗಳ ಜನರನ್ನು ಒಟ್ಟು ಸೇರಿಸಿ 'ಸೌಹಾರ್ದ ಸಂಚಾರ'ವನ್ನು ಎಸ್ ವೈ ಎಸ್ ಹಮ್ಮಿಕೊಂಡಿದ್ದು ಶ್ಲಾಘನೀಯ. ಎಲ್ಲ ಜನರೂ ಇದರಲ್ಲಿ ಭಾಗವಹಿಸಿ ಯಶಸ್ಸುಗೊಳಿಸಬೇಕು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಯಕರು ಕರೆ ನೀಡಿದರು.
ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ಸದಸ್ಯ ಡಾ. ಝೈನಿ ಕಾಮಿಲ್ ದಿಕ್ಸೂಚಿ ಭಾಷಣ ಮಾಡಿದರು. ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್ ಎಂ ರಶೀದ್ ಹಾಜಿ, ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು ಟಿ ಇಫ್ತಿಕರ್, ಕಾರ್ಪೊರೇಟರ್ ನ್ಯಾಯವಾದಿ ವಿನಯರಾಜ್, ಮಾಜಿ ಮೇಯರ್ ಅಶ್ರಫ್, ಕಾರ್ಪೊರೇಟರ್ ಅನಿಲ್, ಜಿಲ್ಲಾ ವಕ್ಫ್ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಕಾರ್ಪೋರೇಟರ್ ಲತೀಫ್ ಕಂದಕ್, ಸಮಾಜ ಸೇವಕರಾದ ಹೈದರ್ ಪರ್ತಿಪ್ಪಾಡಿ, ಚಂದ್ರಶೇಖರ ಶೆಟ್ಟಿ, ಪ್ರಸಾದ್ ರೈ ಕಳ್ಳಿಮನೆ, ಉದ್ಯಮಿಗಳಾದ ಶಿಕ್ಷಕರಾದ ತ್ಯಾಗನ್ ಮಾಸ್ಟರ್, ಮುಸ್ಲಿಂ ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಹನೀಫ್ ಹಾಜಿ, ಬ್ಯಾರೀಸ್ ವೆಲ್ಫೇರ್ ಅಬೂಧಾಬಿ ಅಧ್ಯಕ್ಷ ಮುಹಮ್ಮದ್ ಅಲೀ ಉಚ್ಚಿಲ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಯುಎಚ್ ಉಮರ್, ಪ್ರಮುಖರಾದ ಕೆ ಕೆ ಶಾಹುಲ್, ಪ್ರವೀಣ್ ಶೆಟ್ಟಿ, ಅಬ್ದುಲ್ ಜಲೀಲ್ ಮೊಂಟುಗೋಳಿ, ಎನ್ ಎಸ್ ಕರೀಂ ಮತ್ತಿತರು ಮಾತನಾಡಿದರು.
ಜು.14ರಂದು ಬೆಳಗ್ಗೆ ಕುಂದಾಪುರದಿಂದ ಹೊರಡುವ ಸೌಹಾರ್ದ ಸಂಚಾರವು ಮೂರು ದಿನಗಳಲ್ಲಿ 15 ಪ್ರಮುಖ ಪಟ್ಟಣಗಳಲ್ಲಿ ಕಾಲ್ನಡಿಗೆ ಮತ್ತು ಸಭಾ ಕಾರ್ಯಕ್ರಮವನ್ನು ನಡೆಸಿ, ಜುಲೈ 16ರ ಮುಸ್ಸಂಜೆ ಸುಳ್ಯದಲ್ಲಿ ಸಮಾರೋಪಗೊಳ್ಳಲಿದೆ.
ಜುಲೈ 15ರಂದು ಮಂಗಳೂರಿಗೆ ತಲುಪಲಿದ್ದು, ಪೂರ್ವಾಹ್ನ 11 ಗಂಟೆಗೆ ಬಾವುಟ ಗುಡ್ಡೆಯಿಂದ ಕಾಲ್ನಡಿಗೆ ಮೂಲಕ ಸಾಗಿ ಕ್ಲಾಕ್ ಟವರ್ ಬಳಿ ಸಂಗಮಿಸಲಿದೆ ಎಂದು ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಕ್ ಮಾಹಿತಿ ನೀಡಿದರು.
ಅಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು. ಹಸೈನಾರ್ ಆನೆಮಹಲ್ ಸ್ವಾಗತಿಸಿ, ಅಶ್ರಫ್ ಕಿನಾರ ಧನ್ಯವಾದವಿತ್ತರು. ಮನ್ಸೂರ್ ಕೋಟೆಗದ್ದೆ ಕಾರ್ಯಕ್ರಮ ನಿರ್ವಹಿಸಿದರು.