×
Ad

ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣದ ಆರೋಪಿಗಳ ಶೀಘ್ರ ಬಂಧನ: ಎಡಿಜಿಪಿ ಹಿತೇಂದ್ರ

Update: 2025-05-28 20:13 IST

ಎಡಿಜಿಪಿ ಹಿತೇಂದ್ರ 

ಮಂಗಳೂರು: ಕೊಳತ್ತಮಜಲು ಮಸೀದಿಯ ಕಾರ್ಯದರ್ಶಿ ಹಾಗೂ ಪಿಕ್‌ಅಪ್ ಚಾಲಕ ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಡಿಜಿಪಿ ಹಿತೇಂದ್ರ ತಿಳಿಸಿದ್ದಾರೆ.

ಕೊಳತ್ತಮಜಲುವಿನಲ್ಲಿ ಮಂಗಳವಾರ ದುಷ್ಕರ್ಮಿಗಳು ತಲವಾರಿನಿಂದ ಕಡಿದು ಅಬ್ದುಲ್ ರಹಿಮಾನ್ ಹತ್ಯೆಗೈದಿರುವ ಮತ್ತು ಅವರೊಂದಿಗೆ ಇದ್ದ ಖಲಂದರ್ ಶಾಫಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಉಂಟಾಗಿರುವ ಪರಿಸ್ಥಿತಿಯ ಅವಲೋಕನ ನಡೆಸಲು ಬಂಟ್ವಾಳಕ್ಕೆ ಆಗಮಿಸಿರುವ ಎಡಿಜಿಪಿ ಹಿತೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು  ಪತ್ತೆಹಚ್ಚಲು ಬಂಟ್ವಾಳ ಡಿವೈಎಪ್ಪಿ ವಿಜಯ ಪ್ರಸಾದ್ ಬಿ. ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಶೀಘ್ರ ಬಂಧನ ಪ್ರಕ್ರಿಯೆ ನಡೆಯಲಿದೆ ಎಂದರು

ನಿಸಾರ್ ಎಂಬವರು ನೀಡಿದ ದೂರಿನಂತೆ ಎಫ್‌ಐಆರ್ ದಾಖಲಾಗಿದೆ. ಇದರಲ್ಲಿ ಇಬ್ಬರ ಹೆಸರಿದೆ. ಈ ಕುರಿತು ಸಮಗ್ರ ತನಿಖೆಯನ್ನು ನಡೆಸಲಾಗುತ್ತದೆ. ಘಟನೆಗೆ ಕಾರಣವೇನೆಂದು ತನಿಖೆಯಿಂದ ಬೆಳಕಿಗೆ ಬರಲಿದೆ. ತನಿಖೆ ಪ್ರಗತಿಯಲ್ಲಿದ್ದು, ಶೀಘ್ರ ಮಾಹಿತಿಯನ್ನು ನೀಡಲಾಗುವುದು ಎಂದು ಎಡಿಜಿಪಿ ಹಿತೇಂದ್ರ ಹೇಳಿದರು.

ಈಗಾಗಲೇ ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದೆ. ಯಾವುದೇ ಅಹಿತಕರ ಘಟನೆಯಾಗುವುದನ್ನು ತಪ್ಪಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಉಡುಪಿ , ಚಿಕ್ಕಮಗಳೂರು, ಕಾರವಾರ ಮತ್ತು ಮೈಸೂರಿನಿಂದಲೂ ಪೊಲೀಸರನ್ನು ಕರೆಸಲಾಗಿದೆ. ಸಾವಿರದಷ್ಟು ಪೊಲೀಸರು ಬಂದೋಬಸ್ತ್ ನಲ್ಲಿ ನಿರತರಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ತರಹೇವಾರಿ ಸಂದೇಶಗಳನ್ನು ಹರಡುವುದು, ಪ್ರಚೋದನಕಾರಿ ಸಂದೇಶಗಳನ್ನು ನೀಡುವುದು, ವದಂತಿಗಳನ್ನು ಹರಡಿಸುವುದರ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದ್ದು, ಕಠಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಡಿಜಿಪಿ ಎಚ್ಚರಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಬರಹಗಳನ್ನು ಹಾಕದಂತೆ ಹಾಗೂ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಲಾಗಿದ್ದು, ಈ ರೀತಿ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

ಇದು ಪ್ರತಿಕಾರದ ಕೊಲೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಎಡಿಜಿಪಿ ಹಿತೇಂದ್ರ ಅವರು, ‘ದ.ಕ.ಜಿಲ್ಲೆಗೆ ನಾವು ಹೊಸಬರು .. ನೀವು ಯಾರು ಹೊಸಬರಲ್ಲ, ಈ ಜಿಲ್ಲೆಯ ಇತಿಹಾಸ ನಿಮಗೆ ಚೆನ್ನಾಗಿ ಗೊತ್ತಿದೆ. ಈ ಪ್ರಶ್ನೆಗೆ ಉತ್ತರವೂ ನಿಮ್ಮಲ್ಲೇ ಇದೆ’ ಎಂದು ಪ್ರತಿಕ್ರಿಯೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News